

| ಹೀರಾನಾಯ್ಕ ಟಿ. ಬಳ್ಳಾರಿ
ಒಳನಾಡು ಮೀನುಗಾರಿಕೆಯಲ್ಲಿ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿರುವ ಬಳ್ಳಾರಿ ಜಿಲ್ಲೆ ಸಿಗಡಿ ಮೀನಿನ ಕಣಜ ಎನಿಸಿಕೊಂಡಿದೆ. ತುಂಗಭದ್ರಾ ಜಲಾಶಯ ಹೊಂದಿರುವ ಜಿಲ್ಲೆಯಲ್ಲಿ ಮತ್ಸ್ಯ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರತಿ ವರ್ಷವೂ ಜಿಲ್ಲೆಯಲ್ಲಿ ಮತ್ಸ್ಯ ಲೋಕ ವಿಸ್ತರಣೆಗೊಳ್ಳುತ್ತಿದೆ. ಇಲ್ಲಿನ ಮೀನು ಹಾಗೂ ಸಿಗಡಿ, ರಾಜ್ಯವಲ್ಲದೆ ದೇಶ-ವಿದೇಶಗಳಿಗೂ ರಫ್ತು ಆಗುತ್ತದೆ.
ಬಿಸಿಲೂರು ಖ್ಯಾತಿಯ ಗಣಿನಾಡು ಬಳ್ಳಾರಿಯಲ್ಲಿ ಮೀನುಗಾರಿಕೆ, ಸಿಗಡಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಲ್ಲಿನ ಸಿಗಡಿಗೆ ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಕಾಟ್ಲಾ, ರೋಹು, ಮೃಗಾಲ್, ಸಾಮಾನ್ಯ ಗೆಂಡೆ, ಸಿಲ್ವರ್ ಕಾರ್ಪ್, ಫಂಗೆಶಿಯಸ್, ಫಾಕು.. ಹೀಗೆ ಸ್ವದೇಶಿ-ವಿದೇಶಿ ತಳಿಯ ಮೀನು ಕೃಷಿ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಿಗಡಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇಲ್ಲಿನ ರೈತರು ಸಿಗಡಿ ಕೃಷಿಯಲ್ಲಿ ಕೈತುಂಬಾ ಆದಾಯ ಕಾಣುತ್ತಿದ್ದಾರೆ.
100 ಎಕರೆಯಲ್ಲಿ ಸಿಗಡಿ ಕೃಷಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಎಮ್ಮಿಗನೂರು ಗ್ರಾಮದ ರೈತ ಶ್ರೀನಿವಾಸ್ ಗಂಗಾವತಿ ಅವರು ಕಳೆದ ಏಳು ವರ್ಷಗಳಿಂದ ಸಿಗಡಿ ಕೃಷಿ ಮಾಡುತ್ತಿದ್ದಾರೆ. 100 ಎಕರೆಯಲ್ಲಿ ಸಿಗಡಿ ಕೃಷಿ ಮಾಡುತ್ತಿದ್ದು, ಉತ್ತಮ ಆದಾಯದ ಮೂಲ ಕಂಡು ಕೊಂಡಿದ್ದಾರೆ. ವಾರ್ಷಿಕ ಎರಡು ಬೆಳೆ ಪಡೆಯುತ್ತಿದ್ದು, ಪ್ರತಿ ಎಕರೆಗೆ ಒಂದು ಟನ್ನಂತೆ ಸಿಗಡಿ ಉತ್ಪಾದನೆಯಾಗುತ್ತದೆ. ಕೆಜಿಗೆ 200-300 ರೂ.ವರೆಗೆ ದರ ಸಿಕ್ಕರೆ ಪ್ರತಿ ಟನ್ಗೆ 2-3 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. 2007ರಿಂದ ಸಿಗಡಿ ಕೃಷಿ ಮಾಡು ತ್ತಿದ್ದು, ವಾರ್ಷಿಕ 300-400 ಟನ್ ಸಿಗಡಿ ಉತ್ಪಾದಿಸುತ್ತಿದ್ದಾರೆ. ಬಳ್ಳಾರಿ ಸೇರಿ ರಾಜ್ಯದಲ್ಲಿ ಜಲಸಂಪನ್ಮೂಲ ಚೆನ್ನಾಗಿದೆ. ಕೃಷಿಗೆ ಯೋಗ್ಯವಲ್ಲದ ಪಾಳುಬಿದ್ದ ಜಮೀನುಗಳಲ್ಲಿ ಸಿಗಡಿ ಕೃಷಿ ಮಾಡಿದರೆ ಉತ್ತಮ ಆದಾಯ ಕಂಡುಕೊಳ್ಳಬಹುದು.
ಆರು ಸಾವಿರ ಮೆಟ್ರಿಕ್ಟನ್ ಸಿಗಡಿ ಉತ್ಪಾದನೆ: ಅಖಂಡ ಬಳ್ಳಾರಿ ಜಿಲ್ಲೆ ಯಲ್ಲಿ ತುಂಗಭದ್ರಾ ಜಲಾಶಯ ಸೇರಿ ಒಟ್ಟು 101 ಕೆರೆಗಳಲ್ಲಿ ಮೀನು ಕೃಷಿ ಮಾಡಲಾಗುತ್ತಿದೆ. ಒಟ್ಟು ಮೂರು ಸಾವಿರ ಎಕರೆ ಪ್ರದೇಶದಲ್ಲಿ ಮೀನು ಕೃಷಿ ವಿಸ್ತರಣೆಗೊಂಡಿದೆ. ಜಿಲ್ಲೆಯ ಬಳ್ಳಾರಿ ತಾಲೂಕು ವ್ಯಾಪ್ತಿ, ಕಂಪ್ಲಿ, ಸಿರಗುಪ್ಪದಲ್ಲಿ ಹೆಚ್ಚಾಗಿ ಮೀನು ಸಾಕಣೆ ಮಾಡಲಾಗುತ್ತಿದೆ. ಅದರಲ್ಲಿ 1200 ಎಕರೆಯಲ್ಲಿ ಸಿಗಡಿ ಕೃಷಿ ಮಾಡಲಾಗುತ್ತಿದೆ. ವರ್ಷಕ್ಕೆ ಎರಡು ಬಾರಿ ಸಿಗಡಿ ಬೆಳೆ ತೆಗೆಯಬಹುದು. ಒಮ್ಮೆಲೇ 3600 ಮೆಟ್ರಿಕ್ ಟನ್ ಸಿಗಡಿ ಬೆಳೆ ಬರುತ್ತದೆ. ವಾರ್ಷಿಕ ಸರಾಸರಿ 4-5 ಸಾವಿರ ಮೆಟ್ರಿಕ್ ಟನ್ ಪ್ರತಿ ವರ್ಷವೂ ಸಿಗಡಿ ಉತ್ಪಾದನೆ ಆಗುತ್ತದೆ. 2022-23ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 3.04 ಕೋಟಿ ಮೀನು ಮರಿ ವಿತರಣೆ ಮಾಡಲಾಗಿತ್ತು. ಅದರಂತೆ 24,208 ಮೆಟ್ರಿಕ್ ಟನ್ ಮೀನು ಉತ್ಪಾದನೆಗೊಂಡಿದ್ದು, ಅದರಲ್ಲಿ ಸಿಗಡಿ ಆರು ಸಾವಿರ ಮೆಟ್ರಿಕ್ ಟನ್ ಸೇರಿದೆ.
ಹೆಚ್ಚಿನ ಮಾಹಿತಿಗಾಗಿ ಮೊ: 8317336757ಗೆ ಸಂಪರ್ಕಿಸಬಹುದು.
ಸಿಗಡಿ ಕೃಷಿ ಮಾಡಿದರೆ ಉತ್ತಮ ಆದಾಯ ಇದೆ. ಒಬ್ಬ ರೈತ ಅರ್ಧ ಎಕರೆ ಪಾಳುಬಿದ್ದ ಜಮೀನು ಹೊಂದಿದ್ದರೆ ಸಾಕು ಅದರಲ್ಲೇ ಸಿಗಡಿ ಕೃಷಿ ಮಾಡಿ 5-10 ಎಕರೆಯಲ್ಲಿ ಬೆಳೆಯುವ ಬೆಳೆಗಿಂತ ಹೆಚ್ಚಿನ ಆದಾಯ ಗಳಿಸಬಹುದು. ರಾಜ್ಯ ಸರ್ಕಾರ ಸಿಗಡಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. | ಶ್ರೀನಿವಾಸ್ ಗಂಗಾವತಿ, ಸಿಗಡಿ ಕೃಷಿಕ, ಯಮ್ಮಿಗನೂರು, ಕುರುಗೋಡು ತಾ. ಬಳ್ಳಾರಿ ಜಿಲ್ಲೆ
ಸರ್ಕಾರದಿಂದ ಬೇಕು ಪ್ರೋತ್ಸಾಹ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಕೊಳ ನಿರ್ವಣಕ್ಕೆ ಸಹಾಯಧನ ನೀಡುವಲ್ಲಿ ಮೀನುಗಾರಿಕೆ ಇಲಾಖೆಯಿಂದ ಸಾಕಷ್ಟು ವಿಳಂಬ ಮಾಡಲಾಗುತ್ತಿದೆ. ಅಲ್ಲದೆ ಜಲಾಶಯ, ನದಿಭಾಗದ, ಕೆರೆಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ಖರೀದಿಗೆ ಸಹಾಯಧನ, ಮೀನುಮರಿ ಖರೀದಿಸಲು ನೆರವು ಯೋಜನೆ, ಕೆರೆ, ಜಲಾಶಯಗಳ ಅಂಚಿನ ಕೊಳೆಗಳಲ್ಲಿ ಮೀನುಮರಿ ಪಾಲನೆಗೆ ನೆರವು, ಕೆರೆಯನ್ನು ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘ, ವ್ಯಕ್ತಿಗಳಿಗೆ ಮೀನುಮರಿ ಬಿತ್ತನೆಗೆ ಸಹಾಯ ಧನ ನೆರವು ನೀಡುವುದರಲ್ಲಿ ಇಲಾಖೆ ವಿಳಂಬ ಮಾಡುತ್ತಿದೆ ಎಂಬುದು ರೈತರು ದೂರು. ಸಿಗಡಿ ಕೃಷಿಗೆ ಪ್ರಮುಖವಾಗಿ ವಿದ್ಯುತ್ ವ್ಯವಸ್ಥೆ ಮುಖ್ಯ. ವಿದ್ಯುತ್ ದರ ಏರಿಕೆ ಆಗಿರುವುದರಿಂದ ಸ್ವಲ್ಪಮಟ್ಟಿಗೆ ಹೊಡೆತಬಿದ್ದಿದೆ. ಆದ್ದರಿಂದ ವಿದ್ಯುತ್ ಸಬ್ಸಿಡಿ ನೀಡಿ ದಲ್ಲಿ ರೈತರಿಗೆ ಇನ್ನಷ್ಟು ಅನುಕೂಲವಾಗಿದೆ. ಈಗಾಗಲೆ ಆಂಧ್ರಪ್ರದೇಶದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.
ವಿದೇಶಗಳಿಗೆ ರಫ್ತು: ರಾಜ್ಯ ಸೇರಿ ದೇಶದಲ್ಲಿ ಸಿಗಡಿ ಬಳಕೆದಾರರ ಪ್ರಮಾಣ ಕಡಿಮೆಯಿದ್ದು, ವಿದೇಶಗಳಲ್ಲಿ ಹೆಚ್ಚಿ್ಚ ಬೇಡಿಕೆ ಇದೆ. ಇಲ್ಲಿನ ಸಿಗಡಿ ಕರ್ನಾಟಕದ ಬೆಂಗಳೂರು, ಮೈಸೂರು, ಶಿವಮೊಗ್ಗ, ಭದ್ರಾವತಿಗೆ ರಫ್ತು ಆಗುತ್ತದೆ. ಅಲ್ಲದೆ ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಕ್ಕೂ ರಫ್ತಾಗುತ್ತದೆ. ವಿದೇಶದಲ್ಲಿ ಭಾರಿ ಬೇಡಿಕೆ ಇರುವ ಕಾರಣ ಜಪಾನ್, ಚೀನಾ, ಅಮೆರಿಕಾಗೆ ಇಲ್ಲಿನ ಸಿಗಡಿ ಮೀನು ರಫ್ತಾಗುತ್ತದೆ. ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇದೆ. ಪ್ರತಿ ಕೆಜಿಗೆ ಸರಾಸರಿ 200-400 ರೂ.ವರೆಗೆ ದರ ಇರುತ್ತದೆ. ಆದರೆ, ಕರೊನಾ ಮಹಾಮಾರಿ ಬಂದು ಹೋದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಸಿಗಡಿ ಮೀನು ಖರೀದಿಸುವುದು ಕಡಿಮೆಯಾಗಿದೆ.
ಹೆಚ್ಚುತ್ತಿರುವ ಮತ್ಸ್ಯ ಸಂಪತ್ತು: ಗಣಿಗೆ ಹೆಸರಾದ ಬಳ್ಳಾರಿಯಲ್ಲಿ ಗಣಿ ಸಂಪತ್ತಿನಷ್ಟೇ ಮತ್ಸ್ಯ ಸಂಪತ್ತು ಕೂಡ ಹೆಚ್ಚುತ್ತಿದೆ. 2018-19ರಲ್ಲಿ 2.10 ಕೋಟಿ ಮೀನು ಮರಿ ವಿತರಣೆ ಮಾಡಿದ್ದರೆ 6,994 ಮೆಟ್ರಿಕ್ ಟನ್ ಉತ್ಪಾದನೆ ಯಾಗಿತ್ತು. ಅದರಂತೆ 2019- 20ರಲ್ಲಿ 12,085, 2020-21ರಲ್ಲಿ 14,308, 2021-22ರಲ್ಲಿ 18,870, 2022-23ರಲ್ಲಿ 24,208 ಮೆಟ್ರಿಕ್ ಟನ್ ಮತ್ಸ್ಯ ಉತ್ಪಾದನೆಗೊಂಡಿದೆ ಎಂದು ಬಳ್ಳಾರಿ ಜಿಲ್ಲಾ ಮೀನುಗಾರಿಕೆ ಸಹಾಯಕ ನಿರ್ದೇಶಕ ಸಿ.ಶಿವಣ್ಣ ಮಾಹಿತಿ ನೀಡುತ್ತಾರೆ.