ಗುರು ಇಲ್ಲದೆ ಗುರಿ ಸಾಧಿಸಿದ: 80ಕ್ಕೂ ಹೆಚ್ಚು ವಿವಿಧ ತಳಿಗಳ ಹಣ್ಣು ಬೆಳೆ!

RAITA MAHILE
Published on

ಇವರದು ಕೇವಲ ಒಂದು ಎಕರೆ ಜಮೀನು. ಇಂದಿನ ಬಹುತೇಕ ರೈತರು ತಲೆತಲಾಂತರದಿಂದ ಬಂದ ಸಾಂಪ್ರದಾಯಿಕ ಕೃಷಿಯನ್ನೇ ನಂಬಿದ್ದಾರೆ. ಆದರೆ, ಇದಕ್ಕೆ ಅಪವಾದವೆಂಬಂತೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದ ಶಿವನಗೌಡ ಮಲ್ಲಪ್ಪ ಪಾಟೀಲರು 40 ಗುಂಟೆ ಜಮೀನಿನಲ್ಲಿ 80ಕ್ಕೂ ಹೆಚ್ಚು ವಿವಿಧ ತಳಿಗಳ ಹಣ್ಣು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಶಿವನಗೌಡರಿಗೆ ಕೃಷಿಯಲ್ಲಿ ಹೊಸದೇನಾದರೂ ಮಾಡಬೇಕು ಎಂಬ ತುಡಿತ ಇತ್ತು. ಆದರೆ, ಆಧುನಿಕ ಕೃಷಿಯ ಬಗ್ಗೆ ತಿಳಿವಳಿಕೆ, ಅನುಭವಗಳ ಕೊರತೆ ಕಾಡತೊಡಗಿತು. ಒಂದೆರಡು ದಿನ ರೇಡಿಯೋ ಹಾಗೂ ದೂರದರ್ಶನದ ಕೃಷಿ ಕಾರ್ಯಕ್ರಮ ಗಮನಿಸಿದರು. ಬಳಿಕ ಕಾರ್ಯಕ್ರಮದಲ್ಲಿನ ಕೃಷಿ ತಜ್ಞರ, ಯಶಸ್ವಿ ಕೃಷಿಕರ ಮಾತು ಕೇಳಿ ತಾನೂ ಯಾಕೆ ಬಾಳೆ ಕೃಷಿ ಮಾಡಬಾರದೆಂದು ಯೋಚನೆ ಮಾಡಿದರು. ಆದರೆ, ಚಿಕ್ಕೋಡಿ ತಾಲೂಕಿನಲ್ಲಿ ಬಾಳೆ ಬೆಳೆಯುವ ಸಾಹಸ ಮಾಡಿದವರು ಅತಿ ವಿರಳ. ಹಾಗೆಂದು ತಲೆ ಕೆಡಿಸಿಕೊಳ್ಳದ ಶಿವನಗೌಡ ತಾಲೂಕಿನಲ್ಲಿ ಯಾರೂ ಬೆಳೆಯದ ಬಾಳೆ ಬೆಳೆಯಲು ಮುಂದಾದರು.

ಭೂಮಿಯೇ ಪ್ರಯೋಗಶಾಲೆ: ರಾಸಾಯನಿಕದಿಂದ ಭೂಮಿಗೆ ಆಗುವ ಹಾನಿಯನ್ನು ಮನಗಂಡ ಶಿವನಗೌಡ ಸಂಪೂರ್ಣ ಸಾವಯವ ಪದ್ಧತಿಯಲ್ಲೇ ಬಾಳೆ ಬೆಳೆಯಲು ನಿರ್ಧರಿಸಿದರು. ಹಾಗೆ ಬಾಳೆ ಬೆಳೆಯಲು ಆರಂಭಿಸಿದವರು ರಾಜ್ಯಾದ್ಯಂತ ವಿವಿಧ ತಳಿಯ ಬಾಳೆ ಗಿಡಗಳನ್ನು ನಾಟಿ ಮಾಡಲಾರಂಭಿಸಿದರು. ಅಳಿದು ಹೋಗುತ್ತಿರುವ ತಳಿಗಳನ್ನು ತಂದು ಬೆಳೆಸಿದರು. ಅಷ್ಟಕ್ಕೆ ತೃಪ್ತಿ ಪಡದೇ ಹೊರರಾಜ್ಯಗಳಿಂದಲೂ ಬಾಳೆ ತರಿಸಿ ನಾಟಿ ಮಾಡಿದರು. ರಾಸಾಯನಿಕ ಗೊಬ್ಬರಗಳ ಅಬ್ಬರದ ಮಧ್ಯೆಯೂ ಕೇವಲ ಹಸುಗಳ ಮೂತ್ರ ಬಳಸಿ ಸಮೃದ್ಧ ಬಾಳೆಯೊಂದಿಗೆ ಅಧಿಕ ಇಳುವರಿಯನ್ನೂ ಪಡೆಯಲಾರಂಭಿಸಿದರು.

ವೈವಿಧ್ಯಮಯ ಬಾಳೆ ತಳಿ: ಶಿವನಗೌಡರು ತಮ್ಮ ಎಕರೆ ಭೂಮಿಯಲ್ಲಿ ಕೇರಳ, ತಮಿಳುನಾಡು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಾಳೆ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಇವರಲ್ಲಿ 60ಕ್ಕೂ ಹೆಚ್ಚು ವಿಶೇಷ ತಳಿಗಳಿವೆ. ಅವುಗಳಲ್ಲಿ ಜಿ-9, ರಸಬಾಳೆ, ಕೆಂಪು ಬಾಳೆ, ಹೂಬಾಳೆ, ಬರ್ಗಿ ಬಾಳೆ, ರಾಜಾಪುರಿ ಬಾಳೆ, ನೆಪೋಲಿಯನ್ ಬಾಳೆ, ಗುಲಾಬಿ ಬಾಳೆ, ಶ್ರೀಮತಿ ಬಾಳೆ, ಮಸ್ತಾ, ಮಂಧನಾ, ಬಿಸಾಂಗ್ ಬಾಳೆ, ಉದಯಂ ಬಾಳೆ, ನೇಂದ್ರ ಬಾಳೆ ಪ್ರಮುಖವಾಗಿವೆ.

ಇನ್ನು ಸಂಪೂರ್ಣ ಸಾವಯವ, ವಿಷರಹಿತ ಹಣ್ಣುಗಳನ್ನು ಬೆಳೆಯಬೇಕೆಂಬ ಉದ್ದೇಶದಿಂದ ಮನೆಯಲ್ಲಿ 2 ಹಸು ಮತ್ತು 7 ಎಮ್ಮೆಗಳನ್ನು ಸಾಕುತ್ತಿದ್ದಾರೆ. ಹಣ್ಣಿನ ಗಿಡಗಳಿಗೆ ಗೊಬ್ಬರ, ಗೋಮೂತ್ರ, ಸಗಣಿಯನ್ನು ಶೆಡ್​ನಿಂದಲೇ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ಇದರ ಸಂಪೂರ್ಣ ನಿರ್ವಹಣೆ ಶಿವನಗೌಡರ ಪತ್ನಿ ಸಾವಿತ್ರಿಯವರದು.

ಇಡೀ ವರ್ಷ ಹಣ್ಣು: ಜಮೀನಿನಲ್ಲಿ ಬಾವಿ ತೋಡಿ ನೀರಿನ ತೊಂದರೆ ನೀಗಿಸಿಕೊಂಡಿದ್ದಾರೆ. ಇಡೀ ವರ್ಷ ಹಣ್ಣಿನ ಗಿಡಗಳ ನಾಟಿ ಹಾಗೂ ಕಟಾವು ಮಾಡುತ್ತಲೇ ಇರುವ ಕಾರಣ ಒಂದಿಲ್ಲೊಂದು ಹಣ್ಣು ಕೊಯ್ಲಿಗೆ ಬರುತ್ತಲೇ ಇರುತ್ತದೆ. ವಿವಿಧ ತಳಿಯ ಬಾಳೆ ಗಿಡಗಳು ಸಮೃದ್ಧವಾಗಿ ಬೆಳೆದಿವೆ.

ಕೆಲವು ತಳಿಯ ಗೊನೆ 6 ಅಡಿಗಳಷ್ಟಿದ್ದು, ಇದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ. ಒಂದು ಬಾಳೆ ಗೊನೆಯಲ್ಲಿ 30ರಿಂದ 40 ಡಜನ್ ಹಣ್ಣು ಸಿಗುತ್ತದೆ. ತಿಂಗಳಿಗೊಂದು ಗೊನೆ ಬಂದರೂ ಸಾವಿರ ರೂ. ಆದಾಯ ಕಟ್ಟಿಟ್ಟ ಬುತ್ತಿ. ಒಟ್ಟಾರೆ ಶಿವನಗೌಡ ತಿಂಗಳಿಗೆ 70ರಿಂದ 80 ಸಾವಿರ ರೂ.ನಂತೆ ವಾರ್ಷಿಕ ಸುಮಾರು 4.5 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಈ ಕೃಷಿ ಪ್ರಯೋಗ ಖುಷಿ ನೀಡಿದೆ. ಜಮೀನಿನಲ್ಲಿ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಸಪೋಟಾ, ಸೇಬು, ಮೂಸಂಬಿ, ವಾಟರ್ ಆಪಲ್ ಬೆಳೆದಿದ್ದೇನೆ ಎನ್ನುತ್ತಾರೆ ಶಿವನಗೌಡ. ಹೆಚ್ಚಿನ ಮಾಹಿತಿಗೆ 8722141489 ಸಂರ್ಪಸಬಹುದು.

ವಿದೇಶಿ ಹಣ್ಣುಗಳ ಘಮಲು...

ರೈತ ಶಿವನಗೌಡ ಬಾಳೆ ಹಣ್ಣು ಮಾತ್ರವಲ್ಲದೆ ಸುಮಾರು 50ಕ್ಕೂ ಹೆಚ್ಚು ವಿವಿಧ ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಬ್ಲಾಕ್ ಬೆರಿ, ಲಕ್ಷ್ಮಣ ಫಲ, ಹನುಮನ ಫಲ, ಪ್ಲಮ್ ಮಲ್ಬಾರ್ ಆಂಡ್ ಪಿಸ್ತಾ, ಪೀನಟ್ ಬಟರ್, ವೆಲ್ವೆಟ್ ಆಪಲ್, ಅಬಿವೋ ಅಮೆರಿಕ ಹಣ್ಣು, ಸ್ವೀಟ್ ಚೆರಿ, ಇಸ್ರೇಲ್ ಆರೇಂಜ್, ಪೀಚ್ ಹಣ್ಣು, ಲಾಂಗಾನ್, ಎಗ್ ಫ್ರೂಟ್, ಪೀಯರ್ಸ್, ಆಪಲ್, ವಾಟರ್ ಆಪಲ್, ಬ್ಯಾಂಕಾಕ್ ಹಣ್ಣು, ಸಿಂಗಪುರ ಹಲಸು, ಜೇನು ಹಲಸು, ಥಾಯ್ಲೆಂಡ್ ರೆಡ್ ಹಲಸು, ಪಿಂಕ್ ಹಲಸು ಸೇರಿ ಸುಮಾರು 50ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ.

ಬ್ರೆಜಿಲ್ ಪೇರಲ, ಮಮ್ಮಿ ಸಪೋಟಾ ಕೂಡ ಇವೆ. ಅಲ್ಲದೆ ಥಾಯ್ಲೆಂಡ್​ನ ಆಲ್ ಸೀಜನ್ ಮ್ಯಾಂಗೋ, ರುದ್ರಾಕ್ಷಿ ಗಿಡ, ನೆಲ್ಲಿ ಕಾಯಿ ಡಬಲ್ ಕಲರ್, ಪುಲಸಾನ್, ಚೀನಾದ ಜಿಬೋತಿಕಾಬಾ, ಮಿಲ್ಕ್ ಫ್ರೂಟ್, ಮಿರ್ಯಾಕಲ್ ಫೂ›ಟ್, ಮಹಾಪರಾಂಗ್, ಅಂಬಟೆ, ಬನಾನಾ ಸಪೋಟ, ಕೆಂಪು ನಿಂಬೆ, ರೂಲುನಿಯಂ, ಮನಿಲಾ, ಟೆನ್ನಿಸ್​ಬಾಲ್ ಚೆರಿ, ಮೆಕಾಡುನಿಯಾ, ಸ್ವೀಟ್ ಹುಣಸೆ, ಬರ್ಬಾ ಹಣ್ಣು ಹಾಗೂ ಮಸಾಲೆ ಗಿಡಗಳಾದ ದಾಲ್ಚಿನ್ನಿ, ಕಾಳಮೆಣಸು, ಅಜವಾನ, ಏಲಕ್ಕಿ, ಲವಂಗದ ಗಿಡಗಳನ್ನೂ ಬೆಳೆದಿದ್ದಾರೆ. ರೆಡ್ ಮ್ಯಾಂಗೋ, ಬ್ಲಾಕ್ ಮ್ಯಾಂಗೋ, ಆಪೂಸು, ಕೇಸರ ಸೇರಿ ಒಟ್ಟು 15 ತಳಿಯ ಮಾವಿನ ಹಣ್ಣುಗಳಿವೆ.

ಗುರುವಿಲ್ಲದೆ ಗುರಿ ಸಾಧಿಸಿದ ತೃಪ್ತಿ ನನಗಿದೆ. ರೇಡಿಯೋ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗುವ ಕೃಷಿ ಕಾರ್ಯಕ್ರಮಗಳನ್ನು ವೀಕ್ಷಿಸಿ, ಆಲಿಸಿ ಅದರಲ್ಲಿರುವ ಸಲಹೆ, ಸೂಚನೆಗಳನ್ನು ಪಾಲಿಸಿ ಬೇಸಾಯ ಮಾಡುತ್ತಿದ್ದೇನೆ. ಇಡೀ ವರ್ಷ ಗಿಡಗಳು ಹಣ್ಣು ಕೊಡುತ್ತವೆ. ಹಣ್ಣುಗಳೇ ನನ್ನ ಬದುಕನ್ನು ಹಸನಾಗಿಸಿವೆ. ಸಾಲ ಮಾಡಿದ ಬ್ಯಾಂಕಿನಲ್ಲಿಯೇ ಈಗ ಲಕ್ಷಾಂತರ ರೂ. ಠೇವಣಿ ಇಟ್ಟಿದ್ದೇನೆ. | ಶಿವನಗೌಡ ಪಾಟೀಲ ಪೊಗತ್ಯಾನಟ್ಟಿ, ಚಿಕ್ಕೋಡಿ ತಾಲೂಕು ತುಂಡು ಭೂಮಿಯಲ್ಲಿ ಏನೆಲ್ಲ ಬೆಳೆದು ಉತ್ತಮ ಆದಾಯ ಪಡೆಯಬಹುದು ಎಂಬುದಕ್ಕೆ ರೈತ ಶಿವನಗೌಡ ಪಾಟೀಲರೇ ಉದಾಹರಣೆ. ಅವರಿಗೆ ತೋಟಗಾರಿಕೆ ಇಲಾಖೆ ಎಲ್ಲ ಸಹಾಯ, ಸಹಕಾರ ನೀಡಿದೆ. ವಿವಿಧ ಬಗೆಯ ಹಣ್ಣು ಬೆಳೆದು ಇಡೀ ಬೆಳಗಾವಿ ಜಿಲ್ಲೆಗೆ ಅವರು ಮಾದರಿಯಾಗಿದ್ದಾರೆ. | ಎಂ.ಎಸ್. ಹಿಂಡಿಹೊಳಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net