

ಸನಾತನ ಧರ್ಮದ ಪ್ರಕಾರ ಮಾನವನು ತನ್ನ ಜೀವನದಲ್ಲಿ ಸಾಧಿಸಬೇಕಾದ ಚತುರ್ವಿಧ ಪುರುಷಾರ್ಥಗಳೆಂದರೆ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ. ಇಹಜೀವನದ ಅರ್ಥ ಮತ್ತು ಕಾಮಗಳನ್ನು ಪರಜೀವನದ ಮೋಕ್ಷದೊಂದಿಗೆ ಜೋಡಿಸುವುದು ಧರ್ಮ. ಅರ್ಥಸಂಪಾದನೆ ಮತ್ತು ಕಾಮಭೋಗಗಳು ಧರ್ಮದ ಚೌಕಟ್ಟಿನಲ್ಲಿಯೇ ಇರಬೇಕು. ಅರ್ಥ-ಕಾಮಗಳು ಧರ್ಮಬಾಹಿರವಾದಾಗ ದುಃಖಹೇತುಗಳಾಗಿ ವಿನಾಶದೆಡೆಗೊಯ್ಯುತ್ತವೆ. ಈ ನಾಲ್ಕು ಪುರುಷಾರ್ಥಗಳು ಯಾವುದೇ ಭೇದವಿಲ್ಲದೆ ಎಲ್ಲಾ ಸ್ತಿ›ೕ-ಪುರುಷರಿಗೂ ಅನ್ವಯವಾಗುತ್ತವೆ.
ಆಧ್ಯಾತ್ಮಿಕ ಪಥದಲ್ಲಿ ಸಾಧಕನಿಗೆ ಶಾಸ್ತ›ಗಳು ಹಾಗೂ ಗುರುವಿನ ಸಹಾಯ ಅತ್ಯವಶ್ಯಕ. ಏಕೆಂದರೆ, ಶಾಸ್ತ›ಗಳು ಜ್ಞಾನದ ಮಾರ್ಗವನ್ನು ತಿಳಿಸುತ್ತವೆಯೇ ಹೊರತು, ಆ ಮಾರ್ಗದ ಅನುಭವವೇದ್ಯ ವಿಚಾರಗಳನ್ನು ತಿಳಿಸುವುದಿಲ್ಲ. ಹಾಗಾಗಿ ಗುರುವಿನ ಸಹಾಯವಿಲ್ಲದೆ ಶಾಸ್ತ›ಗಳ ನಿಜವಾದ ಅರ್ಥವನ್ನು ತಿಳಿಯುವುದು ಅಸಾಧ್ಯ. ಅದೇ ರೀತಿಯಲ್ಲಿ ಶಾಸ್ತ›ಗಳ ಸಹಾಯವಿಲ್ಲದೆ ಗುರುವಿನ ಬೋಧನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಪ್ರಗತಿಗೆ ಗುರುವೂ ಬೇಕು, ಶಾಸ್ತ›ಗಳೂ ಅವಶ್ಯಕ.
ಸನಾತನ ಧರ್ಮದ ಮೂಲ ಗ್ರಂಥಗಳಾದ ವೇದ ಅಥವಾ ಶ್ರುತಿಗಳಲ್ಲಿ, ಋಷಿಗಳು ತಮ್ಮ ಧ್ಯಾನಾವಸ್ಥೆಯ ಅತ್ಯುನ್ನತ ಸ್ಥಿತಿಯಲ್ಲಿ ಗ್ರಹಿಸಿದ ಸತ್ಯಗಳನ್ನು ಹೊರಗೆಡಹಿದ್ದಾರೆ. ಇನ್ನೊಂದು ಭಾಗವಾದ ಸೃ್ಮಗಳಲ್ಲಿ, ಋಷಿಗಳು ವೇದಗಳ ಸತ್ಯಗಳನ್ನು ವ್ಯವಹಾರಕ್ಕೆ ತರುವ ಮಾರ್ಗದರ್ಶನದ ಜೊತೆಗೆ, ಆ ಸತ್ಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಲು ಸುಲಭ ಕಥೆಗಳನ್ನೊಳಗೊಂಡ ಇತಿಹಾಸ-ಪುರಾಣಗಳನ್ನು ದಯಪಾಲಿಸಿದ್ದಾರೆ. ಇತಿಹಾಸ-ಪುರಾಣಗಳು ಆಳವಾದ ಸತ್ಯಗಳಿಂದ ತುಂಬಿದ್ದು ಕಥಾಮಾಧ್ಯಮದ ಮೂಲಕ ಜನರನ್ನು ತಲುಪುತ್ತವೆ. ಆದರೆ ಭಗವದ್ಗೀತೆಯಾದರೋ, ಪರಮಗುರುವಾದ ಭಗವಂತನಿಂದಲೇ ಬೋಧಿಸಲ್ಪಟ್ಟಿದ್ದು, ಈ ಎಲ್ಲಾ ಗ್ರಂಥಗಳಿಗೆ ಶಿಖಾಮಣಿಯಾಗಿ ನಿಂತಿದೆ.
ಜಗತ್ತಿನ ಅತ್ಯಂತ ಬೃಹತ್ ಮಹಾಕಾವ್ಯವೂ, ಸೃ್ಮ-ಗ್ರಂಥವೂ ಆದ ಮಹಾಭಾರತದ ಒಂದು ಭಾಗವಾದ ಭಗವದ್ಗೀತೆಯನ್ನು ನಾವು ಒಂದು ಆಧ್ಯಾತ್ಮಿಕ ಕಾವ್ಯವೆಂದು ಕರೆಯಬಹುದು. ಭಗವದ್ಗೀತೆಯ ಏಳುನೂರು ಶ್ಲೋಕಗಳನ್ನು ಹದಿನೆಂಟು ಅಧ್ಯಾಯಗಳಾಗಿ ವಿಭಜಿಸಲಾಗಿದೆ, ಹಾಗೂ ಅಧ್ಯಯನದ ಅನುಕೂಲಕ್ಕಾಗಿ ಅದನ್ನು ಆರು ಅಧ್ಯಾಯಗಳನ್ನೊಳಗೊಂಡು ಒಂದೊಂದು ಪ್ರಧಾನ ತತ್ತ್ವವನ್ನು ಪ್ರತಿಬಿಂಬಿಸುವ ಮೂರು ಭಾಗಗಳಾಗಿ ವಿಂಗಡಿಸಬಹುದು. ಭಗವದ್ಗೀತೆಯ ಮೊದಲ ಆರು ಅಧ್ಯಾಯಗಳು ಕರ್ಮಮಾರ್ಗದ ಬಗ್ಗೆ, ಮಧ್ಯದ ಆರು ಅಧ್ಯಾಯಗಳು ಭಕ್ತಿಮಾರ್ಗದ ಬಗ್ಗೆ, ಹಾಗೂ ಕೊನೆಯ ಆರು ಅಧ್ಯಾಯಗಳು ಜ್ಞಾನಮಾರ್ಗದ ಬಗ್ಗೆ ತಿಳಿಸುತ್ತವೆ.
ಕರ್ಮಯೋಗವೆಂದರೆ ಕರ್ಮದ ಮಾರ್ಗ ಎಂದು ಅರ್ಥ. ಕರ್ಮತ್ಯಾಗ ಎಂದರೆ ಕೆಲಸವನ್ನೇ ಮಾಡದೇ ಇರುವುದು ಎಂದರ್ಥವಲ್ಲ; ಬದಲಿಗೆ ನಾವು ಕರ್ಮಗಳಲ್ಲಿ ತೊಡಗಿದಾಗ, ನಾನು-ನನ್ನದು ಎಂಬ ಅಹಂಕಾರ-ಮಮಕಾರಗಳನ್ನು ತ್ಯಜಿಸಿ ಸಮರ್ಪಣಾ ಭಾವದಿಂದ ಕರ್ಮಗಳನ್ನು ಮಾಡಬೇಕು. ಎಲ್ಲರೂ ತಮ್ಮ ಜೀವನದಲ್ಲಿ ಕರ್ತವ್ಯಕರ್ಮಗಳನ್ನು ಮಾಡಲೇಬೇಕು. ಶ್ರೀ ಕೃಷ್ಣನು ಶಿಷ್ಯನಾದ ಅರ್ಜುನನಿಗೆ ಕರ್ಮ ಮಾಡುವುದರಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾದ ಈ ಕರ್ಮಭೂಮಿಯಲ್ಲಿ, ವ್ಯಕ್ತಿಯು ಹೇಗೆ ಕರ್ಮಗಳನ್ನು ಆಚರಿಸಬೇಕೆಂಬ ಕರ್ಮಯೋಗದ ರಹಸ್ಯವನ್ನು ಬೋಧಿಸುತ್ತಾನೆ. ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ಕ್ರಿಯೆಗೆ ಒಂದು ಪ್ರತಿಕ್ರಿಯೆ ಇದ್ದೇ ಇರುತ್ತದೆ. ಈ ಪ್ರತಿಕ್ರಿಯೆಗಳಿಂದಾಗಿ ನಾವು ಪುನರ್ಜನ್ಮವನ್ನು ಪಡೆಯುತ್ತೇವೆ. ಕರ್ಮಯೋಗವೆಂದರೆ, ಕರ್ಮಗಳನ್ನು ಭಕ್ತಿಯ ಸಮರ್ಪಣಾ ಭಾವದಿಂದ ಜ್ಞಾನಲಾಭಕ್ಕಾಗಿ ಮಾಡುವುದು. ಆಗ ಕರ್ಮಫಲಗಳು ನಮ್ಮನ್ನು ಅಂಟುವುದಿಲ್ಲ. ಹಾಗೂ ಆಗ ಕರ್ಮವು ನಮ್ಮನ್ನು ಕರ್ಮಬಂಧನಕ್ಕೆ ದೂಡುವುದಿಲ್ಲ. ಹೀಗೆ ಲೋಕೋಪಕಾರಕ್ಕಾಗಿ ಮಾಡುವ ನಿಸ್ವಾರ್ಥ ಕರ್ಮಗಳು ನಮ್ಮ ಚಿತ್ತವನ್ನು ಶುದ್ಧಿಗೊಳಿಸಿ, ನಾವು ಪರಮೋನ್ನತ ಜ್ಞಾನವನ್ನು ಹೊಂದಲು ಸಿದ್ಧಪಡಿಸುತ್ತವೆ.
ಮಧ್ಯದ ಆರು ಅಧ್ಯಾಯಗಳು, ಮುಖ್ಯವಾಗಿ ಭಕ್ತಿಯ ಕುರಿತಾಗಿ ತಿಳಿಸುತ್ತವೆ. ಎಲ್ಲದರಲ್ಲಿಯೂ ಹುದುಗಿರುವ, ಎಲ್ಲದರ ಆದಿ-ಮಧ್ಯ-ಅಂತ್ಯವಾಗಿರುವ ಪರಬ್ರಹ್ಮ ತತ್ವದ ಮೇಲೆ ಏಕಾಗ್ರ ಚಿತ್ತದಿಂದ ಧ್ಯಾನಿಸುವ ವಿಧಾನವನ್ನು ಇಲ್ಲಿ ಬೋಧಿಸಲಾಗಿದೆ. ಪರಬ್ರಹ್ಮ ತತ್ವವನ್ನು ನಿರಂತವಾಗಿ ಧ್ಯಾನಿಸಿ, ಹೃದಯಪೂರ್ವಕವಾಗಿ ಪ್ರೀತಿಸಿ ಪೂಜಿಸುವುದರಿಂದ ಮನಸ್ಸು ಸ್ಥಿರವಾಗುತ್ತದೆ. ಆಗ ಅಂತರಂಗದಲ್ಲಿರುವ ಉನ್ನತ ಪ್ರಜ್ಞೆಯ ಬಾಗಿಲು ನಮಗೆ ತೆರೆದು ನಮಗೆ ಜ್ಞಾನೋದಯವಾಗುತ್ತದೆ. ಇದರಿಂದ ನಮ್ಮನ್ನು ಜನನ-ಮರಣ ಚಕ್ರದ ಬಂಧನದಲ್ಲಿ ಸಿಲುಕಿ, ಅದರಿಂದ ಹೊರಬರದಂತೆ ತಡೆಯುತ್ತಿರುವ ಕರ್ತೃತ್ವ- ಭ್ರೋಕೃ್ತ್ವ ಭಾವನೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಹೀಗೆ ನಿಸ್ವಾರ್ಥ ಕರ್ಮದಿಂದ ಪರಿಶುದ್ಧವಾದ ಮನಸ್ಸು ಹಾಗೂ ದಿವ್ಯತ್ವದ ಧ್ಯಾನದಿಂದ ಸ್ಥಿರವಾದ ಮನಸ್ಸು ಲಭಿಸಿ, ಮಾನವನು ಪರಮಜ್ಞಾನವನ್ನು ಹೊಂದಲು ಸಾಧ್ಯವಾಗುತ್ತದೆ. ಹೀಗೆ ಕರ್ಮ-ಭಕ್ತಿಗಳು ಪರಮಜ್ಞಾನವನ್ನು ಪಡೆಯಲು ಸೋಪಾನಗಳಾಗಿವೆ.
ಕೊನೆಯ ಆರು ಅಧ್ಯಾಯಗಳು ಪರಬ್ರಹ್ಮನ ನಿರ್ಗಣ-ನಿರಾಕಾರ ಸ್ವರೂಪದ ಬಗ್ಗೆ ಮೊದಲು ತಿಳಿಸುತ್ತವೆ. ಈ ನಿರಾಕಾರ ಸ್ವರೂಪವು, ಕಾಲಕ್ಕೆ ತಕ್ಕಂತೆ ಸಾಕಾರ ರೂಪವನ್ನು ಹೊಂದಿ, ವಿವಿಧ ಅವತಾರಗಳು ಉದಯವಾಗುತ್ತವೆ. ಶ್ರೀ ಕೃಷ್ಣನು ಇಂತಹ ಒಂದು ಅವತಾರ. ಈ ಆರು ಅಧ್ಯಾಯಗಳಲ್ಲಿ ಕೃಷ್ಣನ ಮುಖ್ಯ ಬೋಧನೆಯೆಂದರೆ, ಬ್ರಹ್ಮಜ್ಞಾನವನ್ನು ಪಡೆದು ಎಲ್ಲೆಲ್ಲಿಯೂ ದಿವ್ಯತ್ವವನ್ನು ಕಂಡು, ದ್ವೈತಭಾವದ ಅಜ್ಞಾನವನ್ನು ತೊರೆದು ಏಕತ್ವದರ್ಶನ ಮಾಡಿಕೊಳ್ಳಬೇಕು. ಇದುವೇ ಎಲ್ಲಾ ಸಾಧನೆಗಳ ಚರಮ ಗುರಿ.
ಕರ್ಮದಿಂದ ಚಿತ್ತಶುದ್ಧಿ; ಭಕ್ತಿಯಿಂದ ಚಿತ್ತವು ಸ್ಥಿರವಾಗುತ್ತದೆ; ಆಗ ಮಾತ್ರ ಜ್ಞಾನಸಿದ್ಧಿಯಾಗುತ್ತದೆ. ಒಂದು ಸರೋವರದ ತಳವನ್ನು ನಾವು ದಡದಲ್ಲಿ ನಿಂತು ನೋಡಬೇಕಾದರೆ, ಅದರಲ್ಲಿನ ನೀರು ಶುದ್ಧವಾಗಿಯೂ, ಸ್ಥಿರವಾಗಿಯೂ ಇರಬೇಕಲ್ಲವೇ?
ಭಗವದ್ಗೀತೆಯನ್ನು ಬಹುವಾಗಿ ಮೆಚ್ಚಿಕೊಂಡು ಅದರ ಮೇಲೆ ಭಾಷ್ಯವನ್ನು ಬರೆದ ಶ್ರೀ ಆದಿಶಂರಾಚಾರ್ಯರು ತಮ್ಮ ವೇದಾಂತ ಡಿಂಡಿಮದಲ್ಲಿ ಹೀಗೆ ಬರೆದಿದ್ದಾರೆ:
ಕರ್ವಣಿ ಚಿತ್ತಶುದ್ಧ್ಯರ್ಥಮೈಕಾಗ್ರಾ್ಯರ್ಥಮುಪಾಸನಾ |
ಮೋಕ್ಷಾರ್ಥಂ ಬ್ರಹ್ಮವಿಜ್ಞಾನಮಿತಿ ವೇದಾಂತಡಿಂಡಿಮ: || 26 ||
ಮನಸ್ಸಿನ ಪರಿಶುದ್ಧತೆಗೆ ಕರ್ಮವನ್ನು ಆಚರಿಸಬೇಕು; ಮನಸ್ಸಿನ ಏಕಾಗ್ರತೆ-ಸ್ಥಿರತೆಗಳಿಗಾಗಿ ಉಪಾಸನೆಯನ್ನು ಆಶ್ರಯಿಸಬೇಕು; ಆದರೆ ಮೋಕ್ಷವನ್ನು ಪಡೆಯಲು ಬ್ರಹ್ಮಜ್ಞಾನದಿಂದ ಮಾತ್ರ ಸಾಧ್ಯವೆಂದು ವೇದಾಂತ ಡಿಂಡಿಮವು ಘೊಷಿಸುತ್ತದೆ.
ಹೀಗೆ ಭಗವದ್ಗೀತೆಯು ಇಹ-ಪರ ಜೀವನಗಳ ಸಮನ್ವಯದ ಜೊತೆಯಲ್ಲಿಯೇ, ಕರ್ಮ-ಭಕ್ತಿ-ಜ್ಞಾನಗಳ ಸಮನ್ವಯವನ್ನೂ ಸಾಧಿಸುತ್ತದೆ. ಈ ದೃಷ್ಟಿಯಿಂದ ಭಗವದ್ಗೀತೆಯು ಯಾವುದೇ ಭೇದಭಾವಗಳಿಲ್ಲದೆ ಎಲ್ಲಾ ಸ್ತಿ›ೕ-ಪುರುಷರ ಜೀವನದ ಕೈಪಿಡಿಯಾಗಿದೆ. ಯಾವುದೇ ವಸ್ತುವನ್ನು ಉಪಯೋಗಿಸುವ ಮುನ್ನ ನಾವು ಅದನ್ನು ಹೇಗೆ ಉಪಯೋಗಿಸಬೇಕೆಂಬುದರ ಕುರಿತಾಗಿ ಅದರ ಕೈಪಿಡಿಯನ್ನು ಓದಿ ತಿಳಿದುಕೊಳ್ಳಬೇಕಲ್ಲವೇ? ಅಂತೆಯೇ, ಮಾನವನು ತನ್ನ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಲು ಜೀವನದ ಕೈಪಿಡಿಯಾದ ಭಗವದ್ಗೀತೆಯನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)