ನಂಬಿಕೆದ್ರೋಹ ಮಾಡಿದ ವಕೀಲ; ಆ ಕ್ಷಣ ಅಂಕಣ...

Vakila
Published on
ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ 29 ವರ್ಷದ ಸುಗುಣ ವಿದ್ಯುತ್ ಕಂಪನಿಯಲ್ಲಿ ಲೈನ್​ವುನ್ ಆಗಿದ್ದ ರಾಜಶೇಖರ್ ಎನ್ನುವವನನ್ನು ಪ್ರೀತಿಸಿ ಲಗ್ನವಾಗಿದ್ದಳು. ರಾಜಶೇಖರ್ ಸ್ಥಿತಿವಂತನಾಗಿದ್ದು, ಸುಗುಣ ಬಡ ಕುಟುಂಬದಿಂದ ಬಂದಿದ್ದ ಕಾರಣ ಅವನ ಮನೆಯವರಿಗೆ ಈ ಲಗ್ನ ಇಷ್ಟವಾಗಿರಲಿಲ್ಲ. ಮಹಾನಗರ ವೊಂದರಲ್ಲಿ ವಾಸಿಸುತ್ತಿದ್ದ ದಂಪತಿಗೆ ಲಗ್ನವಾಗಿ ಎರಡು ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಒಂದು ದಿನ ರಿಪೇರಿ ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ತಗುಲಿದ ಕಾರಣ ರಾಜಶೇಖರ್ ಕಂಬದಿಂದ ಕೆಳಗೆ ಬಿದ್ದು ಅವನ ತಲೆಗೆ ತೀವ್ರ ಪೆಟ್ಟಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟ. ಸುಗುಣ ಆ ಸಮಯದಲ್ಲಿ 3 ತಿಂಗಳ ಗರ್ಭಿಣಿ.

ಗಂಡನ ಮರಣಕ್ಕೆ ವಿದ್ಯುತ್ ಕಂಪನಿಯಿಂದ ಪರಿಹಾರ ಸಿಗಬಹುದೇನೋ ಎಂದು ಸುಗುಣ ಆ ಕಚೇರಿಗೆ ಹೋಗಿ ಅಧಿಕಾರಿಗಳನ್ನು ವಿಚಾರಿಸಿದಳು. ‘ನಿನ್ನ ಗಂಡ ದಿನಗೂಲಿ ನೌಕರನಾಗಿದ್ದ, ಅವನ ಕೆಲಸ ಕಾಯಂ ಆಗದಿದ್ದ ಕಾರಣ ಪರಿಹಾರ ಕೊಡಲು ಸಾಧ್ಯವಿಲ್ಲ’ ಎಂದು ಹೇಳಿದ ಅವರು ಅಂತ್ಯಸಂಸ್ಕಾರದ ಖರ್ಚೆಂದು 10 ಸಾವಿರ ರೂಪಾಯಿ ಕೊಟ್ಟರು. ಸುಗುಣ ಪರ ಊರಿನಲ್ಲಿದ್ದ ತನ್ನ ಅತ್ತೆ-ಮಾವನ ಮನೆಗೆ ಹೋಗಿ ಗಂಡನ ಆಸ್ತಿಯಲ್ಲಿ ಪಾಲು ಕೇಳಿದಾಗ ಅವರು ಕೋಪಗೊಂಡರು. ಆಕೆಯ ಅತ್ತೆ, ‘ರಾಜಶೇಖರ್ ಸತ್ತದ್ದು ನಿನ್ನ ಕೆಟ್ಟ ಕಾಲ್ಗುಣದಿಂದಲೇ, ನಿನಗೂ ಈ ಕುಟುಂಬಕ್ಕೂ ಇನ್ನು ಯಾವುದೇ ಸಂಬಂಧವಿಲ್ಲ, ನಮ್ಮ ಬಳಿ ಸುಳಿಯಲೇ ಬೇಡ’ ಎಂದು ಮನೆಯಿಂದ ಹೊರಹಾಕಿದರು.

ಏತನ್ಮಧ್ಯೆ ವನಿತಾ ಎನ್ನುವವಳು ಹೆರಿಗೆಗಾಗಿ ಸುಗುಣ ಇದ್ದ ಆಸ್ಪತ್ರೆಗೆ ಬಂದಳು. ಆಕೆಯ ಹೆರಿಗೆ ಕಾಲದಲ್ಲಿ ಹಾಗೂ ನಂತರ ಸುಗುಣ ಅವಳಿಗೆ ಉತ್ತಮ ಶುಶ್ರೂಷೆ ಮಾಡಿದ ಕಾರಣ ಅವರಿಬ್ಬರ ಮಧ್ಯೆ ಸಲಿಗೆ ಬೆಳೆಯಿತು. ಒಮ್ಮೆ ಸಂಭಾಷಿಸುತ್ತಿದ್ದಾಗ ಸುಗುಣ ಆಕೆಯ ಜೊತೆ ತನ್ನ ದುಃಖ ಹಂಚಿಕೊಂಡಳು. ಸಾಂತ್ವನ ತೋರಿದ ವನಿತಾ, ‘ನ್ಯಾಯಾಲಯದಲ್ಲಿ ಕೇಸ್ ಹಾಕು. ಖಂಡಿತವಾಗಿಯೂ ನಿನ್ನ ಗಂಡನ ಆಸ್ತಿಯ ಪಾಲು ನಿನಗೆ ಬರುತ್ತದೆ, ಅಲ್ಲದೆ ವಿದ್ಯುತ್ ಕಂಪನಿಯವರು ನಿನಗೆ ಪರಿಹಾರ ಕೊಡಬೇಕಾಗುತ್ತದೆ’ ಎಂದಳು. ‘ನನಗೆ ಕೋರ್ಟ್ ಕಚೇರಿಗಳ ವ್ಯವಹಾರ ತಿಳಿಯದು’ ಎಂದು ಸುಗುಣ ಹೇಳಿದಾಗ, ‘ನೀನೇನೂ ಹೆದರಬೇಡ. ನನ್ನ ಸೋದರನೇ ವಕೀಲನಾಗಿದ್ದು, ಅವನಿಗೆ ನಿನ್ನ ಪರವಾಗಿ ಕೇಸ್ ಮಾಡಲು ಹೇಳುತ್ತೇನೆ’ ಎಂದಳು.

ಕಾಕತಾಳೀಯವಾಗಿ ಈ ಮಾತುಕತೆ ನಡಯುತ್ತಿರುವಾಗಲೇ ವನಿತಾಳ ಸೋದರ ಆಕೆಯನ್ನು ನೋಡಲು ಆಸ್ಪತ್ರೆಗೆ ಬಂದ, ಆತನನ್ನು ಚಂದ್ರಕಾಂತ್ ಎಂದು ಪರಿಚಯಿಸಿದ ವನಿತಾ, ಸುಗುಣಳ ತೊಂದರೆಯನ್ನು ಅವನಿಗೆ ವಿವರಿಸಿದಳು. ‘ನೀವೇನೂ ಯೋಚನೆ ಮಾಡಬೇಡಿ. ಕೋರ್ಟಿಗೆ ಅರ್ಜಿ ಹಾಕೋಣ, ನಿಮಗೆ ಬಿಡುವಾದಾಗ ನನ್ನ ಕಚೇರಿಗೆ ಬನ್ನಿ’ ಎಂದು ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟ. ಒಂದು ಭಾನುವಾರ ಸುಗುಣ ಚಂದ್ರಕಾಂತನ ಕಚೇರಿಗೆ ಹೋದಳು. ಆತ ಸುಗುಣ ತಂದಿದ್ದ ಕಾಗದಪತ್ರಗಳನ್ನು ನೋಡಿ ಒಂದು ಹಾಳೆಯಲ್ಲಿ ಕೆಲವು ಟಿಪ್ಪಣಿಗಳನ್ನು ಗುರುತು ಹಾಕಿಕೊಂಡ. ‘ವಿದ್ಯುತ್ ಕಂಪನಿಯಿಂದ ಬರಬೇಕಾದ ಹಣವನ್ನಲ್ಲದೆ ನಿಮಗೆ ಸರ್ಕಾರಿ ಕಚೇರಿಯಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸುವ ಜವಾಬ್ದಾರಿ ನನ್ನದು’ ಎಂದ. ಆಕೆ ಮರಳುವ ಸಮಯದಲ್ಲಿ ತನ್ನ ಶುಲ್ಕವೆಂದು ಅವಳಿಂದ 10 ಸಾವಿರ ರೂಪಾಯಿ ಪಡೆದ. ‘ಇದೇನು ಇಷ್ಟು ದುಬಾರಿ ಫೀಸ್?’ ಎಂದು ಕೇಳಿದಾಗ ‘ನಿಮಗೆ ಪರಿಹಾರ ರೂಪವಾಗಿ ನಾನು ಲಕ್ಷಾನುಗಟ್ಟಲೇ ಹಣವನ್ನು ಕೊಡಿಸುವ ಕಾರಣ ನನ್ನ ಫೀಸೇನೂ ಹೆಚ್ಚಲ್ಲ, ನೀವು ಇನ್ನೂ ಸಾಕಷ್ಟು ಹಣ ಕೊಡಬೇಕಾಗುತ್ತದೆ’ ಎಂದ.

ಒಂದು ತಿಂಗಳ ನಂತರ ಸುಗುಣಳನ್ನು ತನ್ನ ಕಚೇರಿಗೆ ಕರೆಸಿಕೊಂಡ ಚಂದ್ರಕಾಂತ್, ‘ನಾವು ಎರಡು ಬೇರೆ-ಬೇರೆ ಕೇಸುಗಳನ್ನು ಹಾಕಬೇಕಾಗಿದೆ, ಒಂದು ವಿದ್ಯುಚ್ಛಕ್ತಿ ಕಂಪನಿ ವಿರುದ್ಧ. ಮತ್ತೊಂದು ನಿಮಗೆ ಬರಬೇಕಾದ ಆಸ್ತಿಯ ಬಗ್ಗೆ. ಎರಡೂ ಬೇರೆ-ಬೇರೆ ಕೋರ್ಟುಗಳಲ್ಲಿ ನಡೆಯಬೇಕು. ಈಗ ನ್ಯಾಯಾಲಯದ ಫೀ ಮತ್ತು ನನ್ನ ಶುಲ್ಕವಾಗಿ 50 ಸಾವಿರ ರೂ. ಕೊಡಿ’ ಎಂದ. ಗಾಬರಿಯಾದ ಸುಗುಣ ಅಷ್ಟು ಹಣವನ್ನು ತಾನು ತರಲು ಸಾಧ್ಯವಿಲ್ಲ ಎಂದಾಗ ‘ಕಡಿಮೆಯೆಂದರೆ 30 ಸಾವಿರ ರೂ. ನೀಡಿ, ನೀವು ಕೇಸನ್ನು ಗೆದ್ದಾಗ ನಿಮಗೆ ಹತ್ತು ಲಕ್ಷಕ್ಕಿಂತ ಹೆಚ್ಚಿನ ಹಣ ಬರುತ್ತದೆ’ ಎಂದ. ಅವನ ಮಾತು ಕೇಳಿ ಆಕೆ ಯಾರಿಂದಲೋ ಸಾಲ ಮಾಡಿ ಫೀಸನ್ನು ಕೊಟ್ಟಳು.

ಇದಾದ ಎರಡು-ಮೂರು ತಿಂಗಳ ನಂತರವೂ ಕೇಸು ಮುಂದುವರಿಯದಿದ್ದಾಗ ಸುಗುಣ ಚಂದ್ರಕಾಂತನ ಕಚೇರಿಗೆ ಹೋಗಿ ವಿಚಾರಿಸಿದಳು. ‘ನ್ಯಾಯಾಲಯ ನಮ್ಮ ಅರ್ಜಿಯಲ್ಲಿ ಕೆಲವು ಲೋಪದೋಷ ಪಟ್ಟಿ ಮಾಡಿದೆ. ಅವನ್ನು ಸರಿಪಡಿಸಿದ ನಂತರ ಮತ್ತೊಮ್ಮೆ ಸಲ್ಲಿಸಬೇಕಾಗುತ್ತದೆ, ಕೆಲಸ ಸ್ವಲ್ಪ ನಿಧಾನವಾಗುತ್ತಿದೆ. ತಾಳ್ಮೆಯಿಂದಿರಿ’ ಎಂದ. ಆನಂತರವೂ ಯಾವುದೇ ಪ್ರಗತಿ ಕಾಣದಾದಾಗ ಸುಗುಣ ಮತ್ತೆ ಅವನ ಕಚೇರಿಗೆ ಹೋದಳು. ‘ವಿದ್ಯುಚ್ಛಕ್ತಿ ಕಂಪನಿ ಪರಸ್ಪರ ಸಂಧಾನ ಮಾಡಿಕೊಳ್ಳೋಣ ಎಂದು ಹೇಳುತ್ತಿದೆ, ನಿಮಗೆ ಅನುಕಂಪದ ನೌಕರಿ ಕೊಡಲು ಒಪ್ಪಿಸಿದ್ದೇನೆ, ನಿಮಗೆ ಮಾಹೆಯಾನ 30 ಸಾವಿರ ರೂ. ಬರುವಂತಹ ಕೆಲಸ ಕೊಡಲು ಒಪ್ಪಿದ್ದಾರೆ, ಆದರೆ ಅವರು ನಿಮ್ಮ 3 ತಿಂಗಳ ಸಂಬಳವನ್ನು ಲಂಚವಾಗಿ ಕೇಳುತ್ತಿದ್ದಾರೆ, ಇನ್ನೊಂದು 50 ಸಾವಿರ ರೂ. ಕೊಡಿ’ ಎಂದು ಅವಳಿಂದ ಹಣ ಪಡೆದ. ತನ್ನ ಗಂಡನ ಆಸ್ತಿ ಪಾಲಿನ ಬಗ್ಗೆ ವಿಚಾರಿಸಿದಾಗ, ಆ ಪ್ರಕರಣ ಸಂಬಂಧಿಸಿದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ ಎಂದ ಚಂದ್ರಕಾಂತ್. ತಿಂಗಳ ನಂತರ ಯಾವುದೇ ಪ್ರಗತಿ ಕಾಣದಾದಾಗ ಸುಗುಣ ಗಾಬರಿಗೊಂಡು ತನ್ನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಕೀಲೆಯೊಬ್ಬಳನ್ನು ಸಂರ್ಪಸಿದಳು. ತಾನು ಚಂದ್ರಕಾಂತನಿಗೆ ಈಗಾಗಲೇ ಒಂದು ಲಕ್ಷ ರೂಪಾಯಿ ಕೊಟ್ಟಿರುವುದಾಗಿ ಹೇಳಿದಾಗ, ಆ ವಕೀಲೆ ‘ನಿನಗೇನೋ ಮೋಸವಾದಂತೆ ಕಾಣುತ್ತದೆ, ನಾನು ನನ್ನ ಕಚೇರಿಯ ಕಾರಕೂನನಿಂದ ನಿನ್ನ ಪ್ರಕರಣಗಳ ಬಗ್ಗೆ ವಿಚಾರಿಸುತ್ತೇನೆ’ ಎಂದು ಹೇಳಿ ಎಲ್ಲ ವಿವರ ಪಡೆದುಕೊಂಡಳು. ಕೆಲ ಸಮಯದ ನಂತರ ಸುಗುಣಳನ್ನು ಸಂರ್ಪಸಿದ ಆ ವಕೀಲೆ ಸುಗುಣಳ ಪರವಾಗಿ ಯಾವುದೇ ಅರ್ಜಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿಲ್ಲ ಎಂದು ತಿಳಿಸಿದಳು. ಕೂಡಲೇ ಸುಗುಣ ಚಂದ್ರಕಾಂತನ ಕಚೇರಿಗೆ ಹೋಗಿ ವಿಚಾರಿಸಿದಾಗ ಆತ ತಾನು ಮುಂದಿನ ವಾರ ಅರ್ಜಿ ದಾಖಲಿಸುವುದಾಗಿ ತಿಳಿಸಿದ. ವಾರದ ನಂತರ ವಿಚಾರಿಸಿದಾಗ ‘ಕೇಸನ್ನು ದಾಖಲಿಸಿದ್ದೇನೆ, ಎದುರು ಪಾರ್ಟಿಗೆ ನೋಟೀಸ್ ಕೊಡುತ್ತಾರೆ’ ಎಂದ. ಆನಂತರ ಭೇಟಿ ಮಾಡಿದಾಗಲೆಲ್ಲ ಯಾವುದಾದರೊಂದು ಸಬೂಬನ್ನು ಕೊಡುತ್ತ ಬಂದ. ಕೆಲ ಕಾಲದ ನಂತರ ಆತ ಅವಳನ್ನು ಭೇಟಿ ಮಾಡುವುದನ್ನೇ ಬಿಟ್ಟು, ತನ್ನ ಕಿರಿಯರಿಂದ ವಕೀಲರು ಎಲ್ಲಿಯೋ ಹೋಗಿದ್ದಾರೆ ಎಂದು ಹೇಳಿಸಿ ಅವಳನ್ನು ಸಾಗಹಾಕುತ್ತಿದ್ದ.

ಇದರಿಂದ ರೋಸಿದ ಸುಗುಣ ಠಾಣೆಗೆ ದೂರು ನೀಡಿದಳು. ಪೊಲೀಸರು ‘ಇದು ವಕೀಲರು ಮತ್ತು ಕಕ್ಷಿದಾರರ ಮಧ್ಯದ ವಿವಾದ, ನೀವು ನ್ಯಾಯಾಲಯವನ್ನೇ ಸಂರ್ಪಸಿ’ ಎಂದರು. ಸುಗುಣ ತನ್ನ ಆಸ್ಪತ್ರೆಗೆ ಬಂದಿದ್ದ ವಕೀಲೆಯನ್ನು ಸಂರ್ಪಸಿ ಅವಳ ಮೂಲಕ ತಾನೇ ನ್ಯಾಯಾಲಯಕ್ಕೆ ಹಾಜರಾಗಿ ಅಹವಾಲನ್ನು ತೋಡಿಕೊಂಡಳು. ನ್ಯಾಯಾಧೀಶರು ಸುಗುಣಳ ಅರ್ಜಿ ದಾಖಲಿಸಿಕೊಂಡು ಸದರಿ ವಕೀಲನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಚಿಸಿದರು, ಈ ಆದೇಶದ ಮೇರೆಗೆ ಚಂದ್ರಕಾಂತನ ವಿರುದ್ಧ ಮೋಸ ಹಾಗೂ ನಂಬಿಕೆದ್ರೋಹದ ಪ್ರಕರಣ ದಾಖಲಾಯಿತು. ಪೊಲೀಸರು ಅವನ ಕಚೇರಿಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಿದಾಗ, ಸುಗುಣಳಿಂದ ವಕಾಲತ್ ಮೇಲೆ ಸಹಿ ಮಾಡಿಸಿಕೊಳ್ಳದಿರುವುದು ಗಮನಕ್ಕೆ ಬಂದಿತು. ‘ನನಗೂ ಸುಗುಣಳಿಗೂ ಸಂಬಂಧವಿಲ್ಲ, ಆಕೆ ನನ್ನ ಕಕ್ಷಿದಾರಳೇ ಆಗಿದ್ದರೆ ನನ್ನ ಪರವಾಗಿ ವಕಾಲತ್ತನ್ನು ಸಹಿ ಮಾಡಿ ಕೊಡಬೇಕಾಗಿತ್ತಲ್ಲ’ ಎಂದು ಚಂದ್ರಕಾಂತ ಹೇಳಿ ಆಕೆ ತನ್ನ ಮೇಲೆ ಸುಳ್ಳು ದೂರಿತ್ತಿದ್ದಾಳೆಂದು ವಾದಿಸಿದ. ನಂತರದ ತನಿಖೆಯಲ್ಲಿ ಸುಗುಣಳ ದೂರಿನಲ್ಲಿ ಆಧಾರವಿದೆ ಎಂದು ಪತ್ತೆಮಾಡಿದ ಪೊಲೀಸರು ಚಂದ್ರಕಾಂತನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಲಯದ ವಿಚಾರಣೆಯಲ್ಲಿ ಚಂದ್ರಕಾಂತನಿಗೆ 2 ವರ್ಷ ಶಿಕ್ಷೆಯಾದದ್ದಲ್ಲದೆ ಆತನಿಂದ ಪಡೆದ ದಂಡದಲ್ಲಿ 10 ಸಾವಿರ ರೂ. ಪರಿಹಾರ ರೂಪವಾಗಿ ಸುಗುಣಳಿಗೆ ಕೊಡಬೇಕೆಂದು ತೀರ್ವನವಾಯಿತು. ಇದಲ್ಲದೆ ಆ ವಕೀಲ ಕೆಲಕಾಲ ವಕೀಲಗಿರಿ ಮಾಡದಂತೆ ಅವನ ಸನದನ್ನು ಅಮಾನತು ಮಾಡಲಾಯಿತು. ‘ಜನರನ್ನು ನಂಬುವುದೊಂದು ವಿಲಾಸವಾಗಿದ್ದು ಇದನ್ನು ಕೇವಲ ಶ್ರೀಮಂತರಷ್ಟೇ ನಿಭಾಯಿಸಬಲ್ಲರು; ಬಡವರಲ್ಲ’ ಎಂದ ಬ್ರಿಟಿಷ್ ಸಾಹಿತಿ ಇ.ಎಂ. ಫಾರ್ಸ್ಟರ್​ನ ಮಾತುಗಳು ಸುಗುಣಳ ಮಟ್ಟಿಗೆ ಸತ್ಯವಾದವು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net