

| ಸಚಿನ್ ಕೆ. ದೇಸಾಯಿ ವಿಜಯಪುರ
ಚಿಕಿತ್ಸೆ ನೀಡುವ ಡಾಕ್ಟರ್ ಸಾಫ್ಟ್ವೇರ್ ಇಂಜಿನಿಯರ್ ಕೂಡ ಆಗಬಹುದು! ಮನೆ ಮಕ್ಕಳನ್ನು ಸಂಬಾಳಿಸುವ ಕೈಗಳು ಉದ್ಯಮವನ್ನೂ ಆರಂಭಿಸಬಹುದು. ಇದಕ್ಕೊಂದು ಉತ್ತಮ ಉದಾಹರಣೆ ಬಾಗಲಕೋಟೆ ನಗರದ ವೈದ್ಯೆ ಡಾ.ಗೀತಾ ಗಂಗಾವತಿ. ಫ್ಯಾಮಿಲಿ ಮೆಡಿಸಿನ್ನಲ್ಲಿ ಸ್ನಾತಕೋತ್ತರ ಪದವಿ (ಡಿಎನ್ಬಿ) ಪಡೆದ ಇವರು ಬಾಗಲಕೋಟೆ ನಗರದಲ್ಲಿ ಐದಾರು ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಇದರೊಂದಿಗೆ ಕಂದಮ್ಮಗಳಿಗೆ ಹಿತ, ಹೆಂಗಳೆಯರ ಕೈಗೊಂದು ಕೆಲಸ ಎಂಬ ಪರಿಕಲ್ಪನೆಯಲ್ಲಿ ಪುಟ್ಟ ಉದ್ಯಮವನ್ನೂ ನಡೆಸುತ್ತಿದ್ದಾರೆ. ನವಜಾತ ಶಿಶುಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಬೆಚ್ಚನೆಯ ಉಡುಪು ತಯಾರಿಸುವುದು. ಈ ಉದ್ಯಮ ಶುರುವಾಗಿದ್ದರ ಹಿಂದೆ ಒಂದು ರೋಚಕ ಕಥೆಯಿದೆ.
ಕೆಲ ವರ್ಷಗಳ ಹಿಂದೆ ಡಾ.ಗೀತಾ ಎರಡನೇ ಮಗುವಿಗೆ ಜನ್ಮ ನೀಡಿದರು. ಸಾಮಾನ್ಯ ತಾಯಿಯಂತೆ ಮಗುವಿಗೆ ಡೈಪರ್ ಖರೀದಿಸಿ ತಂದರು. ಅದರಿಂದ ಹಸುಳೆಗೆ ಸೋಂಕು, ದದ್ದು ಆಗಿದ್ದು ಕಂಡುಬಂತು. ಈ ಸಮಸ್ಯೆಗೊಂದು ಪರಿಹಾರ ಹುಡುಕಲು ಮುಂದಾಗಿ ಗೂಗಲ್ನಲ್ಲಿ ತಡಕಾಡಿದರು. ಆಗ ಇವರಿಗೆ ಹೊಳೆದದ್ದು ಸಾವಯವ ಹತ್ತಿಯಿಂದ ಮರುಬಳಕೆಯ ಡೈಪರ್ ತಯಾರಿಸುವ ಐಡಿಯಾ. ಮೊದಲು ಪ್ರಾಯೋಗಿಕವಾಗಿ ಕೆಲವು ಡೈಪರ್ ತಯಾರಿಸಿ ತಮ್ಮ ಮಗುವಿಗೆ ಬಳಸಿದರು. ಕೂಸು ಆರಾಮಾಗಿ ಇರಬಹುದು ಎಂಬುದು ಖಾತ್ರಿಯಾದಾಗ ಹೊಲಿಗೆ ಗೊತ್ತಿರುವ ಕೆಲ ಮಹಿಳೆಯರನ್ನು ಸಂರ್ಪಸಿ ತಮ್ಮ ಐಡಿಯಾ ಹಂಚಿಕೊಂಡು ಅವರೊಂದಿಗೆ ಮನೆಯಿಂದಲೇ ಪುಟ್ಟ ಉದ್ಯಮ ಆರಂಭಿಸಿದರು.
ಸದ್ಯ ಡೈಪರ್ ಜತೆಗೆ ಕಂದಮ್ಮಗಳಿಗೆ ಸುಲಭವಾಗಿ ತೊಡಿಸಬಹುದಾದ ಅಂಗಿ, ಫ್ರಾಕ್ ಮತ್ತಿತರ ವಿಶೇಷ ಬಟ್ಟೆಗಳು ಡಾ.ಗೀತಾ ಅವರ ಐಡಿಯಾಗಳಲ್ಲಿ ಸಿದ್ಧವಾಗುತ್ತಿವೆ. ನಾಲ್ಕಾರು ಮಹಿಳೆಯರನ್ನು ತೊಡಗಿಸಿಕೊಂಡು ಅವರಲ್ಲೂ ಆರ್ಥಿಕ ಸ್ವಾವಲಂಬನೆ ಚೈತನ್ಯವನ್ನು ಚಿಗುರಿಸಿದ್ದಾರೆ.
ಈ ಉತ್ಪನ್ನ ಹೆಚ್ಚು ಮಕ್ಕಳಿಗೆ ತಲುಪಲಿ ಎಂಬ ಉದ್ದೇಶದಿಂದ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಆರಂಭಿಸಿದ್ದಾರೆ. https://thefluffmaker.com ಸೈಟ್ನಿಂದ ಆರ್ಡರ್ ಮಾಡಿ ಮರುಬಳಕೆಯ ಡೈಪರ್ ಸೇರಿದಂತೆ ವಿವಿಧ ಉತ್ಪನ್ನ ಖರೀದಿಸಬಹುದು. ಈಗಾಗಲೆ ಮುಂಬೈ, ಕೋಲ್ಕತಾ, ಚೆನ್ನೈ ಸೇರಿದಂತೆ ಡಾ.ಗೀತಾ ಅವರ ವೈದ್ಯ ಸ್ನೇಹಿತರು ಈ ಡೈಪರ್ ತರಿಸಿಕೊಂಡು ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಿಸರಸ್ನೇಹಿ ಡೈಪರ್: 2018ರಲ್ಲಿ ಮೊದಲ ಬಾರಿಗೆ ಈ ಉದ್ಯಮ ಆರಂಭಿಸಲು ನಿರ್ಧರಿಸಿದಾಗ ಹಲವು ಸವಾಲು ಎದುರಾಗಿವೆ. ಪ್ರಾಯೋಗಿಕವಾಗಿ ಆರಂಭಿಸುವ ಮುನ್ನ ಯೂಟ್ಯೂಬ್ ನೋಡಿ ಹೊಲಿಗೆ ಕಲಿತ ಡಾ.ಗೀತಾ, ಆನ್ಲೈನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಸಾವಯವ ಹತ್ತಿ ಖರೀದಿಸಲು ಮುಂದಾದಾಗ ಸಿಗಲಿಲ್ಲ. ಮೊದಲ ಬಾರಿಗೆ ಚೀನಾದಿಂದ 10 ಕೆಜಿ ಸಾವಯವ ಹತ್ತಿ ಆರ್ಡರ್ ಮಾಡಿ 15 ದಿನಗಳ ನಂತರ ಅದು ಬಾಗಲಕೋಟೆ ತಲುಪಿದ ಮೇಲೆ ಹೊಲಿಗೆ ಆರಂಭಿಸಿದ್ದಾರೆ. ನಂತರ ಬರೋಡಾ ಮೂಲದ ಹಿರಿಯ ಉದ್ಯಮಿಯೊಬ್ಬರು ಇವರ ಕಳಕಳಿ ಮೆಚ್ಚಿ ಸಾವಯವ ಹತ್ತಿ ಪೂರೈಸುತ್ತಿದ್ದಾರೆ. ಇಲ್ಲಿವರೆಗೆ ಡಾ.ಗೀತಾ 4 ಸಾವಿರಕ್ಕೂ ಹೆಚ್ಚು ಉಡುಪು ತಯಾರಿಸಿದ್ದಾರೆ. ಖರೀದಿಸಿ ತಂದ ಡೈಪರ್ಗಳಿಗಿಂತ ನಾವು ತಯಾರಿಸುವ ಉತ್ಪನ್ನಗಳು ಹೆಚ್ಚು ಪರಿಸರಸ್ನೇಹಿಯಾಗಿವೆ. ಮಣ್ಣಿನಲ್ಲಿ ಬೇಗ ಕರಗುತ್ತವೆ. ಸ್ವಚ್ಛವಾಗಿ ತೊಳೆದು ವರ್ಷದವರೆಗೆ ಬಳಸಬಹುದು ಎನ್ನುವ ಡಾ.ಗೀತಾ ಕರೊನಾ ಸಂದರ್ಭದಲ್ಲಿ ಅಭಾವ ಸೃಷ್ಟಿಯಾದಾಗ ಇದೇ ಸಾವಯವ ಹತ್ತಿ ಬಳಸಿ 3 ಸಾವಿರಕ್ಕೂ ಹೆಚ್ಚು ಪಿಪಿಇ ಕಿಟ್ ತಯಾರಿಸಿ ಬಾಗಲಕೋಟೆ ನಗರ ಹಾಗೂ ಸುತ್ತಲಿನ ವೈದ್ಯರಿಗೆ ತಲುಪಿಸಿದ್ದಾರೆ.
ಇದನ್ನು ಲಾಭಕ್ಕಾಗಿ ಆರಂಭಿಸಿಲ್ಲ. ಒಬ್ಬ ತಾಯಿಯಾಗಿ ಹಸುಳೆಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಆರಂಭಿ ಸಲಾಗಿದೆ. ಇದರಿಂದ ಕೆಲ ಮಹಿಳೆಯರಿಗೆ ಆರ್ಥಿಕವಾಗಿ ಅನುಕೂಲವಾಗಿದೆ ಎಂಬ ಸಂತೃಪ್ತಿ ಇದೆ. ಪತಿಯೂ ವೈದ್ಯರಾಗಿದ್ದು, ಅವರ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಪನ್ನ ಹೊರತರುವ ಚಿಂತನೆಯೂ ಇದೆ. | ಡಾ.ಗೀತಾ ಗಂಗಾವತಿ ಬಾಗಲಕೋಟೆ
ವೈದ್ಯಕೀಯ ವಿಶ್ಲೇಷಕಿ!: ಇಂಗ್ಲೆಂಡ್ನ ರಾಯಲ್ ಕಾಲೇಜ್ ಆಫ್ ಜನರಲ್ ಪ್ರ್ಯಾಕ್ಟಿಷನರ್ನಿಂದ ಡಯಾಬಿಟಾಲಾಜಿಯಲ್ಲಿ ಫೆಲೋಶಿಪ್ ಪಡೆದಿರುವ ಡಾ.ಗೀತಾ ವೈದ್ಯಕೀಯ ವಿಷಯಗಳ ವಿಶ್ಲೇಷಣೆಯಲ್ಲಿ ಕುತೂಹಲ ಬೆಳೆಸಿಕೊಂಡು ಅಮೆರಿಕದ ಟೆಕ್ಸಾಸ್ನ ಆಸ್ಟಿನ್ ಯುನಿವರ್ಸಿಟಿಯಿಂದ ಆನ್ಲೈನ್ ಮೂಲಕ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ (Artificial Intelligence & Machine Learning) ವಿಷಯದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಖಾಸಗಿ ಕಂಪನಿಯೊಂದರಲ್ಲಿ ವೈದ್ಯಕೀಯ ವಿಷಯ ವಿಶ್ಲೇಷಕಿ (ಮೆಡಿಕಲ್ ಡೇಟಾ ಅನಲಿಸ್ಟ್) ಆಗಿಯೂ ಆನ್ಲೈನ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನದ ಮೊದಲ ಅರ್ಧ ಸಮಯದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರೆ ದ್ವಿತೀಯಾರ್ಧದಲ್ಲಿ ಇಂಜಿನಿಯರ್ ಆಗಿ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.