

| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಸ್ವಾಮಿ ವಿವೇಕಾನಂದರು 1892-93ರಲ್ಲಿ ಒಮ್ಮೆ ಮದ್ರಾಸ್ಗೆ ಭೇಟಿ ನೀಡಿದ್ದರು. ಆಗ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಗಳೂರಿನ ಶ್ರೀನಿವಾಸ್ ಪೈ ಮತ್ತು ಇತರ ಕೆಲವು ಯುವಕರು ಸ್ವಾಮೀಜಿಯವರ ಸಂಪರ್ಕಕ್ಕೆ ಬಂದರು. ಅವರ ಭಾಷಣ, ನಡೆನುಡಿಯಿಂದ ಪ್ರಭಾವಕ್ಕೆ ಒಳಗಾದ ಈ ಯುವಕರು ವಿದ್ಯಾಭ್ಯಾಸ ಮುಗಿಸಿ ಮಂಗಳೂರಿಗೆ ಹಿಂತಿರುಗಿ ಬಂದಾಗ, ‘ವಿವೇಕಾನಂದ ಸೊಸೈಟಿ’ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದರ ಮೂಲಕ ಶ್ರೀ ರಾಮಕೃಷ್ಣ ಹಾಗೂ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಜನರಿಗೆ ತಲುಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತೊಡಗಿದರು. 1927ರಲ್ಲಿ ಸ್ವಾಮಿ ಯತೀಶ್ವರಾನಂದಜಿ ಅವರ 3 ದಿನಗಳ ಪ್ರವಚನವನ್ನು ಮಂಗಳೂರಿನಲ್ಲಿ ಏರ್ಪಡಿಸಿದರು. ಬಹಳಷ್ಟು ಭಕ್ತರು ಪ್ರವಚನದಿಂದ ಪ್ರಭಾವಿತರಾದರು. ಶ್ರೀನಿವಾಸ್ ಪೈ ಕೂಡ ಆಗಾಗ ಉಪನ್ಯಾಸ ನೀಡುತ್ತಿದ್ದರು. 1940ರಲ್ಲಿ ಸಾಹುಕಾರ್ ಪೈ ಎಂಬುವರು ಬಡಮಕ್ಕಳಿಗಾಗಿ ಒಂದು ‘ಬಾಲಕಾಶ್ರಮ’ ಸ್ಥಾಪಿಸಿದರು. ಅಲ್ಲಿ ಮಕ್ಕಳಿಗೆ ಉಚಿತವಾಗಿ ಊಟ, ವಸತಿ ನೀಡಲಾಗುತ್ತಿತ್ತು.
ಅದೇ ಸಮಯದಲ್ಲಿ ಮಂಗಳೂರಿನ ಜನತೆಗೆ ಅಲ್ಲೊಂದು ರಾಮಕೃಷ್ಣ ಮಠ ಸ್ಥಾಪಿಸಬೇಕೆಂದು ಮನಸ್ಸಾಯಿತು. ಪ್ರಧಾನ ಕೇಂದ್ರವಾದ ಬೇಲೂರು ಮಠಕ್ಕೆ ಮನವಿ ಸಲ್ಲಿಸಿದರು. ಆಗ ಅಲ್ಲಿಂದ ಸ್ವಾಮಿ ವಿಮಲಾನಂದಜೀ ಅವರನ್ನು ಕಳುಹಿಸಲಾಯಿತು. 1947ರ ಜೂನ್ 3ರಂದು ಮಂಗಳೂರಿನ ರಾಮಕೃಷ್ಣ ಮಠವು ಲಾಲ್ಬಾಗ್ನ ಒಂದು ಬಾಡಿಗೆ ಮನೆಯಲ್ಲಿ ಪ್ರಾರಂಭವಾಯಿತು. ಈ ಮಠದಲ್ಲಿ ಸ್ವಾಮಿಯವರು ಕೆಲವು ಬ್ರಹ್ಮಚಾರಿಗಳ ಸಹಾಯದಿಂದ ಪೂಜೆ, ಭಜನೆ, ಪಾಠ, ಪ್ರವಚನ ನಡೆಸುತ್ತ್ತ ಬಂದರು. ಮೊದಲು ಇಂಗ್ಲಿಷ್ನಲ್ಲಿ ಪ್ರವಚನ ನೀಡುತ್ತಿದ್ದ ಸ್ವಾಮಿಗಳು, ನಂತರ ಕನ್ನಡ ಕಲಿತರು. ಕನ್ನಡದಲ್ಲೇ ಪ್ರವಚನ ನೀಡತೊಡಗಿದರು. ಆಳವಾದ ಶಾಸ್ತ್ರ ಅಧ್ಯಯನ ಸಹ ಮಾಡಿದರು.
ಅದೇ ಸಮಯದಲ್ಲಿ ಹಿಂದೂ ಸೇವಾಸಂಘದಿಂದ ಬಾಲಕಾಶ್ರಮ ನಡೆಸುತ್ತಿದ್ದ ಸಾಹುಕಾರ್ ವೆಂಕಟೇಶ್ ಪೈ ಅವರು ಅದನ್ನು ರಾಮಕೃಷ್ಣ ಮಠಕ್ಕೆ ಒಪ್ಪಿಸಿದರು. ಅದರಂತೆ 1951ರಲ್ಲಿ ಬಾಲಕಾಶ್ರಮದ ಜತೆಗೆ 7 ಎಕರೆ ಜಮೀನು, ಸುಂದರವಾದ ನಿವೇಶನ ಕೂಡ ರಾಮಕೃಷ್ಣ ಮಠಕ್ಕೆ ಹಸ್ತಾಂತರವಾದವು. ಮಠವು ಆಧ್ಯಾತ್ಮಿಕ ಚಟುವಟಿಕೆ ನಡೆಸುತ್ತಿದ್ದರೆ, ಬಾಲಕಾಶ್ರಮವನ್ನು ರಾಮಕೃಷ್ಣ ಮಿಷನ್ ನಡೆಸತೊಡಗಿತು. ಸ್ವಾಮಿ ವಿಮಲಾನಂದಜೀ ನಂತರ ಅವರ ಸ್ಥಾನಕ್ಕೆ ಆದಿದೇವಾನಂದಜೀ ಅಧ್ಯಕ್ಷರಾದರು. ಅವರೂ ಆ ಬಾಲಕಾಶ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನದ ಜತೆಗೆ ಆಧ್ಯಾತ್ಮಿಕ ನೈತಿಕ ಶಿಕ್ಷಣ ಸಹ ಕೊಟ್ಟರು. ಜಾತಿ-ಮತ, ಭೇದವಿಲ್ಲದೆ ಎಲ್ಲರಿಗೂ ಅವಕಾಶ ಸಿಕ್ಕಿತು. ಕೆಲವು ವರ್ಷಗಳೊಳಗೆ ಬಾಲಕಾಶ್ರಮದ ಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿತು. ಆಗ 1963ರಲ್ಲಿ ಬಾಲಕಾಶ್ರಮಕ್ಕೆ ಸ್ವಂತ ಕಟ್ಟಡ ನಿರ್ವಿುಸಲಾಯಿತು. ನಂತರ 1966ರಲ್ಲಿ ವಿಜ್ಞಾನಾನಂದಜೀ ಅಧ್ಯಕ್ಷರಾದರು. 1981ರಲ್ಲಿ ಅಧ್ಯಕ್ಷರಾದ ಸ್ವಾಮಿ ಸುಂದಾನಂದಜೀ ಅವರೇ ಈಗಿರುವ ಆಶ್ರಮವನ್ನು ಕಟ್ಟಿಸಿದವರು. ಉಚಿತ ಚಿಕಿತ್ಸಾಲಯ, ಸುಂದರ ಹೂತೋಟ ನಿರ್ವಣವಾದವು. ಶಿಕ್ಷಕರಿಗಾಗಿ ಕಮ್ಮಟಗಳನ್ನು ನಡೆಸಿದರು. ಶಾರದಾ ಮಹಿಳಾ ವೃಂದ ಪ್ರಾರಂಭಿಸಿದರು. 1998ರಲ್ಲಿ ಸ್ವಾಮಿ ಪೂರ್ಣಕಾಮಾನಂದಜೀ ಅಧ್ಯಕ್ಷರಾದರು. 4.5 ಅಡಿ ಎತ್ತರದ ವಿವೇಕಾನಂದರ ಮೂರ್ತಿ ಸ್ಥಾಪನೆಯಾಗಿದ್ದು ಇವರ ಕಾಲದಲ್ಲಿ. ವೇದಾಂತ ಸಾಹಿತ್ಯ ಹೆಚ್ಚು ಜನರಿಗೆ ತಲುಪಿಸಲು ಸುಂದರವಾದ ಪುಸ್ತಕ ಮಳಿಗೆ ನಿರ್ವಿುಸಿದರು. ರಾಮಕೃಷ್ಣ, ಶಾರದಾದೇವಿ, ವಿವೇಕಾನಂದರ ಸಾಹಿತ್ಯಕೃತಿಗಳನ್ನು ಇಟ್ಟರು. 1.2 ಕೋಟಿ ವೆಚ್ಚದಲ್ಲಿ 20 ಸಾವಿರ ಚದರಡಿ ಸಭಾಭವನ ನಿರ್ವಣವಾಯಿತು. 2001ರಲ್ಲಿ ಆಶ್ರಮದ ಸುವರ್ಣ ಮಹೋತ್ಸವಕ್ಕೆ ಸ್ವಾಮಿ ರಂಗನಾಥನಂದಜೀ ಬಂದಿದ್ದರು. ಆಗ ಸುವರ್ಣ ಮಹೋತ್ಸವದ ಸ್ಮಾರಕಸೌಧ ಲೋಕಾರ್ಪಣೆಯಾಯಿತು.
ಆಶ್ರಮದ ಕಾರ್ಯಚಟುವಟಿಕೆ: ಪ್ರತಿದಿನ ಪೂಜೆ ಪ್ರಾರ್ಥನೆ, ಭಜನೆ ಇರುತ್ತದೆ. ಧ್ಯಾನ ಮಾಡಲು ವಿಶಾಲ ಮಂದಿರ ಇದೆ. ಏಕಾದಶಿ ದಿನ ಸಂಧ್ಯಾರತಿಯ ನಂತರ ಶ್ರೀರಾಮನಾಮ ಸಂಕೀರ್ತನೆ ನಡೆಯುತ್ತದೆ. ಬಡವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ, ಹಾಲು, ಉಚಿತ ಪುಸ್ತಕ, ಸ್ಕೂಲ್ಬ್ಯಾಗ್, ಸಮವಸ್ತ್ರ, ವಿದ್ಯಾರ್ಥಿವೇತನ ಸಿಗುತ್ತದೆ. ಭಜನೆ, ಭಗವದ್ಗೀತಾ ಪಠಣ, ಲಲಿತಾ ಸಹಸ್ರನಾಮ ಪಠಣ ಕಲಿಸಲಾಗುತ್ತದೆ. ಯೋಗಾಸನ ಶಿಬಿರ, ಸಾಂಸ್ಕೃತಿಕ-ಸಂಗೀತ ಕಾರ್ಯಕ್ರಮ, ಬೇಸಿಗೆ ಶಿಬಿರ ನಡೆಯುತ್ತಿರುತ್ತವೆ. ಶಾರದಾ ವಾಚನಾಲಯದಲ್ಲಿ ಸುಮಾರು 8000 ಪುಸ್ತಕಗಳಿವೆ. ಬೃಹತ್ ಪ್ರಮಾಣದಲ್ಲಿ ಮಂಗಳೂ ರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಆಶ್ರಮದ ಸಮಾಜಸೇವೆಯ ಪ್ರಮುಖಾಂಶ
ಸ್ವಾಮಿ ಜಿತಕಾಮಾನಂದಜೀ ಮಾರ್ಗದರ್ಶನ: ಈಗ ಅಧ್ಯಕ್ಷರಾಗಿರುವ ಸ್ವಾಮಿ ಜಿತಕಾಮಾನಂದಜೀ ತ್ಯಾಗಜೀವನವನ್ನು ಆಯ್ದುಕೊಂಡಿದ್ದು 1973ರಲ್ಲಿ. ತ್ರಿಶೂರಿನ ರಾಮಕೃಷ್ಣ ಮಿಷನ್ನಲ್ಲಿ ಬ್ರಹ್ಮಚಾರಿಯಾಗಿ ಆಧ್ಯಾತ್ಮಿಕ ಜೀವನ ಪ್ರಾರಂಭಿಸಿ ನಂತರ, ಬೇಲೂರು ಮಠದಲ್ಲಿ 2 ವರ್ಷ ವಿಶೇಷ ತರಬೇತಿ ಪಡೆದು, ಕಾಲಡಿಯಲ್ಲಿ ಕೆಲವು ಕಾಲ ಕಾರ್ಯನಿರ್ವಹಿಸಿ 1983ರಲ್ಲಿ ಸಂನ್ಯಾಸ ದೀಕ್ಷೆ ಪಡೆದರು. ಆಗಿನಿಂದ ಎರಡು ದಶಕ ಮಂಗಳೂರಿನ ಬಾಲಕಾಶ್ರಮದ ಮುಖ್ಯಸ್ಥರಾಗಿದ್ದರು. 2001ರಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮದ ನೈತಿಕ-ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸಂಚಾಲಕರಾದರು. 2010ರಲ್ಲಿ ಮಂಗಳೂರಿನ ರಾಮಕೃಷ್ಣ ಮಠ ಮತ್ತು ಮಿಷನ್ನಿನ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ. ಅನೇಕ ಉಪನ್ಯಾಸ- ಕಾರ್ಯಾಗಾರ-ಅಭಿಯಾನಗಳನ್ನು ನಡೆಸಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಏರ್ಯ ಪ್ರಶಸ್ತಿ, ಶ್ರೀನಿವಾಸ ಮಲ್ಯ ಪ್ರಶಸ್ತಿ ಪಡೆದಿದ್ದಾರೆ.
(ಲೇಖಕರು ಆಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)