

ಯಾರು ನಿದ್ದೆಯಿಂದ ಎದ್ದಕೂಡಲೇ ಗಣಪತಿ ಯನ್ನು ಸ್ಮರಿಸುತ್ತಾರೋ ಅವರ ಆ ದಿನವೆಲ್ಲವೂ ಶುಭ, ಆನಂದದಿಂದ ತುಂಬಿರುತ್ತದೆ. ಗಣಪತಿ ಯ ರೂಪ, ನಾಮ ಕೂಡ ಎಲ್ಲರಿಗೂ ಶುಭಕರ. ಯಾರ ಸ್ವಪ್ನದಲ್ಲಿ ಆನೆ ಕಾಣಿಸುತ್ತದೋ ಅವರಿಗೆ ಸಕಲ ಸನ್ಮಂಗಳವಾಗುತ್ತದೆ. ಮತ್ತು ಆ ಸ್ವಪ್ನವು ಶುಭಸ್ವಪ್ನವೆಂದು ಹೇಳಲ್ಪಡುತ್ತದೆ ಎಂದು ಸ್ವಪ್ನಶಾಸ್ತ್ರವು ತಿಳಿಸುತ್ತದೆ.
ಆನೆಯ ಮುಖದವನಾದ ಗಣಪತಿಯ ದರ್ಶನ ಶುಭಕರವು. ಗಣಪತಿಯನ್ನು ನಿಷ್ಠೆಯಿಂದ ಭಜಿಸಿ ಒಂದುವರ್ಷ ತಪ್ಪದೇ ಸಂಕಷ್ಟಹರಚತುರ್ಥಿ ವ್ರತವನ್ನು ಮಾಡಿದಲ್ಲಿ-
ಸ್ವಪ್ನೇ ಮೂರ್ತಿಮಯಂ ದೇವಂ
ಪಶ್ಯತ್ಯೇವ ನ ಸಂಶಯಃ
‘ಗಣಪತಿ ಮಂತ್ರಜಪದ ಫಲವಾಗಿ, ಗಣಪತಿ ಕವಚ ಪಾರಾಯಣ ಫಲವಾಗಿ, ಪೂಜಾಫಲವಾಗಿ ಸದ್ಭಕ್ತರು ಆ ಸ್ವಾಮಿಯನ್ನು ಸ್ವಪ್ನದಲ್ಲಿ ದರ್ಶಿಸುತ್ತಾರೆ. ಅವರಿಗೆ ನಾನಾವಿಧ ವಿಘ್ನಗಳು ನಿವಾರಣೆಯಾಗುತ್ತವೆ’.
ನಮ್ಮ ಜೀವನದಲ್ಲಿ ಶ್ರೀಮಹಾ ಗಣಪತಿ ಬಾಲ್ಯದಲ್ಲೇ ತಾನಾಗಿಯೇ ಬಂದು ಸೇರಿಕೊಂಡ. ನಮ್ಮ ತಾಯಿಯ ವರಿಗೆ ಗಣಪತಿ ವಿಷಯದಲ್ಲಿ ಅಪಾರವಾದ ಭಕ್ತಿ ಇತ್ತು. ಅವರು ನಮಗೆ ಗಣಪತಿ ಮಂತ್ರವನ್ನು ಉಪದೇಶ ಮಾಡಿ ಒಂದು ಹಸ್ತಗಾತ್ರದ ಕಲ್ಲನ್ನು ಕೈಗೆ ಕೊಟ್ಟರು. ‘ಅಪ್ಪಾ! ಈ ಮಂತ್ರವನ್ನು ಮರೆಯದೇ ಮಾಡುತ್ತಾ ಇರು. ಇದನ್ನು ಕಲ್ಲು ಎಂದು ತಿಳಿಯಬೇಡ. ಸಾಕ್ಷಾತ್ ಮಹಾಗಣಪತಿ ರೂಪದಲ್ಲಿ ದರ್ಶಿಸಿ ಪೂಜೆ ಮಾಡುತ್ತಿರು. ಸದಾ ನಿನ್ನ ಬಳಿ ಇಟ್ಟುಕೋ’ ಎಂದು ಹೇಳಿದರು. ಅಂದಿನಿಂದ ನಾವು ಆ ಸ್ವಾಮಿಯನ್ನು ಅರ್ಚಿಸುತ್ತಿದ್ದೇವೆ. ನಮ್ಮ ಮಧ್ಯವಯಸ್ಸಿನಲ್ಲಿ ನಾವು ದೊಡ್ಡಸಂಖ್ಯೆಯಲ್ಲಿ ಗಣಪತಿ ಹೋಮವನ್ನು ಮಾಡುತ್ತಿದ್ದೆವು. ಆದಕಾರಣ ಎಲ್ಲರೂ ನಮ್ಮನ್ನು ‘ಗಣಪತಿ ಸ್ವಾಮಿ’ ಎಂದು ಕರೆಯಲು ಆರಂಭಿಸಿದರು. ಭಕ್ತರು ಬಂದು ಕಷ್ಟಗಳನ್ನು ಹೇಳಿಕೊಂಡಾಗ, ನಾವು ಆ ಗಣಪತಿಯ ಕಲ್ಲನ್ನು ಕಿವಿ ಹತ್ತಿರ ಇಟ್ಟುಕೊಂಡರೆ ಆ ಸ್ವಾಮಿಯೇ ಪರಿಹಾರಮಾರ್ಗವನ್ನು ಹೇಳುತ್ತಿದ್ದ. ಈಗ ನಾವು ಆ ರೀತಿ ಕೇಳುತ್ತಿಲ್ಲ. ಭಕ್ತರಿಗೆ ದಾರಿಯನ್ನು ತೋರಿಸಿದಾಗ ಅವರು ಸಂಕಷ್ಟಗಳನ್ನು ನಿವಾರಿಸಿಕೊಂಡು ಸಂತೋಷಪಡುತ್ತಿದ್ದರು. ಪ್ರಶ್ನೆಗಳನ್ನು ಕೇಳುತ್ತಿದ್ದರಿಂದ ಆ ಸ್ವಾಮಿಗೆ ‘ಪ್ರಶ್ನಗಣಪತಿ’ ಎಂದು ಹೆಸರು ಬಂತು. ಹಾಗೆಯೇ ನಮ್ಮ ಜೀವನದಲ್ಲಿ ಶ್ವೇತಾರ್ಕಗಣಪತಿಯೂ ಬಂದು ಸೇರಿಕೊಂಡ. ಗುಜರಾತಿನ ಸೂರತ್ನಲ್ಲಿ ಒಬ್ಬ ಭಕ್ತರ ಮನೆಯಲ್ಲಿ 400 ವರ್ಷಗಳಿಂದ ಪೂಜೆ ಸ್ವೀಕರಿಸುತ್ತಿದ್ದ ಶ್ವೇತಾರ್ಕ ಗಣಪತಿ ಮೂರ್ತಿಯನ್ನು ನಮಗೆ 35 ವರ್ಷಗಳ ಹಿಂದೆ ಸಮರ್ಪಣೆ ಮಾಡಿದರು. ಅಂದಿನಿಂದ ನಾವು ಆ ಸ್ವಾಮಿಗೆ ಪ್ರತಿನಿತ್ಯ ವಿಶೇಷ ಅರ್ಚನೆಯನ್ನು ಮಾಡುತ್ತಿದ್ದೇವೆ. ಶ್ವೇತಾರ್ಕ ಎಂದರೆ ಬಿಳಿ ಎಕ್ಕ ಎಂದರ್ಥ. ತಾನಾಗಿಯೇ ಬಂದ ಬಿಳಿ ಎಕ್ಕ ಮರದ ಮೂಲದಲ್ಲಿ ಶ್ವೇತಾರ್ಕ ಗಣಪತಿ ಇರುತ್ತಾನೆ. ಆ ಮರಕ್ಕೆ ಕನಿಷ್ಠ ಹದಿನೆಂಟು ವರ್ಷ ತುಂಬಿರಬೇಕು.
ಶ್ವೇತಾರ್ಕ ಮೂಲದಿಂದ ಗಣಪತಿಯನ್ನು ತೆಗೆಯುವಾಗ ಬಹಳ ಜಾಗ್ರತೆ ವಹಿಸಬೇಕು. ಎಲ್ಲೂ ಭಿನ್ನವಾಗಬಾರದು. ಹಾಗೆ ಗಣಪತಿಯನ್ನು ತೆಗೆದು ಉಳಿದ ಮರವನ್ನು ನಾವು ಸಣ್ಣ ಸಣ್ಣ ತುಂಡುಗಳಾಗಿಸಿ ಒಂದು ಕಾಷಾಯವಸ್ತ್ರದಲ್ಲಿ ಸುತ್ತಿ ‘ಶ್ವೇತಾರ್ಕ ರಕ್ಷೆ’ ಎಂಬ ಹೆಸರಿನಲ್ಲಿ ಭಕ್ತರಿಗೆ ಕೊಡುತ್ತೇವೆ. ಅದನ್ನವರು ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಆ ಶ್ವೇತಾರ್ಕ ಮೂಲಿಕೆ ಹಸ್ತದ ನಾಡಿಗೆ ತಗುಲುವುದರಿಂದ ಒಳ್ಳೆಯದಾಗುತ್ತದೆ. ಗಣಪತಿಯ ಅನುಗ್ರಹವೂ ಆಗುತ್ತದೆ. ವಿಘ್ನಗಳು, ಕಷ್ಟಗಳು ಪರಿಹಾರವಾಗುತ್ತವೆ.
ನಮ್ಮ ಉಪನಯನದ ಸಂದರ್ಭದಲ್ಲೂ ಗಣಪತಿ ಅಗ್ನಿಕುಂಡದಲ್ಲಿ ಪ್ರತ್ಯಕ್ಷನಾಗಿ ದರ್ಶನ ಕೊಟ್ಟು ಗಾಯತ್ರೀ ಮಹಾಮಂತ್ರವನ್ನು ಉಪದೇಶ ಮಾಡಿ ಅನುಗ್ರಹಿಸಿದ್ದಾನೆ. ಆಗಿನಿಂದ ಎಲ್ಲೆಲ್ಲೂ ನಮಗೆ ಗಣಪತಿಯ ದರ್ಶನವೇ ಆಗುತ್ತಿದೆ. ಆಶ್ರಮನಾಮಧೇಯದಲ್ಲೂ ‘ಗಣಪತಿ ಸಚ್ಚಿದಾನಂದ ಸ್ವಾಮಿ’-ಎಂದು ಗಣಪತಿ ಬಂದು ಸೇರಿಕೊಂಡಿದ್ದಾನೆ. ಇದು ನಾವು ಬಯಸಿದ್ದಲ್ಲ. ಕೇವಲ ಗಣಪತಿಯ ಸಂಕಲ್ಪವೇ ಆಗಿದೆ.
ಕೇರಳದಲ್ಲಿ ನಾವು ಕ್ಷೇತ್ರದರ್ಶನ ಮಾಡುವಾಗ ಅಲ್ಲಿಯ ಭಕ್ತರು ‘ಗಣಪತಿ ಸಚ್ಚಿದಾನಂದ ಸ್ವಾಮಿಕೀ ಜೈ’ ಎಂದು ಕೂಗಿದರು. ಅವತ್ತಿನಿಂದ ಅದೇ ನಮ್ಮ ಆಶ್ರಮ ನಾಮಧೇಯವಾಯಿತು. ‘ತ್ವಂ ಸಚ್ಚಿದಾನಂದ—ದ್ವಿತೀಯೋಸಿ’ ಎಂದು ಗಣಪತಿ ಅಥರ್ವಶೀರ್ಷದಲ್ಲಿ ಸಚ್ಚಿದಾನಂದ ಪದ ಕೇಳಿಬರುತ್ತದೆ.
ವಿಘ್ನಗಳೆಂಬ ಕತ್ತಲೆಯನ್ನು ಹೋಗಿಸುವುದರಲ್ಲಿ ಅವನು ಸೂರ್ಯನು. ವಿಘ್ನಗಳೆಂಬ ಕಾಡಿಗೆ ದಾವಾಗ್ನಿ. ವಿಘ್ನಗಳೆಂಬ ಎತ್ತರವಾದ ಬೆಟ್ಟವನ್ನು ಚೂರುಚೂರು ಮಾಡುವ ವಜ್ರಾಯುಧ. ವಿಘ್ನಗಳೆಂಬ ಮೇಘಗಳಿಗೆ ಪ್ರಚಂಡ ಮಾರುತ. ಅಂಥ ವಿಘ್ನೕಶ್ವರನನ್ನು ಎಲ್ಲರೂ ಹಬ್ಬದಂದು ಭಕ್ತಿಯಿಂದ ಪೂಜಿಸಿ ಬೇಡಿಕೊಂಡು ಅವನ ಅನುಗ್ರಹಕ್ಕೆ ಪಾತ್ರರಾಗಿ. ಎಲ್ಲರಿಗೂ ಮಹಾಗಣಪತಿಯ ಅನುಗ್ರಹವಾಗಲಿ.