ಶಿಕ್ಷಕಿಯ ಪ್ರಾಣ ತೆಗೆದ ಕಿರಾತಕ: ಆ ಕ್ಷಣ...

A kshana
Published on
ರಾಜ್ಯದ ಗಡಿಗ್ರಾಮವೊಂದರಲ್ಲಿ ಜನಿಸಿದ ಗೋವಿಂದ ಅಲ್ಲೇ 10ನೇ ತರಗತಿಯವರೆಗೆ ಓದಿ ಆನಂತರ ವಿದ್ಯಾಭ್ಯಾಸವನ್ನು ತ್ಯಜಿಸಿ ಗುತ್ತಿಗೆ ಕೆಲಸ ಪ್ರಾರಂಭಿಸಿದ. ಸಣ್ಣಪುಟ್ಟ ಕಾಮಗಾರಿಗಳಿಂದ ಆರಂಭವಾದ ಅವನ ಕೆಲಸ ಕಾಲಕ್ರಮೇಣ ಸಾಕಷ್ಟು ಅಭಿವೃದ್ಧಿ ಹೊಂದಿತು. ತನ್ನ ತಾಲೂಕಲ್ಲದೇ ನೆರೆ ರಾಜ್ಯದ ತಾಲೂಕಿನಲ್ಲಿಯೂ ಗುತ್ತಿಗೆ ಕೆಲಸ ಮಾಡುತ್ತಿದ್ದ ಗೋವಿಂದ ಹತ್ತೇ ವರ್ಷಗಳಲ್ಲಿ ಜಿಲ್ಲೆಯ ದೊಡ್ಡ ಗುತ್ತಿಗೆದಾರರಲ್ಲೊಬ್ಬನಾದ.

ಸಂಬಂಧಿಸಿದ ರಾಜಕಾರಣಿಗಳಿಗೆ ಹೆಚ್ಚಿನ ಪರ್ಸೆಂಟೇಜ್ ಕೊಡುತ್ತಿದ್ದರಿಂದ ಸುತ್ತಮುತ್ತಲ ಜಿಲ್ಲೆಗಳಲ್ಲಿ ಯಾವುದೇ ರಸ್ತೆ ಕೆಲಸವಾಗಲೀ, ಸೇತುವೆ ಕೆಲಸವಾಗಲೀ ಗೋವಿಂದನಿಗೇ ಬರುತ್ತಿತ್ತು. ಗೋವಿಂದ ರಾಜಕಾರಣಿಗಳಿಗೆ ಆಪ್ತನಾಗಿದ್ದುದನ್ನರಿತ ಊರ ಜನರು ಸರ್ಕಾರಿ ಪಿ.ಯು ಕಾಲೇಜನ್ನು ಊರಿಗೆ ಮಂಜೂರು ಮಾಡಿಸಿಕೊಂಡು ಬರಲು ಅವನಿಗೆ ದುಂಬಾಲು ಬಿದ್ದರು. ಗೋವಿಂದ ಸಂಬಂಧಪಟ್ಟವರನ್ನು ಭೇಟಿ ಮಾಡಿ ತಾಲೂಕಿನಲ್ಲಿ ಸರ್ಕಾರಿ ಕಾಲೇಜು ಸ್ಥಾಪನೆಯಾಗುವಲ್ಲಿ ಯಶಸ್ವಿಯಾದ. ಕಾಲೇಜಿಗೆಂದು ಗ್ರಾಮದ ಜನರು ಜಮೀನನ್ನೂ ಬಳುವಳಿಯಾಗಿ ಕೊಟ್ಟರು. ಒಂದೇ ವರ್ಷದಲ್ಲಿ ಕಾಲೇಜು ಕಟ್ಟಡ ನಿರ್ವಣಗೊಂಡು ತರಗತಿಗಳು ಪ್ರಾರಂಭವಾದವು. ಗೋವಿಂದನನ್ನೇ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷನನ್ನಾಗಿ ಮಾಡಲಾಯಿತು. ಮೂರು ವರ್ಷಗಳಲ್ಲಿ ಕಾಲೇಜು ಅಭಿವೃದ್ಧಿಗೆ ಬಂದು ಆ ಭಾಗದಲ್ಲಿ ಹೆಸರುವಾಸಿಯಾಯಿತು.

ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಹಾಸ್ಟೆಲ್ ಇಲ್ಲದೆ ತೊಂದರೆಪಡುತ್ತಿರುವುದನ್ನು ಮನಗಂಡ ಗೋವಿಂದ ಕಾಲೇಜಿನ ಪಕ್ಕದ ಜಮೀನನ್ನು ಖರೀದಿಸಿ ಅಲ್ಲಿ 50 ಕೊಠಡಿಗಳಿರುವ ಹಾಸ್ಟೆಲ್ ನಿರ್ವಿುಸಿದ. ಅದೇ ಹಾಸ್ಟೆಲ್ಲಿನ ಮಹಡಿಯ ಮೇಲೆ ಸುಸಜ್ಜಿತ ಅತಿಥಿಕೋಣೆಯನ್ನು ಕಟ್ಟಿಸಿದ. ತನಗೆ ಪರಿಚಯಸ್ಥ ರಾಜಕಾರಣಿಗಳ ಆತಿಥ್ಯಕ್ಕಾಗಿ ಆ ಕೋಣೆಯನ್ನುಪಯೋಗಿಸುತ್ತಿದ್ದ.

ಈ ನಡುವೆ, ಕಾಲೇಜಿಗೆ ಹೆಚ್ಚು ವಿದ್ಯಾರ್ಥಿಗಳು ಬರಬೇಕೆಂದರೆ ತನ್ನ ಊರಿನಲ್ಲಿಯೇ ಒಳ್ಳೆಯ ಖಾಸಗಿ ಶಾಲೆಯನ್ನು ಪ್ರಾರಂಭಿಸಬೇಕೆಂಬ ಯೋಚನೆ ಗೋವಿಂದನಿಗೆ ಬಂತು. ಆತ ತನ್ನ ಜಮೀನಿನಲ್ಲಿಯೇ ಕಟ್ಟಡ ನಿರ್ವಿುಸಿ ಇಂಗ್ಲಿಷ್ ಮಾಧ್ಯಮದ ಶಾಲೆ ತೆರೆದ. 5 ತರಗತಿಗಳಿಂದ ಆರಂಭವಾದ ಈ ಶಾಲೆಗೆ ಶುರುವಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಬರದಿದ್ದರೂ ಕಾಲಕ್ರಮೇಣ ಎಲ್ಲ ತರಗತಿಗಳೂ ತುಂಬಿ ಆ ಶಾಲೆಯೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಸರುವಾಸಿಯಾಯಿತು.

ಒಂದು ರಾತ್ರಿ ಗೋವಿಂದನ ಅತಿಥಿಗೃಹದಲ್ಲಿ ತಂಗಿದ್ದ ಸಚಿವನೊಬ್ಬ ತನಗೆ ಸಂಗಾತಿ ಬೇಕೆಂದು ಅಪೇಕ್ಷಿಸಿದಾಗ ಗೋವಿಂದ ತನ್ನ ಅಧಿಕಾರ ಬಳಸಿ ಹಾಸ್ಟೆಲಿನಲ್ಲಿ್ಲ ಅಡುಗೆ ಮಾಡುವವಳನ್ನು ಅವನಿಗೆ ಜತೆ ಮಾಡಿಕೊಟ್ಟ. ತೃಪ್ತಿಗೊಂಡ ರಾಜಕಾರಣಿ ಗೋವಿಂದನ ಕೆಲಸಕಾರ್ಯಗಳನ್ನು ಮಾಡಿಕೊಡತೊಡಗಿದ. ಇದೇ ಮಾರ್ಗದಲ್ಲಿಯೇ ಪ್ರಭಾವಿ ರಾಜಕಾರಣಿಗಳನ್ನು ತೃಪ್ತಿಗೊಳಿಸಿ ತನ್ನ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಬಹುದೆಂಬ ದುರ್ಬುದ್ಧಿಯಿಂದ ಗೋವಿಂದ ಕಾಲೇಜು ಮತ್ತು ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಮಿಷವೊಡ್ಡಿ ಅಥವಾ ವಜಾಮಾಡುವ ಭೀತಿ ತೋರಿಸಿ ತನ್ನ ಉದ್ದೇಶ ಸಾಧನೆಗಾಗಿ ಅವರನ್ನು ಬಳಸಿಕೊಂಡ.

ರಾಜಕಾರಣಿಗಳನ್ನು ತೃಪ್ತಿಪಡಿಸುತ್ತಿದ್ದ ಕಾರಣ ಗೋವಿಂದನಿಗೆ ಜಿಲ್ಲಾ ಪಂಚಾಯಿತಿಯ ಸದಸ್ಯ ಸ್ಥಾನವೂ ಲಭಿಸಿತು. ಸಚಿವನಾಗುವ ಕನಸನ್ನೂ ಆತ ಕಾಣತೊಡಗಿದ್ದ. ಇಷ್ಟರಲ್ಲಿ ಗೋವಿಂದನ ಇಂಗ್ಲಿಷ್ ಶಾಲೆಯ ಮುಖ್ಯಾಧ್ಯಾಪಕಿಯಾಗಿ ಮಮತಾ ಎನ್ನುವವಳು ನೇಮಕಗೊಂಡಳು. ಪಕ್ಕದ ಜಿಲ್ಲೆಯ ಆಕೆ ಪಟ್ಟಣವೊಂದರಲ್ಲಿ ಕೆಲಸ ಮಾಡುತ್ತಿದ್ದು ವೃದ್ಧ ತಂದೆ-ತಾಯಿಯನ್ನು ಸಲಹಲು ಗ್ರಾಮೀಣ ಶಾಲೆಗೆ ಬರಲೊಪ್ಪಿದ್ದಳು. ಕೆಲವೇ ವಾರಗಳಲ್ಲಿ ಮಮತಾಗೆ ಗೋವಿಂದನ ದುರ್ವ್ಯವಹಾರಗಳ ಬಗ್ಗೆ ತಿಳಿಯಿತು.

ಒಂದು ದಿನ ಆಕೆ ಗೋವಿಂದನನ್ನು ಉದ್ದೇಶಿಸಿ, ‘ಸರ್, ರಾಜಕಾರಣಿ ಸ್ನೇಹಿತರ ತೃಪ್ತಿಗಾಗಿ ಕಾಲೇಜು ಮತ್ತು ಶಾಲೆಯ ಸಿಬ್ಬಂದಿಯನ್ನು ಶೋಷಿಸುತ್ತಿರುವುದು ಅಕ್ಷಮ್ಯ. ಪವಿತ್ರ ವಿದ್ಯಾಕೇಂದ್ರವನ್ನು ಕಲುಷಿತಗೊಳಿಸಬೇಡಿ’ ಎಂದಳು. ‘ನೀನು ನಿನ್ನ ಕೆಲಸ ನೋಡಿಕೋ, ನನ್ನ ಕೆಲಸದಲ್ಲಿ ಮೂಗುತೂರಿಸಿದರೆ ನಿನ್ನನ್ನು ವಜಾಮಾಡಬೇಕಾಗುತ್ತದೆ’ ಎಂದು ಗೋವಿಂದ ಬೆದರಿಸಿದ. ಆದರೆ ಬೆದರಿಕೆಗೆ ಬಗ್ಗದ ಮಮತಾ, ಗೋವಿಂದನೊಡನೆ ಸಹಕರಿಸುತ್ತಿದ್ದ ಶಾಲೆಯ ಶಿಕ್ಷಕಿಯರು ಹಾಗೂ ಹಾಸ್ಟೆಲ್ಲಿನ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯನ್ನು ಒಟ್ಟುಗೂಡಿಸಿ ಅವರು ಮಾಡುತ್ತಿದ್ದ ತಪ್ಪನ್ನು ಎತ್ತಿ ತೋರಿಸಿ ಗೋವಿಂದನಿಗೆ ಸಹಕರಿಸದಿರಲು ಸೂಚಿಸಿದಳು.

ಇದು ಗೋವಿಂದನಿಗೆ ಗೊತ್ತಾದಾಗ ಮಮತಾಳನ್ನು ಶಾಲೆಯಿಂದ ವಜಾಮಾಡುವ ಬೆದರಿಕೆ ಒಡ್ಡಿದ. ಮಮತಾ ಅವನ ಬಗ್ಗೆ ಮಾಧ್ಯಮಗಳಿಗೆ ತಿಳಿಸುವುದಾಗಿ ಪ್ರತಿಬೆದರಿಕೆ ಹಾಕಿದಾಗ ಗೋವಿಂದ ಸುಮ್ಮನಾಗಬೇಕಾಯಿತು. ಮುಂದಿನ ಶನಿವಾರ ಅರ್ಧ ದಿನದ ಶಾಲೆಯ ನಂತರ ಮಮತಾ ಮನೆಗೆ ತೆರಳಿದಳು. ಗೋವಿಂದ ಅವಳಿಗೆ ಕರೆ ಮಾಡಿ ಶಾಲೆಯನ್ನು ನೋಡಲು ಶಿಕ್ಷಣ ಇಲಾಖೆಯ ಅಧಿಕಾರಿ ಬಂದಿರುವುದಾಗಿ ತಿಳಿಸಿ ತುರ್ತಾಗಿ ಬರಹೇಳಿದ. ಮಮತಾ ಕುಟುಂಬದವರಿಗೆ ತಿಳಿಸಿ ಶಾಲೆಯಿದ್ದ ಗ್ರಾಮಕ್ಕೆ ಬಸ್ಸಿನಲ್ಲಿ ಬಂದಳು. ಅವಳನ್ನು ಬಸ್​ಸ್ಟಾ್ಯಂಡಿನಲ್ಲಿಯೇ ಎದುರುಗೊಂಡ ಗೋವಿಂದ ತನ್ನ ಕಾರಿನಲ್ಲಿ ಎಲ್ಲಿಗೋ ಕರೆದುಕೊಂಡು ಹೋದ. ಇತ್ತ ನಡುರಾತ್ರಿಯಾದರೂ ಮಮತಾ ವಾಪಸ್ಸಾಗದಿದ್ದಾಗ ಸೋದರ ಅವಳ ಸೆಲ್​ಫೋನ್​ಗೆ ಕರೆ ಮಾಡಿದ. ಫೋನ್ ಸ್ವಿಚ್ ಆಫ್ ಆಗಿತ್ತು. ಗೋವಿಂದನ ಕರೆಯ ಮೇರೆಗೆ ಆಕೆ ಹೋಗಿದ್ದರಿಂದ ಅವನ ಸೆಲ್​ಫೋನ್​ಗೆ ಕರೆ ಮಾಡಿದ. ಗೋವಿಂದ ಉತ್ತರಿಸಲಿಲ್ಲ. ರಾತ್ರಿ ಪೂರ್ತಿ ಕಾದ ಮಮತಾಳ ಸೋದರ ಮಾರನೆಯ ದಿನ ಶಾಲೆಯಿದ್ದ ಊರಿಗೆ ಬಂದು ವಿಚಾರಿಸಿದಾಗ, ಮಮತಾಳ ಬಗ್ಗೆ ಯಾವ ಮಾಹಿತಿಯೂ ಲಭಿಸಲಿಲ್ಲ. ಗೋವಿಂದನಂತೂ ಸಂಪರ್ಕಕ್ಕೇ ಬರಲಿಲ್ಲ. ಹೀಗಾಗಿ ಆತ ಪೊಲೀಸ್ ಠಾಣೆಗೆ ಹೋಗಿ ಮಮತಾ ಕಾಣೆಯಾಗಿರುವ ದೂರನ್ನು ನೀಡಿದ. ಪೊಲೀಸರು ದೂರನ್ನು ಸ್ವೀಕರಿಸಲಿಲ್ಲ. ಕಡೆಗೆ ಆತ ತನ್ನ ಊರಿನ ಠಾಣೆಗೆ ಹೋಗಿ ದೂರಿತ್ತ. ಕಾಣೆಯಾದ ಪ್ರಕರಣ ದಾಖಲಾಯಿತು.

ವಾರದ ನಂತರ ಪಕ್ಕದ ಪಟ್ಟಣವೊಂದರಲ್ಲಿ ಹೊಸದಾಗಿ ನಿರ್ವಣವಾಗುತ್ತಿದ್ದ ಕಟ್ಟಡದ ಗುಂಡಿಯಲ್ಲಿ ಮಹಿಳೆಯೊಬ್ಬಳ ಸುಟ್ಟ ಶವ ಸಿಕ್ಕ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿತು. ಮಮತಾಳ ಸೋದರ ಅಲ್ಲಿಗೆ ಧಾವಿಸಿ ಆಸ್ಪತ್ರೆಯಲ್ಲಿಟ್ಟಿದ್ದ ಶವದ ಮೈಮೇಲಿನ ಆಭರಣಗಳು ಮತ್ತು ಚಪ್ಪಲಿಗಳ ಮೂಲಕ ಮಮತಾಳದ್ದೇ ಎಂದು ಆತ ಗುರುತಿಸಿದ. ಶವ ಸಿಕ್ಕ ಜಾಗದ ವ್ಯಾಪ್ತಿಯ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಕೇಸು ದಾಖಲಾಯಿತು.

ಶವವು ಮಮತಾಳದ್ದೇ ಎಂದು ದೃಢಪಡಬೇಕಾದರೆ ಸೋದರನ ಹೇಳಿಕೆಯೊಂದೇ ಸಾಲದೆಂದು ತಿಳಿಸಿದ ಪೊಲೀಸರು ಮಮತಾಳ ತಂದೆ-ತಾಯಿಯ ಡಿಎನ್​ಎ ಪರೀಕ್ಷೆ ಮಾಡಿಸಲು ಸೂಚಿಸಿದರು. ಆನಂತರ ಶವವು ಮಮತಾಳದ್ದೆಂದು ಖಾತ್ರಿಯಾದರೂ ಪೊಲೀಸರು ಕೊಲೆ ಕೇಸನ್ನು ದಾಖಲಿಸದೆ ಮಮತಾ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ತಿಳಿಸಿದರು. ಇದರಿಂದ ಬೇಸರಗೊಂಡ ಮಮತಾಳ ಸಂಬಂಧಿಗಳು ಶವ ಸಿಕ್ಕ ಜಾಗದಲ್ಲಿ ನಿರ್ವಣವಾಗುತ್ತಿರುವ ಕಟ್ಟಡದ ಕಂಟ್ರಾಕ್ಟರ್ ಗೋವಿಂದನೇ ಆದ ಕಾರಣದಿಂದಲೂ, ಮಮತಾ ಗೋವಿಂದನ ಕಾರಿನಲ್ಲಿಯೇ ಹೋದ ಕಾರಣದಿಂದಲೂ ಇದು ಕೊಲೆ ಪ್ರಕರಣವಾಗಿದ್ದು ತಮಗೆ ಗೋವಿಂದನ ಮೇಲೆಯೇ ಸಂಶಯವಿದೆ ಎಂದರು. ಆಗ ಪೊಲೀಸರು ಕಾಟಾಚಾರಕ್ಕೆ ಕೊಲೆ ಕೇಸನ್ನು ದಾಖಲಿಸಿದರೂ ಗೋವಿಂದನ ಹೆಸರನ್ನು ಎಫ್​ಐಆರ್​ನಲ್ಲಿ ಸೇರಿಸಲಿಲ್ಲ. ಏತನ್ಮಧ್ಯೆ ಸ್ಥಳೀಯ ಪತ್ರಕರ್ತನೊಬ್ಬ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮಮತಾಳ ಕೊಲೆಗೆ ಗೋವಿಂದನೇ ಕಾರಣ ಎಂದು ಪತ್ರಿಕಾ ವರದಿಯನ್ನು ಪ್ರಕಟಿಸಿದ. ಗೋವಿಂದ ರಾಜ್ಯದ ಪ್ರಭಾವಿ ಸಚಿವರುಗಳ ಆಪ್ತನಾಗಿದ್ದು ಸಚಿವರ ಲೈಂಗಿಕ ತೃಪ್ತಿಗಾಗಿ ಹೆಣ್ಣುಮಕ್ಕಳನ್ನು ಸರಬರಾಜು ಮಾಡುತ್ತಿದ್ದ; ಈ ಕಾರಣಕ್ಕಾಗಿ ಅವನ ಹೆಸರನ್ನು ಎಫ್​ಐಆರ್​ನಲ್ಲಿ ಸೇರಿಸಿಲ್ಲವೆಂದು ಆಪಾದಿಸಿದ.

ಈ ವರದಿ ಪ್ರಕಟವಾದ ಕೂಡಲೇ ರಾಜ್ಯದಾದ್ಯಂತ ಸರ್ಕಾರದ ಮೇಲೆ ಟೀಕಾಪ್ರಹಾರ ಆರಂಭವಾಯಿತು. ಗೋವಿಂದನನ್ನು ಬಂಧಿಸುವಂತೆ ಮಹಿಳಾ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಒತ್ತಡ ಹೇರತೊಡಗಿದರು. ಇದರ ಪರಿಣಾಮವಾಗಿ ಪೊಲೀಸರು ಗೋವಿಂದನನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿದರು. ಆತನ ವಿಚಾರಣೆಯ ಸಮಯದಲ್ಲಿ ಏಕಾಏಕಿ ವಿದ್ಯುತ್ ಕಡಿತವಾಯಿತು. 10 ನಿಮಿಷಗಳ ನಂತರ ವಿದ್ಯುತ್ ಬಂದಾಗ ಗೋವಿಂದ ಪರಾರಿಯಾಗಿದ್ದ. ಪೊಲೀಸರೇ ಗೋವಿಂದನ ಪರಾರಿಗೆ ಸಹಕರಿಸಿದ್ದಾರೆ ಎಂದು ಎಲ್ಲರೂ ದೂರತೊಡಗಿದರು.ಕಡೆಗೆ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತು. ಅವರು ಪರಾರಿಯಾಗಿದ್ದ ಗೋವಿಂದನನ್ನು ಬಂಧಿಸಿ ಅವನನ್ನು ತೀವ್ರವಾಗಿ ಪ್ರಶ್ನಿಸಿದರು. ಆತ ಈ ಕೊಲೆಯನ್ನು ತಾನು ಮತ್ತು ಸಹಚರ ಸೇರಿ ಮಾಡಿದ್ದಾಗಿ ತಿಳಿಸಿದ. ‘ರಾಜಕಾರಣಿಗಳನ್ನು ತೃಪ್ತಿಪಡಿಸಿ ಮುಂದೆಬರಲು ನನ್ನ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರನ್ನು ದುರುಪಯೋಗಿಸುವುದನ್ನು ವಿರೋಧಿಸಿ ಮಾಧ್ಯಮಗಳಿಗೆ ಸುದ್ದಿಕೊಡುವುದಾಗಿ ಮಮತಾ ಹೇಳಿದ್ದರಿಂದ ಹೆದರಿದ ನಾನು ಆಕೆಯನ್ನು ಮುಗಿಸಿಬಿಡಲು ತೀರ್ವನಿಸಿದೆ. ಮಮತಾಳನ್ನು ಬಸ್​ಸ್ಟಾ್ಯಂಡ್​ನಲ್ಲಿ ಸಂಧಿಸಿ ಶಿಕ್ಷಣ ಇಲಾಖಾ ಅಧಿಕಾರಿಯನ್ನು ಭೇಟಿ ಮಾಡಲು ಹೋಗುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡೆ. ಕಾರನ್ನು ನಿರ್ಜನ ಪ್ರದೇಶಕ್ಕೆ ಒಯ್ದಾಗ ಕಾರಿನಲ್ಲಿದ್ದ ನನ್ನ ಕೂಲಿಕಾರ ಮಾಧವ ಅವಳ ಕತ್ತು ಹಿಸುಕಿ ಕೊಲೆ ಮಾಡಿದ.

ನಂತರ ನಾನು ನಿರ್ವಿುಸುತ್ತಿದ್ದ ಕಟ್ಟಡದ ಬಳಿ ಬಂದೆವು. ಮಾಧವ ನನ್ನ ಜೆಸಿಬಿ ಆಪರೇಟರ್ ಸಹ ಆಗಿದ. ಆತ ಆ ಯಂತ್ರದ ಮೂಲಕ ಅಲ್ಲಿಯೇ ಗುಂಡಿ ತೋಡಿದ. ಅದರಲ್ಲಿ ಮಮತಾಳ ಶವ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆವು. ಅವಳ ಮುಖ ಸುಟ್ಟು ಕರಕಲಾಗುವವರೆಗೂ ಅಲ್ಲಿದ್ದು ನಂತರ ಹಿಂತಿರುಗಿದೆವು’ ಎಂದ. ಗೋವಿಂದ ಮತ್ತು ಮಾಧವ ಇಬ್ಬರಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಮೆರಿಕದ ಕವಿ ಜೇಮ್್ಸ ರಸೆಲ್ ಲೋವೆಲ್, ‘ಜೀವನದ ಪಯಣದ ಹಾದಿ ಮುಂದುವರಿದಂತೆ ಎಲ್ಲವೂ ವಿಚಿತ್ರವಾಗಿ ಬದಲಾಗುತ್ತ ಮೈಲಿಗಲ್ಲುಗಳೇ ಸಮಾಧಿಯ ತಲೆಗಲ್ಲುಗಳಾಗಿ ಬದಲಾಗುತ್ತವೆ’ ಎಂದಿದ್ದಾನೆ. ಹೀಗೇ ಆಯಿತು ಗೋವಿಂದನ ಜೀವನ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net