

ಗೋವನ್ನು ಕಾಮಧೇನು ಎನ್ನುತ್ತಾರೆ. ಸಮುದ್ರ ಮಂಥನದ ಸಂದರ್ಭದಲ್ಲಿ ಸುರರು ಮತ್ತು ಅಸುರರು ವಾಸುಕಿಯನ್ನು ಹಗ್ಗವನ್ನಾಗಿಸಿ, ಮಂಥರಾ ಪರ್ವತವನ್ನು ಬಳಸಿ ಕ್ಷೀರಸಾಗರವನ್ನು ಕಡೆದಾಗ ಅಮೃತಕ್ಕಿಂತಲೂ ಮೊದಲು ಉದ್ಭವಿಸಿದ ದಿವ್ಯ ಶಕ್ತಿಗಳಲ್ಲಿ ಕಾಮಧೇನುವೂ (ಗೋಮಾತೆ) ಒಂದು. ಈ ಗೋ-ಮಾತೆಯು ಭೂಲೋಕದಲ್ಲಿ ಮನುಕುಲ ಅಳಿವಿನಂಚಿನಲ್ಲಿದ್ದಾಗ ತನ್ನ ಮಗಳನ್ನು ದೇವಲೋಕದಲ್ಲಿ ಬಿಟ್ಟು ಭೂಮಿಗೆ ಬಂದು ಮನುಕುಲವನ್ನು ಸಲಹಿದ ಬಗ್ಗೆ ಕತೆಗಳಿವೆ. ತೆಂಗಿನ ಮರ ವನ್ನು ಹೇಗೆ ಕಲ್ಪವೃಕ್ಷವೆಂದು ಕರೆಯುತ್ತೇವೆಯೋ ಹಾಗೆಯೇ ಗೋವನ್ನು ಕಾಮಧೇನು ಎಂದು ಕರೆಯುವುದರಲ್ಲಿ ಅಕ್ಷರಶಃ ತಪ್ಪಿಲ್ಲ.
‘ಸರ್ವ ದೇವಃ ಸ್ಥಿತದೇಹೆ| ಸರ್ವದೇವಮಯಿ ಹೀಃ ಗೌಃ’ ಅಂದರೆ ಸರ್ವ ದೇವರುಗಳು ನೆಲೆಸಿರುವಂತಹ ಗೋವುಗಳ ಅನುಗ್ರಹದಿಂದ ಮನುಷ್ಯನಿಗೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು ಲಭಿಸುತ್ತವೆ.
ಗೋವನ್ನು ಆರೈಕೆ ಮಾಡುವುದರಿಂದ ನಮ್ಮ ಕೆಲಸವನ್ನು ಅರಿತುಕೊಳ್ಳಲು ಹಾಗೂ ನಮ್ಮ ಕರ್ತವ್ಯವನ್ನು ತಿಳಿದುಕೊಳ್ಳಲು ಸಹಕಾರವಾಗುತ್ತದೆ. ಅಹಿಂಸೆಯ ಪ್ರತಿರೂಪವಾಗಿರುವ ಗೋವಿನಿಂದ ಸಾಕಷ್ಟು ವಿಷಯವನ್ನು ನಾವು ಕಲಿಯಬಹುದಾಗಿದೆ. ಧರಣಿ ಮಂಡಲ ಮಧ್ಯದೊಳಗೆ ಎಂಬ ಗೋವಿನ ಕುರಿತಾದ ಜನಪದ ಹಾಡು ಇದಕ್ಕೆ ನಿದರ್ಶನ. ಆ ಹಾಡನ್ನು ಪೂರ್ಣವಾಗಿ ಕೇಳಿದಾಗ ಅಶ್ರುಧಾರೆ ಬಾರದೇ ಇರದು. ಗೋವು ನಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಹಾಲು, ಸೆಗಣಿ ಗೊಬ್ಬರವನ್ನು ಮಾಡಿ ಸಂಪತ್ತನ್ನು ಗಳಿಸಬಹುದಾಗಿದೆ. ಈ ಸಂಪತ್ತಿನಿಂದ ನಮ್ಮೆಲ್ಲ ಆಸೆಗಳನ್ನು ಪೂರೈಸಬಹುದು. ಆದರೆ ಇಷ್ಟೆಲ್ಲ ಪರೋಪಕಾರ ಮಾಡುವ ಗೋವು ಯಾವುದೇ ಪ್ರತಿಫಲಾಪೇಕ್ಷೆ, ಆಸೆಯನ್ನು ತೋರದಿರುವ ಗುಣ ನಮಗೆಲ್ಲ ಮಾದರಿಯಾಗುವಂಥದ್ದು. ಗೋವಿನಲ್ಲಿ ನಾವೆಲ್ಲ ದೇವರನ್ನು ಕಾಣುತ್ತೇವೆ. ಗೃಹ ಪ್ರವೇಶ, ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಮಾತ್ರವಲ್ಲದೆ ನಿತ್ಯವೂ ಅವುಗಳ ಸೇವೆ ಮಾಡುವವರಿಗೆ ಖಂಡಿತವಾಗಿಯೂ ಮೋಕ್ಷ ಪ್ರಾಪ್ತಿಯಾಗುವುದು ಎಂಬುದು ಅನಿಸಿಕೆ ಇದೆ. ಯಾಕೆಂದರೆ ಗೋವಿನಲ್ಲಿ ಮುಕ್ಕೋಟಿ ದೇವರಿದ್ದಾರೆ. ಗೋವನ್ನು ಆರೈಕೆ ಮಾಡುವುದರಿಂದ ಮುಕ್ಕೋಟಿ ದೇವರನ್ನು ಪೂಜಿಸಿದಂತಾಗುವುದು.
ನಾವು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿ ಆ ಮೂಲಕ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ, ಮಾಹಿತಿ, ಪೂರಕ ತರಬೇತಿ ನೀಡುವ, ಆರ್ಥಿಕ ಸೌಲಭ್ಯ ಒದಗಿಸುವ ಕೆಲಸವನ್ನು ಹಮ್ಮಿಕೊಂಡೆವು. ಗ್ರಾಮೀಣರು ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಬೇಕು, ಜೀವನ ಮಟ್ಟ ಸುಧಾರಿಸಬೇಕೆಂಬುದು ನಮ್ಮ ಮುಖ್ಯ ಆಶಯವಾಗಿತ್ತು. ಅವರಿಗೆ ಹೊಟ್ಟೆಗೆ ಆಹಾರ ಒದಗಿಸಿದರೆ ಅದು ಖಾಲಿಯಾಗುವವರೆಗೆ ಆಯಿತು. ಬದಲಾಗಿ ಆಹಾರ ಉತ್ಪಾದನೆಗೆ ದಾರಿ ತೋರಿದರೆ ಜೀವಮಾನವಿಡೀ ತಮ್ಮ ಆಹಾರವನ್ನು ತಾವೇ ಗಳಿಸಿಕೊಳ್ಳಲು ಸಾಧ್ಯ ಎಂದು ನನಗನಿಸಿತು. ಆಗ ಗ್ರಾಮಾಭಿವೃದ್ಧಿ ಯೋಜನೆ ಆರಂಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಪ್ರಯೋಗಾರ್ಥವಾಗಿ ಅನುಷ್ಠಾನ ಮಾಡಿದೆವು. ಆಗ ಕ್ಷೇತ್ರದ ವತಿಯಿಂದ ಹಲವು ಕುಟುಂಬಗಳಿಗೆ ಗೋವನ್ನು ನೀಡಲಾಯಿತು ಮತ್ತು ಪಶುಸಾಕಣೆಯ ಆಸಕ್ತರಿಗಾಗಿ ಹಸುಗಳನ್ನು ಕೊಂಡುಕೊಳ್ಳಲು ಬ್ಯಾಂಕ್ಗಳ ಜತೆ ಮಾತನಾಡಿ ಸಾಲಸೌಲಭ್ಯ ಒದಗಿಸಿಕೊಡಲಾಯಿತು. ಹೀಗೆ ಆ ಸಂದರ್ಭದಲ್ಲಿ ಸಾಕಷ್ಟು ಜನರು ಪಶುಸಾಕಣೆ ಪ್ರಾರಂಭಿಸಿದರು.
ಆ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿನ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಭಾರತದ ಕ್ಷೀರಕ್ರಾಂತಿಯ ಜನಕ ಕೇರಳ ಮೂಲದ ವರ್ಗೀಸ್ ಕುರಿಯನ್ ಅಲ್ಲಲ್ಲಿ ಹಾಲಿನ ಡಿಪೋಗಳನ್ನು ತೆರೆಯುತ್ತಿದ್ದರು. ಇದೂ ನಮ್ಮ ಯೋಜನೆಗೆ ಮತ್ತಷ್ಟು ಸಹಕಾರಿಯಾಯಿತು. ಭಾರತೀಯ ಕ್ಷೀರ ಅಭಿವೃದ್ಧಿ ಸಮಿತಿಯ ಸ್ಥಾಪಕ ಮತ್ತು ಮೊದಲ ಚೇರ್ಮನ್ ಆಗಿದ್ದ ಕುರಿಯನ್ ಭಾರತದಲ್ಲಿ ಕ್ಷೀರಕ್ರಾಂತಿಯನ್ನೇ ಮಾಡಿ ಅತಿ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದಿಸುವ ದೇಶ ಎಂದು ಕರೆಸಿಕೊಳ್ಳಲು ಕಾರಣಕರ್ತರಾದವರು. 1970ರ ಮೊದಲು ಭಾರತದಲ್ಲಿ ಹಾಲಿನ ತತ್ವಾರವಿತ್ತು. ಕುರಿಯನ್ ‘ಆಪರೇಷನ್ ಫ್ಲಡ್’ ಆರಂಭಿಸಿದರು. ಪರಿಣಾಮವಾಗಿ ಭಾರತ ಹಾಲಿನ ಕೊರತೆಯಿರುವ ರಾಷ್ಟ್ರದಿಂದ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಪರಿವರ್ತನೆಗೊಂಡಿತು. ಮುಖ್ಯವಾಗಿ ಪಶುಸಂಗೋಪನೆಯು ಭಾರತದ ಅತಿ ದೊಡ್ಡ ಸ್ವಯಂ-ಸಮರ್ಥ ಗ್ರಾಮೀಣ ಉದ್ಯೋಗ ಉತ್ಪಾದಕವನ್ನಾಗಿ ಮಾಡಿದೆ. ಇಂದಿನ ದಿನಗಳಲ್ಲಿ ಬಹಳಷ್ಟು ಜನ ಪಶುಸಂಗೋಪನೆ ಮಾಡುತ್ತ ಸ್ವಉದ್ಯೋಗಿಗಳಾಗಿದ್ದಾರೆ. ಕೃಷಿಕರಲ್ಲದವರೂ ಹಸು ಸಾಕಿ ಹಾಲನ್ನು ಡೇರಿಗೆ ಹಾಕಿ ಜೀವನ ನಡೆಸುತ್ತಾರೆ. ಅದೆಷ್ಟೋ ಜನರು ಹಾಲಿನ ಉತ್ಪಾದನೆಯಿಂದ ಮಕ್ಕಳನ್ನು ಓದಿಸಿದ್ದಾರೆ, ಮನೆ ಕಟ್ಟಿದ್ದಾರೆ, ಮಗಳ ಮದುವೆ ಮಾಡಿದ್ದಾರೆ. ಹೀಗೆ ಸಾಕಷ್ಟು ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ.
‘ಹುಲ್ಲು, ಹಿಂಡಿ, ಬೂಸಾ ಹಾಕಿ ಗೋವನ್ನು ಸಾಕುತ್ತಿದ್ದೇವೆ’ ಎಂದು ನಾವೆಲ್ಲ ಭಾವಿಸಿದ್ದೇವೆ. ನಿಜವಾಗಿ ನಮ್ಮ ಭಾವನೆ ತಪ್ಪು. ಯಾಕೆಂದರೆ ಆ ಗೋವಿನ ದೆಸೆಯಿಂದಾಗಿ ನಾವೆಲ್ಲ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಅದರ ಹಾಲನ್ನು ಕುಡಿದು ಆರೋಗ್ಯವಾಗಿದ್ದೇವೆ. ಡೇರಿಗೆ ಹಾಕುವ ಹಾಲಿನ ಹಣದಿಂದ ಮನೆಗೆ ದಿನಸಿ, ತರಕಾರಿ, ಮಕ್ಕಳ ಫೀಸು, ಕರೆಂಟ್ ಬಿಲ್ ಹೀಗೆ ಅನೇಕ ತರಹದ ವ್ಯವಹಾರ ಮಾಡುತ್ತೇವೆ. ಆದರೆ ಆ ಮೂಕ ಪ್ರಾಣಿ ಒಂದು ದಿನವೂ ‘ನನಗೆ ಇಂಥದ್ದೇ ಆಹಾರ ಕೊಡು, ಹೀಗೆಯೇ ನೋಡಿಕೋ, ನನ್ನ ಹಣದಿಂದ ನೀನು ಜೀವನ ನಡೆಸುತ್ತಿದ್ದೀಯ’ ಎಂದಿಲ್ಲ, ಅಲ್ಲವೇ? ಕೊಟ್ಟದ್ದನ್ನು ತಿಂದು ಪರೋಪಕಾರಿಯಾಗಿ ಬಾಳುವ ಆ ಗೋವಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಇತ್ತೀಚೆಗೆ ನಾನು ಬೀದರ್ನಲ್ಲಿ ನಡೆದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಹಾಲು ಒಕ್ಕೂಟ (ನಿ), ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.)ದ ಸಂಯುಕ್ತಾಶ್ರಯದಲ್ಲಿ ಹಾಲು ಉತ್ಪಾದಕರ ಸಂಘಗಳಿಗೆ ನೀಡಿದ ಮೂಲಭೂತ ಸೌಕರ್ಯಗಳ ಉದ್ಘಾಟನಾ ಸಮಾರಂಭ ಮತ್ತು ಹೈನುಗಾರರ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಸಾಕಷ್ಟು ರೈತರು ಭಾಗವಹಿಸಿದ್ದರು. ಈ ಪ್ರದೇಶದಲ್ಲಿ ಮುಚ್ಚಿದ್ದ ಸುಮಾರು 80ಕ್ಕೂ ಹೆಚ್ಚು ಹಾಲು ಉತ್ಪಾದಕ ಸಂಘಗಳನ್ನು ಮರು ಸ್ಥಾಪಿಸಿ, ಮೂಲಭೂತ ಸೌಲಭ್ಯ ಕಲ್ಪಿಸಿ ಹಾಲು ಉತ್ಪಾದನೆಗೆ ಪ್ರಾಶಸ್ತ್ಯ ನೀಡಲಾಯಿತು. ಅದರಿಂದಾಗಿ ಹಾಲು ಉತ್ಪಾದನೆಯಲ್ಲಿ ಗಣನೀಯ ಏರಿಕೆ ಕಂಡಿದೆ. ದನದ ಹಾಲು ಮಾತ್ರವಲ್ಲದೆ ಎಮ್ಮೆಯ ಹಾಲನ್ನೂ ಉತ್ಪಾದಿಸುವುದರಿಂದ ಹೆಚ್ಚು ಆದಾಯ ಗಳಿಸುವ ಜನರಿದ್ದಾರೆ. ಈ ಯೋಜನೆ ಪ್ರಾರಂಭವಾಗುವುದರ ಮೊದಲು ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರತಿನಿತ್ಯ 18 ಸಾವಿರ ಲೀಟರ್ ಮಾತ್ರ ಇತ್ತು. ಪಶುಸಂಗೋಪನೆಯ ಉತ್ತೇಜನೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಗರಿಷ್ಠ 60 ಸಾವಿರ ಲೀಟರ್ಗೆ ಏರಿಕೆ ಕಂಡಿದ್ದು ಕೆಲವೇ ತಿಂಗಳುಗಳಲ್ಲಿ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಸಂಗ್ರಹದ ಗುರಿ ತಲುಪುವ ಹಂತದಲ್ಲಿದೆ. ಗೋವುಗಳನ್ನು ಪ್ರೀತಿಯಿಂದ ಸಾಕಿದಾಗ ಅವು ಕೂಡ ಅಷ್ಟೇ ಪ್ರೀತಿಯಿಂದ ನಮ್ಮ ಆರೋಗ್ಯ, ನೆಮ್ಮದಿ, ಸಂಪತ್ತು ವೃದ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.
ಪಶುಸಂಗೋಪನೆ ಅಥವಾ ಹಾಲಿನ ಉತ್ಪಾದನೆ ಇಂದು ನಿನ್ನೆಯದಲ್ಲ. ಪುರಾಣ ಕಾಲದಿಂದಲೂ ಗೋಪಾಲನೆ ನಮ್ಮಲ್ಲಿತ್ತು. ಭಗವಾನ್ ಶ್ರೀಕೃಷ್ಣನು ಸ್ವತಃ ಗೋಪಾಲಕನಾಗಿದ್ದ. ಗೋಪಾಲನಾಗಿ ಶ್ರೀಕೃಷ್ಣನು ಆಡಿದ ಆಟ-ತುಂಟಾಟ, ಸಾಹಸದ ಕತೆಗಳನ್ನು ಪುರಾಣಗಳಲ್ಲಿ ಓದಿದ್ದೇವೆ. ಆತ ಕೊಳಲನ್ನು ಊದತೊಡಗಿದನೆಂದರೆ ಎಲ್ಲಾ ಗೋವುಗಳು ಆತನ ಸುತ್ತ ಸೇರುತ್ತಿದ್ದವಂತೆ. ಗೋವುಗಳಿಗೆ ಆತನೆಂದರೆ ಎಷ್ಟು ಅಕ್ಕರೆಯೋ ಕೃಷ್ಣನಿಗೂ ಗೋವುಗಳೆಂದರೆ ಅಷ್ಟೇ ಪ್ರೀತಿ. ಋಷಿ, ಮುನಿಗಳು ಕೂಡ ಗೋಪಾಲನೆ ಮಾಡುತ್ತಿದ್ದರು. ತಮ್ಮ ದಿನ ನಿತ್ಯದ ಕಾರ್ಯಗಳಿಗೆ, ಹೋಮ ಹವನಗಳಿಗೆ ಬೇಕಾಗುವಂಥ ತುಪ್ಪ, ಹಾಲು, ಗೋಮಯಗಳನ್ನು ಪಡೆಯುತ್ತಿದ್ದರು. ರಾಜರೂ ಭಾರಿ ಪ್ರಮಾಣದಲ್ಲಿ ಗೋವುಗಳನ್ನು ಸಾಕುತ್ತಿದ್ದರು.
ಸಹಸ್ರಾರು ವರ್ಷಗಳಿಂದಲೂ ಹೈನುಗಾರಿಕೆ ವ್ಯವಸಾಯದ ಭಾಗವಾಗಿದೆ. ಬಹುತೇಕ ಕೃಷಿಕರು ತಮ್ಮ ಜಮೀನಿಗೆ ಹಟ್ಟಿಗೊಬ್ಬರ ಬಳಸುತ್ತಾರೆ. ಹಾಲು ಉತ್ಪಾದನೆಯ ಜತೆ ಗೊಬ್ಬರದ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಮಾಡುತ್ತಾರೆ. ಕೆಲವು ವರ್ಷಗಳಿಂದ ಈಚೆಗೆ ಕ್ಷೀರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹಾಗೂ ಬದಲಾವಣೆಗಳಾಗಿವೆ. ಹಾಲು, ಹಾಲಿನ ಉತ್ಪನ್ನಗಳ ತಯಾರಿ ಜತೆ ಹಾಲನ್ನು ಕೆಡದಂತೆ ಸಂಸ್ಕರಿಸಿ ಬಹುಕಾಲದ ನಂತರವೂ ಬಳಸುವ ಬಗ್ಗೆ ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಈಗೀಗ ಹೊರ ರಾಜ್ಯ, ಹೊರ ದೇಶಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ರಫ್ತು ಆಗುತ್ತಿದೆ. ಇದೊಂದು ಗಮನಾರ್ಹ ಬೆಳವಣಿಗೆಯಾಗಿದ್ದು, ಪಶುಸಾಕಣೆದಾರರಿಗೆ ಇದು ಪೋ›ತ್ಸಾಹ ನೀಡಲಿದೆ.
ಹಾಲು ಉತ್ಪಾದನೆ ಮಾತ್ರವಲ್ಲದೆ ಈ ಹಿಂದೆ ಗದ್ದೆ ಉಳುಮೆ ಮಾಡುವುದು, ರಂಟೆ ಹೊಡೆಯುವುದು, ಗಾಡಿ ಎಳೆಯುವುದು, ಗಾಣ ಸುತ್ತುವುದು ಹೀಗೆ ನಾನಾ ರೀತಿಯ ಕೆಲಸಗಳಿಗೂ ಕೆಲವು ತಳಿಯ ಗೋವನ್ನು ಬಳಸುತ್ತಿದ್ದರು. ಈಗ ಕೃಷಿ ಕ್ಷೇತ್ರವೂ ಯಾಂತ್ರೀಕರಣಗೊಂಡಿರುವುದರಿಂದ ಶ್ರಮದಾಯಕ ಕೆಲಸಕ್ಕೆ ಬಳಸಿಕೊಳ್ಳುವುದು ಬಹುತೇಕ ಕಡಿಮೆಯಾಗಿದೆ.
ಭಾರತದಲ್ಲಿ ಇಂದು ಸುಮಾರು 30-35 ಶುದ್ಧ ಗೋತಳಿಗಳಿವೆ ಎನ್ನಲಾಗಿದೆ. ಕೆಂಪುಸಿಂಧಿ, ಥಾರ್ ಪಾರ್ಕರ್ ಸಹಿವಾಲ್, ಹರ್ಯಾಣಾ, ರಾಟಿ, ಗಿರ್, ಕಂಕ್ರೇಜ್ ಇವು ಉತ್ತರ ಭಾರತದ ಪ್ರಮುಖ ತಳಿಗಳಾದರೆ, ದೇವಣಿ, ಖಿಲ್ಲಾರಿ, ಒಂಗೋಲ್, ಕೃಷ್ಣಾತೀರಿ, ಅಮೃತಮಹಲ್, ಹಳ್ಳಿಕಾರ್, ವೆಚ್ಚೂರ್, ಅಂಬ್ಲಾಚೆರಿ, ಕಂಗಾಯಂ, ಅಲಂಬಾಡಿ ಇವು ದಕ್ಷಿಣ ಭಾರತದ ಪ್ರಸಿದ್ಧ ತಳಿಗಳು. ನಮ್ಮಲ್ಲಿ ಮಲೆನಾಡು ಗಿಡ್ಡದಂತಹ ಕೆಲವು ತಳಿಗಳೂ ಇವೆ. ಹಾಲಿನ ಉತ್ಪಾದನೆ ಮುಖ್ಯ ಉದ್ದೇಶವಾಗಿಟ್ಟು ಪಶು ಸಾಕಾಣಿಕೆ ಮಾಡುವವರು ವಿದೇಶಿ ತಳಿ ಅಥವಾ ಸಮ್ಮಿಶ್ರ ತಳಿಗಳನ್ನು ಸಾಕುತ್ತಾರೆ. ಆದರೆ ದೇಶಿ ತಳಿಗಳ ಹಾಲಿಗೂ ಜೆರ್ಸಿ ಮುಂತಾದ ದನಗಳ ಹಾಲಿನ ಗುಣಮಟ್ಟದಲ್ಲಿ ಮೇಲ್ನೋಟಕ್ಕೆ ವ್ಯತ್ಯಾಸ ಕಂಡು ಬರದಿದ್ದರೂ ವಿವಿಧ ರೀತಿಯಲ್ಲಿ ಪರಿಶೀಲನೆ ಮಾಡಿದಾಗ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದು. ರೋಗ ನಿರೋಧಕ ಶಕ್ತಿ, ಆರೋಗ್ಯ ವೃದ್ಧಿಸುವ ಅಂಶ ಮುಂತಾದವುಗಳೆಲ್ಲ ದೇಶಿ ಹಸುಗಳಲ್ಲಿ ಹೆಚ್ಚು. ಹೋಮ, ಹವನ ಮುಂತಾದ ಧಾರ್ವಿುಕ ಕಾರ್ಯಕ್ರಮಗಳಿಗೆ ದೇಶಿ ಹಸುಗಳ ಹಾಲು, ತುಪ್ಪಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ದೇಶಿ ಹಸುಗಳನ್ನು ಸಾಕುವವರು ಕಡಿಮೆ ಇರುವುದರಿಂದ ಪರಿಶುದ್ಧವಾದ ಹಾಲು, ತುಪ್ಪಗಳು ದೊರೆಯುವುದು ಅಪರೂಪವಾಗಿದೆ. ಎಷ್ಟೆಂದರೆ ಈಗಿನ ಕಾಲದಲ್ಲಿ ನಾಗರಪಂಚಮಿಯಂದು ಪೂಜೆಗಾಗಿ ಪ್ಯಾಕೆಟ್ ಹಾಲನ್ನು ಬಳಸುವಷ್ಟರ ಮಟ್ಟಿಗೆ. ಅದೇನೇ ಇರಲಿ, ಹೈನುಗಾರಿಕೆ ಅಥವಾ ಪಶು ಸಂಗೋಪನೆಯಿಂದ ಬಹಳಷ್ಟು ಗ್ರಾಮೀಣರ ಬದುಕು ಸುಧಾರಿಸಿರುವುದಂತೂ ಸತ್ಯ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೈನುಗಾರಿಕೆಯು ದೇಶದ ಆರ್ಥಿಕತೆಗೆ ಬಲವನ್ನು ನೀಡಿದೆ ಹಾಗೂ ನಾಡಿನ ಜನರ ಆರೋಗ್ಯ ಸಂರಕ್ಷಣೆಗೂ ಸಹಕಾರ ನೀಡಿದೆ.
‘ನೀನಾರಿಗಾದೆಯೋ, ಎಲೆ ಮಾನವ, ಹರಿ ಹರಿ ಗೋವು ನಾನು, ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ’ ಎಂಬ ಕವನ ಎಷ್ಟೊಂದು ಅರ್ಥಗರ್ಭಿತವಾದುದು. ನಮ್ಮನ್ನು ನಾವು ಪರಾಮಶಿಸಿಕೊಳ್ಳುವಂತೆ ಮಾಡುತ್ತದೆ, ಅಲ್ಲವೇ?
ಹೀಗೆಯೇ ನಮ್ಮ ನಾಡಿನಲ್ಲಿ ಕ್ಷೀರ ಕ್ರಾಂತಿ ಮುಂದುವರೆಯಲಿ. ಜತೆಗೆ ದೇಶಿ ಗೋ ತಳಿಗಳನ್ನು ರಕ್ಷಿಸಿ ಪೋಷಿಸುವ ಕಾರ್ಯ ಹೆಚ್ಚಲಿ. ಇದರ ಜತೆಗೆ ಗೋ ಹತ್ಯೆಯು ನಿಂತು ಗೋ ಸಂರಕ್ಷಣೆಯಾಗಲಿ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)