ತಾಂಜಾನಿಯಾದಲ್ಲಿ ಒಂದು ಪುಟ್ಟ ಭಾರತ

ವಿಜಯವಾಣಿ (5)
Published on
ಸುಮಾರು 60 ಸಾವಿರದಷ್ಟು ಭಾರತೀಯರಿರುವ ಪುಟ್ಟ ಭಾರತವೊಂದು ಪೂರ್ವ ಆಫ್ರಿಕಾದಲ್ಲಿರುವ ಯುನೈಟೆಡ್ ರಿಪಬ್ಲಿಕ್ ಆಫ್ ತಾಂಜಾನಿಯಾದಲ್ಲಿ ಸೃಷ್ಟಿಯಾಗಿದೆ. ಉದ್ಯಮ, ಉದ್ಯೋಗ ಸೇರಿ ವಿವಿಧ ಕಾರಣಗಳಿಗೆ ಆ ದೇಶದಲ್ಲಿ ನೆಲೆ ನಿಂತ ಭಾರತೀಯರು ನಮ್ಮ ಸಂಸ್ಕೃತಿಯನ್ನು ಪಸರಿಸುತ್ತಾ ಸಾಗಿ ಬಂದಿದ್ದಾರೆ. ಭಾರತೀಯ ಹೈಕಮಿಷನ್​ಗಳಲ್ಲಿ ಹಲವು ವಿಭಾಗಗಳಿದ್ದು ಅದರಲ್ಲಿ ಸಾಂಸ್ಕೃತಿಕ ವಿಭಾಗ ಕೂಡ ಒಂದು. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) 36 ದೇಶಗಳಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿದೆ. ಅದು ಹೈಕಮಿಷನ್​ನ ಭಾಗವಾಗಿ ಕೆಲಸ ಮಾಡುತ್ತದೆ. ತಾಂಜಾನಿಯದಲ್ಲೂ ಅಂತಹ ಕೇಂದ್ರವೊಂದಿದೆ.

ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ಎಂದು ಮರುನಾಮಕರಣ ಮಾಡಿದ್ದು, ಇದರ ಮೂಲಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿಕೊಂಡು ಬರಲಾಗಿದೆ.

ಸಾಂಸ್ಕೃತಿಕ ರಾಯಭಾರಿಯಾಗಿ ಈ ಕೇಂದ್ರ ಕೆಲಸ ಮಾಡುತ್ತಿದೆ. ಈ ಕೇಂದ್ರದ ಮುಖೇನ ಹಲವು ರೀತಿಯ ಚಟುವಟಿಕೆಗಳು ನಡೆಯುತ್ತಿವೆ. ಕೆಲವೊಂದು ನಿತ್ಯ ಚಟುವಟಿಕೆಗಳು ಇರುತ್ತವೆ. ಪ್ರತಿ ನಿತ್ಯ ಯೋಗ, ಸಂಗೀತ ತರಗತಿ ನಡೆಯುತ್ತವೆ. ಕಾಲಕಾಲಕ್ಕೆ ನೃತ್ಯ ತರಬೇತಿ, ಕಮ್ಮಟಗಳನ್ನು ಕೂಡ ಆಯೋಜಿಸಲಾಗುತ್ತಿದೆ. ವಾರಾಂತ್ಯದಲ್ಲಿ ಹಿಂದಿ ತರಗತಿ ನಡೆಯುತ್ತದೆ.

ಹಬ್ಬಗಳನ್ನು ಸಹ ಆಚರಿಸಲಾಗುತ್ತದೆ. ಸಂಕ್ರಾಂತಿ, ಯುಗಾದಿ, ದೀಪಾವಳಿ, ಹೋಳಿ, ಶಿವಾಜಿ ಜಯಂತಿ, ಶಿವಾಜಿ ಪಟ್ಟಾಭಿಷೇಕ ಸೇರಿ ಹಲವು ಧಾರ್ವಿುಕ, ಐತಿಹಾಸಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯನ್ನು ವೈಭವದಿಂದ ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ. ಕೆಲವು ಹಬ್ಬಗಳಿಗೆ ಐಸಿಸಿಆರ್​ನಿಂದ ವಿಶೇಷ ಅನುದಾನ ಕೂಡ ಬರುತ್ತದೆ. ಈ ಕೇಂದ್ರದಿಂದ ಪ್ರಮುಖವಾಗಿ ಹೋಳಿ, ಯೋಗ, ದೀಪಾವಳಿ ವಾರ್ಷಿಕ ಕಾರ್ಯಕ್ರಮಗಳು. ಇದರಲ್ಲಿ ಬೇರೆ ರಾಷ್ಟ್ರಗಳ ರಾಯಭಾರ ಕಚೇರಿಯವರೂ ಖುಷಿಯಿಂದ ಪಾಲ್ಗೊಳ್ಳುತ್ತಾರೆ.

ಪ್ರತಿ ವರ್ಷ ಜೂನ್ 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದ್ದು, ಅಂದಾಜು ಮೂರು ಸಾವಿರ ಜನ ಪಾಲ್ಗೊಳ್ಳುತ್ತಾರೆ. ಆ ಕಾರ್ಯಕ್ರಮದ ಹಿಂದೆ ಮುಂದಿನ ದಿನಗಳನ್ನು (ಜೂನ್ ಪೂರ್ತಿ) ಯೋಗ ಚಟುವಟಿಕೆಗೆ ಸಮರ್ಪಿಸಲಾಗುತ್ತದೆ. ಇಂತಹ ಸುಮಾರು 25 ಕಾರ್ಯಕ್ರಮಗಳು ಇರುತ್ತವೆ. ಸಂಘ ಸಂಸ್ಥೆಗಳ ಜತೆ ಸೇರಿ ಐಸಿಸಿಆರ್ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತದೆ. ಗುರುಪೂರ್ಣಿಮೆ, ರಾಮನವಮಿಯನ್ನು ಕೂಡ ವೈಭವೋಪೇತವಾಗಿ ನಡೆಸಲಾಗುತ್ತದೆ.

1. ಸ್ಥಳೀಯರ ಆಸಕ್ತಿ

ತಾಂಜಾನಿಯಾ ಸರ್ಕಾರಿ ಶಾಲೆಗಳಲ್ಲಿ ನಮ್ಮ ಯೋಗ ಶಿಕ್ಷಕರು ಕಾರ್ಯಾಗಾರ ನಡೆಸುತ್ತಾರೆ. ಮಕ್ಕಳಿಗೆ ಸರಳ ಆಸನ, ಪ್ರಾಣಾಯಾಮ ಹೇಳಿಕೊಡುತ್ತಾರೆ. ಇದರಿಂದ ಮಕ್ಕಳಲ್ಲಿ ಓದಿನತ್ತ ಗಮನ, ಹೆಚ್ಚಾಗುತ್ತದೆ. ಮನಸ್ಸಿಗೆ ಏಕಾಗ್ರತೆ ಬರುವಂತಹ ಆಸನಗಳನ್ನೇ ಹೆಚ್ಚಾಗಿ ಹೇಳಿಕೊಡಲಾಗುತ್ತದೆ.

ಇಲ್ಲಿ ನಡೆಸುವ ಸಂಗೀತ, ಹಿಂದಿ ತರಗತಿಗೂ ತಾಂಜಾನಿಯಾ ಮಕ್ಕಳು ಬರುತ್ತಾರೆ. ಹಿಂದಿ ಕಲಿಯಲು 80ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದು, ಸಂಗೀತ ತರಗತಿಗೆ ಬರುತ್ತಿದ್ದ ಒಬ್ಬ ವಿದ್ಯಾರ್ಥಿಗೆ ಐಸಿಸಿಆರ್ ಸ್ಕಾಲರ್​ಶಿಪ್ ದೊರೆತು, ಭಾರತದ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಸಂಗೀತ ಪದವಿ ಕೋರ್ಸ್ ಮಾಡುತ್ತಿದ್ದಾರೆ. ಐಸಿಸಿಆರ್ ಸುಮಾರು 85 ಸ್ಕಾಲರ್​ಶಿಪ್ ನೀಡುತ್ತದೆ. ತಾಂತ್ರಿಕ ಶಿಕ್ಷಣ ಅಧ್ಯಯನಕ್ಕಾಗಿ ಐಟೆಕ್ ಸ್ಕಾಲರ್​ಶಿಪ್ ನೀಡಲಾಗುತ್ತದೆ. ಇದೆಲ್ಲವನ್ನೂ ತಾಂಜಾನಿಯಾ ಮಕ್ಕಳು ಬಳಸಿಕೊಂಡು ಉನ್ನತ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ತಾಂಜಾನಿಯಾದ ಹಾಲಿ ಅಧ್ಯಕ್ಷ ಸಾಮಿಯ ಸುಲುಹು ಹಸನ್ ಕೂಡ ಒಂದು ಕಾಲದಲ್ಲಿ ಸ್ಕಾಲರ್​ಶಿಪ್ ಪಡೆದು ಭಾರತದಲ್ಲಿ ಅಧ್ಯಯನ ನಡೆಸಿ ತಾಂಜಾನಿಯಾಗೆ ವಾಪಸಾದವರು. ಇತ್ತೀಚೆಗೆ ಅವರಿಗೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಕೂಡ ಕೊಟ್ಟಿದ್ದಾರೆ.

2. ಆತ್ಮೀಯತೆ, ವ್ಯವಹಾರದ ನಂಟು

ಭಾರತ ಮತ್ತು ತಾಂಜಾನಿಯಾ ನಡುವೆ ಆತ್ಮೀಯ ಗೆಳೆತನ, ಪ್ರೇಮ ಇದೆ. ಇತಿಹಾಸದ ಪುಟ ತಿರುವಿ ಹಾಕಿದರೆ ಭಾರತ ಹಾಗೂ ತಾಂಜಾನಿಯಾ ನಡುವೆ 200 ವರ್ಷಗಳಷ್ಟು ಪ್ರಾಚೀನ ಸಂಬಂಧವಿದೆ. 200 ವರ್ಷದ ಹಿಂದೆ ಅಲ್ಲಿಗೆ ತೆರಳಿದ ಗುಜರಾತಿ ಸಮುದಾಯಗಳು ಜಾಂಜಿಬಾರ್ ದ್ವೀಪದಲ್ಲಿ ನೆಲೆ ನಿಂತಿವೆ. ಅಲ್ಲಿ ಕೆಲವರು ಸಂಸದರೂ, ಕಾರ್ಪೆರೇಟರ್​ಗಳೂ ಆಗಿದ್ದಾರೆ. ಇವತ್ತಿಗೂ ಕಛ್ ಪ್ರದೇಶದವರು ಅಲ್ಲಿ ಕಚ್ಛಿ ಭಾಷೆಯನ್ನು ಅಲ್ಲಿ ಬಳಸುತ್ತಾರೆ. ಅದೇ ಸಂಸ್ಕೃತಿಯನ್ನು ಈಗಲೂ ಉಳಿಸಿಕೊಂಡಿದ್ದಾರೆ.

ದಿನವೂ ಬೆಳಗ್ಗೆ ಕೃಷ್ಣನ ವಿಗ್ರಹಕ್ಕೆ ಅಭಿಷೇಕ ಮಾಡಿ ಹೊಸ ಬಟ್ಟೆ ತೊಡಿಸಿ, ಅಭಿಷೇಕದ ಹಾಲು ಕುಡಿದು ತಮ್ಮ ವ್ಯವಹಾರ ಆರಂಭಿಸುತ್ತಾರೆ. ಹಾಗೆಯೇ ದೊಡ್ಡ ದೊಡ್ಡ ಉದ್ಯಮಿಗಳಿದ್ದಾರೆ. ಅದೇ ರೀತಿ ಗುಜರಾತಿ ಪಟೇಲರು, ಲೋಹಾನ ಸಮಾಜದವರು ಇಲ್ಲಿ ನೆಲೆ ನಿಂತಿದ್ದಾರೆ. ಈ ಸಮುದಾಯದವರ ಸ್ಟೀಲ್ ಕಂಪನಿಗಳು, ತಾರಾ ಹೋಟೆಲ್​ಗಳು ಇವೆ. ಜತೆಗೆ ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನೂ ನೀಡುತ್ತಿದ್ದಾರೆ. ಅಲ್ಲಿ ನೆಲೆ ನಿಂತ ಭಾರತೀಯರು ತಾಂಜಾನಿಯನ್ನರೇ ಆಗಿದ್ದಾರೆ. ಮಕ್ಕಳೆಲ್ಲ ತಾಂಜಾನಿಯನ್ ಭಾಷೆ ಮಾತನಾಡುತ್ತಾರೆ. ಮನೆಯೊಳಗೆ ಮಾತ್ರ ಭಾರತೀಯ ಭಾಷೆ ಬಳಸುತ್ತಾರೆ. ಈ ಮೂಲಕ ಅಲ್ಲಿ ಭಾರತೀಯ ಸಂಸ್ಕೃತಿ ಪರಂಪರೆ ಬೆಳೆದುಬಂದಿದೆ.

3. ಸಂಘಟನೆಗಳ ಚಟುವಟಿಕೆ

35ಕ್ಕೂ ಹೆಚ್ಚು ಭಾರತೀಯ ಸಂಘಗಳಿವೆ, ಬಿಹಾರದ ಸ್ವರ್ಣ ಗಂಗಾ ಸಮುದಾಯದವರು ಹಿಂದಿ ಬಳಕೆಯನ್ನು ಬೆಳೆಸುತ್ತಿದ್ದಾರೆ. ತಮಿಳು ಸಂಘದವರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಬೋರಾ ಸಮುದಾಯ, ತಮಿಳು ಸಂಘ, ಕಾವೇರಿ ಕನ್ನಡ ಸಂಘ, ಮಲೆಯಾಳಂನ ಕಲಾಮಂಡಲಂ, ತೆಲುಗಿನ ತರಂಗಿಣಿ, ಮಹಾರಾಷ್ಟ್ರ ಮಂಡಲ್, ಒಡಿಯಾ ಸಮಾಜ, ಅಸ್ಸಾಂ, ಕಾಶ್ಮೀರದ ಸಂಘಟನೆಗಳೂ ಇವೆ. ಅವರೆಲ್ಲ ನಮ್ಮ ಜತೆಯೇ ಸಾಗಿ ಬರುತ್ತಿದ್ದು, ಭಾರತೀಯ ಸಂಸ್ಕೃತಿಯನ್ನು ಉಳಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಂಕ್ರಾಂತಿ, ಪೊಂಗಲ್, ಓಣಂ, ರಾಜ್ಯೋತ್ಸವ ಹೀಗೆ ಹಲವು ಹಬ್ಬಗಳನ್ನು ಒಟ್ಟಾಗಿ ಆಚರಿಸಲಾಗುತ್ತದೆ. ಜೈನ ಸಮುದಾಯವೂ ಇಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕನ್ನಡ ಸಂಘ 25 ವರ್ಷ ಪೂರೈಸಿದೆ ಎಂಬುದೂ ಗಮನಾರ್ಹ ಸಂಗತಿ.

4. ಭಾರತೀಯ ಛಾಯೆ

ಇಲ್ಲಿಯ ಒಂದು ಬೀದಿಯ ಹೆಸರು ಕಿಸುಟು ರಸ್ತೆ ಎಂದು ಇದ್ದಿದ್ದನ್ನು ಪ್ರಮುಖ್ ಸ್ವಾಮಿ ನಾರಾಯಣ ಮಾರ್ಗ ಎಂದು ನಾಮಕರಣ ಮಾಡಲಾಗಿದೆ. ಆ ರಸ್ತೆಯಲ್ಲಿ 10 ದೇವಸ್ಥಾನಗಳಿವೆ. ಇವುಗಳನ್ನು ನೋಡಿದರೆ ಭಾರತದಿಂದ ತಾಂಜಾನಿಯಾ ದೂರ ಇಲ್ಲ ಎಂದೇ ಅನಿಸುವಂಥ ವಾತಾವರಣ ಇದೆ. ಅಲ್ಲೊಂದು ಕಟ್ಟೆ ಇದ್ದು, ಹಿರಿಯರೆಲ್ಲ ಒಟ್ಟಾಗಿ ಕುಳಿತು ಲೋಕಾಭಿರಾಮ ಚರ್ಚೆಯಲ್ಲಿ ತೊಡಗುತ್ತಾರೆ. ಅಲ್ಲಿ ಯಾರೇ ಎದುರಾದರೂ ಜೈ ಶ್ರೀಕೃಷ್ಣ ಎಂದೇ ಸಂಬೋಧಿಸಿ ಸ್ವಾಗತಿಸುತ್ತಾರೆ. ಜೈ ಶ್ರೀರಾಮ್ ಎಂದು ಹಾರೈಸುವವರೂ ಇದ್ದಾರೆ. ಸಾಯಿಬಾಬಾಬಾನ ಎರಡು ಮಂದಿರಗಳಿವೆ. ಹಾಗಾಗಿ ಇದು ಭಾರತವಲ್ಲ ಎಂದು ಅನಿಸುವುದೇ ಇಲ್ಲ.

ಐದಾರು ಭಾರತೀಯ ಹೋಟೆಲ್​ಗಳಿದ್ದು, ಮಸಾಲೆದೋಸೆ, ಇಡ್ಲಿ, ರೊಟ್ಟಿ, ಪಲ್ಯ ಎಲ್ಲವೂ ಸಿಗುತ್ತದೆ. ಭಾರತದ ಉದ್ದಗಲಕ್ಕೆ ಸಾಮಾನ್ಯವಾಗಿ ಬಳಕೆ ಮಾಡುವ ಆಹಾರ ಇಲ್ಲಿ ಲಭ್ಯ. ಉತ್ತಮ ರೀತಿಯಲ್ಲಿ ಹೋಟೆಲ್ ನಡೆಸುವವರಿಗೆ ಐಸಿಸಿಆರ್​ನಿಂದ ಅನ್ನಪೂರ್ಣ ಹೆಸರಿನಲ್ಲಿ ಪ್ರಶಸ್ತಿ ಕೂಡ ನೀಡಲಾಗುತ್ತದೆ.

5. ಕಬಡ್ಡಿಗೆ ಪ್ರೋತ್ಸಾಹ

ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್​ನಿಂದ ಕಬಡ್ಡಿಯನ್ನು ಪೋ›ತ್ಸಾಹಿಸುವ ಕೆಲಸ ಮಾಡಲಾಗಿದೆ. ಭಾರತದ ಕ್ರೀಡಾ ಪ್ರಾಧಿಕಾರ (ಸಾಯ್) ಸಹಯೋಗದಲ್ಲಿ ಇಬ್ಬರು ಕೋಚ್​ಗಳು ರೆಫ್ರಿ ತರಬೇತಿ ಕೊಡುತ್ತಿದ್ದಾರೆ. ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಕೋಚಿಂಗ್ ನೀಡಿ ಬಂದಿದ್ದಾರೆ. ತಾಂಜಾನಿಯಾ ಕಬಡ್ಡಿ ಅಸೋಸಿಯೇಷನ್ ಕೂಡ ಇದೆ.

6. ಸಿನಿಮಾ, ಪುಸ್ತಕ

ತಾಂಜಾನಿಯಾ ಮಕ್ಕಳಿಗೆ ಆಗಾಗ್ಗೆ ಭಾರತೀಯ ಸಿನಿಮಾ ತೋರಿಸಲಾಗುತ್ತದೆ. ಕೇಂದ್ರದ ಕಚೇರಿಯಲ್ಲಿ ಪುಟ್ಟ ಗ್ರಂಥಾಲಯ ಇದ್ದು, ಮಕ್ಕಳಿಗೆ ಓದಲು ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳೂ ಇವೆ. ಜನರು ಅದನ್ನು ಬಳಸಿಕೊಳ್ಳುತ್ತಿದ್ದಾರೆ.

7. ಚಿನ್ನದಂತಹ ಜನ

ತಾಂಜಾನಿಯಾದಲ್ಲಿ ಹೇರಳವಾಗಿ ಚಿನ್ನ ಸಿಗುವಂತೆ ತಾಂಜಾನಿಯನ್ನರ ಮನಸ್ಸು ಕೂಡ ಮೊಗೆದಷ್ಟೂ ಚಿನ್ನವೇ. ಭಾರತೀಯರೆಂದರೆ ಅವರಿಗೂ ಹೆಚ್ಚು ಆಪ್ತತೆ. ಒಟ್ಟಾರೆ ಹೇಳಬೇಕೆಂದರೆ ಅಲ್ಲೊಂದು ಮಿನಿ ಭಾರತವೇ ಎದ್ದುನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net