ರಾಜಕಾರಣದಲ್ಲಿ ಕಾಡುವ ಕೊರತೆ

5-681266bd80e94
Published on
ಕೆಲವು ತಿಂಗಳಿಂದ ರಾಜಕಾರಣದಲ್ಲಿ ದೊಡ್ಡ ಕೊರತೆಯೊಂದು ಕಾಡುತ್ತಿದೆ. ಒಂದು ರೀತಿಯ ಶೂನ್ಯ. ಆ ಶೂನ್ಯ ಆವರಿಸಿರುವುದು ಎಸ್.ಎಂ.ಕೃಷ್ಣ ಅವರ ಅಗಲುವಿಕೆಯಿಂದ. ಅವರು ವಿಧಿವಶರಾದಾಗಿನಿಂದಲೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಏನೋ ಒಂದು ಖಾಲಿತನ ಕಾಡುತ್ತಿದೆ. ಶಾಸಕರಾಗಿ, ಸಂಸದರಾಗಿ, ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದ ಅವರು ಅನುಭವದ ಖಜಾನೆ. ತಾವು ಬೆಳೆಯುವುದರ ಜೊತೆಗೆ ಇತರರೂ ಬೆಳೆಯಲಿ ಎಂಬ ಕಾರಣಕ್ಕೆ ಯುವ ರಾಜಕಾರಣಿಗಳನ್ನು ಸದಾ ಪೋ›ತ್ಸಾಹಿಸುತ್ತಿದ್ದರು. ನಾನು ಜನಸೇವಾ ಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬರಲು ಅವರ ಆಶೀರ್ವಾದ, ಹಾರೈಕೆ, ಮಾರ್ಗದರ್ಶನ ಬಹಳ ಕೆಲಸ ಮಾಡಿದೆ.

ವರ್ಷಕ್ಕೆ ಎರಡು ದಿನ, ಅಂದರೆ ಕೃಷ್ಣ ಅವರ ಹುಟ್ಟುಹಬ್ಬದ ದಿನ ಹಾಗೂ ನನ್ನ ಹುಟ್ಟುಹಬ್ಬದ ದಿನ ತಪ್ಪದೇ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ. ಇದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬದಂದು ಅವರು ನಮ್ಮ ಜೊತೆಗಿಲ್ಲ. ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನಂತೆಯೇ ಕರ್ನಾಟಕದಾದ್ಯಂತ ಅನೇಕ ಕನ್ನಡಿಗರು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ ಅವರನ್ನು ಅಜಾತಶತ್ರು, ಡಿಗ್ನಿಫೈಡ್ ರಾಜಕಾರಣಿ ಎಂದೇ ಕರೆಯಲಾಗುತ್ತಿತ್ತು. ಅವರ ಬದುಕಿನ ಶೈಲಿ, ಮಾತು ಬಹಳ ಸ್ಟಾ್ಯಂಡರ್ಡ್ ಎಂದು ತೋರಿದರೂ, ಅವರಷ್ಟು ಜನಮಾನಸಕ್ಕೆ ಹತ್ತಿರವಾದವರು ಬೇರೊಬ್ಬರಿಲ್ಲ.

ಗುರು-ಶಿಷ್ಯ ಸಂಬಂಧ: ಎಸ್.ಎಂ.ಕೃಷ್ಣ ಅನೇಕ ರಾಜಕಾರಣಿಗಳಿಗೆ ಗುರುವಾಗಿದ್ದರು. ಗುರು ಎಂದರೆ ಕೈ ಹಿಡಿದು ಮುನ್ನಡೆಸುವವರು. ಆದರೆ ರಾಜಕಾರಣದಲ್ಲಿ ಇದು ಸುಲಭವಲ್ಲ. ಇಲ್ಲಿ ಸ್ಪರ್ಧೆ, ಅಸೂಯೆ, ದ್ವೇಷವೇ ಹೆಚ್ಚಿರುತ್ತದೆ ಎಂಬುದು ಜನರ ಸಾಮಾನ್ಯ ಅಭಿಮತ. ಸ್ಪರ್ಧೆ ಇರುವುದು ನಿಜವಾದರೂ ಅದು ಆರೋಗ್ಯಕರವಾಗಿರಬೇಕು ಎಂಬುದು ಕೃಷ್ಣ ಅವರ ಅಭಿಪ್ರಾಯವಾಗಿತ್ತು. ತಮ್ಮ ಕಿರಿಯರನ್ನು ಹಾಗೂ ತಮ್ಮ ಸಮಕಾಲೀನರಿಗೆ ಬೆಳೆಯಲು ಸಹಾಯಹಸ್ತ ಚಾಚಲು ಅವರಿಗೆ ಯಾವುದೇ ಸ್ಪರ್ಧೆ ಅಡ್ಡಿ ಮಾಡಿರಲಿಲ್ಲ. ತಮ್ಮ ಜೊತೆಗೆ ಎಲ್ಲರನ್ನೂ ಒಂದಾಗಿ ಕರೆದೊಯ್ಯುವ ಮನೋಭಾವದಿಂದಲೇ ಬೇಗ ಎಲ್ಲರಿಗೂ ಆಪ್ತರಾಗಿಬಿಟ್ಟಿದ್ದರು. ಪ್ರತಿಪಕ್ಷಗಳ ನಾಯಕರು ಕೂಡ ಅವರನ್ನು ಮೆಚ್ಚಿಕೊಳ್ಳದೇ ಇರುತ್ತಿರಲಿಲ್ಲ.

ನನ್ನ ಹಾಗೂ ಕೃಷ್ಣ ಅವರ ಸಂಬಂಧ ಗುರು-ಶಿಷ್ಯ ಬಾಂಧವ್ಯಕ್ಕೂ ಒಂದು ಹಂತ ಮೇಲಕ್ಕೆ ಏರಿತ್ತು. ಗುರುವಾಗಿ, ಆತ್ಮೀಯ ಸ್ನೇಹಿತನಾಗಿ, ಮಾರ್ಗದರ್ಶಕರಾಗಿ, ಕಿವಿ ಹಿಂಡುವ ತಂದೆಯಾಗಿ, ದಾರಿ ತೋರುವ ಅಣ್ಣನಾಗಿ ಹೀಗೆ ಹಲವು ಆಯಾಮಗಳಲ್ಲಿ ಅವರು ನನಗೆ ಮಾರ್ಗದರ್ಶನ ಮಾಡಿದ್ದರು. ಕೃಷ್ಣ ಅವರ ತಂದೆ ಎಸ್.ಸಿ.ಮಲ್ಲಯ್ಯ ಆಗಿನ ಕಾಲದ ಖ್ಯಾತ ಸಮಾಜ ಸುಧಾರಕರು. 1934ರಲ್ಲಿ ಗಾಂಧೀಜಿ ಮೈಸೂರು ರಾಜ್ಯಕ್ಕೆ ಬಂದಾಗ, ಮಲ್ಲಯ್ಯನವರ ಮನೆಗೆ ಭೇಟಿ ನೀಡಿದ್ದರು. ‘ಹರಿಜನ ಫಂಡ್’ಗೆ ದಾನ ಮಾಡಿ ಎಂದು ಗಾಂಧೀಜಿ ಕೇಳಿದರು. ಮಲ್ಲಯ್ಯನವರು ತಮ್ಮ ಪುತ್ರ, ಬಾಲಕ ಕೃಷ್ಣನ ಕೈಯಿಂದ ಎರಡು ರೂಪಾಯಿ ಕಾಣಿಕೆ ನೀಡಲು ಮುಂದೆ ಬಂದಾಗ, ‘ಬಾಲಕನ ಕಿವಿ ಓಲೆ ಸಾಕು’ ಎಂದು ಗಾಂಧೀಜಿ ತಮಾಷೆಯಾಗಿ ಹೇಳಿದರು. ಮಲ್ಲಯ್ಯನವರು ಮಗನ ಕಿವಿಯಿಂದ ಓಲೆ ತೆಗೆದು ಗಾಂಧೀಜಿಯ ಕೈಯಲ್ಲಿ ಇಟ್ಟುಬಿಟ್ಟರು. ಅದನ್ನು ನೋಡಿ ಗಾಂಧೀಜಿ ಅಚ್ಚರಿಗೊಳಗಾಗಿ, ಬಾಲಕ ಕೃಷ್ಣ ಅವರನ್ನು ಪ್ರೀತಿಯಿಂದ ಹರಸಿದ್ದರು.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೀಕರ ಬರಗಾಲ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿವಾದದಿಂದ ಸರ್ಕಾರ ನಡೆಸುವುದು ಸವಾಲಾಗಿತ್ತು. ಅವರಿಗೆ ಇಷ್ಟೆಲ್ಲ ಸಮಸ್ಯೆ ಪರಿಹರಿಸುವುದು ಸಾಧ್ಯವಿಲ್ಲವೆಂದೇ ಅನೇಕರು ಟೀಕೆ ಮಾಡಿದ್ದರು. ಆದರೆ ಛಲ ಬಿಡದೆ ಅವರು ಎಲ್ಲ ಸಮಸ್ಯೆಗಳನ್ನೂ ನಿಭಾಯಿಸಿದರು. ನಟಸಾರ್ವಭೌಮ ಡಾ.ರಾಜಕುಮಾರ್ ಅಪಹರಣ ಕೃಷ್ಣ ಅವರ ನಿದ್ದೆಗೆಡಿಸಿದ್ದು ನಿಜ. ಆಗಲೂ ತಾಳ್ಮೆ ಕಳೆದುಕೊಳ್ಳದೆ ಜಾಣ ರಾಜಕಾರಣಿಯಾಗಿ ಕೆಲಸ ಮಾಡಿದ್ದರು. ಆ ಮೂಲಕ ‘ಟ್ರಬಲ್ ಶೂಟರ್’ ಎಂಬ ಖ್ಯಾತಿ ಪಡೆದರು. ನಾಡಪ್ರಭು ಕೆಂಪೇಗೌಡರು ನಿರ್ವಿುಸಿದ ಬೆಂಗಳೂರಿಗೆ ಹೈಟೆಕ್ ಸ್ಪರ್ಶ ನೀಡುವಲ್ಲಿನ ಅವರ ಕೊಡುಗೆಯನ್ನು ನಾವು ಯಾವಾಗಲೂ ಸ್ಮರಿಸುತ್ತೇವೆ.

ರಾಜಕೀಯಕ್ಕೆ ಪದಾರ್ಪಣೆ: ನಾನು ರಾಜಕೀಯಕ್ಕೆ ಪದಾರ್ಪಣೆ ಮಾಡುವುದರಲ್ಲಿ ಎಸ್.ಎಂ. ಕೃಷ್ಣ ಅವರು ಬಹಳ ಮುತುವರ್ಜಿ ವಹಿಸಿದ್ದರು. ನನ್ನಲ್ಲಿ ಒಬ್ಬ ರಾಜಕಾರಣಿ ಇದ್ದಾನೆ ಎಂಬುದನ್ನು ಅವರು ಗಮನಿಸಿದ್ದರು. 2004 ಹಾಗೂ 2009ರ ಲೋಕಸಭೆ ಚುನಾವಣೆಗಳಲ್ಲಿ ನನಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡಿದರೂ ಅದು ಕೈಗೂಡಲಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿ, ಆಶೀರ್ವದಿಸಿ ಶಾಸಕನಾಗಿ ಮಾಡಿದರು. ಆ ಕ್ಷಣದಿಂದ ರಾಜಕೀಯವೇ ನನ್ನ ಬದುಕಾಯಿತು. ಆ ಪ್ರಮುಖ ಮೆಟ್ಟಿಲು ಹತ್ತಲು ಕೃಷ್ಣ ಅವರು ನನಗಾಗಿ ಪಟ್ಟ ಶ್ರಮವನ್ನು ಸದಾ ಸ್ಮರಿಸುತ್ತೇನೆ.

ಅವರು ವಿದೇಶಾಂಗ ಸಚಿವರಾಗಿದ್ದಾಗ ಶ್ರೀಲಂಕಾದ ರಾಯಭಾರಿಯಾಗುವ ಅವಕಾಶ ಮಾಡಿಕೊಟ್ಟಿದ್ದರು. ಒಮ್ಮೆ ಕಾರ್ಯನಿಮಿತ್ತ ದೆಹಲಿಗೆ ಭೇಟಿ ನೀಡಿದ್ದಾಗ ಅವರ ಮಗಳು ಶಾಂಭವಿ ಅಕ್ಕ ಜೊತೆಗಿದ್ದರು. ಅವರ ಮಗಳ ಜೊತೆ ನನ್ನನ್ನೂ ಸ್ವಂತ ಮಗನಂತೆ ದೆಹಲಿಯ ಹೋಟೆಲ್​ಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರು. ವಿದೇಶಾಂಗ ಸಚಿವರೆನ್ನುವ ಬಿಗುಮಾನವಿಲ್ಲದೆ ನನ್ನನ್ನು ಮನೆಮಗನಂತೆ ನೋಡಿಕೊಂಡರು. ಅದನ್ನು ನೆನಪಿಸಿಕೊಂಡರೆ ಈಗಲೂ ಕಣ್ಣೀರು ಬರುತ್ತದೆ.

2024ರ ಲೋಕಸಭೆ ಚುನಾವಣೆಯ ವೇಳೆ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರು. ಆದರೂ ಪ್ರತಿದಿನ ಪ್ರೇಮಮ್ಮ ಅವರ ಬಳಿ, ‘ಸುಧಾಕರ್​ನ ಚುನಾವಣೆ ಹೇಗೆ ನಡೆಯುತ್ತಿದೆ?’ ಎಂದು ಕೇಳುತ್ತಿದ್ದರಂತೆ. ಫಲಿತಾಂಶದ ದಿನವೂ ‘ಸುಧಾಕರ್​ನ ಫಲಿತಾಂಶ ಏನಾಯ್ತು?’ ಎಂದು ಕೇಳಿದ್ದರಂತೆ. ನನ್ನ ಬಗ್ಗೆ ಅವರಿಗೆ ಅಷ್ಟು ಕಾಳಜಿ ಇತ್ತು.

ಕೋವಿಡ್ ನೆನಪು: ಕೋವಿಡ್ ಸಮಯ ನಮಗೆಲ್ಲರಿಗೂ ಕ್ಲಿಷ್ಟಕರವಾಗಿತ್ತು. ಅಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ ಯಾರೂ ಎಂದೂ ಅನುಭವಿಸದ ತುಮುಲಕ್ಕೆ ಒಳಗಾಗಿದ್ದೆ. ಒಂದು ಕಡೆ ಇಡೀ ಆರೋಗ್ಯ ವ್ಯವಸ್ಥೆಗೆ ಆಘಾತವಾಗಿದ್ದರೆ, ಮತ್ತೊಂದು ಕಡೆ ಅನೇಕರು ಈ ಮಾರಣಾಂತಿಕ ರೋಗದಿಂದ ಸಾಯುತ್ತಿದ್ದರು. ಆದರೂ ವೇಗದ ಮೂಲಸೌಕರ್ಯ ಸುಧಾರಣೆಯಿಂದ ಅನೇಕ ಸಾವುಗಳನ್ನು ತಪ್ಪಿಸಿದ್ದೆವು. ಈ ಸಂದರ್ಭ ಒಮ್ಮೆ ಕೃಷ್ಣ ಅವರನ್ನು ಭೇಟಿ ಮಾಡಿದ್ದೆ. ಜನರ ಆರೋಗ್ಯ ರಕ್ಷಣೆಗಾಗಿ ಇನ್ನಷ್ಟು ಶ್ರಮಿಸುವಂತೆ ಅವರು ನನ್ನನ್ನು ಹುರಿದುಂಬಿಸಿದ್ದರು.

ಎಸ್.ಎಂ.ಕೃಷ್ಣ ಅವರು ತೀವ್ರ ಅನಾರೋಗ್ಯಕ್ಕೊಳಗಾದಾಗ, ತಮಿಳುನಾಡಿನ ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದೆ. ಮತ್ತೆ ಅವರನ್ನು ಭೇಟಿ ಮಾಡಲು ಹೋದಾಗ ಹಾಸಿಗೆಯಲ್ಲೇ ಗುರುತು ಹಿಡಿದರು. ಮರಳುವಾಗ ಕೈ ಎತ್ತಿ ಹಾರೈಸಿದ್ದರು. ಆ ಕೊನೆಯ ಭೇಟಿ ಯಾವಾಗಲೂ ನೆನಪಾಗುತ್ತಿರುತ್ತದೆ. ಇಂದು ಅವರು ಇಲ್ಲದ ಬೇಸರ ನನ್ನನ್ನು ಕಾಡುತ್ತಿದೆ. ನನ್ನಂತಹ ಅದೆಷ್ಟೋ ರಾಜಕಾರಣಿಗಳಿಗೆ ಹೀಗೆಯೇ ಅನ್ನಿಸುತ್ತಿರಬಹುದು. ಆದರೂ, ಅವರ ಸಂದೇಶ, ಕಾರ್ಯಗಳು ಎಂದೆಂದಿಗೂ ಪ್ರೇರಣಾದಾಯಿ. (ಲೇಖಕರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net