

ಸಾರ್ವಜನಿಕ ಹಣವನ್ನು ಪ್ರತಿಮೆ ಮಾಡಲು ಬಳಸಬೇಡಿ ಎಂದು ಸುಪ್ರೀಂಕೋರ್ಟ್ ಮಂಗಳವಾರ ಸ್ಪಷ್ಟವಾಗಿ ಹೇಳಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಕರುಣಾನಿಧಿ ಅವರ ಕಂಚಿನ ಪ್ರತಿಮೆ ಸ್ಥಾಪಿಸಲು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಅರ್ಜಿ ವಿಚಾರಣೆ ನಡೆಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ನಿರಾಕರಿಸಿದ ಮದ್ರಾಸ್ ಹೈಕೋರ್ಟ್ನ ಹಿಂದಿನ ಆದೇಶವನ್ನು ಎತ್ತಿಹಿಡಿದಿದೆ. ಅಲ್ಲದೆ, ಈ ರೀತಿಯ ಕ್ರಮಕ್ಕೆ ಅವಕಾಶವಿಲ್ಲ. ಹಿಂದಿನ ನಾಯಕರನ್ನು ವೈಭವೀಕರಿಸಲು ನೀವ್ಯಾಕೆ ಸಾರ್ವಜನಿಕ ಹಣ ಬಳಸುತ್ತಿದ್ದೀರಿ? ಎಂದು ಪ್ರಶ್ನಿಸಿದೆ. ಇದು ಎಲ್ಲ ರಾಜ್ಯಗಳಿಗೂ, ರಾಜಕೀಯ ಪಕ್ಷಗಳಿಗೂ ಪಾಠ. ಆಯಾ ರಾಜಕೀಯ ಪಕ್ಷಗಳ ಪ್ರತಿಷ್ಠೆಗೆ ಹೀಗೆ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅಭಿವೃದ್ಧಿಗಾಗಿ, ಜನಪರ ಕಾರ್ಯಗಳಿಗಾಗಿ ಬಳಕೆಯಾಗಬೇಕಾದ ಹಣ ಈ ರೀತಿ ಪೋಲಾಗುತ್ತಿದೆ.
ಈ ಪ್ರವೃತ್ತಿ ಇನ್ನಾದರೂ ನಿಲ್ಲಬೇಕು. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2019ರಲ್ಲಿ ಲಖನೌ ಮತ್ತು ನೊಯ್ಡಾ ಪಾರ್ಕ್ಗಳಲ್ಲಿ ತಮ್ಮ ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆಗಳನ್ನು ಅಲ್ಲದೆ ಬಿಎಸ್ಪಿ ಸಂಸ್ಥಾಪಕರಾದ ಕಾನ್ಶಿರಾಂ ಹಾಗೂ ಸ್ವತಃ ತಮ್ಮ ಪ್ರತಿಮೆಯನ್ನೂ ನಿರ್ವಿುಸಿಕೊಂಡಿದ್ದರು. ಈ ಕುರಿತಂತೆ ಮಾಯಾವತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಣದ ದುರುಪಯೋಗ ಸಲ್ಲ ಎಂದು ಎಚ್ಚರಿಸಿತ್ತು. ‘ಒಂದೊಮ್ಮೆ ಹೀಗೆ ಪ್ರತಿಮೆ ನಿರ್ವಿುಸಬೇಕೆಂದಿದ್ದಲ್ಲಿ, ಅದಕ್ಕೆ ವೈಯಕ್ತಿಕ ಹಣವನ್ನು ಬಳಸಬೇಕೇ ಹೊರತು ಸರ್ಕಾರದ್ದಲ್ಲ’ ಎಂದು ನ್ಯಾಯಾಲಯ ಸ್ಪಷ್ಟ ಮಾತುಗಳಲ್ಲಿ ತಿಳಿಸಿತ್ತು. ಆಗಿನ ಮಾಯಾವತಿ ಸರ್ಕಾರ ಈ ಪ್ರತಿಮೆಗಳ ನಿರ್ವಣಕ್ಕಾಗಿ ಒಟ್ಟು 6.68 ಕೋಟಿ ರೂ.ಗಿಂತಲೂ ಹೆಚ್ಚು ಹಣ ಖರ್ಚು ಮಾಡಿತ್ತು.
ಇದೇ ರೀತಿ ಎಂ.ಕರುಣಾನಿಧಿ ಪ್ರತಿಮೆ ನಿಮಾಣಕ್ಕೆ 30 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಕೋರ್ಟ್ನಲ್ಲಿ ತಮಿಳುನಾಡು ಸರ್ಕಾರ ಪರ ವಕೀಲರು ವಾದಿಸಿದರೂ, ಇದಕ್ಕೂ ಒಪ್ಪದ ನ್ಯಾಯಪೀಠ ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿದೆ. ಆಯಾ ರಾಜ್ಯಗಳಲ್ಲಿ ತೀವ್ರ ಬಡತನ ಎದುರಿಸುತ್ತಿರುವ ಲಕ್ಷಾಂತರ ಕುಟುಂಬಗಳಿವೆ, ಕನಿಷ್ಠ ಮೂಲಸೌಕರ್ಯಗಳೇ ಕಾಣದ ಗ್ರಾಮಗಳಿವೆ. ಇಂಥ ವಲಯಗಳಲ್ಲಿ ಸರ್ಕಾರ ಹಣವನ್ನು ಖರ್ಚು ಮಾಡಿದರೆ ಅದರಿಂದ ಜನರ ಜೀವನಮಟ್ಟ ಉತ್ತಮಗೊಳ್ಳುತ್ತದೆ. ಆದರೆ, ಯಾವಾಗಲೂ ರಾಜಕೀಯ ಪ್ರಭಾವಳಿ ಹೆಚ್ಚಿಸಿಕೊಳ್ಳಲು ಯತ್ನಿಸುವ ಪಕ್ಷಗಳು, ಅದರ ನಾಯಕರು ಯಾವುದೇ ಹಿಂಜರಿಕೆ ಇಲ್ಲದೆ ಅಥವಾ ಆತ್ಮಸಾಕ್ಷಿಗೆ ಹೆದರದೆ ನಾಯಕರ ಪ್ರತಿಮೆ ನಿರ್ವಣಕ್ಕೆ ಹಣ ಸುರಿಯುವುದು ಎಷ್ಟು ಸರಿ? ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಎಲ್ಲ ರಾಜಕೀಯ ಪಕ್ಷಗಳು ಅವಲೋಕನ ಮಾಡಿಕೊಂಡು, ಜನರ ತೆರಿಗೆ ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸಬೇಕು.
ಮತ್ತೊಂದು ಬೆಳವಣಿಗೆಯಲ್ಲಿ, ದೀಪಾವಳಿ ಅಥವಾ ಇತರ ಹಬ್ಬದ ಸಂದರ್ಭಗಳಲ್ಲಿ ಸಾರ್ವಜನಿಕ ಹಣ ಬಳಸಿಕೊಂಡು ಯಾವುದೇ ಉಡುಗೊರೆ ನೀಡುವಂತಿಲ್ಲ ಎಂದು ಎಲ್ಲ ಸಚಿವಾಲಯಗಳು, ಸರ್ಕಾರಿ ಇಲಾಖೆಗಳು ಮತ್ತು ಉದ್ಯೋಗಿಗಳಿಗೆ ಹಣಕಾಸು ಸಚಿವಾಲಯದ ಆದೇಶ ನೀಡಿರುವುದು ಸೂಕ್ತವಾಗಿದೆ. ಜನರ ಹಣವನ್ನು ಹೀಗೆ ದುಂದುವೆಚ್ಚಕ್ಕೆ ಬಳಸುವ ಅಧಿಕಾರ ಯಾರಿಗೂ ಇಲ್ಲ. ಅಧಿಕಾರಿಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಜನರ ದುಡ್ಡನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸುವಂತಾಗಲಿ.