ಮನುಜನಿಗೆ ಗುಬ್ಬಚ್ಚಿಯ ಪತ್ರ; ಇಂದು ಗುಬ್ಬಚ್ಚಿ ದಿನ

Gubbacchi
Published on

ಆತ್ಮೀಯ ಮನುಜನಿಗೆ ಗುಬ್ಬಕ್ಕನ ನಮಸ್ಕಾರಗಳು,

ಬಹಳ ದಿನಗಳ ನಂತರ ನಿನ್ನೊಡನೆ ಮತ್ತೊಮ್ಮೆ ಸಂಪರ್ಕ ಸಾಧಿಸಲು ಈ ಪತ್ರದ ಮೂಲಕ ಪ್ರಯತ್ನಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಿನ್ನ ಬಿಡುವಿಲ್ಲದ ಜಂಜಾಟಗಳಿಂದ ನೀನು ಕಳೆದುಕೊಂಡ ಹಲವಾರು ವಸ್ತುಗಳಲ್ಲಿ ನಮ್ಮಿಬ್ಬರ ಸಂಬಂಧವೂ ಒಂದು ಎಂಬುದು ನಿನಗೆ ಅರಿವಿರುವ ವಿಷಯವೆಂದು ಅಂದುಕೊಂಡಿರುವೆ. ಅಷ್ಟಕ್ಕೂ ಕಳೆದುಹೋದ ಆ ಹಳೆಯ ದಿನಗಳನ್ನು ನಾನಂತೂ ಮರೆಯಲು ಸಾಧ್ಯವೇ ಇಲ್ಲ. ನಿಮ್ಮ ಮನೆಯ ಹೊರಗಿನ ಆ ದೊಡ್ಡ ಹಜಾರ, ಆ ದೊಡ್ಡ ದೊಡ್ಡ ಕಿಟಕಿಗಳು, ಮಾಡಿನ ತೊಲೆಯ ನಡುವೆ ಹಲಗೆ ಹೊಡೆದು ನಮಗೆಂದೇ ಮೀಸಲಿಟ್ಟ ಪುಟ್ಟ ಗೂಡಿನಲ್ಲಿ ನಾವುಗಳು ಬಿಡಾರ ಹೂಡಿದ್ದೆವು. ನಿಮ್ಮ ಮನೆಯಲ್ಲಿ ಕೂಸುಗಳು ಹುಟ್ಟಿದಾಗ ನಾವುಗಳೂ ಚೀಂವ್ ಚೀಂವ್ ಅನ್ನುತ್ತ ಸಂಭ್ರಮಿಸುತ್ತ ನಲಿಯುತ್ತಿದ್ದೆವು. ನಮ್ಮಲ್ಲೂ ಮರಿಗಳು ಹುಟ್ಟಿದಾಗ ನಿಮ್ಮೆಲ್ಲರ ಮುಖದಲ್ಲಿ ಮೂಡುತ್ತಿದ್ದ ಸಂತಸ, ಅಕ್ಕಪಕ್ಕದ ಮನೆ ಮಕ್ಕಳನ್ನು ಕರೆದು ತೋರಿಸುತ್ತ ಅವರೆಲ್ಲ ನಮ್ಮನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದುದು ನನಗಿನ್ನೂ ನೆನಪಿದೆ. ನಿಮ್ಮ ಮನೆಯಂಗಳವಂತೂ ನಾವು ನೀವೆಲ್ಲ ಕೂಡಿ ಆಡಿ ಬೆಳೆದ ಜಾಗ. ಅಲ್ಲಿನ ಕೈತೋಟದಲ್ಲಿ ಹುಳು ಹುಪ್ಪಡಿಗಳನ್ನು ತಿನ್ನುತ್ತ ನಾವುಗಳು ಆಡಿಕೊಂಡಿರುತ್ತಿದ್ದೆವು. ಮನೆಯಜ್ಜಿಯಂದಿರು ಅಕ್ಕಿ ಆರಿಸುತ್ತ, ಹಪ್ಪಳ ಸಂಡಿಗೆ ಒಣಗಿಸುತ್ತ ಅಲ್ಲಿ ಬೀರುತ್ತಿದ್ದ ಜೊಳ್ಳು ಕಾಳು, ಹುಳುಗಳು ನಮಗೆ ಭರಪೂರ ಭೋಜನವನ್ನೊದಗಿಸುತ್ತಿತ್ತು. ಇನ್ನು ಬೇಸಿಗೆಯ ರಜೆಯ ಸಮಯದಲ್ಲಂತೂ ಅಲ್ಲೇ ಆಟವಾಡಿಕೊಂಡಿರುತ್ತಿದ್ದ ನೀವೆಲ್ಲ ನಮ್ಮನ್ನು ಹಿಡಿಯಲು ಬರುವುದು, ನಿಮ್ಮಿಂದ ತಪ್ಪಿಸಿಕೊಳ್ಳುತ್ತ ಕಾಳು ತಿನ್ನುತ್ತಿದ್ದ ನಾವುಗಳು... ಎಷ್ಟೊಂದು ಮಜವಾಗಿತ್ತಲ್ಲವೇ ಆ ಆಟ. ನಿನಗ್ಗೊತ್ತಾ? ಈ ಏಪ್ರಿಲ್-ಆಗಸ್ಟ್ ಸಮಯ ನಮ್ಮ ಬಾಣಂತನದ ಸಮಯವೂ ಹೌದು. ನಿಮ್ಮೆಲ್ಲರ ಈ ಚಟುವಟಿಕೆಗಳಿಂದ ನಾವೂ ಚೆನ್ನಾಗಿ ಉಂಡುಟ್ಟು ನಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮರಿಗಳೂ ಆರೋಗ್ಯವಂತರಾಗಿರುತ್ತಿದ್ದವು.

ಇನ್ನು ನಿಮ್ಮ ಮನೆಯ ಪಕ್ಕದಂಗಡಿಯ ಶೆಟ್ಟರಂತೂ ಮತ್ತೂ ಉದಾರಿ, ಅಂಗಡಿಯ ಬಾಗಿಲು ತೆರೆದು ಗುಡಿಸಿ ಕಸದಲ್ಲಿದ್ದ ಕಾಳುಗಳನ್ನು ನಮಗೆಂದೇ ಹೊರಗೆ ತಂದಿಡುತ್ತಿದ್ದರು. ವಾರಕ್ಕೆರಡು ಬಾರಿ ಅಂಗಡಿಗೆ ಲಾರಿಯಲ್ಲಿ ಬರುತ್ತಿದ್ದ ಕಿರಾಣಿಗಳನ್ನು ಇಳಿಸುತ್ತಿದ್ದಾಗಲಂತೂ ನಮಗೆ ಭೂರಿ ಭೋಜನ. ಗೋಣಿಚೀಲಕ್ಕೆ ಬಂಬು ಹೊಡೆದ ತೂತಿನಿಂದ ಉದುರುತ್ತಿದ್ದ ತರಹೇವಾರಿ ಕಾಳುಗಳು ನಂತರ ಲಾರಿಯನ್ನು ಗುಡಿಸಿ ಎಸೆದ ಕಸದಲ್ಲಂತೂ ಆಹಾ ನಮ್ಮ ಕುಟುಂಬದವರೆಲ್ಲರೂ ಒಟ್ಟಿಗೆಕೂತು ಈ ಕಾಳುಸಂತರ್ಪಣೆಯನ್ನು ಆಸ್ವಾದಿಸುತ್ತಿದ್ದೆವು. ಆಹಾ ಸುವರ್ಣ ಕ್ಷಣಗಳವು.

ಇಷ್ಟೊಂದು ಆತ್ಮೀಯತೆಯಿದ್ದ ನಮ್ಮ ಸಂಬಂಧಕ್ಕೆ ಅದೇನಾಯಿತೋ. ಒಟ್ಟಿಗೆಯಿದ್ದ ನೀವುಗಳೆಲ್ಲ ಬೇರೆಬೇರೆಯಾದಿರಿ. ಹಳೆಯ ಮನೆಗಳನ್ನೆಲ್ಲ ಪುನರುಜ್ಜೀವನದ, ಆಧುನಿಕತೆಯ ಹೆಸರಿನಲ್ಲಿ ಮುರಿದು ಮತ್ತೆ ಕಟ್ಟಿಕೊಂಡಿರಿ. ಆ ಹೊಸ ಮನೆಗಳಂತೂ ಕಾಂಕ್ರೀಟ್ ಪೆಟ್ಟಿಗೆಗಳು. ಅವುಗಳಲ್ಲಿ ಎಲ್ಲವುದಕ್ಕೂ ತನ್ನದೇ ಆದ ಜಾಗವಿತ್ತು, ಸಂಬಂಧಗಳನ್ನು ಬಿಟ್ಟು. ಅಂದಮೇಲೆ ನಮ್ಮ ಬಗ್ಗೆ ಇನ್ನೇನು ಹೇಳುವುದು. ಇದ್ದಬದ್ದ ಜಾಗವನ್ನೆಲ್ಲ ಬಾಚಿಕೊಳ್ಳುವ ನಿಮ್ಮ ತವಕದಲ್ಲಿ ಅಂಗಳಗಳೂ ಮಾಯವಾದವು. ತೋಟಗಳ ಬಗ್ಗೆಯಂತೂ ಹೇಳುವುದೇ ಬೇಡ. ಇದ್ದರೂ ಅಲ್ಲಿ ರಾಸಾಯನಿಕಗಳ ಕಾಟ. ನಿಮ್ಮ ಈ ಹಪಾಹಪಿಯಲ್ಲಿ ನಾವೆಷ್ಟು ದಿನ ಉಪವಾಸ ಮಲಗಿದೆವು ಗೊತ್ತಾ? ಹೋಗಲಿ ಶೆಟ್ಟರ ಅಂಗಡಿಗಾದರೂ ಹೋಗಿ ಹೊಟ್ಟೆ ತುಂಬಿಸಿಕೊಳ್ಳೋಣವೆಂದರೆ ಅದನ್ನು ಕಿತ್ತುಹಾಕಿ ಮಾಲ್​ನ್ನು ಪ್ರತಿಷ್ಠಾಪಿಸಿದ್ದರು. ಅಲ್ಲಂತೂ ಇನ್ನೂ ಮೋಸ. ಹೇಳಿಕೇಳಿ ಹವಾನಿಯಂತ್ರಣ ಕಟ್ಟಡದೊಳಗೆ ನಮಗಂತೂ ಎಂಟ್ರಿಯೇ ಇಲ್ಲ. ಇನ್ನು ಅದೇನೋ ‘ಝೀರೋ ವೇಸ್ಟ್’ ಅಂತ ಎಲ್ಲವನ್ನೂ ಮೊದಲೇ ಪ್ಯಾಕ್ ಮಾಡಿ ತಂದು ಜೋಡಿಸಿಡೋರು. ಬರೀ ಹಸಿವೆಯೊಂದೇ ಸಾಕಿತ್ತು ನಮ್ಮ ವಂಶವನ್ನು ನಿರ್ನಾಮಗೊಳಿಸಲು. ಹಾಂ ಮರೆತಿದ್ದೆ, ಮೊದಲೆಲ್ಲ ಮನೆಗಳಲ್ಲಿ ಬೆಳೆಯುತ್ತಿದ್ದ ನಾವುಗಳೆಲ್ಲ ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಬಾಳುತ್ತಿದ್ದೆವಂತೆ. ಬದುಕು ಬೀದಿಗೆ ಬಂದ ಮೇಲೆ ಅದು ಐದರಿಂದ ಹತ್ತಕ್ಕಿಳಿದಿದೆ. ನಿಮ್ಮ ಈ ಊರುಗಳೆಲ್ಲ ಬೆಳೆದು ಶಹರಗಳಾಗಿದ್ದು, ಆ ಶಹರಗಳಂತೂ ಅಕ್ಷರಶಃ ನರಕಗಳೇ. ಅದೆಷ್ಟು ಗೌಜು, ಮಾಲಿನ್ಯ. ಇವೆಲ್ಲವುದರ ನಡುವೆ ಅಲ್ಲೋ ಇಲ್ಲೋ ಈ ಹಾವು, ಹೆಗ್ಗಣಗಳ ಕಣ್ತಪ್ಪಿಸಿ ಮೊಟ್ಟೆಯನ್ನಿಟ್ಟು ಕಾವುಕೊಟ್ಟು ಮರಿಮಾಡಿ ಅವುಗಳಿಗೆ ಆಹಾರ ತರಲು ಅಲ್ಲೇ ಹೊರಗೆ ಹೋದರೆ ನಿಮ್ಮ ಈ ಶಬ್ದಮಾಲಿನ್ಯದಲ್ಲಿ ಅವುಗಳ ಹಸಿವಿನ ಕೂಗು ನಮಗೆ ಕೇಳಿಸದೇ ಅಲ್ಲೇ ಗೂಡಿನಲ್ಲಿ ಅವುಗಳು ಮರಣ ಹೊಂದಿದ ಉದಾಹರಣೆ ಒಂದೇ ಎರಡೇ. ಇನ್ನು ಈ ಮೊಬೈಲ್ ಟವರ್​ಗಳಂತೂ ತಮ್ಮ ಸಿಗ್ನಲ್ಲುಗಳಿಂದ ಗೊಂದಲವನ್ನುಂಟು ಮಾಡುವ ಮೂಲಕ ನಮ್ಮ ಆಯಸ್ಕಾಂತಿಕ ಕ್ಷೇತ್ರವನ್ನಾಧರಿಸಿ ದಾರಿ ಹುಡುಕಿಕೊಳ್ಳುವ ಸಾಮರ್ಥ್ಯಕ್ಕೇನೇ ಸವಾಲಾಗಿ ನಮ್ಮ ದಾರಿ ತಪ್ಪಿಸುತ್ತಿವೆ. ಇಷ್ಟು ಸಾಲದಕ್ಕೆ ಅದೇನು ಮಾರಾಯಾ ಈ ಪ್ರತಿಫಲಿಸುವ ಗಾಜುಗಳನ್ನು ಅಳವಡಿಸಿ ಮನೆ, ಆಫೀಸು ಕಟ್ಟುವ ಹೊಸ ಚಾಳಿ. ಅವುಗಳನ್ನು ಗುರುತಿಸಲಾಗದೇ ಡಿಕ್ಕಿ ಹೊಡೆದು ನಮ್ಮ ಕುಟುಂಬದ ಅದೆಷ್ಟು ಮಂದಿ ಪ್ರಾಣ ತೆತ್ತರು ಗೊತ್ತಾ. ಜೊತೆಯಾಗಿ ಆಡಿ ಬೆಳೆದವರೇ ಈ ರೀತಿ ನಮ್ಮ ಕುಲಕ್ಕೇ ಮುಳುವಾಗಬಹುದೆಂದು ನಾವೆಲ್ಲ ಕನಸುಮನಸ್ಸಿನಲ್ಲೂ ಎಣಿಸಿರಲಿಲ್ಲ. ಅಷ್ಟಕ್ಕೂ ಗುಬ್ಬಿಗಳನ್ನು ನೀವು ದುರ್ಬಲ ಅಂದುಕೊಂಡಿರುವುದಕ್ಕೆ ನೀವುಗಳು ಬಳಸುವ ಗಾದೆಗಳೇ ಸಾಕ್ಷಿ. ಆದರೆ ಒಂದು ವಿಷಯ ನೆನಪಿರಲಿ. ಈ ಭೂಮಿಯಲ್ಲಿ ಎಲ್ಲರಿಗೂ ತಮ್ಮದೇ ಆದ ಒಂದು ಸ್ಥಾನವಿದೆ. ಹಾಗೇ ನನಗೂ ನಿನಗೂ ಸಹ. ಕಾಳುತಿನ್ನುತ್ತೇವೆಂದು ನಮ್ಮ ಕುಲವನ್ನೇ ನಾಶಮಾಡಲು ಹೊರಟ ಚೀನಾದ ಮಾವೋ ಕೊನೆಗೆ ಶರಣಾಗಿ ಮತ್ತೆ ನಮ್ಮನ್ನೇ ಹುಡುಕಿಕೊಂಡು ಬಂದ ಇತಿಹಾಸ ನಿಮಗೆ ಪಾಠವಾಗಲಿಲ್ಲವೇ? ಕಾಲವಿನ್ನೂ ಮಿಂಚಿಲ್ಲ. ನೀವುಗಳು ನಿಮ್ಮದೆಂದುಕೊಂಡಿರುವ ಈ ಜಗದಲ್ಲಿ ನಮ್ಮ ಸ್ಥಾನ ನಮಗೆ ಕೊಡಿ. ಅಭಿವೃದ್ಧಿಯ ಹೆಸರಿನಲ್ಲಿ ನಿಮ್ಮ ಸುತ್ತ ನೀವುಗಳೇ ನಿರ್ವಿುಸಿರುವ ಸ್ವಾರ್ಥದ ಮೊಟ್ಟೆಯ ಕವಚ ಒಡೆದು ಹೊರಬನ್ನಿ. ನಿಮ್ಮ ಮನೆಯಂಗಳದಲ್ಲಿ ನಮಗೂ ಚೂರು ಜಾಗ ಕೊಡಿ. ನೀವೂ ಬಾಳಿ ನಮ್ಮನ್ನೂ ಬಾಳಲು ಬಿಡಿ...

ಹೋಗುವ ಮೊದಲು ಬರೀ ನಿಮ್ಮ ಕೆಟ್ಟಗುಣಗಳ ಬಗ್ಗೆಯಷ್ಟೇ ಹೇಳಿ ಹೊರಟರೆ ಏನು ಬಂತು? ನಿಮ್ಮಲ್ಲಿಯ ಕೆಲ ಜನರು ನಮ್ಮ ಉಳಿವಿನ ಬಗ್ಗೆ ಮಾಡುತ್ತಿರುವ ಪ್ರಯತ್ನದ ಕುರಿತು ನಾನು ಹೇಳಲೇಬೇಕು. ಅವರೆಲ್ಲ ಸೇರಿ ಇದೀಗ ನಮಗೆಂದೇ ಒಂದು ದಿನವನ್ನೂ ಮೀಸಲಿಟ್ಟಿದ್ದಾರೆ. ನಾಸಿಕ್ ಮೂಲದ ಮಹಮ್ಮದ್ ದಿಲಾವರ್ ಎಂಬುವವರು ‘ನೇಚರ್ ಫೊರೆವರ್’ ಎಂಬ ಸಂಸ್ಥೆ ಆರಂಭಿಸಿ ನಮ್ಮ ರಕ್ಷಣೆಗೆಂದು ಶುರು ಮಾಡಿದ ಅಭಿಯಾನವಿಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿ ನಮ್ಮ ಕುಲಕ್ಕೆ ಪುನರ್ಜನ್ಮವನ್ನು ನೀಡಿದೆ. ಈ ಪಕ್ಷಿಪ್ರಿಯರಂತೂ ಎಲ್ಲೆಡೆ ನಮಗಾಗಿಯೇ ಗೂಡುಗಳನ್ನು ಮನೆಮನೆಗೆ ಹಂಚುವುದು, ಬೇಸಿಗೆಯಲ್ಲಿ ಅಟ್ಟದಲ್ಲಿ ನೀರಿಡುವುದು, ಕಾಳು ಹರಡುವುದನ್ನೆಲ್ಲ ನೋಡಿದರೆ ಎಷ್ಟು ಖುಷಿಯಾಗುತ್ತದೆ ಗೊತ್ತಾ? ಇನ್ನು ಈ ಪುಟ್ಟ ಮಕ್ಕಳಂತೂ ಆಹಾ ನಮ್ಮ ಬಗ್ಗೆ ಎಷ್ಟೊಂದು ತಿಳಿದುಕೊಂಡಿವೆ. ನಮ್ಮಲ್ಲಿ 25ಕ್ಕೂ ಹೆಚ್ಚು ಪ್ರಜಾತಿಗಳಿವೆಯಂತೆ. ಅದರಲ್ಲೂ ಕಚಠಠಛ್ಟಿ ಛಟಞಛಿಠಠಿಜ್ಚಿ್ಠ ನಮ್ಮ ವೈಜ್ಞಾನಿಕ ಹೆಸರಂತೆ. ಆಹಾ ಇದೆಲ್ಲ ಆ ಪುಟಾಣಿಗಳ ಭಾಷಣದಲ್ಲಿ ಕೇಳಲು ಎಷ್ಟು ಚೆನ್ನಾಗಿರತ್ತೆ. ನಿಜಕ್ಕೂ ಇಷ್ಟೊಂದು ಇಲ್ಲಗಳ ನಡುವೆ ಬದುಕಲು ಇವುಗಳೇ ನಮಗೆ ಸ್ಪೂರ್ತಿ. ಮತ್ತೆ ವಾಪಸ್ಸು ಬರ್ತೀವಿ ಕಣೋ. ಮತ್ತೆ ನಿಮ್ಮೆಲ್ಲರ ಅಂಗಳದಲ್ಲಿ ಆಟ ಆಡೋಣ. ಆದ್ರೆ ಆ ಸ್ವಾರ್ಥ ಮಾತ್ರ ಬಿಟ್ಬಿಡಿ ಆಯ್ತಾ. ಇನ್ನು ಬರಲೇ... ಚೀಂವ್ ಚೀಂವ್...

(ನಿರೂಪಣೆ: ಸುನೀಲ್ ಬಾರ್ಕೂರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net