ವರ್ಷಾಂತ್ಯದಲ್ಲೊಂದು ಬಾತುಕೋಳಿ ಕಥೆ...

Column F
Published on
ನಮ್ಮ ಪಶ್ಚಿಮೋತ್ತರದಲ್ಲಿ ಒಂದಾದ ನಂತರ ಒಂದು ಅವಘಡಗಳನ್ನು, ಆತಂಕಗಳನ್ನು, ಅನಿರೀಕ್ಷಿತಗಳನ್ನು, ಆಶಾವಾದಗಳನ್ನು 2021ನೇ ಇಸವಿ ಸೃಷ್ಟಿಸುತ್ತ ಹೋದದನ್ನು ಕಾಣುತ್ತೇವೆ. ಈ ಸರಣಿ ಇನ್ನೂ ನಿಂತಿಲ್ಲ, ಸದ್ಯಕ್ಕೆ ನಿಲ್ಲುವುದೂ ಇಲ್ಲ ಎನ್ನುವುದನ್ನು ವರ್ಷಾಂತ್ಯದ ಹೊತ್ತಿನ ಬೆಳವಣಿಗೆಗಳು ಹೇಳುತ್ತಿವೆ.

ಅಮೆರಿಕನ್/ನ್ಯಾಟೋ ಸೇನೆ ಅಫ್ಘಾನಿಸ್ತಾನದಿಂದ ಹೊರನಡೆಯುವ ಸ್ಪಷ್ಟ ವೇಳಾಪಟ್ಟಿ ವರ್ಷಾರಂಭದಲ್ಲಿ ತಯಾರಾಗಿ ಮಾರ್ಚ್-ಏಪ್ರಿಲ್ ಹೊತ್ತಿಗೆ ಅದರ ಹಂತಹಂತದ ಅನುಷ್ಠಾನವೂ ಆರಂಭವಾಯಿತಷ್ಟೆ. ಆಗ ಕಾಶ್ಮೀರವನ್ನು ಬದಿಗಿಟ್ಟು ಅಪ್ಘಾನಿಸ್ತಾನವನ್ನು ಗಂಭೀರವಾಗಿ ತೆಗೆದುಕೊಂದ ಪಾಕಿಸ್ತಾನದ ಐಎಸ್​ಐ ಸುಮಾರು ಹತ್ತು ಸಾವಿರದಷ್ಟು ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಲಷ್ಟರ್-ಎ-ಜಾಂಗ್ವಿ ಭಯೋತ್ಪಾದಕರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿತು. ಸದ್ಯ ಕಾಶ್ಮೀರಕ್ಕೆ ಅಂಟಿದ್ದ ಮಾರಿ ಸ್ವಲ್ಪ ಬಿಡುವು ಕೊಡುತ್ತಿದೆಯಲ್ಲ ಎಂಬ ಸಮಾಧಾನ ನಮಗಾದರೂ ಅಪ್ಘಾನಿಸ್ತಾನಕ್ಕೆ ಪಾಕ್ ಭಯೋತ್ಪಾದಕರ ದಂಡು ನುಗ್ಗುವುದೂ ನಮಗೆ ನೆಮ್ಮದಿ ತರುವ ವಿಷಯವಾಗಿರಲಿಲ್ಲ. ಯಾಕೆಂದರೆ ಅವರ ಪ್ರಮುಖ ಗುರಿ ಅಮೆರಿಕದ್ದಾಗಲೀ, ನ್ಯಾಟೋದಾಗಲೀ ಸೇನೆಗಳಾಗಿರಲಿಲ್ಲ. ಐಎಸ್​ಐ ಅವರಿಗೆ ಕೊಟ್ಟ ಆದೇಶ ಕಳೆದ ಹದಿನೆಂಟು ವರ್ಷಗಳಿಂದ ಭಾರತ ಅಲ್ಲಿ ಮಾಡಿದ್ದ ಒಳ್ಳೆಯ ಕೆಲಸಗಳನ್ನೆಲ್ಲ ಹಾಳುಗೆಡವುವುದು ಮತ್ತು ಭಾರತೀಯರನ್ನು ಕೊಲ್ಲುವುದಾಗಿತ್ತು. ನಿರಂತರ ಅಶಾಂತಿಯಿಂದ ಜರ್ಜರಿತವಾಗಿಹೋಗಿದ್ದ ಅಫ್ಘಾನಿಸ್ತಾನದ ಪುನರ್ನಿಮಾಣವನ್ನು ಕೈಗೆತ್ತಿಕೊಂಡು ಅಲ್ಲಿ ನಿರ್ವಿುಸಿದ್ದ ಸಂಸತ್ ಭವನವೂ ಸೇರಿ ಹಲವಾರು ಸರ್ಕಾರಿ ಕಟ್ಟಡಗಳು, ಶಾಲೆಕಾಲೇಜುಗಳು, ಅಣೆಕಟ್ಟೆಗಳು ಮತ್ತು ರಸ್ತೆಗಳು ಹಾಳಾಗಬಹುದು ಅಥವಾ ಅಪಾತ್ರರ ಕೈಗೆ ಬೀಳಬಹುದು; ಈ ಕೆಲಸಗಳಲ್ಲಿ ತೊಡಗಿದ್ದ ಸಾವಿರಾರು ಭಾರತಿಯರ ಜೀವಗಳಿಗೆ ಅಪಾಯವುಂಟಾಗಬಹುದು, ತಾನು ತೊಡಗಿಸಿದ್ದ ಸುಮಾರು ಮೂರು ಬಿಲಿಯನ್ ಡಾಲರ್​ಗಳು ವ್ಯರ್ಥವಾಗಿಹೋಗಬಹುದು ಎಂಬ ಆತಂಕ ಭಾರತವನ್ನು ಗಂಭೀರವಾಗಿ ಕಾಡತೊಡಗಿದ್ದು ಆಗ. ಜುಲೈ-ಆಗಸ್ಟ್​ನಲ್ಲಿ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ವಿಸ್ತರಿಸತೊಡಗಿದಂತೇ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ಆರಂಭವಾಯಿತು. ಅಫ್ಘಾನಿಸ್ತಾನದಲ್ಲಿ ಗಟ್ಟಿಯಾಗಿ ನೆಲೆಯೂರಿದ ಮರುಕ್ಷಣ ತಾಲಿಬಾನಿಗಳು ಕಾಶ್ಮೀರಿಗಳ ಪರವಾಗಿ ಹೋರಾಟ ಆರಂಭಿಸುತ್ತಾರೆ, ‘ಘಜ್ವಾ-ಎ-ಹಿಂದ್’ ಅಂದರೆ ‘ಭಾರತದ ಮೇಲೆ ಮುಸ್ಲಿಮರ ಆಕ್ರಮಣ ಮತ್ತು ವಿಜಯ’ ಇನ್ನೇನು ಕೈಗೂಡುತ್ತದೆ ಎಂದೆಲ್ಲ ಪಾಕಿಸ್ತಾನಿ ಮಾಧ್ಯಮಗಳು ಕೂಗತೊಡಗಿದವು. ಆದರೆ ಇದನ್ನು ನಿರಾಕರಿಸಿದ ತಾಲಿಬಾನಿ ವಕ್ತಾರರು ಭಾರತದ ವಿರುದ್ಧ ಅಂತಹ ಯಾವುದೇ ಯೋಜನೆ ನಮ್ಮಲ್ಲಿಲ್ಲ ಎಂದು ಸಾರ್ವಜನಿಕವಾಗಿಯೇ ಘೊಷಿಸಿದರು. ಅಷ್ಟೇ ಅಲ್ಲ, ಅಫ್ಘನ್ ತಾಲಿಬಾನ್​ನ ಅವಳಿಯಾದ ಪಾಕ್ ತಾಲಿಬಾನ್ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ’ ಪಾಕಿಸ್ತಾನದ ನೆಲದಲ್ಲೇ ಪಾಕ್ ಮತ್ತು ಚೀನೀಯರನ್ನು ಕೊಲ್ಲತೊಡಗಿ ಪಾಕ್ ಸರ್ಕಾರ ಮತ್ತು ಸೇನೆಗೇ ತಲೆನೋವು ತರತೊಡಗಿತು! ಆಗಸ್ಟ್ ಮಧ್ಯದಲ್ಲಿ ಕಾಬೂಲ್ ತಾಲಿಬಾನಿಗಳ ವಶವಾದ ಮೇಲೆ ಅಲ್ಲಿಗೆ ಧಾವಿಸಿದ ಪಾಕಿಸ್ತಾನದ ಐಎಸ್​ಐ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಶೂಜಾ ಹಮೀದ್ ಎಲ್ಲವನ್ನೂ ಸಾಧಿಸಿದ್ದು ತಾನೇ ಎಂದು ಜಾಗತಿಕ ಮಾಧ್ಯಮಗಳ ಮುಂದೆ ಬೀಗಿದ್ದೂ ನಡೆಯಿತು. ಆದರೆ ತನ್ನ ಹರಕತ್​ಗಳು ಹೀಗೆ ಬಹಿರಂಗವಾಗುವುದನ್ನು ಇಷ್ಟಪಡದ ಪಾಕ್ ಸೇನೆ ಹಮೀದ್​ರನ್ನು ಪದವಿಯಿಂದ ಕೆಳಗಿಳಿಸಿ ಲೆಫ್ಟಿನೆಂಟ್ ಜನರಲ್ ನದೀಂ ಅಂಜುಂರನ್ನು ಆ ಸ್ಥಾನದಲ್ಲಿ ಕೂರಿಸಿತು. ಈ ವಿಷಯದಲ್ಲಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಪ್ರಧಾನಿ ಇಮ್ರಾನ್ ಖಾನ್​ರ ನಡುವೆ ಅಭಿಪ್ರಾಯಭೇದವೆದ್ದು ಪಾಕ್ ವ್ಯವಸ್ಥೆಯಲ್ಲಿ ‘ಎಲ್ಲವೂ ಸರಿಯಾಗಿಲ್ಲ’ ಎಂಬ ಸುಳಿವನ್ನೂ ನೀಡಿತು. ಈಗ ತಾಲಿಬಾನ್ ಮತ್ತು ಪಾಕಿಸ್ತಾನದ ನಡುವೆಯೇ ತಾಳಮೇಳ ತಪ್ಪಿ ಕಳೆದ ವಾರಾಂತ್ಯದಲ್ಲಿ ಎರಡೂ ಸೇನೆಗಳು ಉಭಯ ದೇಶಗಳ ಗಡಿಯ ಉತ್ತರ ಭಾಗವಾದ ಕುನಾರ್- ಖೈಬರ್ ಪಖ್ತೂನ್​ಖ್ವಾ ಗಡಿಯಲ್ಲಿ ಕಾಳಗಕ್ಕಿಳಿದಿವೆ. ಈ ಘರ್ಷಣೆಯಲ್ಲಿ ಫಿರಂಗಿಗಳು ಬಳಕೆಯಾದವು.

ಇದೆಲ್ಲದರ ಅರ್ಥ ತಾಲಿಬಾನ್ ತನ್ನ ಕೈಗೊಂಬೆ ಎಂದು ಪಾಕ್ ಹೇಳುತ್ತ ಬಂದದ್ದರಲ್ಲಿ ಹುರುಳಿಲ್ಲ; ಪಾಕಿಸ್ತಾನ ಹೇಳಿದನ್ನು ಜಗತ್ತು ನಂಬಿದ್ದು ನಮ್ಮೆಲ್ಲರ ಪೆದ್ದು ತನವೇ ಸರಿ! ಅಂದರೆ ‘ವಾಸ್ತವ’ ಏನು ಎನ್ನುವುದು ಯಾರಿಗೂ ಕಾಣುತ್ತಿರಲಿಲ್ಲವೇ? ಇದು ಸ್ಪಷ್ಟವಾಗಬೇಕಾದರೆ ಇತಿಹಾಸದ ಒಂದಷ್ಟು ಮಗ್ಗುಲುಗಳ ಪರಿಚಯ ಅಗತ್ಯ.

1960-70ರ ದಶಕಗಳಲ್ಲಿ ವಿಯೆಟ್ನಾಂ ಕೆಸರಿನಲ್ಲಿ ಸಿಲುಕಿಕೊಂಡು ಅಮೆರಿಕ ಒದ್ದಾಡಿದ್ದನ್ನು ಅವಲೋಕಿಸುತ್ತ, 1980ರ ದಶಕದಲ್ಲಿ ಆ ದೇಶದ ವಿದೇಶಾಂಗ ಸಚಿವರಾಗಿದ್ದ ಅಲೆಕ್ಸಾಂಡರ್ ಹೇಗ್ ಹೀಗೊಂದು ಮಾತು ಹೇಳುತ್ತಾರೆ- “If it looks like a duck, walks like a duck and quacks like a duck, you have got a duck!” ಇದರ ಅರ್ಥ- ‘ಅದು ಬಾತುಕೋಳಿಯ ಹಾಗೆ ಕಾಣುತ್ತಿದ್ದರೆ, ಬಾತುಕೋಳಿಯ ಹಾಗೆ ನಡೆದಾಡುತ್ತಿದ್ದರೆ ಮತ್ತು ಬಾತುಕೋಳಿಯ ಹಾಗೆ ಕೂಗುತ್ತಿದ್ದರೆ, ನಿಮ್ಮ ಮುಂದೆ ಒಂದು ಬಾತುಕೋಳಿ ಇದೆ ಅಂತ ಅರ್ಥ! ಇನ್ನೂ ಬಿಡಿಸಿ ಹೇಳಬೇಕೆಂದರೆ ‘ಎದುರು ಸ್ಪಷ್ಟವಾಗಿ ಕಾಣುತ್ತಿರುವುದನ್ನು ಅದು ಹೇಗಿದೆಯೋ ಹಾಗೇ ಗುರುತಿಸಬೇಕು, ಏನೇನೋ ಊಹೆ ಮಾಡಿಕೊಳ್ಳಬಾರದು, ಹಾಗೆ ಮಾಡಿ ವಾಸ್ತವವನ್ನು ನಿರಾಕರಿಸಬಾರದು’ ಅಂತ. ಈ ಮಾತನ್ನು ಹೇಗ್ ಯಾಕೆ ಹೇಳಿದರು ನೋಡೋಣ.

ವಿಯೆಟ್ನಾಮೀಯರೂ, ಚೀನೀಯರೂ ಕಮ್ಯೂನಿಸ್ಟರು, ಅಂದರೆ ಒಂದೇ ಕೆಂಪು ಬಣ್ಣ. ಹೀಗಾಗಿ ಇವರಿಬ್ಬರಿಗೂ ಗಳಸ್ಯಕಂಠಸ್ಯ; ವಿಯೆಟ್ನಾಮ್ೆ ನಾವೇನಾದರೂ ನಮ್ಮ ಸೈನ್ಯ ಕಳಿಸದೇ ಹೋದರೆ ಅಲ್ಲಿ ಚೀನೀಯರು ಬಂದು ಕೂತುಬಿಡುತ್ತಾರೆ, ಆಮೇಲೆ ಅಲ್ಲಿಂದ ಇಡೀ ಆಗ್ನೇಯ ಏಷ್ಯಾಗೆ ಅವರಿಗೆ ದಾರಿ ಸುಗಮವಾಗಿಬಿಡುತ್ತದೆ ಎಂದು ಅಮೆರಿಕದ ಐವರು ಅಧ್ಯಕ್ಷರು ನಂಬಿದ್ದೇ ಅಮೆರಿಕ ಆ ಆಗ್ನೇಯ ಏಷ್ಯಾದ ದೇಶದಲ್ಲಿ ಎಂಟು ವರ್ಷ ಯುದ್ಧ ಮಾಡಿದ್ದು, ನಲವತ್ತನಾಲ್ಕು ಸಾವಿರ ಸೈನಿಕರನ್ನು ಕಳೆದುಕೊಂಡದ್ದು. ವಾಸ್ತವವಾಗಿ ಆ ಸೇನಾ ಕಾರ್ಯಾಚರಣೆ ಅಗತ್ಯವಾಗಿತ್ತೇ? ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿರುವಂತೆ ಕ್ರಿ.ಪೂ. ಒಂದು ಮತ್ತು ಕ್ರಿ.ಶ. ಹತ್ತನೆಯ ಶತಮಾನಗಳ ನಡುವೆ ವಿಯೆಟ್ನಾಂ ಮೇಲೆ ಚೀನೀ ಸಾಮ್ರಾಜ್ಯಶಾಹಿ ದಬ್ಬಾಳಿಕೆ ನಿರಂತರವಾಗಿ ನಡೆದಿತ್ತು. ನಂತರ ಸತತ ಹೋರಾಟದ ಫಲವಾಗಿ ವಿಯೆಟ್ನಾಮೀಯರು ಚೀನೀ ಸಾಮ್ರಾಜ್ಯದಿಂದ ಹೊರಬಂದರೂ 19ನೇ ಶತಮಾನದವರೆಗೂ ಅವರನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳಲು ಚೀನೀಯರು ಪ್ರಯತ್ನಿಸಿದ್ದರು. ಕೊನೆಗೂ ಚೀನೀಯರನ್ನು ವಿಯೆಟ್ನಾಂನಿಂದ ಹೊರಗಿಟ್ಟದ್ದು ಫ್ರೆಂಚರು. 1954ರ ಜಿನೀವಾ ಒಪ್ಪಂದಗಳ ಪರಿಣಾಮವಾಗಿ ವಿಯೆಟ್ನಾಂನಿಂದ ಫ್ರೆಂಚರು ಹೊರಹೋಗಿ ವಿಯೆಟ್ನಾಂ ಸ್ವತಂತ್ರವಾಯಿತು. ಅಂದರೆ ವಿಯೆಟ್ನಾಮಿ-ಚೀನೀ ವೈರ ಸುಮಾರು ಎರಡುಸಾವಿರ ವರ್ಷಗಳಷ್ಟು ದೀರ್ಘ! ಆದರೆ ಯಾವಾಗ ವಿಯೆಟ್ನಾಂಗೆ ಅಮೆರಿಕನ್ ಸೇನೆ ಬಂತೋ ಆಗ ವಿಯೆಟ್ನಾಮೀಯರು ಚೀನೀಯರತ್ತಲೇ ವಾಲಿದರು. ಒಂದು ವಿಪರ್ಯಾಸದಂತೆ ಯಾವ ಚೀನೀಯರನ್ನು ಹೊರಗಿಡಲು ಅಮೆರಿಕನ್ನದು ಬಯಸಿದರೋ ಅದೇ ಚೀನಾಗೆ ವಿಯೆಟ್ನಾಂ ಗಟ್ಟಿಯಾಗಿ ಆತುಕೊಂಡಿತು! ಮತ್ತೆ, 1975ರಲ್ಲಿ ವಿಯೆಟ್ನಾಂ ಯುದ್ಧ ಮುಗಿದು ವಿಯೆಟ್ನಾಮೀಯರಿಗೆ ಚೀನೀಯರ ಅಗತ್ಯ ನಿಂತುಹೋಯಿತೋ ಆಗ ಎರಡೂ ದೇಶಗಳ ನಡುವಿನ ಐತಿಹಾಸಿಕ ದ್ವೇಷ ಮರುಕಳಿಸಿ 1979ರಲ್ಲಿ ಅವೆರಡೂ ಯುದ್ಧಕ್ಕೇ ಇಳಿದುಬಿಟ್ಟವು! ಕೇವಲ ಕಮ್ಯೂನಿಸ್ಟರಾದ ಕಾರಣ ವಿಯೆಟ್ನಾಮೀಯರು ಮತ್ತು ಚೀನೀಯರು ಒಡಹುಟ್ಟುಗಳು ಎಂದು ಅಮೆರಿಕದ ಐದು ಅಧ್ಯಕ್ಷರು ತಿಳಿದದ್ದು ಇತಿಹಾಸದ, ವಾಸ್ತವದ ನಿರಾಕರಣೆಯಾಗಿತ್ತು!

ಈಗ ಪಾಕಿಸ್ತಾನದತ್ತ ಹೊರಳೋಣ. ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನಿಯರ ನಡುವೆ ಸಮಾನವಾಗಿದ್ದದ್ದು ಇಸ್ಲಾಂ ಧರ್ಮ. ಆದರೆ ತಮ್ಮನ್ನು ಒಂದಾಗಿರಿಸುವಲ್ಲಿ ಆ ಧರ್ಮ ವಿಫಲವಾಯಿತು, ಸ್ಥಾಪನೆಯಾದ ಇಪ್ಪತ್ತನಾಲ್ಕು ವರ್ಷಗಳಲ್ಲಿ ತಮ್ಮ ದೇಶ ಛಿದ್ರವಾಯಿತು ಎಂಬ ಸಮಕಾಲೀನ ವಾಸ್ತವವನ್ನು ಪಾಕಿಸ್ತಾನೀಯರೇ ಮರೆತುಬಿಟ್ಟರು. ಅವರ ಈ ಇತಿಹಾಸದ, ವಾಸ್ತವದ ನಿರಾಕರಣೆ ಎಲ್ಲಿಗೆ ಹೋಯಿತೆಂದರೆ ತಾಲಿಬಾನಿಗಳು ತಮ್ಮಂತೇ ಮುಸ್ಲಿಮರಾದ ಕಾರಣ ಅವರು ತಮ್ಮ ಕೈಗೊಂಬೆಯಾಗುತ್ತಾರೆ ಎಂದು ಪಾಕ್ ಆಳರಸರು ಮತ್ತು ಸೇನಾಧಿಕಾರಿಗಳೂ ತಪ್ಪಾಗಿ ತಿಳಿದರು. ಆದರೆ ಐತಿಹಾಸಿಕ ವಾಸ್ತವವೇನು?

ಪಖ್ತೂನಿಗಳು (ಪಠಾಣರು) ಉಜ್ಬೇಗರು, ತಾಜಿಕರು ಮತ್ತು ಹಜಾರಾಗಳನ್ನು ಒಟ್ಟುಗೂಡಿಸಿ ಈಗಿರುವ ಗಡಿಗಳೊಂದಿಗೆ ಅಫ್ಘಾನಿಸ್ತಾನ ಎಂಬ ಕೃತಕ ದೇಶವನ್ನು ಸೃಷ್ಟಿಸಿದ್ದು 19ನೇ ಶತಮಾನದ ಕೊನೆಯ ದಶಕದಲ್ಲಿ ಬ್ರಿಟಿಷರು ಮತ್ತು ರಷ್ಯನ್ನರು. ಈ ದೇಶದ ದಕ್ಷಿಣಾರ್ಧ ಭಾಗದಲ್ಲಿದ್ದವರು ಪಖ್ತೂನಿಗಳು (ಪಠಾಣರು). ಅಷ್ಟರಲ್ಲಾಗಲೇ ಎರಡನೆಯ ಆಂಗ್ಲೋ-ಅಫ್ಘನ್ ಯುದ್ಧದ ಪರಿಣಾಮವಾಗಿ ಪಖ್ತೂನಿಗಳ ದಕ್ಷಿಣದ ಪ್ರದೇಶಗಳನ್ನು ಬ್ರಿಟನ್ ಆಕ್ರಮಿಸಿಕೊಂಡು ಭಾರತಕ್ಕೆ ಸೇರಿಸಿಕೊಂಡಾಗಿತ್ತು. ಹೀಗಾಗಿಯೇ ಪಖ್ತೂನಿ ಪ್ರದೇಶದ ಸರಿಸುಮಾರು ನಟ್ಟನಡುವೆ ಹಾದುಹೋಗುವ ‘ಡ್ಯೂರಾಂಡ್ ಗಡಿರೇಖೆ’ಯನ್ನು ಅಫ್ಘಾನಿಸ್ತಾನದ ಪಖ್ತೂನಿ ಹಿಡಿತದ ಸರ್ಕಾರಗಳು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಆ ಬಗ್ಗೆ ಪಾಕಿಸ್ತಾನದೊಂದಿಗೆ ನಿರಂತರವಾಗಿ ತಗಾದೆ ತೆಗೆಯುತ್ತಲೇ ಇದ್ದವು. 1961ರಲ್ಲಿ ಎರಡೂ ದೇಶಗಳು ರಣಕಹಳೆ ಊದುವ ಹಂತಕ್ಕೆ ತಲುಪಿದ್ದವು.

1994ರಲ್ಲಿ ತಾಲಿಬಾನ್ ಅನ್ನು ಕಟ್ಟಿ 1996ರಲ್ಲಿ ಅದನ್ನು ಕಾಬೂಲ್​ನಲ್ಲಿ ಅಧಿಕಾರಕ್ಕೇರಿಸಿದ ಪಾಕಿಸ್ತಾನ ಇನ್ನು ಮುಂದೆ ತಮ್ಮ ಉತ್ತರ ಗಡಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿಯಿತು. ಆದರೆ ತಾಲಿಬಾನ್ ಒಂದು ಪಖ್ತೂನಿ ಸಂಘಟನೆ ಎನ್ನುವುದು ಸಮಕಾಲೀನ ವಾಸ್ತವವಾದರೆ, ತಮ್ಮನ್ನು ವಿಭಜಿಸಿದ ಡ್ಯೂರಾಂಡ್ ಗಡಿರೇಖೆಯನ್ನು ಪಖ್ತೂನಿಗಳು ಎಂದೂ ಒಪ್ಪಿಕೊಂಡಿರಲಿಲ್ಲ ಎನ್ನುವುದು ಐತಿಹಾಸಿಕ ವಾಸ್ತವ. ಇವೆರಡೂ ವಾಸ್ತವಗಳನ್ನು ನಿರಾಕರಿಸಿದ ಪಾಕ್ ಸರ್ಕಾರಗಳು ತಾಲಿಬಾನ್ ಡ್ಯೂರಾಂಡ್ ಗಡಿರೇಖೆ ಬಗ್ಗೆ ತಗಾದೆ ಎತ್ತುವುದಿಲ್ಲ ಎಂದು ತಿಳಿದವು. ನೇಹಿಗರೇ ಇಲ್ಲದಿದ್ದ ತಾಲಿಬಾನ್ ಆ ಕಾರಣದಿಂದಲೇ ಪಾಕಿಸ್ತಾನಕ್ಕೇ ಅಂಟಿಕೊಂಡಿತು. ಆದರೂ ಡ್ಯೂರಾಂಡ್ ಗಡಿರೇಖೆ ಬಗ್ಗೆ ತಾಲಿಬಾನ್ ನಾಯಕರು ಆಗಾಗ ಅಸಮ್ಮತಿ ಹೊರಹಾಕಿದ್ದುಂಟು. ಅದನ್ನು ಪಾಕ್ ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಆದರೆ ಇಂದು ತಾಲಿಬಾನ್ ಹಿಂದೆಂದಿಗಿಂತ ಶಕ್ತಿಶಾಲಿಯಾಗಿದೆ. ದೇಶದ ಒಳಗೂ ಅದಕ್ಕೆ ಗಮನಾರ್ಹ ವಿರೋಧ ಇಲ್ಲ. ಜತೆಗೆ ರಷ್ಯಾ ಮತ್ತು ಮಧ್ಯ ಏಷ್ಯಾ ಗಣರಾಜ್ಯಗಳು ಅದರ ಬಗ್ಗೆ ಸಹಾನುಭೂತಿ ತೋರಿಸುತ್ತಿವೆ. ಅಫ್ಘನ್ ನೆಲದಲ್ಲಿ ಇರುವ ಅಗಾಧ ಖನಿಜನಿಕ್ಷೇಪಗಳನ್ನು ಲೂಟಿ ಹೊಡೆಯುವ ಉದ್ದೇಶದಿಂದ ಚೀನಾ ತಾಲಿಬಾನ್ ಅನ್ನು ಓಲೈಸತೊಡಗಿದೆ. ಅಮೆರಿಕ ತಾಲಿಬಾನ್ ಅನ್ನು ಸಮಾನವಾಗಿ ಕಂಡು ಎದುರುಬದುರು ಕೂತು ಮಾತಾಡಿದೆ. ಪಶ್ಚಿಮ ಯುರೋಪಿಯನ್ ದೇಶಗಳು ತಾಲಿಬಾನ್​ಗೆ ಸಹಾಯ ನೀಡಲೂ ಮನಸ್ಸು ಮಾಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದು ತಾಲಿಬಾನ್ ಭಾರತದೊಂದಿಗೆ ಉತ್ತಮ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತಿದೆ. ಪಾಕಿಸ್ತಾನ ತನಗೆ ಕೊಡುವುದು ಮಾರಕಾಸ್ತ್ರಗಳನ್ನು ಮಾತ್ರ ಮತ್ತು ಅವುಗಳ ಅಗತ್ಯ ‘ಈಗ’ ತನಗೆ ಇಲ್ಲ ಎಂದು ತಾಲಿಬಾನ್​ಗೆ ಗೊತ್ತು. ತನಗೆ ಇಂದು ಅತ್ಯಗತ್ಯವಾಗಿರುವ ಆಹಾರಧಾನ್ಯಗಳು ಮತ್ತು ಆರ್ಥಿಕ ಸಹಾಯವನ್ನು ನೀಡಬಲ್ಲ ಸಾಮರ್ಥ್ಯವಿರುವುದು ಭಾರತಕ್ಕೆ ಮತ್ತು ಭಾರತ ಅದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತದೆ ಎಂದೂ ತಾಲಿಬಾನ್ ನಾಯಕರು ಅರಿತಿದ್ದಾರೆ. ಹೀಗಾಗಿಯೇ ಅವರು ಭಾರತದೊಂದಿಗೆ ಸಂಬಂಧಗಳನ್ನು ಉತ್ತಮಗೊಳಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ, ಅದರ ಸೂಚನೆಯಾಗಿ ಗೋಧಿಯನ್ನು ಪೂರೈಸಿದೆ.

ಹೀಗಾಗಿ ತಾಲಿಬಾನ್​ಗೆ ಪಾಕಿಸ್ತಾನದ ಅಗತ್ಯ ಕಡಿಮೆಯಾಗಿಹೋಗಿದೆ. ಪಾಕಿಸ್ತಾನದ ಜತೆಗಿನ ಸ್ನೇಹಕ್ಕಿಂತ ಕಳೆದುಹೋದ ಪಖ್ತೂನಿ ಪ್ರದೇಶಗಳನ್ನು ಮರಳಿ ಪಡೆದುಕೊಳ್ಳುವುದು ಮುಖ್ಯ ಎಂದು ತಾಲಿಬಾನಿ ನಾಯಕರು ತಿಳಿಯತೊಡಗಿದ್ದಾರೆ. ಅಫ್ಘಾನಿಸ್ತಾನದ ದಕ್ಷಿಣ ಗಡಿ ಮರ್ಗಲಾ ಬೆಟ್ಟಗಳವರೆಗೆ ಎಂದು ಹಲವಾರು ತಾಲಿಬಾನಿ ನಾಯಕರು ಹೇಳತೊಡಗಿದ್ದಾರೆ. ಅಂದಹಾಗೆ ಮರ್ಗಲಾ ಬೆಟ್ಟಗಳು ಎಲ್ಲಿವೆ ಗೊತ್ತೇ? ಆ ಬೆಟ್ಟಸಾಲು ಸಾಗುವುದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ನ ವಾಯವ್ಯ ಹೊರವಲಯದಲ್ಲಿ! ಹಿಂದೆಲ್ಲ ಅಫ್ಘನ್ ಸರ್ಕಾರಗಳು ತಮ್ಮದೆಂದು ಹೇಳುತ್ತಿದ್ದುದು ಕೇವಲ ಗಡಿನಾಡು ಪ್ರಾಂತ್ಯ ಮತ್ತು ಉತ್ತರ ಬಲೂಚಿಸ್ತಾನವನ್ನು. ಆದರೀಗ ತಾಲಿಬಾನ್ ಪಾಕಿಸ್ತಾನದ ಹೃದಯವಾದ ಪಂಜಾಬ್​ಗೇ ಲಗ್ಗೆಹಾಕಲು ನೋಡುತ್ತಿದೆ, ಪಾಕ್ ರಾಜಧಾನಿಯ ಹೊರವಲಯದ ಮೇಲೇ ಕಣ್ಣುಹಾಕಿದೆ!

ತಾಲಿಬಾನ್ ತಮ್ಮ ಸೃಷ್ಟಿ, ತಮ್ಮಂತೆಯೇ ತಾಲಿಬಾನಿಗಳೂ ಮುಸ್ಲಿಮರು, ಆ ಕಾರಣದಿಂದಲೇ ಅವರು ನಮಗೆ ಎಂದೆಂದಿಗೂ ಸಹೋದರರು ಎಂದು ನಂಬಿದ ಪಾಕಿಸ್ತಾನ ಈಗ ಇಂಗು ತಿಂದ ಮಂಗನಾಗುತ್ತಿದೆ. ಐತಿಹಾಸಿಕ ವಾಸ್ತವ ನಿರಾಕರಿಸಿದ್ದಕ್ಕೆ, ಸಮಕಾಲೀನ ವಾಸ್ತವ ಗುರುತಿಸದೇ ಹೋದುದಕ್ಕೆ ಅಂದರೆ ‘ಬಾತುಕೋಳೀಯಂತೆ ಕಾಣುವುದನ್ನು, ನಡೆದಾಡುವುದನ್ನು, ಕೂಗುವುದನ್ನು ಬಾತುಕೋಳಿ ಎಂದು ಗುರು ತಿಸದೇ ಇನ್ನೇನೋ ಅಂದುಕೊಂಡದ್ದಕ್ಕೆ’ ಪಾಕಿಸ್ತಾನ ಈಗ ಬೆಲೆ ತೆರುವ ಕಾಲ ಬಂದಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net