

ನೂರನೇ ಪ್ರದರ್ಶನ ಕಾಣುತ್ತಿರುವ ‘ಪುಕ್ಕಟೆ ಸಲಹೆ’ ನೂರಕ್ಕೆ ನೂರು ಹಾಸ್ಯ ನಾಟಕ. ನಾಟಕದ ಮುಖ್ಯ ಪಾತ್ರ ಟೈಂಪಾಸ್ ಟಿವಿಯ ಆಸ್ಥಾನ ಜ್ಯೋತಿಷಿ, ವಾಸ್ತುಶಾಸ್ತ್ರ, ಬೇಸ್ತುಶಾಸ್ತ್ರ, ಹಲ್ಲಿಶಾಸ್ತ್ರ, ಸಿಲ್ಲಿಶಾಸ್ತ್ರ, ಕಾಕಶಾಸ್ತ್ರ, ಕೋಕಾಶಾಸ್ತ್ರ, ಧೋಕಾಶಾಸ್ತ್ರ ಪಾರಂಗತ ಅಧ್ವಾನ್ ಕ್ಷಮಿಸಿ ವಿದ್ವಾನ್ ಲ್ಯಾಪಾನಂದ್ ಟಾಪಾನಂದ ಶಾಸ್ತ್ರಿ.
ಅವರಿಗೆ ಆ ಹೆಸರು ಬರಲು ಕಾರಣ ಅವರ ಬಳಿ ಇರುವ ಲ್ಯಾಪ್ಟಾಪ್! ಅವರೊಂದಿಗೆ ಕಾರ್ಯಕ್ರಮ ನಿರೂಪಿಸುವ ನೀರಾ ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು, ಕ್ಷಮಿಸಿ ಕೈ ತೊಳೆದು ಮುಟ್ಟಬೇಕು ಅನ್ನುವಷ್ಟು ಸುಂದರಿ. ಇವರು ಮಾತನಾಡುವುದೇ ಹಾಸ್ಯದ ಧಾಟಿಯಲ್ಲಿ. ಇವರೊಂದಿಗೆ ಫೋನ್ ಮೂಲಕ ಪ್ರಶ್ನೆ ಕೇಳುವ ಸಮಾಜದ ವಿವಿಧ ವರ್ಗದ ಜನರದ್ದೂ ಲಘುಧಾಟಿಯ ಸಂಭಾಷಣೆ. ನಡುವೆ ಬರುವ ಜಾಹೀರಾತುಗಳೂ ಹಾಸ್ಯಮಯ. ಶಾಸ್ತ್ರಿಗಳು ಕವಿಯೂ ಆಗಿರುವುದರಿಂದ ಚುಟುಕಗಳ ಮೂಲಕವೂ ನಗು ಹೊಮ್ಮಿಸುತ್ತಾರೆ.
ನಾನು ಈವರೆಗೆ 30 ಚಿಕ್ಕ, ದೊಡ್ಡ ನಾಟಕಗಳನ್ನು ಬರೆದಿದ್ದೇನೆ. ಅವುಗಳಲ್ಲಿ ‘ಪುಕ್ಕಟೆ ಸಲಹೆ’ಗೆ ನೂರು ಪ್ರದರ್ಶನಗಳ ಮೈಲಿಗಲ್ಲನ್ನು ದಾಟುವ ಸುಯೋಗ ಲಭಿಸಿದೆ. ಇದಕ್ಕೆ ಕಾರಣ ಅಶೋಕ್ ಹಾಗೂ ಅವರ ವಿಶ್ವಪಥ ಕಲಾ ಸಂಗಮ (ವಿಕಸಂ)ದ ಕಲಾವಿದರ ಉತ್ಸಾಹ, ದಣಿವರಿಯದ ದುಡಿಮೆ. ನಾನು 2009ರಲ್ಲಿ ಈ ನಾಟಕವನ್ನು ರಚಿಸಿದಾಗ ಅದು ಶತಕ ಬಾರಿಸುತ್ತದೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.
ನಾನಾಗ ಮಂಗಳೂರಿನ ಕಾರ್ಪೆರೇಶನ್ ಬ್ಯಾಂಕಿನ ಪ್ರಧಾನ ಕಚೇರಿ ಯಲ್ಲಿ ಉದ್ಯೋಗದಲ್ಲಿದ್ದೆ. ಬ್ಯಾಂಕಿನ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉದ್ಯೋಗಿಗಳು ಅಭಿನ ಯಿಸಲು ಅನುಕೂಲವಾಗುವಂಥ ಹೊಸ ನಾಟಕವೊಂದನ್ನು ಬರೆದುಕೊಡುವಂತೆ ನನ್ನ ಸಹೋದ್ಯೋಗಿ ಗೋಪಾಲ ಬೊಳಂಬು ಕೇಳಿಕೊಂಡಾಗ ಬರೆದದ್ದು ಈ ನಾಟಕ. ಮೊದಲು ಅದರ ಹೆಸರು ‘ಆಪ್ತಸಲಹೆ’ ಎಂದಿತ್ತು. ನಾಟಕದ ಅವಧಿ 30 ನಿಮಿಷ ಇತ್ತು.
ಮೊದಲ ಪ್ರದರ್ಶನ ಚೆನ್ನಾಗಿ ಬಂದದ್ದರಿಂದ ಗೋಪಾಲ್ ಅದನ್ನು ಮಂಗಳೂರಿನ ಹವ್ಯಕ ಸಂಘದಲ್ಲಿ ಮರು ಪ್ರದರ್ಶನ ಮಾಡಲು ತೆಗೆದುಕೊಂಡರು. ಆಗ ಅದಕ್ಕೆ ಇನ್ನೂ ಎರಡು ಪಾತ್ರಗಳನ್ನು ಸೇರಿಸಿದೆ. ನಂತರ ಆ ನಾಟಕ ಮಂಗಳೂರು ಆಕಾಶವಾಣಿಯಿಂದಲೂ ಪ್ರಸಾರವಾಯಿತು. 2011ರಲ್ಲಿ ನಾಟಕವನ್ನು ಪ್ರಕಟಿಸಲು ಸಪ್ನ ಬುಕ್ ಹೌಸ್ಗೆ ಕೊಡುವಾಗ ಅದರ ಹೆಸರನ್ನು ‘ಪುಕ್ಕಟೆ ಸಲಹೆ’ ಎಂದು ಬದಲಾಯಿಸಿದೆ.
2016ರಲ್ಲಿ ಬ್ಯಾಂಕಿನಿಂದ ನಿವೃತ್ತನಾಗಿ ಬೆಂಗಳೂರಿಗೆ ಬಂದು ನೆಲೆಸಿದೆ. ಆಗಷ್ಟೇ ಅಶೋಕ್ ಮತ್ತು ಅವರ ಗೆಳೆಯರು ವಿಶ್ವಪಥ ಕಲಾ ಸಂಗಮ (ವಿಕಸಂ) ಎಂಬ ನಾಟಕ ತಂಡವನ್ನು ಹುಟ್ಟುಹಾಕಿದ್ದರು. ಅದಕ್ಕೆ ಒಂದು ಹಾಸ್ಯ ನಾಟಕ ಕೊಡುವಂತೆ ಕೇಳಲು ನಮ್ಮ ಮನೆಗೆ ಬಂದರು. ಆಗ ನಾನು ಅವರಿಗೆ ನನ್ನ ಇತರ ಪ್ರಕಟಿತ ನಾಟಕಗಳ ಜೊತೆಗೆ ‘ಪುಕ್ಕಟೆ ಸಲಹೆ’ಯನ್ನೂ ನೀಡಿದೆ. ಅಶೋಕ್ ‘ಪುಕ್ಕಟೆ ಸಲಹೆ’ಯನ್ನು ಪ್ರದರ್ಶನಕ್ಕೆ ಆರಿಸಿಕೊಂಡರು.
ಅವರ ಪ್ರತಿಭೆಯ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಅವರ ತಂಡವೂ ಹೊಸದು. ಹೀಗಾಗಿ ನಾಟಕದ ಮೊದಲ ಪ್ರದರ್ಶನಕ್ಕೆ ಹೆಚ್ಚೇನೂ ನಿರೀಕ್ಷೆ ಇಟ್ಟುಕೊಳ್ಳದೆ ಹೋಗಿದ್ದೆ. ಆದರೆ ಪ್ರದರ್ಶನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ನಾಟಕವನ್ನು ನಿರ್ದೇಶಿಸಿ ಮುಖ್ಯಪಾತ್ರ (ಲ್ಯಾಪ್ಟಾಪ್ ಶಾಸ್ತ್ರಿ) ವಹಿಸಿದ್ದ ಅಶೋಕ್ ಜಾಹೀರಾತಿನ ದೃಶ್ಯಗಳನ್ನು ಸೇರಿಸಿ ನಾಟಕದ ಅವಧಿಯನ್ನು 90 ನಿಮಿಷಕ್ಕೆ ಹಿಗ್ಗಿಸಿದ್ದರು. ಅವರ, ನಿರೂಪಕಿ ನೀರಾ ಪಾತ್ರ ವಹಿಸಿದ ಫಲ್ಗುಣಿ ಹಾಗೂ ಪೋಷಕ ಪಾತ್ರಗಳ ಅಭಿನಯ ಉತ್ತಮವಾಗಿತ್ತು. ಹೀಗಾಗಿ ನಾಟಕದಲ್ಲಿದ್ದ ಹಾಸ್ಯದ ಮಾತುಗಳು ಮತ್ತು ಚುಟುಕುಗಳು ಚೆನ್ನಾಗಿ ಪಂಚ್ ಆದವು.
ಅಶೋಕ್ ಬೆಂಗಳೂರಿನ ಬೇರೆ ಬೇರೆ ಕಡೆ ‘ಪುಕ್ಕಟೆ ಸಲಹೆ’ ಪ್ರದರ್ಶನ ಏರ್ಪಡಿಸಿದರು. ಪ್ರತಿ ಪ್ರದರ್ಶನದ ನಂತರ ಮನೆಗೆ ಬಂದು ಸಂಭಾವನೆ ಕೊಡುತ್ತಿದ್ದರು. ಲೇಖಕರಿಗೆ ತಿಳಿಸದೇ ನಾಟಕ ಆಡುವ ಈ ಕಾಲದಲ್ಲಿ ಅವರ ಪ್ರಾಮಾಣಿಕತೆಯನ್ನು ನೋಡಿ ನನಗೆ ಸಂತೋಷವಾಯಿತು. ಅವರಿಗೆ ಉತ್ತೇಜನ ನೀಡಲು, ‘25ಕ್ಕಿಂತ ಹೆಚ್ಚು ಪ್ರದರ್ಶನ ಮಾಡಿದರೆ ಪುಕ್ಕಟೆ ಸಲಹೆ ನಾಟಕ ನಿಮಗೆ ಪುಕ್ಕಟೆಯಾಗಿ ಕೊಡುತ್ತೇನೆ. ನಂತರದ ಪ್ರದರ್ಶನಗಳಿಗೆ ನೀವು ನನಗೆ ಸಂಭಾವನೆ ಕೊಡುವುದು ಬೇಡ’ ಅಂದೆ. ಹಾಗೆ ಹೇಳಿದ್ದಕ್ಕೆ ನನಗೀಗ ಪಶ್ಚಾತ್ತಾಪವಿಲ್ಲ. ಒಂದು ನಾಟಕ ನೂರು ಪ್ರದರ್ಶನಗಳನ್ನು ಕಂಡರೆ, ಹದಿನೈದು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಸಂತೋಷ ನೀಡಿದರೆ ಅದನ್ನು ಬರೆದ ಲೇಖಕನಿಗೆ ಅದೇ ದೊಡ್ಡ ಸಂಭಾವನೆಯಲ್ಲವೆ? ಅದೂ ಅಲ್ಲದೆ ಈ ನಾಟಕದ ಯಶಸ್ಸಿನ ಸಿಂಹಪಾಲು ವಿಕಸಂಗೆ ಸಲ್ಲಬೇಕು.
ಆ ತಂಡದ ನೂರಾರು ಕಲಾವಿದರು ಯಾವ ಪ್ರತಿಫಲದ ನಿರೀಕ್ಷೆ ಇಲ್ಲದೆ ‘ಪುಕ್ಕಟೆ ಸಲಹೆ’ಯ ಜೈತ್ರಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ರಂಗದ ಹಿಂದೆ ದುಡಿದವರ ಶ್ರಮವೂ ಸಣ್ಣದಲ್ಲ. ನಿರ್ದೇಶನದ ಜವಾಬ್ದಾರಿಯ ಜೊತೆಗೆ ಲ್ಯಾಪ್ಟಾಪ್ ಶಾಸ್ತ್ರಿಯ ಮುಖ್ಯಪಾತ್ರವನ್ನು ನಿರ್ವಹಿಸುವ ಬಿ.ಅಶೋಕ್ ಎರಡರಲ್ಲೂ ಯಶಸ್ವಿಯಾಗಿದ್ದಾರೆ. ಅವರೊಬ್ಬ ಹವ್ಯಾಸಿ ರಂಗಭೂಮಿಯ ಏಳಿಗೆಗಾಗಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ಕಲಾವಿದ. ನಟನೆ, ನಿರ್ದೇಶನ, ನಾಟಕ ವಿಮರ್ಶೆ ಮತ್ತು ರಂಗ ಸಂಘಟನೆಗಾಗಿ ತಮ್ಮ ಬಿಡುವಿನ ವೇಳೆಯನ್ನು ಮೀಸಲಿಟ್ಟಿರುವ ಅಶೋಕ್ ಉತ್ತಮ ಕಂಠದಾನ ಕಲಾವಿದರೂ ಆಗಿದ್ದಾರೆ. ನೀರಾ ಪಾತ್ರ ಮಾಡುವ ಫಲ್ಗುಣಿಯೂ ಕಂಠದಾನ ಕಲಾವಿದೆ. ಹೀಗಾಗಿ ‘ಪುಕ್ಕಟೆ ಸಲಹೆ’ಯಲ್ಲಿ ಅವರದ್ದು ಚಲನೆಗೆ ಅವಕಾಶವಿಲ್ಲದ ಪಾತ್ರವಾದರೂ ಸ್ವರದ ಏರಿಳಿತದ ಮೂಲಕವೇ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾರೆ.
ಪ್ರೇಕ್ಷಕರ ಬೆಂಬಲವಿಲ್ಲದಿದ್ದರೆ ಯಾವುದೇ ನಾಟಕ ನೂರು ಪ್ರದರ್ಶನ ಕಾಣುವುದು ಸಾಧ್ಯವಿಲ್ಲ. ಕರೊನಾ ಬರದಿದ್ದರೆ ‘ಪುಕ್ಕಟೆ ಸಲಹೆ’ ಇದಕ್ಕೂ ಮುನ್ನವೇ ಶತಕ ಬಾರಿಸುತ್ತಿತ್ತು. ಕ್ರಿಕೆಟ್ ಪಂದ್ಯ, ಮಳೆ , ಸರಣಿ ರಜೆಗಳು ಮುಂತಾದ ಸಂದರ್ಭಗಳಲ್ಲೂ ಈ ನಾಟಕ ಹೌಸ್ಫುಲ್ ಪ್ರದರ್ಶನ ಕಂಡಿದೆ. ಇದಕ್ಕಾಗಿ ಪ್ರೇಕ್ಷಕಪ್ರಭುವಿಗೆ ನನ್ನ ಅನಂತ ನಮನಗಳು. ‘ಪುಕ್ಕಟೆ ಸಲಹೆ’ ಇತರ ತಂಡಗಳಿಂದಲೂ ದೇಶ-ವಿದೇಶಗಳಲ್ಲಿ ಪ್ರದರ್ಶನ ಕಂಡಿದೆ.
ಅವುಗಳನ್ನೂ ಸೇರಿಸಿದರೆ ಈಗಾಗಲೇ ಈ ನಾಟಕ ಸೆಂಚುರಿ ಹೊಡೆದಿದೆ ಎನ್ನಬಹುದು. ಹೊಸ, ಮೂಲ ಕನ್ನಡ ನಾಟಕಗಳನ್ನು ಪ್ರದರ್ಶನಕ್ಕೆ ತೆಗೆದುಕೊಳ್ಳುವವರು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನನ್ನ ‘ಪುಕ್ಕಟೆ ಸಲಹೆ’ಗೆ ನೂರು ಶೋಗಳನ್ನು ಕಾಣುವ ಭಾಗ್ಯ ದೊರಕಿದೆ. ಇದೊಂದು ಯೋಗಾಯೋಗವೇ ಸರಿ. ಇದಕ್ಕೆ ಕಾರಣರಾದ ನನ್ನ ಯುವ ಮಿತ್ರ ಅಶೋಕ್ ಬಿ, ವಿಕಸಂ ತಂಡದ ಎಲ್ಲರೂ ಮತ್ತು ನಾಟಕವನ್ನು ನೋಡಿ ಪೋ›ತ್ಸಾಹಿಸುತ್ತಿರುವ ಪ್ರೇಕ್ಷಕರಿಗೆ ನಾನು ಚಿರಋಣಿಯಾಗಿದ್ದೇನೆ.
ಮುಗಿಸುವ ಮುನ್ನ: ಪುಕ್ಕಟೆ ಸಲಹೆ ನಾಟಕಕ್ಕೂ/ ಗ್ಯಾರಂಟಿ ಯೋಜನೆಗೂ/ ಇಲ್ಲ ಯಾವುದೇ ನಂಟು/ ನಾಟಕ ನೋಡಿದರೆ/ ಮುನಿದ ಮಡದಿಯೂ/ ನಗುವ ಗ್ಯಾರಂಟಿ ಉಂಟು! (ಲೇಖಕರು ಖ್ಯಾತ ಕವಿ, ನಾಟಕಕಾರ)