ಪಯಣಿಸುವಾಗ ಸುಖವಾಗಿ ಪವಡಿಸಲಿಕ್ಕೆ ಮಂಚಿಕೆ

ಪಯಣಿಸುವಾಗ ಸುಖವಾಗಿ ಪವಡಿಸಲಿಕ್ಕೆ ಮಂಚಿಕೆ
Published on: 

|ಶ್ರೀವತ್ಸ ಜೋಶಿ, ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್​ ಮತ್ತು ಅಂಕಣ ಬರಹಗಾರರು

‘ಕಯ್ಯೆತ್ತಿ ಕೊಡಲಿಲ್ಲ ಮೆಯ್ಯ ದಂಡಿಸಲಿಲ್ಲ| ಅಯ್ಯಗಳೆಲ್ಲ ಹರಿಯಲ್ಕೆ ಕೈಲಾಸ| ಕೆಯ್ಯ ಮಂಚಿಕೆಯೆ? ಸರ್ವಜ್ಞ ||’ ಅಂತೊಂದು ಸರ್ವಜ್ಞನ ವಚನವಿದೆ. ಮನುಷ್ಯನು ತನ್ನ ಸ್ವಂತ ಪರಿಶ್ರಮವಿಲ್ಲದೆ ಅಥವಾ ಕಷ್ಟಪಡದೆ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಕರ್ಮಸಿದ್ಧಾಂತದ ಮಹತ್ತ್ವವನ್ನು ತಿಳಿಸುತ್ತದೆ. ಕಯ್ಯೆತ್ತಿ ಕೊಡಲಿಲ್ಲ ಮೆಯ್ಯ ದಂಡಿಸಲಿಲ್ಲ ಅಂದರೆ ಯಾರಾದರೂ ಕೈಯಾರೆ ದಾನ ಧರ್ಮಗಳನ್ನು ಮಾಡದೆ, ಅಥವಾ ತನ್ನ ದೇಹವನ್ನು ದಂಡಿಸಿ ಕಷ್ಟಪಟ್ಟು ದುಡಿಯದೆ ಸೋಮಾರಿಯಾಗಿದ್ದರೆ ಪ್ರಯೋಜನವಿಲ್ಲ. ಅಯ್ಯಗಳೆಲ್ಲ ಹರಿಯಲ್ಕೆ ಅಂದರೆ ಕೇವಲ ಗುರುಗಳೋ ಅಥವಾ ಯಾರೋ ಒಬ್ಬರು ‘ಅಯ್ಯ’ ಅಂದಾಕ್ಷಣ ಅಥವಾ ಪೂಜೆ-ಪುನಸ್ಕಾರಗಳ ನಾಟಕವಾಡಿದಾಕ್ಷಣ ಯಾರಿಗೂ ಮುಕ್ತಿ ಅಥವಾ ಯಶಸ್ಸು ಸಿಗುವುದಿಲ್ಲ. ಕೈಲಾಸ ಕೆಯ್ಯ ಮಂಚಿಕೆಯೆ ಅಂದರೆ ಹಾಗೆ ಕಷ್ಟಪಡದೆ ಸಿಗಲಿಕ್ಕೆ ಕೈಲಾಸವೇನು ಕೈಗೆಟುಕುವ ಮಂಚದ ಮೇಲಿನ ಹಾಸಿಗೆಯೇ? ಅದು ಸುಲಭವಾಗಿ ಸಿಗುವ ವಸ್ತುವಲ್ಲ. ಸತ್ಕರ್ಮ ಮಾಡದೆ, ದೈಹಿಕವಾಗಿ ಶ್ರಮಿಸದೆ ಕೇವಲ ಹೊರಗಿನ ಆಡಂಬರದಿಂದ ದೇವನನ್ನಾಗಲಿ ಅಥವಾ ಯಶಸ್ಸನ್ನಾಗಲಿ ಪಡೆಯಲು ಸಾಧ್ಯವಿಲ್ಲವೆಂದು ಸರ್ವಜ್ಞನ ಅಭಿಮತ.

ಈ ತ್ರಿಪದಿಯಲ್ಲಿ ಬಳಕೆಯಾಗಿರುವ ‘ಮಂಚಿಕೆ’ ಪದವನ್ನು ಗಮನಿಸಬೇಕು. ಅದು ಪೂರ್ತಿಯಾಗಿ ಮಂಚದ ಪ್ರತಿರೂಪವಲ್ಲ, ಅಂದರೆ ನೆಲದ ಮೇಲೆ ನಾಲ್ಕು ಕಾಲುಗಳ ಆಧಾರದಲ್ಲಿ ಇಟ್ಟದ್ದೇ ಆಗಬೇಕೆಂದಿಲ್ಲ. ಆದರೆ ಮಂಚಕ್ಕೆ ಹೋಲಿಕೆಯುಳ್ಳದ್ದು, ಮುಖ್ಯವಾಗಿ ಮಲಗಲಿಕ್ಕೆ ಅನುಕೂಲವಿರುವ ಅಡ್ಡಹಾಸು. ನಿಘಂಟುವಿನಲ್ಲಿ ಈ ಪದಕ್ಕೆ ಪೀಠ, ಆಸನ, ಕಾಲುಮಣೆ ಮುಂತಾದ ಅರ್ಥಗಳೊಟ್ಟಿಗೆ, ಹೊಲ ಗದ್ದೆಗಳನ್ನು ಕಾಯಲು ಎತ್ತರವಾಗಿ ಕಟ್ಟಿರುವ ಬಿದಿರು ಮೊದಲಾದುವುಗಳಿಂದ ಮಾಡಿರುವ ಅಟ್ಟಣೆ ಎಂಬ ಅರ್ಥವನ್ನೂ ಕೊಡಲಾಗಿದೆ. ಅಂದರೆ ಮಂಚಿಕೆ ಸಾಮಾನ್ಯವಾಗಿ ನೆಲದ ಮೇಲೆ ಮಂಚದಂತೆ ಇಟ್ಟದ್ದಲ್ಲ. ಎತ್ತರದಲ್ಲಿರುವ ಮತ್ತು ಮಲಗಲಿಕ್ಕೆ ಆಗುವ ಹಲಗೆಯಂಥ ವ್ಯವಸ್ಥೆ. ಹಾಗೆಯೇ ಮಂಚಿಗೆಗಲ್ಲು ಅಂದರೆ ದಾರಿಯಲ್ಲಿ ಹೊರೆಯನ್ನು ಇಳಿಸಲು ಮಾಡಿರುವ ಎತ್ತರದ ಸಪಾಟಾದ ಕಲ್ಲು. ಈ ಎಲ್ಲ ದೃಷ್ಟಿಯಿಂದ, ರೈಲುಪ್ರಯಾಣದ ಸಂದರ್ಭದಲ್ಲಿ ಮಲಗಲಿಕ್ಕೆ ಇರುವ Berth ವ್ಯವಸ್ಥೆಗೆ ‘ಮಂಚಿಕೆ’ ಅತಿಸೂಕ್ತ ಪರ್ಯಾಯಪದ ಎನಿಸುತ್ತದೆ. ಬಹಳಷ್ಟು ಓದುಗರು ಇದನ್ನೇ ಸೂಚಿಸಿದ್ದಾರೆ- ಅನಿತಾ ದಾವಣಗೆರೆ, ಶ್ರೀಕಾಂತ ಗೋಡಖಿಂಡಿ, ಎನ್.ವಿ. ಶಂಕರ್, ಸಂಜೀವ ಮತ್ತಿಕೊಪ್ಪ, ಸೀತಾ ವ್ಯಾಸಮುದ್ರಿ, ನಂದಿನಿ ಹಾಸನ, ಸುಮಾ ಬೇಲೂರು, ಎಸ್.ಕೆ. ಶಿವಪ್ಪ, ಗೋಪಿನಾಥ ಭರಮಸಾಗರ, ಡಾ. ಸಂಗಮೇಶ ಸುರಭಿ, ಕೆ.ಅಮರ್, ಎಂ.ಕೆ. ಬದರೀನಾಥ್, ನಳಿನಿ ಜಿ.ಭಟ್, ದೀಪಕ ಎಸ್.ಜೋಶಿ, ಶಶಿಕಲಾ ನರೇಂದ್ರನಾಥ್ ಮುಂತಾದವರು.

ಇಂಗ್ಲಿಷ್​ನಲ್ಲಿ Berth ಪದಕ್ಕೆ ಹಡಗಿನಲ್ಲಿ ನಾವಿಕರು ತಮ್ಮ ರಕ್ಷಣೆದಿರಿಸುಗಳನ್ನು ಇಡಲಿಕ್ಕೆ ಮತ್ತು ಮಲಗುವುದಕ್ಕೆ ಮಾಡಿರುವ ಮಂಚ ಎಂಬ ಮೂಲ ಅರ್ಥವಿದ್ದದ್ದು. ಕ್ರಮೇಣ ರೈಲುಪ್ರಯಾಣದ ಸಂದರ್ಭಕ್ಕೂ ವ್ಯಾಪಿಸಿತು. ಈಗ ಹೆಚ್ಚಾಗಿ ರೈಲಿನಲ್ಲಿ ಶಯನವ್ಯವಸ್ಥೆಗೇ ಈ ಪದ ಬಳಕೆಯಾಗುತ್ತದೆ. ಆದ್ದರಿಂದ ‘ರೈಲುಮಂಚ’ ಎಂದರೂ ಸಮಂಜಸವೇ. ಅನಿಲ್​ಕುಮಾರ್ ಕಮಲಾಕರ, ಕೆ.ಎಂ. ಮಧ್ವರಾಯ, ರಾಜೇಂದ್ರ ಕೆ.ಎಸ್., ಪದ್ಮಾ ಬದರಿನಾಥ್ ಮುಂತಾದವರ ಆಯ್ಕೆ ಅದೇ. ಹಿಂದಿನ ಕಾಲದಲ್ಲಿ ರೈಲುಪ್ರಯಾಣದ ವೇಳೆ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಬಳಸುತ್ತಿದ್ದ, ಈಗಲೂ ಹಳೆಯ ನೆನಪುಗಳನ್ನು ಮರುಕಳಿಸುವ ರೈಲುತಂಬಿಗೆ ಇದ್ದಂತೆ ‘ರೈಲುಮಂಚ’ ಎನ್ನಬಹುದು. ರೈಲು, ಹಡಗು, ವಿಮಾನ ಎಂಬ ಭೇದವಿಲ್ಲದೆ ಒಟ್ಟಾರೆಯಾಗಿ ಪ್ರಯಾಣದಲ್ಲಿ ಬಳಕೆಯಾಗುವುದು ಎಂಬರ್ಥದಲ್ಲಿ ‘ಪಯಣಮಂಚ’ (ಪದ್ಮಮಾಲಿನಿ ಬೆಂಗಳೂರು, ಜಿ.ನಾರಾಯಣ ರಾವ್, ಯಮನಪ್ಪ ಕೊಟ್ನಿಕಲ್, ಅನಂತರಾಜ ಮೇಲಾಂಟ) ಸಹ ತರ್ಕಬದ್ಧ. ‘ಶಯನಾಸನ’, ‘ನಿದ್ರಾಸನ’ ಮುಂತಾದ ಪ್ರವೇಶಿಕೆಗಳೂ ಬಂದಿವೆ, ಆದರೆ ಯೋಗಾಭ್ಯಾಸದಲ್ಲಿ ಈ ಪದಗಳು ಬೇರೆ ಅರ್ಥದಲ್ಲಿ ಈಗಾಗಲೇ ಬಳಕೆಯಲ್ಲಿರುವುದರಿಂದ Berth ಎಂದು ಕಲ್ಪಿಸಿಕೊಳ್ಳುವುದು ಕಷ್ಟ.

ಅದಕ್ಕಿಂತ, ‘ಅಟ್ಟಳಿಗೆ’ ಅಥವಾ ‘ಅಟ್ಟಣಿಗೆ’ (ಸ.ಮ. ಜಿರ್ಲಿಮಠ, ಸಿ.ಆರ್. ಮೋಹನಕುಮಾರ್, ಶೇಷಗಿರಿ ಎಚ್.ಎಸ್.) ಆದೀತು; ‘ಮೇಲ್ಮಂಚ’ (ಬೇಲೂರು ಸುಮಾ, ಕೃಷ್ಣ ಬರ್ವೆ, ಸತ್ಯನಾರಾಯಣ ಸಿ.ಎಸ್., ಜಯಲಕ್ಷ್ಮಿ ಅಡಿಗ, ಲಕ್ಷ್ಮಣ ಹೆಬ್ಬಳ್ಳಿ) ಮತ್ತು ‘ಏರುಮಂಚ’ (ಸೂರ್ಯನಾರಾಯಣ ಜಿ.ವಿ.) ಕೂಡ ಆಗಬಹುದು. ಆದರೆ Lower Berth ಎನ್ನಲಿಕ್ಕೆ ಕೆಳಗಿನ ಮೇಲ್ಮಂಚ ಎನ್ನಬೇಕಾಗುತ್ತದೆ! ಕಳೆದ ಸಲ ಕೇಳಿದ್ದ Hectic ಪದದ ಇಂಗ್ಲಿಷ್ ಚರಿತ್ರೆ ಕುತೂಹಲಕರವಿದೆ. ಇದರ ಬೇರು ಇರುವುದು ಗ್ರೀಕ್​ನ hektikos ಪದದಲ್ಲಿ. ನಿರಂತರ, ಎಡೆಬಿಡದ, ಚಟದಂತಿರುವ ಮುಂತಾದ ಅರ್ಥಗಳಲ್ಲಿ. ಪ್ರಾಚೀನ ಗ್ರೀಕ್ ವೈದ್ಯರು ಈ ಪದವನ್ನು ಜ್ವರಕ್ಕೆ ಸಂಬಂಧಿಸಿದಂತೆ ಬಳಸುತ್ತಿದ್ದರಂತೆ. ದೇಹದ ಪ್ರಕೃತಿಯಲ್ಲೇ ಬೇರೂರಿರುತ್ತದೆ ಮತ್ತು ವ್ಯಕ್ತಿಯ ದೈಹಿಕ ಸ್ಥಿತಿಯ ಲಕ್ಷಣವಾಗಿರುತ್ತದೆ ಎಂಬ ಕಲ್ಪನೆಯಿಂದ ಇರಬಹುದು. ಹೆಕ್ಟಿಕ್ ಜ್ವರಗಳ ಪ್ರಮುಖ ಲಕ್ಷಣಗಳೆಂದರೆ ಕ್ಷಿಪ್ರ ನಾಡಿಬಡಿತ, ಕೆಂಪಾಗುವ ಕೆನ್ನೆಗಳು, ಬಿಸಿಯಾದ ಚರ್ಮ ಮತ್ತು ದೇಹವು ಕೃಶವಾಗುವುದು. ಲ್ಯಾಟಿನ್​ನ hecticus ಮತ್ತು ಅಲ್ಲಿಂದ ಫ್ರೆಂಚ್​ನ ಛಿಠಿಜಿಟ್ಠಿಛಿ ಪದಗಳೂ ಜ್ವರದ ಬಣ್ಣನೆಗೇ ಬಳಕೆಯಾದುವು.

ಕ್ರಮೇಣ ಇಂಗ್ಲಿಷ್​ಗೆಬಂದಾಗ ಅರ್ಥ ವಿಸ್ತರಿಸಿಕೊಂಡು ವಿಪರೀತ ಉತ್ಸಾಹಭರಿತ, ಭಾವೋದ್ರೇಕದ, ಅಸ್ತವ್ಯಸ್ತವಾದ ಚಟುವಟಿಕೆಗಳಿಂದ ತುಂಬಿದ ಮುಂತಾದ ಸಂದರ್ಭಗಳಿಗೂ ಬಳಕೆಯಾಗತೊಡಗಿತು. ಆ ದೃಷ್ಟಿಯಿಂದ ಕನ್ನಡದಲ್ಲಿ ಸೂಕ್ತವೆನಿಸುವ ಪದ ಈಗಾಗಲೇ ಬಳಕೆಯಲ್ಲಿರುವ ಬಿರುಸು. ಉದಾಹರಣೆಗೆ, ಹಬ್ಬದ ಮುನ್ನಾದಿನ ಹೂ-ಹಣ್ಣು ಮಾರುಕಟ್ಟೆಗಳಲ್ಲಿ ಬಿರುಸಿನ ವ್ಯಾಪಾರ ಚುನಾವಣೆಯಲ್ಲಿ ಪ್ರತಿಷ್ಠಿತ ಕ್ಷೇತ್ರದ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ; ಹಿಂಗಾರು ಮಳೆ ಬೀಳುತ್ತಿದ್ದಂತೆ ಕೃಷಿಚಟುವಟಿಕೆಗಳು ಬಿರುಸುಗೊಂಡಿವೆ ಇತ್ಯಾದಿ. ‘ಬಿರುಸು’ ಪದ ಸೂಚಿಸಿದವರು- ಎ.ರಾಮಚಂದ್ರಮೂರ್ತಿ, ಕಾಡೇಶ ವಿ.ಬಿ., ಸೂರಿ ಲಿಂಗದಹಳ್ಳಿ, ಅಂಜಲಿ ಬರ್ವೆ, ಗುರುರಾಜ ಗಲಗಲಿ, ಪದ್ಮಾವತಿ ಅಯ್ಯರ್, ಸುನೀತಾ ನಿರಂಜನ ಮುಂತಾದವರು. ತೀವ್ರತೆ ಎಂಬ ಅರ್ಥವುಳ್ಳ ‘ತುರುಸು’ (ಲೋಕೇಶಪ್ಪ ಹಿತ್ಲಮನೆ, ಬೊ.ನಾ. ಕೃಷ್ಣಮೂರ್ತಿ) ಮತ್ತು ‘ಭರಾಟೆ’ (ವೀಣಾ ದೇವ್) ಕೂಡ ಮಾನ್ಯವೇ.

etique ಎಂಬ ಅರ್ಥವನ್ನೇ ಬಿಂಬಿಸುವ ‘ಬಿಡುವಿಲ್ಲದ’ (ಡಾ.ಎಸ್.ಎಸ್. ಚೋರಗಿ, ವಿಲಾಸ ಹುದ್ದಾರ, ಅನಿತಾ ಭಟ್, ರೇಖಾ ರಾಮಕೃಷ್ಣ, ಡಾ. ದಯಾನಂದ ಭಟ್ಟ, ಸತೀಶ ಕಬೇಕೋಡಿ, ಶೋಭಾ ಪಿ. ಭಟ್ಟ, ಸುರೇಂದ್ರ ಪೈ, ರಾಮಚಂದ್ರ ಬಡಗಾಬೆಟ್ಟು, ಡಾ. ಪ್ರಕಾಶ ತೇರಣಿ, ಶ್ಯಾಮರಾಜ ಉಡುಪ, ಬಸವರಾಜ ನರಸಣ್ಣವರ, ನರಸಿಂಹಯ್ಯ ಬಾಳಿಲ, ಅನಘ ದೇಸಾಯಿ, ರಾಜೇಂದ್ರ ಹೆಗಡೆ, ರಾಜೇಶ್ವರಿ ಶಿವಮೊಗ್ಗ, ಡಾ. ವಿ.ಬಿ. ಹೊಸಪೇಟಿ ಮುಂತಾದವರು) ಮತ್ತು ‘ಎಡೆಬಿಡದ’ (ಡಾ.ಎನ್.ಎಂ. ತುಳಪುಳೆ, ರಂಗನಾಥ ಟಿ.ಕೆ., ಶ್ರೀನಾಥ್ ಕೆ.ಟಿ., ನಾಗೇಶ ಫಾಟಕ್, ನರೇಂದ್ರನಾಥ್ ಎಚ್.ಎಂ. ಮತ್ತಿತರರು) ಸಹ ಬಳಕೆಗೆ ಸೂಕ್ತವಾಗಿವೆ. Hectic ಪದದ ಗ್ರೀಕ್ ಮೂಲದಲ್ಲಿದ್ದ ಜ್ವರದ ಬಿಸಿ, ಮತ್ತು ಕಾರ್ಯಮಗ್ನ ಇರುವಂತೆ ಕೆಲಸದಲ್ಲಿ ‘ಬಿಸಿ’ ಇರುವ ಎನ್ನುವುದನ್ನೂ ಸೂಚಿಸುವ ‘ಕಾರ್ಯತಪ್ತ’ ಆಗಬಹುದೆನ್ನುತ್ತಾರೆ ಗಿರೀಶ ಕೆ.ಎಸ್.; ಅವರ ತರ್ಕ ಮೆಚ್ಚುವಂತಿದೆ. ಹಾಗೆಯೇ ಬೆಂಗಳೂರಿನಿಂದ ರವೀಂದ್ರ ಕುಡ್ಪಿ ಸೂಚಿಸಿದ ‘ಎಕ್ಕಸಕ್ಕ’ ಸಹ ಯೋಗ್ಯವಿದೆ. ತಮಿಳಿನಲ್ಲಿ ಇದು ವ್ಯಾಪಕವಾಗಿ ಬಳಕೆಯಾಗುತ್ತದೆ. ತುಳು ಭಾಷೆಯ ಕೋಟಿ-ಚೆನ್ನಯ ಚಿತ್ರದಲ್ಲಿ ಎಕ್ಕಸಕ್ಕ ಎಂದು ಶುರುವಾಗುವ ಪ್ರಸಿದ್ಧ ಹಾಡೊಂದಿದೆ, ಅದು ಎಡೆಬಿಡದ ಸಂಭ್ರಮ ಭಾವನೆಯಿಂದ ಹಾಡಿದ್ದೇ ಆಗಿದೆ.

ಕೊನೆಯದಾಗಿ Waiver. ಇಂಗ್ಲಿಷ್​ನಲ್ಲಿ ಸುಮಾರು 14ನೇ ಶತಮಾನದಿಂದಲೂ ಬಳಕೆಯಲ್ಲಿದ್ದು abandon or give back ಎಂಬರ್ಥದ ಆಂಗ್ಲೋ ಫ್ರೆಂಚ್ weyver ಮತ್ತು ಹಳೆಯ ಫ್ರೆಂಚ್ guever ಪದಗಳು ಇದರ ಮೂಲ. ಆ ದೃಷ್ಟಿಯಿಂದ ಬಿಟ್ಟುಬಿಡು ಅಥವಾ ಬಿಟ್ಟುಕೊಡು ಸರಿಯೆನಿಸುತ್ತವೆ. ಸೂಚಿಸಿದವರು- ಕುಸುಮ ಡಿ.ಎನ್., ಜಗದೀಶ ಹುದ್ದಾರ, ಡಾ. ರಂಗನಾಥ ಕಟ್ಟಿ, ದತ್ತಾತ್ರೇಯ ಎನ್., ರೂಪಕಲ ಸದಾನಂದ, ಜಿ.ಎಚ್. ಸಂಕಪ್ಪ, ಆನಂದರಾಮ ಮಡಿ, ಗೋಪಾಲಕೃಷ್ಣ ಹೆಮ್ಮಿಗೆ, ಜಯರಾಮ್ ಪಾರೆ, ಎಂ.ಕೆ. ರಮೇಶ್, ಸುಜಾತ ಕುರ್ಪಾಡ್ ಮುಂತಾದವರು. ‘ಕೈಬಿಡು’ (ಅನಂತಕೃಷ್ಣ ಶಿವಮೊಗ್ಗ, ರಾಜೇಶ್ವರಿ ಟಿ.ಆರ್.) ಸಹ ಅದೇ ಅರ್ಥವನ್ನು ಕೊಡುತ್ತದೆ. ಸುಸಂಸ್ಕೃತವಾಗಿ ‘ವರ್ಜನ’ (ಡಾ.ಎಚ್.ಕೆ. ಶಂಕರಾನಂದ, ನಂದೀಶ್ ಸಿ.ಜೆ., ಭವಾನಿ ಜೋಶಿ, ಉಮಾ ಪ್ರಭು, ಎಂ.ಟಿ. ಉಪಾಧ್ಯ, ಉಷಾಕಿರಣ್ ಅತ್ತಾವರ, ವೀರೇಶ ವಾಲಿ, ಸಿದ್ದನಗೌಡ ಮುದಿಗೌಡ್ರ ಮತ್ತಿತರರು) ಎಂದು ಕೂಡ ಹೇಳಬಹುದು.

ಇನ್ನು, ‘ವಿನಾಯಿತಿ’ ಪದ ಬಹುಸಂಖ್ಯೆಯ ಪ್ರವೇಶಿಕೆಗಳಲ್ಲಿ (ಪ್ರೇಮ ಮೊಣ್ಣಪ್ಪ, ಶಿವಕುಮಾರ್ ಸಿಂಗಟಗೆರೆ, ರಾಮ ಮೊಗೇರ, ಪ್ರಭುಪ್ರಸಾದ್ ನಡುತೋಟ, ತರುಣತೇಜ್ ಮಾನ್ವಿ, ಷಡಕ್ಷರಮುನಿ ಸ್ವಾಮೀಜಿ, ಕಡೂರು ದೇವೇಂದ್ರ, ಗಂಗಾ ಹೆಗಡೆ, ಮಂಜುನಾಥ ಎಚ್.ಎಸ್, ನಾಗಮಣಿ ಶಾಂಪುರ್, ಶಶಿಕಲಾ ಮೊಟೆಬೆನ್ನೂರು ಮುಂತಾದವರು) ಬಂದಿದೆಯೆಂದರೆ ಅದೆಷ್ಟು ವ್ಯಾಪಕವಾಗಿದೆಯೆಂದು ತಿಳಿಯುತ್ತದೆ. ‘ವಿನಾಯಿತಿ’ ಭಾಷಾಸಂಕರದಿಂದ ಹುಟ್ಟಿರುವ ಪದ. ಅರೇಬಿಕ್​ನ ರಿಆಯತ್ ಹಿಂದೀ ಭಾಷೆಗೆ ಬಂದು ರಿಯಾಯತ್ ಆಗಿದೆ, ಇದಕ್ಕೆ ಸಂಸ್ಕೃತದ ‘ವಿನಾ’ (ಹೊರತುಪಡಿಸುವುದು) ಎಂಬುದನ್ನು ಕಸಿ ಕಟ್ಟಿ ‘ವಿನಾಯಿತಿ’ ಎಂದು ಮಾಡಲಾಗಿದೆ, ರಿಯಾಯಿತಿ ಶಬ್ದದ ರೂಪಸಾಮ್ಯದಿಂದ ಬಳಕೆಗೆ ಬಂದಿರುವ ಶಬ್ದವಿದು ಎಂಬುದು ನಿಘಂಟುತಜ್ಞ ಜಿ. ವೆಂಕಟಸುಬ್ಬಯ್ಯನವರ ಅಭಿಪ್ರಾಯ. ‘ಮನ್ನಾ’ ಸಹ ಬಂದಿರುವುದು ಅರೇಬಿಕ್​ನ ‘ಮನ್​ಆ’ದಿಂದಲೇ ಎನ್ನುತ್ತದೆ ಕಸಾಪ ನಿಘಂಟು.

ಈ ವಾರದ ಮೂರು ಪದಗಳು

1. Bonus: ದೀಪಾವಳಿ ಹಬ್ಬವು ನೌಕರರಿಗೆ ಹೆಚ್ಚು ಹಿಗ್ಗು ತರುವುದಕ್ಕೊಂದು ಕಾರಣ. ಆದರೆ ಆ ಸಂದರ್ಭದಲ್ಲಷ್ಟೇ ಬಳಕೆ ಅಂತೇನಿಲ್ಲ.

2. Censor: ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಹೆಚ್ಚು ಬಳಕೆ, ಒಟ್ಟಾರೆಯಾಗಿ ಯಾವುದನ್ನೇ ಪೂರ್ವಪರಾಮರ್ಶನೆ ಮಾಡಿ ನಿಯಂತ್ರಿಸುವ ಪ್ರಕ್ರಿಯೆ.

3. Theme: ವಿಷಯ ಅಂದರೆ ಸಬ್ಜೆಕ್ಟ್/ಟಾಪಿಕ್ ಎಂದಾಯ್ತು. ಥೀಮ್ ಅದಕ್ಕಿಂತ ವಿಶಾಲವಾದುದು. ಈಗೀಗ ನವರಾತ್ರಿ ಬೊಂಬೆಗಳ ಜೋಡಣೆಗೂ ಥೀಮ್ ಇರುತ್ತದೆ!

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು- ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net