

ಕ್ರೆಡಿಟ್ ಬ್ಯಾಂಕೇಕ್ ಸ್ವೀಡನ್ನಿನ ಅತಿದೊಡ್ಡ ಹಾಗೂ ಪ್ರತಿಷ್ಠಿತ ಬ್ಯಾಂಕ್ಗಳಲ್ಲೊಂದು. ಆ ದೇಶದ ರಾಜಧಾನಿಯಾದ ಸ್ಟಾಕ್ಹೋಂನ ಪ್ರಮುಖ ಚೌಕವಾದ ನಾರ್ಮಲ್ಮಸ್ಟಾರ್ಗನಲ್ಲಿ ಆ ಬ್ಯಾಂಕ್ ಹೊಂದಿದ್ದ ಶಾಖೆಗೆ 1973ರ ಆಗಸ್ಟ್ 23 ರಂದು ನುಗ್ಗಿದ ಜಾನ್ ಎರಿಕ್ ಒಲ್ಸೋನ್ ಎಂಬ ಬಂದೂಕುಧಾರಿ ದರೋಡೆಕೋರ ಅಲ್ಲಿದ್ದ ಗ್ರಾಹಕರನ್ನು ಹೊರಗಟ್ಟಿ ಮೂರು ಮಹಿಳೆಯರು ಮತ್ತು ಓರ್ವ ಪುರುಷನನ್ನೊಳಗೊಂಡ ಬ್ಯಾಂಕ್ನ ನಾಲ್ಕು ನೌಕರರನ್ನು ಒತ್ತೆಯಾಳಾಗಿ ತನ್ನ ವಶದಲ್ಲಿಟ್ಟುಕೊಂಡ. ಈ ವಿಷಯ ಬಹುಬೇಗ ಎಲ್ಲೆಡೆ ಹರಡಿ ಜಾಗತಿಕವಾಗಿ ಭಾರಿ ಕೋಲಾಹಲವನ್ನೆಬ್ಬಿಸಿತು. ಇಷ್ಟು ಸಾಲದಕ್ಕೆ ಸ್ವೀಡನ್ನಿನ ಟೆಲಿವಿಷನ್ ವಾಹಿನಿ ಈ ಸಂಪೂರ್ಣ ಪ್ರಹಸನದ ನೇರ ಪ್ರಸಾರ ಮಾಡುವುದರ ಮೂಲಕ ಹೀಗೆ ಪ್ರಸಾರವಾದ ಮೊದಲ ಪ್ರಕರಣವೆಂಬ (ಕು)ಖ್ಯಾತಿಗೆ ಅದು ಪಾತ್ರವಾಯಿತು.
ಪರಿಸ್ಥಿತಿಯ ನಾಜೂಕುತನವನ್ನರಿತ ಅಲ್ಲಿನ ಆಡಳಿತ ಸಂಧಾನಕ್ಕೆ ಮುಂದಾದಾಗ ಜಾನ್ ಎರಿಕ್ ಒಲ್ಸೋನ್ ಒಳಗಿನಿಂದಲೇ ತನ್ನ ಬೇಡಿಕೆಗಳನ್ನು ಒಂದೊಂದಾಗಿ ಮುಂದಿಟ್ಟ. ತನ್ನ ವಶದಲ್ಲಿದ್ದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮೂರು ಮಿಲಿಯನ್ ಸ್ವೀಡನ್ನಿನ ಕರೆನ್ಸಿಯಾದ ಕ್ರೋನಾದ ಜತೆಗೆ ಅಲ್ಲಿನ ಜೈಲಿನಲ್ಲಿದ್ದ ಮತ್ತೊಬ್ಬ ಖದೀಮ ಕ್ಲಾರ್ಕ್ ಒಲೋಫ್ಶನ್ನ ಬಿಡುಗಡೆಯ ಷರತ್ತು ಜಾನ್ ಎರಿಕ್ ಕಡೆಯಿಂದ ಬಂತು. ಅಷ್ಟಕ್ಕೂ ಜಾನ್ ಎರಿಕ್ ಒಲ್ಸೋನ್ ಮತ್ತು ಕ್ಲಾರ್ಕ್ ಒಲೋಫ್ಶನ್ ನಡುವಿನ ದೋಸ್ತಿಯ ಹಿಂದೊಂದು ಕತೆಯಿದೆ. ಅವರಿಬ್ಬರೂ ಭೇಟಿಯಾಗಿದ್ದು ಸ್ವೀಡನ್ನಿನ ಕಲ್ಮಾರ್ನ ಜೈಲಿನಲ್ಲಿ. ಹುಟ್ಟಾ ಖದೀಮನಾಗಿದ್ದ ಕ್ಲಾರ್ಕ್ ಒಲೋಫ್ಸನ್ ಬ್ಯಾಂಕ್ ದರೋಡೆಯಲ್ಲಿ ಪರಿಣತಿ ಸಾಧಿಸಿದ್ದ. ಅಲ್ಲಿಯೇ ಆತನಿಂದ ಧಂದೆಯ ಹಲವು ಪಟ್ಟುಗಳನ್ನು ಕಲಿತುಕೊಂಡ ಜಾನ್ಗೆ ಕ್ಲಾರ್ಕ್ ಒಲೋಫ್ಶನ್ ಮಾನಸ ಗುರುವಾದ. ಅದ್ಹೇಗೋ ಕಲ್ಮಾರ್ ಜೈಲಿನಿಂದ ತಪ್ಪಿಸಿಕೊಂಡ. ಜಾನ್ನ ಮುಂದಿನ ಗುರಿ ಕ್ಲಾರ್ಕ್ ಒಲೋಫ್ಸನ್ನನ್ನು ಜೈಲಿನಿಂದ ಹೊರತಂದು ಆತನೊಂದಿಗೆ ದರೋಡೆಯ ಜಂಟಿ ಉದ್ಯಮ ನಡೆಸುವುದಾಗಿತ್ತು.
ಒತ್ತೆಯಾಳುಗಳ ಬಿಡುಗಡೆಗಾಗಿ ಜಾನ್ ಹಾಕಿದ್ದ ಷರತ್ತುಗಳನ್ನು ಸರ್ಕಾರ ಒಪ್ಪಿಕೊಂಡು ಕ್ಲಾರ್ಕ್ ಒಲೋಫ್ಸನ್ ಕೇಳಿದಷ್ಟೂ ಹಣವನ್ನು ಬ್ಯಾಂಕ್ ಒಳಗೆ ತಲುಪಿಸಿತು. ಆದರೆ, ತಾನು ಸುರಕ್ಷಿತವಾಗಿ ಅಲ್ಲಿಂದ ಪರಾರಿಯಾಗಲು ಸರ್ಕಾರಿ ವಾಹನದಲ್ಲಿ ಒತ್ತೆಯಾಳುಗಳ ಜತೆಯಲ್ಲಿ ಹೋಗಲು ಅನುವು ಮಾಡಿಕೊಡಬೇಕೆಂಬ ಜಾನ್ನ ಷರತ್ತನ್ನು ಮಾತ್ರ ಸರ್ಕಾರ ಬಿಲ್ಕುಲ್ ಒಪ್ಪಲಿಲ್ಲ. ಹೀಗಾಗಿ, ಚೌಕಾಸಿ ಮತ್ತೆ ಮುಂದುವರಿಯಿತು. ಆದರೆ, ಎರಡೂ ಕಡೆಯಿಂದ ಯಾರೂ ಕಣ್ಣುಮಿಟುಕಿಸಲು ತಯಾರಿಲ್ಲದ ಪರಿಸ್ಥಿತಿಯಲ್ಲಿ ಸರ್ಕಾರದ ಕಡೆಯಿಂದ ಕ್ಷಿಪ್ರ ಕಾರ್ಯಾಚರಣೆಗಾಗಿ ಸೇನೆಗೆ ಬುಲಾವ್ ಹೋಯಿತು.ಆಗಸ್ಟ್ 28ರಂದು ಕಟ್ಟಡದ ಮಾಡಿಗೆ ಕನ್ನ ಕೊರೆದು ಒಳಗೆ ಪ್ರವೇಶಿಸಿದ ಸಶಸ್ತ್ರಪಡೆಯು ಜಾನ್ನ ಗುಂಡಿನ ದಾಳಿಯ ಪ್ರತಿರೋಧವನ್ನು ಹಿಮ್ಮೆಟ್ಟಿಸಿ ಟಿಯರ್ ಗ್ಯಾಸ್ ಬಳಸಿ ಒಳಗಿದ್ದ ಎಲ್ಲರನ್ನೂ ಮೂರ್ಛೆಗೊಳಿಸಿ ಹೊರಗೆ ತರಲು ಯಶಸ್ವಿಯಾಯಿತು. ಈ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟ ಜಾನ್ ಎರಿಕ್ ಒಲ್ಸೋನ್ ಹತ್ತು ವರ್ಷಗಳ ಸೆರೆವಾಸಕ್ಕೆ ತಳ್ಳಲ್ಪಟ್ಟ.
ಜಾಗತಿಕ ಅಪರಾಧಗಳ ಇತಿಹಾಸದಲ್ಲಿ ಈ ರೀತಿಯ ಒತ್ತೆಯಾಳುಗಳ ಪ್ರಕರಣಗಳು ಹೊಸತೇನಲ್ಲ. ಆದರೆ, ನಾರ್ಮಲ್ಮಸ್ಟಾರ್ಗನ ಬ್ಯಾಂಕ್ನಲ್ಲಿ ನಡೆದ ಪ್ರಕರಣ ಮಾತ್ರ ವಿಶೇಷವಾಗಿದ್ದುದು ಬೇರೆಯೇ ಕಾರಣಕ್ಕೆ. ಒತ್ತೆಯಾಳುಗಳನ್ನು ಬಚಾವ್ ಮಾಡಲು ತೆರಳಿದ್ದ ಸೈನಿಕರು ಮಾಡಿಗೆ (ತಾರಸಿಗೆ) ತೂತು ಕೊರೆದು ಕಟ್ಟಡದೊಳಗೆ ಇಳಿದಾಗ ಒತ್ತೆಯಾಳುಗಳೇ ಅಪಹರಣಕಾರರ ಜತೆಗೆ ಹಳೇ ದೋಸ್ತುಗಳ ತರಹ ಹರಟೆ ಹೊಡೆಯುತ್ತ ಕುಳಿತಿದ್ದ ಸೀನು ಅವರನ್ನು ಅವಾಕ್ಕಾಗಿಸಿತ್ತು. ಬ್ಯಾಂಕ್ ಕಟ್ಟಡದಿಂದ ಕಾರ್ಯಾಚರಣೆ ಮುಗಿಸಿ ಹೊರ ಬರುವಾಗಲೂ ಪೋಲಿಸರು ಮೊದಲು ಒತ್ತೆಯಾಳುಗಳನ್ನು ಹೊರಹೋಗಲು ಹೇಳಿದ್ದರೂ ಅವರು ಜಾನ್ ಮತ್ತು ಕ್ಲಾರ್ಕ್ ಒಲೋಫ್ಸನ್ ಮೇಲೆ ಅವರು ಹಲ್ಲೆ ಮಾಡಬಹುದೆಂಬ ಭಯದಿಂದ ಆ ದರೋಡೆಕೋರರ ರಕ್ಷಣೆಗೆ ಮುಂದಾದರು. ಅಲ್ಲಿದ್ದ ನಾಲ್ಕು ಬ್ಯಾಂಕ್ ನೌಕರರ ಮೇಲೆ ಖದೀಮ ಜಾನ್ ಆ ಐದು ದಿನಗಳಲ್ಲಿ ಅದೇನೋ ಮೋಡಿ ಮಾಡಿದ್ದ. ಅವರೆಲ್ಲರೂ ಸ್ವತಃ ತಮ್ಮನ್ನು ಅಪಹರಿಸಿ ಒತ್ತೆಯಾಳಾಗಿಟ್ಟುಕೊಂಡಿದ್ದರೂ ಜಾನ್ ಕುರಿತು ಕನಿಕರ ಹೊಂದುವಷ್ಟು ಬದಲಾಗಿದ್ದರು. ಇಷ್ಟು ಸಾಲದಕ್ಕೆ ಆ ನಾಲ್ವರಲ್ಲಿ ಒಬ್ಬಳಾದ ಕೃಸ್ಟಿನ್ ಎನ್ಮಾರ್ಕ್ ಎಂಬ ಮಹಿಳೆಯಂತೂ ಬಿಡುಗಡೆಯ ನಂತರದ ಸಂದರ್ಶನಗಳಲ್ಲಿ ತಾನು ಒತ್ತೆಯಾಳಾಗಿದ್ದಾಗ ಜಾನ್ ತನ್ನನ್ನು ನೋಡಿಕೊಂಡ ರೀತಿ, ಚಳಿಯಲ್ಲಿ ನಡುಗುವಾಗ ತನ್ನ ಜಾಕೆಟ್ ಕೊಟ್ಟು ಉಪಚರಿಸಿದ ಪರಿಯ ಬಗ್ಗೆ ವಿವರಿಸುತ್ತಾ ತನಗೆ ಜಾನ್ ಮೇಲೆ ಪ್ರೀತಿ ಹುಟ್ಟಿರುವುದನ್ನು ಬಹಿರಂಗವಾಗಿಯೇ ಹೇಳಿಕೊಂಡಳು.
ಒತ್ತೆಯಾಳು ಹಾಗೂ ಅಪಹರಣಕಾರನ ನಡುವಿನ ಈ ಲವ್ ಸ್ಟೋರಿ ಸ್ಟಾಕ್ ಹೋಮ್ ಕಥನಕ್ಕೆ ಹೊಸದೊಂದು ಆಯಾಮ ನೀಡಿತು. ಅಪರಾಧಗಳ ಇತಿಹಾಸದಲ್ಲೇ ಮೊದಲ ಬಾರಿ ಕಂಡುಬಂದ ಇಂತಹುದೊಂದು ಪ್ರಕರಣ ಜಾಗತಿಕ ಮನಃಶಾಸ್ತ್ರಜ್ಞರ ಗಮನ ಸೆಳೆದು ಅವರಿಗೊಂದು ಸಂಶೋಧನಾ ವಿಷಯವಾಯಿತು. ಈ ಪ್ರಕರಣವನ್ನು ಅಭ್ಯಸಿಸುತ್ತಿದ್ದ ಹಲವರಲ್ಲಿ ಒಬ್ಬನಾದ ಸ್ವೀಡನ್ ಮೂಲದ ಮನಃಶಾಸ್ತ್ರಜ್ಞ ನಿಲ್ಸ್ ಬೆಜರಾಟ್ ಈ ಮನೋಲಕ್ಷಣಕ್ಕೆ ಸ್ಟಾಕ್ಹೋಮ್ ಸಿಂಡ್ರೋಮ್ ಎಂಬ ಪದವನ್ನು ಟಂಕಿಸಿದ. ಈ ಘಟನೆಯ ನಂತರ ಇಂತಹುದೇ ಮತ್ತಷ್ಟು ಕಥನಗಳು ಅಲ್ಲಲ್ಲಿ ಜರುಗಿರುವ ವರದಿಗಳು ಬಂದವು. ಇದರಲ್ಲಿ ಬಹುಶಃ ಅತಿ ಹೆಚ್ಚು ಪ್ರಸಿದ್ಧಿ ಪಡೆದದ್ದು 1974ರಲ್ಲಿ ಅಮೆರಿಕದ ಬರ್ಕಲಿಯಲ್ಲಿ ನಡೆದ ಘಟನೆ. ಅಲ್ಲಿನ ಪ್ರತಿಷ್ಠಿತ ಪತ್ರಿಕಾ ಸಮೂಹದ ಒಡತಿಯಾಗಿದ್ದ ಪ್ಯಾಟಿ ಹಾರ್ಸ್ಟ್ಳನ್ನು ಉಗ್ರಗಾಮಿಗಳ ತಂಡವೊಂದು ಅಪಹರಿಸಿ ಆಕೆಯ ತಂದೆಯಿಂದ ಭಾರಿ ಹಣಕ್ಕೆ ಬೇಡಿಕೆಯಿಟ್ಟಿತು. ಈ ಅಪಹರಣಕಾರರ ಜತೆಗೆ ಚೌಕಾಶಿ ನಡೆಯುತ್ತಿದ್ದ ಸಮಯದಲ್ಲಿ ಆ ತಂಡದ ಜತೆಗೆ ಒಡನಾಟದಲ್ಲಿಯೇ ಆಕರ್ಷಿತಳಾದ ಪ್ಯಾಟಿ ಅಪ್ಪ ಕೇಳಿದಷ್ಟೂ ಹಣವನ್ನು ನೀಡಿದರೂ ವಾಪಸ್ಸು ಹೋಗಲ್ಲೊಪ್ಪದೆ, ಉಗ್ರಗಾಮಿಗಳ ಜತೆಗೆ ಪರಾರಿಯಾಗಿ ಆ ತಂಡದ ಖಾಯಂ ಸದಸ್ಯೆಯಾಗಿ ಹಲವು ದರೋಡೆಗಳನ್ನೂ ಮಾಡಿದಳು. ಹಲವು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ ಆಕೆ ಕೊನೆಗೊಮ್ಮೆ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದು ಬೇರೆ ಮಾತು.
ಸ್ಟಾಕ್ ಹೋಮ್ ಘಟನೆಗೆ ಇದೀಗ ಭರ್ತಿ ಐವತ್ತು ವರ್ಷಗಳು ಪೂರ್ತಿಯಾಗಿವೆ. ನೈಜ ಘಟನೆಗಳಿಂದ ಪ್ರೇರಿತರಾಗಿ ಕಥೆ ಹೆಣೆಯಲು ಸದಾ ಹಾತೊರೆಯುವ ಸಿನಿಮಾ ಮಂದಿ ಈ ಘಟನೆಯನ್ನೂ ಸಮರ್ಥವಾಗಿ ಬಳಸಿಕೊಂಡರು. ಸ್ಟಾಕ್ ಹೋಮ್ ಸಿಂಡ್ರೋಮ್ ಕುರಿತು ಅಂದಿನ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಯಿನ್ನು ನಡೆಯುತ್ತಿರುವಾಗಲೇ ಈ ಘಟನೆಯ ಮುಂದಿನ ವರ್ಷ ಎರಡು ಹಾಲಿವುಡ್ ಚಿತ್ರಗಳು ಈ ಕಥೆಯನ್ನಾಧರಿಸಿ ಬಿಡುಗಡೆಯಾದವು. ಈ ಹೊಸ ಮಾನಸಿಕ ಪರಿಸ್ಥಿತಿಯ ಬಗ್ಗೆ ಜನರಿಗಿರುವ ಕುತೂಹಲವನ್ನು ಕ್ಯಾಶ್ ಮಾಡಿಕೊಳ್ಳಲು ಭಾರತೀಯ ಚಿತ್ರರಂಗ ಕೂಡ ಹಿಂದೆ ಬೀಳಲಿಲ್ಲ. 1983ರಲ್ಲಿ ಸುಭಾಷ್ ಘಾಯ್ ಸ್ಟಾಕ್ ಹೋಮ್ೆ ಭಾರತೀಯ ಮಸಾಲೆ ಸೇರಿಸಿ ಹೀರೋ ಚಿತ್ರ ತಯಾರಿಸಿದರು. ಅದು ರಣಧೀರನಾಗಿ ಕನಡಕ್ಕೂ ಬಂತು. ಮಜವೆಂದರೆ ಘಟನೆ ಜರುಗಿ ಐವತ್ತು ವರ್ಷಗಳಾದರೂ ಇನ್ನೂ ಸ್ಟಾಕ್ ಹೋಮ್ ಹಿನ್ನೆಲೆಯ ಚಿತ್ರಗಳು ಬರುತ್ತಲೇ ಇವೆ. 2010ರ ಮಣಿರತ್ನಂರ ರಾವಣ್, 2014ರಲ್ಲಿ ಹಿಂದಿಯಲ್ಲಿ ಬಂದ ಹೈವೇ, ಅಷ್ಟೇ ಏಕೆ 2022 ರಲ್ಲಿ ನೆಟ್ ಫ್ಲಿಕ್ಸ್ ಕ್ಲಾರ್ಕ್ ಎಂಬ್ ಸರಣಿಯನ್ನು ಈ ಹಿನ್ನೆಲೆಯಲ್ಲಿಯೇ ನಿರ್ವಿುಸಿತ್ತು.
ಇಷ್ಟೆಲ್ಲ ಹೇಳುವಷ್ಟರಲ್ಲಿ ಚಿತ್ರದಲ್ಲಿ ಮತ್ತೊಂದು ಹಾಡು ಶುರುವಾಗಿದೆ. ನಾಯಕ ಹೇಳುತ್ತಿದ್ದಾನೆ ಇಂಪಾಗಿ ಹಾಡ್ತಿಯಂತ ಹೇಳೋಕೆ ನಾ ಹೋದೆ. ಇದು ನಾಯಕ ತಾನು ಅಪಹರಿಸಿದ ಹುಡುಗಿಯ ಪ್ರೇಮಪಾಶಕ್ಕೆ ಬಿದ್ದಿರುವುದನ್ನು ಗೆಳೆಯನಿಗೆ ಅರುಹುವ ಸನ್ನಿವೇಶ. ಅಂದರೆ ಅಪಹರಣಕಾರನಿಗೆ ಒತ್ತೆಯಾಳಿನ ಮೇಲೆ ಹುಟ್ಟುವ ಪ್ರೇಮ. ಇದಕ್ಕೆ ಮನಶಾಸ್ತ್ರದಲ್ಲಿ ಲಿಮಾ ಸಿಂಡ್ರೋಮ್ ಅನ್ನುತ್ತಾರೆ. ಇದರ ಕುರಿತು ಮತ್ತೊಮ್ಮೆ ಮಾತನಾಡುವ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)