ದೇವಕಾರಿನಲ್ಲೊಂದು ದೇವ ಜಲಪಾತ...

3-68389c950caef
Published on
ಇಲ್ಲಿ ವೀಕೆಂಡ್ ಹೆಸರಿನ ಐಟಿ ಪಡ್ಡೆಗಳ, ರಾಜಧಾನಿಯ ಜನರ ನುಗ್ಗುವಿಕೆ ಸಾಧ್ಯವೇ ಇಲ್ಲ. ಎಣ್ಣೆ, ಮೋಜು ಮಸ್ತಿ ಮೊದಲೇ ಆಗುವುದಿಲ್ಲ. ಇದೆಲ್ಲದರ ಹೊರತಾಗಿ ಅನುಮತಿ ಇತ್ಯಾದಿ ಪಡೆದಾದ ಮೇಲೂ ತಯಾರಿ ಮಾಡಿಕೊಂಡಿದ್ದರೆ ಒಂದಿಷ್ಟು ಊಟ ಉಣಿಸು ಲಭ್ಯವಾದೀತೇ ವಿನಃ ಕುಡಿಯಲು ನೀರು ಬೇಕೆಂದರೆ ಅದು ಕೇವಲ ಕಾಳಿ ಹಿನ್ನೀರ ತುದಿ ಮತ್ತು ಹರಿದುಬರುವ ವಜ್ರ ಜಲಪಾತದ ಬಿಳ್ನೊರೆಯ ನೀರು, ಸುತ್ತಮುತ್ತಲೆಲ್ಲ ಬರೀ ನೀರು...

ಇದು ಹಸಿರು ಉಕ್ಕಿ ನಿಂತ ದೇವಲೋಕ ದೇವಕಾರಿನ ವಜ್ರ ಜಲಪಾತ. ಈ ವಾರ ಇದರ ವಿಷಯವನ್ನು ಕೈಗೆತ್ತಿಕೊಳ್ಳಲೂ ಕಾರಣವಿದೆ. ಇದ್ದಕ್ಕಿದ್ದಂತೆ ಆರಂಭವಾದ ಮುಂಗಾರಿಗೆ ಇನ್ನು ವರ್ಷವಿಡೀ ಈ ವಜ್ರ ಮೈದುಂಬಿಕೊಂಡಿದ್ದರೆ, ‘ಸರ್ ಈ ಸರ್ತಿಯಾದರೂ ಬನ್ನಿ, ಮತ್ತೊಮ್ಮೆ ವಜ್ರ ಜಲಪಾತಕ್ಕೆ ಹೋಗೋಣ’ ಎಂದು ಸ್ಥಳೀಯ ಫಾರೆಸ್ಟ್ ಅಧಿಕಾರಿ ಕರೆ ಮಾಡಿದ್ದಕ್ಕೆ. ನಾನು ತೀರ ಇಲ್ಲಿಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಸುಲಭಕ್ಕೆ ಎಟುಕಿಸಿಕೊಳ್ಳಬಹುದಾದ ತಾಣವಾಗಿದ್ದ ದೇವಕಾರು ಈಗ ಹಿನ್ನೀರಿನಲ್ಲಿ ಮುಳುಗಿರುವ ಕಾರಣ, ನೇರ ದಾರಿ ಇಲ್ಲವೇ ಇಲ್ಲ.

ಮೊದಲು ಸ್ಥಳೀಯ ಚಿಕ್ಕ ಪಾತಿ ದೋಣಿ ಮೂಲಕ ಕ್ರಮಿಸಿ, ಆಳವಾದ ಹಿನ್ನೀರ ಮೇಲೆ ಸಾಗುವ ರೋಚಕತೆಯ ನಂತರ ಒಂದೆರಡು ಗಂಟೆಗಳ ಕಾಲ್ನಡಿಗೆ ಇದರ ಪ್ರಮುಖ ಹಂತ. ಹಾಗಾಗಿ ಈಗಲೂ ವೀಕೆಂಡ್ ಉಪದ್ವ್ಯಾಪಿಗಳಿಂದ ದೂರವೇ ಉಳಿದಿದೆ. ಇದೊಂದು ಲೆಕ್ಕದಲ್ಲಿ ಒಳ್ಳೆಯದೇ ಎಂದು ನಾನು ಹಲವು ಬಾರಿ ಅಂದುಕೊಂಡಿದ್ದೇನೆ. ಕಾರಣ, ಕಂಡಲ್ಲೆಲ್ಲಾ ಕುಲಗೆಡಿಸುವ ಟ್ರೆಕ್ಕಿಂಗ್ ಹೆಸರಿನ ಮೋಜು ಮಸ್ತಿಗಳಿಂದ ಮುಲಾಜೇ ಇಲ್ಲದೆ ದೂರ ಇರಿಸಲಾಗಿರುವ ಈ ಸ್ಥಳಕ್ಕೆ ಅಷ್ಟರಮಟ್ಟಿಗೆ ಪ್ಲಾಸ್ಟಿಕ್ಕು, ಬಿಯರ್ ಬಾಟಲ್​ಗಳು, ತಿಂದುಂಡು ಎಸೆಯುವ ಗಾರ್ಬೆಜುಗಳ ಕಿರಿಕಿರಿ ಇಲ್ಲ. ದಾರಿಯಂತೂ ಮೊದಲೇ ಇಲ್ಲ. ಆ ಮಟ್ಟಿಗೆ ಧನ್ಯ ದೇವಕಾರು ಜಲಪಾತ.

ಜಲಪಾತಗಳ ಜಿಲ್ಲೆ ಉತ್ತರ ಕನ್ನಡವನ್ನು ದೂರ ದೂರದಿಂದ ಸಂದರ್ಶಿಸುವವರು ಅದೇ ಮಾಗೋಡು, ಮಡ್ಡಿಜೋಗ, ಉಂಚಳ್ಳಿ, ಕೆಪ್ಪಜೋಗ, ಗವಿಗುಂಡಿ, ವಿಭೂತಿ, ಅಣಶಿ, ಶಿವಗಂಗೆ ಹೀಗೆ ಸಿದ್ಧ ಮಾದರಿಯ ರಸ್ತೆಯಲ್ಲಿ ಚಲಿಸಿ, ವಾಹನ ನಿಲ್ಲಿಸಿ ಒಂದಿಷ್ಟು ಮೋಜು ಮಸ್ತಿ ನಡೆಸಿ, ಕಾಡುಮೇಡು ಸುತ್ತಿ, ಬೇಕೆಂದೆಡೆಯೆಲ್ಲಾ ವಾಹನ ನಿಲ್ಲಿಸಿ, ರಸ್ತೆಯನ್ನೂ ತಿಪ್ಪೆಯನ್ನೂ ಬಿಡದೆ ನಿಂತು ಕುಂತು ಕ್ಲಿಕ್ಕಿಸಿ ನಡೆದು ಬಿಡುತ್ತಾರೆ.

ಇದು ಜನಸಂಪರ್ಕಕ್ಕೆ ಬಾರದೇ ಉಳಿದು ಹೋಗಿದ್ದರೂ ಸ್ಥಳೀಯವಾಗಿ ವಜ್ರ ಜಲಪಾತ ಎಂದು ಸದ್ದಿಲ್ಲದೇ ಹರಿಯುತ್ತಲೇ ಇದೆ ಕಾಡ ಬೆಳದಿಂಗಳಿನಂತೆ. ಆದರೆ ಕದ್ರಾ ಜಲ ವಿದ್ಯುತ್ ಯೋಜನೆಯಡಿಯಲ್ಲಿ ಹಿನ್ನೀರ ವಿಸ್ತಾರ ನೂರಾರು ಎಕರೆ ಕಾಳಿ ನದಿಯ ಹಿಂಭಾಗ ವಿಸ್ತಾರಗೊಂಡಾಗ ದೇವಕಾರಿನ ನೇರ ಸಂಪರ್ಕ ಸಂಪೂರ್ಣವಾಗಿ ಮುಚ್ಚಿಹೋಯಿತು. ಈಗ ಏನಿದ್ದರೂ ಜಿಲ್ಲೆಯ ಪ್ರಮುಖ ಸ್ಥಳ ಕಾರವಾರದಿಂದ ದಿನಕ್ಕೊಮ್ಮೆ ಹೊರಡುವ ಬಸ್ಸಿನಲ್ಲಿ ಕದ್ರಾದ ಮೂಲಕ ಚಲಿಸಿ, ಕೊಡಸಳ್ಳಿಯ ಮಾರ್ಗವಾಗಿ ನಟ್ಟ ನಡುವಿನ ದೇವಕಾರ ಕ್ರಾಸಿನಲ್ಲಿ ಉಬ್ಬರ ಇಳಿತಗಳಿಗೆ ಅನುಗುಣವಾಗಿ ಬದಲಾಗುವ ದೋಣಿ ಸಂಚಾರದ ಜಾಗಗಳನ್ನು ತಲುಪಿ ಮುಕ್ಕಾಲು ಗಂಟೆಯಷ್ಟು ಕಾಳಿನದಿಯ ಹಿನ್ನೀರಲ್ಲಿ ಸ್ವಯಂ ಹುಟ್ಟಿನ ಅನುಭವ ಪಡೆದು ಆ ದಡ ತಲುಪಿದರೆ ಒಂದು ಹಂತಕ್ಕೆ ದೇವಕಾರಿನ ತೆಕ್ಕೆಗೆ ಬಿದ್ದಂತಾಗುತ್ತದೆ. ಆದರೆ ಇದಕ್ಕೆಲ್ಲ ಮೊದಲೇ ಅನುಮತಿಯ ಅಗತ್ಯವಿರುವುದರಿಂದ ಎಲ್ಲ ಸಲೀಸಾಗುತ್ತದೆನ್ನುವ ಮಾತೇ ಇಲ್ಲ.

ಒಮ್ಮೆ ಆಚೆಯ ದಡ ಸೇರಿದರೆ ನಂತರದಲ್ಲಿ ನದಿಯ ಹರಿವಿನ ತಿರುವುಗಳ, ಅಂಚಿನ ಕಾಲು ದಾರಿ ಉಂಟು ಎಂದರೆ ಉಂಟು, ಇಲ್ಲ ಎಂದರೆ ಇಲ್ಲಗಳ ನಡುವಿನ ಅಗಾಧ ಕಾಡು ಬೆಳೆಗಳ ನಡುವೆ ಸೊಪ್ಪು ಸದೆ ಸವರುತ್ತಾ ಚಾರಣಕ್ಕಿಳಿದರೆ ಬರೋಬ್ಬರಿ ಎರಡು ಗಂಟೆ ಕಾಡು ದಾರಿ, ದಟ್ಟ ಹಸಿರಿನ ಗದ್ದೆಯ ಅಂಚು, ತೀವ್ರ ಕಡಿದಾದ ಪರ್ವತದ ಮೈ, ನೀರಿನ ಬಂಡೆಗಳ ಒಳಾವರಣದ ಅಗಾಧತೆ, ಮಧ್ಯದಲ್ಲೊಮ್ಮೆ ಎದ್ದು ನಿಂತ ಅರ್ಧ ಕೊರಕಲು ಶಿಲಾಬಂಡೆಯ ವೈವಿಧ್ಯಮಯ ಅನುಭವ ಗಳಿಗೆ ಈಡಾಗುತ್ತಾ ಕಾಳಿನದಿಯ ಪಾತ್ರದಲ್ಲಿ ಎಡ ತಿರುವನ್ನು ತೆಗೆದು ಕೊಳ್ಳುತ್ತಿದ್ದಂತೆ ಕಿಲೋಮೀಟರ್​ವೊದಲೇ ಗೋಚರವಾಗುತ್ತದೆ ಅಷ್ಟು ಎತ್ತರದಿಂದ ಧರೆಗುರುಳುತ್ತಿರುವ ದೇವಕಾರು ಜಲಪಾತ.

ಅದು ಅಕ್ಷರಶಃ ಬೆಳ್ಳಿ ಹಾಲ್ನೊರೆಗಳ ಮೊರೆತ, ಜಲಲಜಲಲ ಜಲಧಾರೆ. ಅಗಾಧ ಎತ್ತರ ಮತ್ತು ರಭಸಕ್ಕೆ ಕಿವಿಗಡಚಿಕ್ಕುವಂತೆ ಶಬ್ದಿಸುತ್ತಾ ಬೀಳುವ ಜಲಪಾತ ಇವತ್ತಿಗೂ ಜಿಲ್ಲೆಯ ವಿಸ್ಮಯ. ಮಳೆಗಾಲದ ಆರಂಭದಿಂದ ಜನವರಿಯವರೆಗೆ ತುಂಬು ಅಗಲದಲ್ಲಿ ಸುರಿಯುವ ದೇವಕಾರು ಜಲಪಾತ ಮೇ ತಿಂಗಳಲ್ಲೂ ಕೂಡ ಖುಷಿ ಕೊಡುವಷ್ಟು ನೀರನ್ನು ಉಳಿಸಿಕೊಂಡು ಹರಿಯುತ್ತಿರುತ್ತದೆ. ಆದರೆ ಸುಲಭಕ್ಕೆ ಈಡಾಗದ ದಾರಿಯ ಸೌಲಭ್ಯದಿಂದಾಗಿ ಮತ್ತು ಸ್ಥಳೀಯವಾಗಿ ಸೌಲಭ್ಯಗಳ ಕೊರತೆಯಿಂದಾಗಿ ಆಸಕ್ತಿ ಇದ್ದರೂ ಇದನ್ನು ತಲುಪುವುದು ಸುಲಭವಾಗುವುದಿಲ್ಲ. ಆದಷ್ಟೂ ಹೊರಗಿನ ವಿಹಾರಿಗಳು ಇದನ್ನು ಅರಸಿ ಬಾರದಿರುವುದೂ ಪ್ರಕೃತಿಯ ದೃಷ್ಟಿಯಿಂದ ಒಳ್ಳೆಯದೇ ಅನ್ನಿಸಿದ್ದಿದೆ ನನಗೆ.

ಸಾಕಷ್ಟು ಹರಿಯುವ ನೀರಿನ ಸೌಲಭ್ಯವನ್ನು ಹೊರತುಪಡಿಸಿದರೆ ಏನೆಂದರೆ ಏನೂ ಲಭ್ಯವಾಗದ ದೇವಕಾರಿಗೆ ಹೋಗುವಾಗ ಸಾಕಷ್ಟು ಆಹಾರ ಪದಾರ್ಥಗಳ ಸಂಗ್ರಹ ಒಯ್ಯುವುದು ಅವಶ್ಯ. ಜೊತೆಗೆ ಕೇವಲ ದೇವಕಾರಲ್ಲ ಅದರ ನದಿ ಪಾತ್ರ ಹೊರತುಪಡಿಸಿ ಈಚೆಯ ದಂಡೆಗೆ ಬಂದ ನಂತರವೂ ರಸ್ತೆಯ ವಿನಃ ಏನೂ ಸಿಕ್ಕುವುದಿಲ್ಲ. ಹಾಗಂತ ಹತ್ತಿರದ ಕದ್ರಾ ಮೂವತ್ತು ಕಿ.ಮೀ. ದೂರದಲ್ಲಿದ್ದು ಅಲ್ಲಿಗೆ ಹೋಗಿ ತಿಂಡಿ ಕಾಫಿ ಬಯಸಿದರೆ ಅದೂ ಕಷ್ಟವೇ. ಕಾರಣ, ಕನಿಷ್ಠ ಲಭ್ಯತೆಯ ಕದ್ರಾ ಚಿಕ್ಕ ಊರು. ಅಲ್ಲಿ ಒಂದಿಷ್ಟು ಊಟದ ವ್ಯವಸ್ಥೆ ಆಗಬಹುದಾದರೂ ಹೆಚ್ಚಿನದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಎಲ್ಲ ಸಂಪರ್ಕ ಇದ್ದೂ ಏನೂ ದಕ್ಕದ, ಬೆಳೆಯದ ಊರಾಗೇ ಉಳಿದಿರುವ ಇಂಥ ಹಳ್ಳಿಗಳು ಹಲವು ಇಲ್ಲಿ.

ದೇವಕಾರನ್ನು ಯಲ್ಲಾಪುರದ ಬಾರೆ ರಸ್ತೆಯ ಮೂಲಕವೂ ಚಲಿಸಿ ತಲುಪಬಹುದಾಗಿದ್ದರೂ ಖಂಡಿತವಾಗಿಯೂ ಸುರಕ್ಷಿತ ಕಾಡಿನ ಮಾಹಿತಿಯ ಸ್ನೇಹಿತರ ಸಂಪರ್ಕ ಇಲ್ಲದೇ ಸಾಧ್ಯವೇ ಇಲ್ಲ. ಕಾರಣ, ಹಿನ್ನೀರನ್ನು ತಪ್ಪಿಸಿ, ಇತ್ತ ಕಾಡಿನ ದುರ್ಗಮ ಕಣಿವೆಯನ್ನು ಲಂಬಕೋನದಲ್ಲಿ ಇಳಿಯುತ್ತಾ, ಅಲ್ಲೇ ವಾಸಸ್ಥಾನವಾಗಿ ಗುರುತಿಸಿಕೊಂಡಿರುವ ಹಾವು ಹುಪ್ಪಟೆಗಳಿಂದ ರಕ್ಷಿಸಿಕೊಂಡು ದೇವಕಾರು ತಲುಪುವುದು ಸುಲಭವಲ್ಲ. ಆದರೆ ಆ ದಾರಿಯೂ ಲಭ್ಯವಿದ್ದು ಸಾಹಸ ಚಾರಣ ಇಷ್ಟ ಪಡುವವರು ಅಡಿಗಡಿಗೂ ರಿಸ್ಕ್ ತೆಗೆದುಕೊಳ್ಳುವವರು ಪ್ರಯತ್ನಿಸಬಹುದು. ಆದರೆ ಇದು ಅಡ್ವೈಸೆಬಲ್ ಅಲ್ಲ.

ಹಿಂದೊಮ್ಮೆ ಸ್ನೇಹಿತರೊಂದಿಗೆ ಹೀಗೆ ಚಲಿಸಿ, ಸರ್ಪದ ಬಾಯಿಗೆ ಸಿಕ್ಕು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯವಷ್ಟೆ ಅಲ್ಲ, ಹಾವು ಕಡಿದ ಕೈಯನ್ನು ಉಳಿಸಿಕೊಂಡಿದ್ದಕ್ಕೆ ಜೀವಂತ ಉದಾಹರಣೆ ನಾನೇ. ಇವತ್ತೇನಾದರೂ ನನ್ನ ಒಂದು ಕೈ ಉಳಿದಿದೆ ಎಂದರೆ ಅದಕ್ಕೆ ಆಗಿನ ವೈದ್ಯರು ನೀಡಿದ ಸಹಾಯ ಮತ್ತು ಬೆಂಬಲ. ಅಲ್ಲದೆ ಬೇರೆ ಮಾರ್ಗಗಳೆಲ್ಲ, ಅಣಶಿ ಹುಲಿ ಅಭಯಾರಣ್ಯವಾಗಿ ಈಗೀಗ ಸಂಪೂರ್ಣ ರಕ್ಷಿತಾರಣ್ಯವಾಗಿ ಬದಲಾದ ಮೇಲೆ ಹೆಚ್ಚಿರುವ ಹುಲಿ ಮತ್ತು ಚಿರತೆಗಳ ಕಾರಣದಿಂದ ಸುರಕ್ಷಿತ ಎನ್ನುವ ಯಾವ ಅಂಶವೂ ಗೋಚರವಾಗುವುದಿಲ್ಲ.

ಅಧಿಕೃತವಾಗಿ ಇದಕ್ಕೆಲ್ಲ ಅರಣ್ಯ ಇಲಾಖೆ ಅನುಮತಿ ಕೊಡುವುದೂ ಇಲ್ಲ. ಹಾಗಾಗಿ ಈ ರಸ್ತೆಯ ಸಲಹೆ ಸುಲಭದ್ದಲ್ಲ. ನಾನೂ ಮತ್ತೊಮ್ಮೆ ಈ ದಾರಿಗಳನ್ನು ಪ್ರಯತ್ನಿಸಿಯೂ ಇಲ್ಲ. ಇತ್ತ ಕದ್ರಾ ಮಾರ್ಗವಾಗಿ ಈ ಮೊದಲು ಸಾರ್ವಜನಿಕ ಸಾರಿಗೆ ಸಹಾಯವಾದರೂ ಇತ್ತು. ಈಗ ಅರಣ್ಯ ಇಲಾಖೆ ಆರಂಭದಲ್ಲೇ ಅಲ್ಲಿ ಗೇಟು ಅಳವಡಿಸಿ ಸಂಪೂರ್ಣ ನಿಷೇಧ ಹೇರಿದ್ದು, ಅತ್ತಲಿನ ಇಪ್ಪತ್ತು ಕಿ.ಮೀ. ಮೊದಲೇ ನಮ್ಮ ರಸ್ತೆ ಪಯಣ ನಿಂತುಬಿಡುತ್ತದೆ.

ಜೊತೆಗೆ ದೇವಕಾರಿನಲ್ಲೇ ಇದ್ದ ಒಂದೆರಡು ಕುಟುಂಬಗಳ ಸಹಕಾರದ ಲಭ್ಯತೆಯೂ ಈಗ ಸಿಗುವುದಿಲ್ಲ. ಎಲ್ಲ ಬೇರೆ ಕಡೆಗೆ ಶಿಫ್ಟಾಗಿದ್ದು ಅಲ್ಲಿದ್ದ ಕಾರ್ಯವಾಸಿ ಮಾತ್ರ ಸಂಚರಿಸುವುದರಿಂದ ದೇವಕಾರಿಗೆ ಮುಂಗಡ ಯೋಜನೆ ಮತ್ತು ವಾಹನ ಅನುಮತಿ, ಗೈಡು, ಕರೆದೊಯ್ಯುವ ಸ್ಥಳೀಯರ ಬೆಂಬಲ ಇಲ್ಲದೆ ಧಡಾರನೆ ವಾಹನದಲ್ಲಿ ಬಂದಿಳಿದು ಒಂದು ರೌಂಡ್ ಟ್ರೆಕ್ ಮಾಡೇ ಬಿಡೋಣ ಎನ್ನುವವರು ಅಲ್ಲೇ ಇರಿ.

ನಾನು ನೋಡಿದ ನೂರಾರು ಜಲಪಾತಗಳ ಪೈಕಿ ಇವತ್ತಿಗೂ ದೇವಲೋಕದ ಜಲಪಾತದಂತೆ ಇರುವ ದೇವಕಾರಿಗೆ ನೆತ್ತಿಯ ಮೇಲ್ಗಡೆ ಹೋಗಿ ನಿಲ್ಲುವ ಮತ್ತೊಂದು ದಾರಿ ಕಾನೂರು ಕಡೆಯಿಂದ ಇದ್ದೇ ಇದೆ. ಆದರೆ ಬೀಳುವ ನೀರ ದಭದಭೆಯ ನೆತ್ತಿಗೆ ನಿಂತು ನೋಡುವ ಜಲಪಾತದ ನೋಟವೂ ಒಂದು ದೃಶ್ಯ ವೈಭವವಾ...? ಅದಕ್ಕಿಂತಲೂ ಆ ಚಿಮ್ಮುವ ಒಂದಷ್ಟು ನೀರ ನೋಟದ ಬದಲಿಗೆ ಅಲ್ಲಿಗೆಲ್ಲ ಹೋಗದಿರುವುದೇ ಕ್ಷೇಮ. ಹೊರತಾಗಿ ನೇರ ದೃಶ್ಯ ಮತ್ತು ಸ್ಥಳ ಭೇಟಿಗೆ ಸೂಕ್ತ ತಯಾರಿಗೂ ಸಮಯ ವ್ಯಯಿಸಿದರೂ ಜೀವಮಾನದಲ್ಲಿ ಭೇಟಿ ಕೊಡಲೇಬೇಕಾದ

ದೇವ ಜಲಪಾತ ಇದು. ಕಳೆದ ಎರಡ್ಮೂರು ವರ್ಷಗಳ ಮಳೆಗಾಲದ ವಿಪರೀತ ಭೂ ಕುಸಿತ, ಬೆಟ್ಟಗಳ ಪಾರ್ಶ್ವಗಳು ಜರಿದು ಹೋದ, ಅಂಚುಗಳು ಕುಸಿದ ವಿದ್ಯಮಾನದ ನಡುವೆಯೂ ಎರಡೂ ಪಾರ್ಶ್ವಗಳೂ ಸೇರಿದಂತೆ ಯಾವ ಕಡೆಯಿಂದಲೂ ಮತ್ತು ನೀರು ಹರಿದು ಬರುವ ಎರಡ್ಮೂರು ಕಿ.ಮೀ. ದೂರದ ಇಕ್ಕೆಲಗಳೂ ಸುರಕ್ಷಿತವಾಗೇ ಉಳಿದಿದ್ದು ಹೊಸ ಭೇಟಿ ಸಮಯ ದಲ್ಲಿ ನೆಮ್ಮದಿ ತಂದಿದ್ದೂ ಹೌದು.

ಸಹಜ ಸೌಂದರ್ಯದ ದೇವಕಾರು, ಅಗತ್ಯದ ಮತ್ತು ಮುಂಚಿತ ತಯಾರಿ ಹಾಗೂ ಅನುಮತಿ, ಪ್ರಾಥಮಿಕ ಮೂಲಭೂತ ಸೌಲಭ್ಯ ಇವೆಲ್ಲವನ್ನೂ ನೀವೇ ಹೊರಲು ಸಿದ್ಧರಿದ್ದರೆ ಮಾತ್ರ. ಅದನ್ನೂ ಮಾಡದಿದ್ದರೆ ಅಲೆಮಾರಿಗಳ್ಯಾಕೆ ಆಗಬೇಕು, ಅಲ್ಲವೇ...? (ಲೇಖಕರು ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net