

ವೀಣಾ ಶಾಂತೇಶ್ವರ ಅವರು ಆಧುನಿಕ ಕನ್ನಡ ಕಥಾ ಸಾಹಿತ್ಯದಲ್ಲಿ ಪರಂಪರೆಯೊಂದನ್ನು ನಿರ್ವಿುಸಿದ ಪ್ರಮುಖ ಬರಹಗಾರ್ತಿ. ಐದು ದಶಕಗಳಿಂದ ಬರೆಯುತ್ತಿರುವ ಅವರು ಕನ್ನಡದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಮೊದಲ ಲೇಖಕಿಯೂ ಹೌದು. ಅವರಿಗೆ ಎಪ್ಪತ್ತೈದು ವರ್ಷ ತುಂಬಿದ ಈ ಸಂದರ್ಭದಲ್ಲಿ ಅವರ ಜೀವನಯಾನದ ಮೆಲುಕು ಇಲ್ಲಿದೆ.
ಆಕೆ ಆರು ವರ್ಷದ ಪೋರಿ. ಬಟ್ಟಲುಕಂಗಳ ತುಂಬ ಬಣ್ಣದ ಕನಸು. ಆದರೆ ಆ ಕನಸಿನ ದಾರಿ ಮಾತ್ರ ನೇರ, ದಿಟ್ಟ ಮತ್ತು ಗಮ್ಯಕೇಂದ್ರಿತ. ಆಕೆ ಆ ಪುಟ್ಟ ವಯಸ್ಸಿನಲ್ಲಿ ಬರೆದ ಕತೆಯ ರಾಜಕುಮಾರಿ ಕತ್ತಿ ಹಿಡಿದು ಕುದುರೆ ಹತ್ತಿ ಸಮುದ್ರ ದಾಟಿ ರಾಕ್ಷಸನೊಡನೆ ಹೋರಾಡಿ ತನ್ನ ರಾಜಕುಮಾರನನ್ನು ಬಿಡಿಸಿ ತರುತ್ತಾಳೆ!
ಹೌದು, ಅಂದಿನ ಆ ಆರರ ಬಾಲೆ ಇಂದು ಎಪ್ಪತ್ತೈದರ ಮಾಗಿದ ಫಲವಾಗುವವರೆಗಿನ ಜೀವನಯಾನದ ಉದ್ದಕ್ಕೂ ಕುದುರೆ ಹತ್ತಿ, ಕತ್ತಿ ಹಿಡಿದು ರಕ್ಕಸರ ಜತೆ ಹೋರಾಡುತ್ತಿದ್ದಾಳೆ. ಹೀಗೆ ತನ್ನ ಬದುಕಿಗಾಗಿ, ಕರ್ತವ್ಯಕ್ಕಾಗಿ, ತಾನು ನಂಬಿದ ಮೌಲ್ಯಗಳಿಗಾಗಿ, ನೊಗ ಹೊತ್ತ ಸಂಸ್ಥೆಯ ಏಳಿಗೆಗಾಗಿ, ಯಾರನ್ನೂ ಅವಲಂಬಿಸದೆ ಸ್ವತಃ ಕತ್ತಿ ಹಿಡಿದು ಯುದ್ಧ ಮಾಡುವ ಎದೆಗಾರಿಕೆ ನಮ್ಮ ನೆಲದಲ್ಲಿ ಅಪರೂಪ. ಇಂತಹ ಸ್ವತಂತ್ರ ವ್ಯಕ್ತಿತ್ವದಿಂದಾಗಿ ತಮ್ಮಬರಹ-ಬದುಕು ಎರಡರ ಮೂಲಕವೂ ಅಧೀನ ವ್ಯಕ್ತಿತ್ವದ ಸ್ತ್ರೀ ಮಾದರಿಗಳೇ ತುಂಬಿರುವ ಸಮಾಜಕ್ಕೆ ಶಾಕ್ ನೀಡಿದವರು ಡಾ. ವೀಣಾ ಶಾಂತೇಶ್ವರ.
ಆ ಎಳೆ ಚಿಗುರು ಬೆರಳು ಶುರು ಮಾಡಿದ ಕಥಾ ಬರವಣಿಗೆ ನಿರಂತರವಾಗಿ ಮುಂದುವರೆಯುತ್ತ ನ್ಯೂಯಾರ್ಕ್ ಫೆಮಿನಿಸ್ಟ್ ಪ್ರೆಸ್ ಹೊರತಂದ ‘ಜಗತ್ತಿನ ಅತ್ಯುತ್ತಮ ಮಹಿಳಾ ಕೃತಿಗಳು’ ಸಂಪುಟದಲ್ಲಿ ಕಥೆ ಪ್ರಕಟಿಸುವ ಮಟ್ಟಕ್ಕೆ ಯಶಸ್ಸು ಸಾಧಿಸಿದೆ.
ವೀಣಾ ಚಿಕ್ಕಂದಿನಲ್ಲೇ ಚಿತ್ತಸ್ಥೈರ್ಯ, ಸ್ವಾಭಿಮಾನಗಳನ್ನು ರೂಢಿಸಿಕೊಂಡಿದ್ದರು. ಅದರೊಂದಿಗೆ ಅಪಾರ ಅಕ್ಷರಪ್ರೀತಿ. ಮಹಿಳೆಯರು ಕಾಲೇಜಿನ ಮುಖ ನೋಡುವುದೇ ಅಪರೂಪವಾಗಿದ್ದ ಕಾಲದಲ್ಲಿ ಅವರು ಹಾಸ್ಟೆಲ್ಗಳಲ್ಲಿದ್ದು ಓದಿದರು. ಆ ಕಾಲಕ್ಕೇ ಇಂಗ್ಲಿಷ್ ಎಂ.ಎ., ಪಿಎಚ್.ಡಿ., ಎಂ.ಲಿಟ್ ಮಾಡಿದರು. ಭಾಷಾ ಶಿಕ್ಷಣದ ಸ್ನಾತಕೋತ್ತರ ಡಿಪ್ಲೊಮಾ, ಹಿಂದಿ ರಾಷ್ಟ್ರಭಾಷಾ ವಿಶಾರದ, ಫ್ರೆಂಚ್ ಸರ್ಟಿಫಿಕೇಟ್ ಕೋರ್ಸ್... ಇವನ್ನೆಲ್ಲ ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಸ್ವರ್ಣಪದಕ, ಪ್ರಶಸ್ತಿ-ಫೆಲೋಶಿಪ್ಗಳು ಒಂದರ ಮೇಲೊಂದು ಬಂದವು. ಅದರ ಹಿಂದೆ ಇದ್ದದ್ದು ಅವರ ಶ್ರದ್ಧೆ ಮತ್ತು ಕಠಿಣ ಪರಿಶ್ರಮ.
ಶಾಲಾ ಹಂತದಲ್ಲೇ ಬರವಣಿಗೆ ಆರಂಭ: ವೀಣಾ ಅವರ ತಂದೆ ಬಿ.ಎಚ್. ಕಲಬುರ್ಗಿ ಕೆಮಿಸ್ಟ್ರಿ ಪ್ರೊಫೆಸರ್ ಆಗಿದ್ದರು. ತಾಯಿ ಇಂದಿರಾ ಸ್ತ್ರೀಶಿಕ್ಷಣದ ಬಗ್ಗೆ ಗಾಢನಂಬಿಕೆ ಉಳ್ಳವರಾಗಿದ್ದರು. ತಾಯಿಯಿಂದ ವೀಣಾಗೆ ಮೂರನೇ ವಯಸ್ಸಿಗೇ ಅಕ್ಷರಾಭ್ಯಾಸ ಆರಂಭವಾಯಿತು. ನಾಲ್ಕನೇ ವಯಸ್ಸಿಗೇ ಅವರು ಪ್ರಗತಿಪರ ವಿಚಾರವುಳ್ಳ ಕನ್ನಡ-ಮರಾಠಿ ಪತ್ರಿಕೆಗಳನ್ನು ಓದಲಾರಂಭಿಸಿದರು. ಕ್ರಮೇಣ ಮಹಿಳಾ ಸ್ವಾತಂತ್ರ್ಯ- ಸಮಾನತೆಯಲ್ಲಿ ನಂಬಿಕೆ ಬೆಳೆಸಿಕೊಂಡರು. ಅನ್ಯಾಯದ ವಿರುದ್ಧ ಸಿಡಿದೆದ್ದು ಹೋರಾಡಿ ಯಶಸ್ವಿಯಾಗುವ ನಾಯಕಿಯರ ಕತೆಗಳನ್ನು ಹೈಸ್ಕೂಲಿನಲ್ಲಿದ್ದಾಗಲೇ ಬರೆದು ಪ್ರಕಟಿಸುತ್ತಿದ್ದರು!
ನಂತರ ತಮ್ಮ ಓದಿನ ವ್ಯಾಪ್ತಿ ವಿಸ್ತರಿಸಿಕೊಂಡು ಕನ್ನಡ, ಹಿಂದಿ, ಇಂಗ್ಲಿಷ್ ಸಾಹಿತ್ಯವನ್ನು ಓದಿದರು. ಸೋಲು, ಅಪನಿಂದೆಗಳಿಗೆ ಹೆದರದ ಸ್ವಾವಲಂಬಿ ಹೆಣ್ಣಿನ ಮಾನಸಿಕ, ವೈಚಾರಿಕ ಸಮಸ್ಯೆಗಳ ಕುರಿತು ಕತೆಗಳನ್ನು ಬರೆಯುತ್ತ ಅನೇಕ ಕಥಾಸಂಕಲನಗಳನ್ನು, ಕಾದಂಬರಿಗಳನ್ನು ಬರೆದರು. ಹತ್ತಾರು ವಿಮರ್ಶಾ ಲೇಖನಗಳನ್ನು, ರೇಡಿಯೊ ನಾಟಕಗಳನ್ನು ಬರೆದರು. ಅನೇಕ ಮಹತ್ವದ ಕೃತಿಗಳನ್ನು ಸಂಪಾದಿಸಿದರು.
ವೀಣಾ ಅವರ ಕತೆಗಳಲ್ಲಿ ಲಿಂಗ ವ್ಯತ್ಯಾಸವನ್ನು ಮೀರಿದ ವ್ಯಕ್ತಿತ್ವದ ಹುಡುಕಾಟವಿದೆ. ಅವು ಆತ್ಮಶೋಧ ಮತ್ತು ಬಿಡುಗಡೆಯನ್ನು ಪ್ರತಿಪಾದಿಸುತ್ತವೆ. ಹೆಣ್ಣನ್ನು ದೇಹವಾಗಿಸಿದ ಸಾಮಾಜಿಕ ರಚನೆಯಲ್ಲಿ ಆಕೆಯ ಅಸ್ತಿತ್ವಹೀನತೆ, ಅಧೀನತೆಗಳ ಒಳತುಡಿತವನ್ನು ಅವರು ಕಲಾತ್ಮಕ ಕತೆಗಳಾಗಿಸಿದ್ದಾರೆ. ನವ್ಯದ ಉಚ್ಛಾ›ಯ ಕಾಲದ ಮಹಿಳಾ ಸಂವೇದನೆಗೆ ಹೊಸ ದಾರಿಯನ್ನು ತೆರೆದವರೆಂದು ಮನ್ನಣೆ ಪಡೆದಿದ್ದಾರೆ.
ಪಾಶ್ಚಾತ್ಯ ವೈಚಾರಿಕತೆಯಿಂದ, ಜಾಗತಿಕ ಸ್ತ್ರೀವಾದಿ ಚಿಂತನೆಗಳಿಂದ, ಜೀವನಾನುಭವದಿಂದ ತಾವು ಪಡೆದುದನ್ನು ವಾಸ್ತವದ ಕುಲುಮೆಯಲ್ಲಿ ಹದಗೊಳಿಸುತ್ತ, ಜೀವಪರ ಮಾನವಾಸಕ್ತಿಗಳಿಂದ ಮಾಗುತ್ತ ಬೆಳೆದ ವೀಣಾ, ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅವರ ಕಥಾನಾಯಕಿಯರು ವಿಚಿತ್ರ ತಲ್ಲಣ-ಒಂಟಿತನಗಳಲ್ಲಿ ಬೇಯುತ್ತಾರೆ.
ಹೊಂದಾಣಿಕೆಯ ಸಿದ್ಧಸೂತ್ರಗಳಲ್ಲಿ ಪುರುಷಪರ ನೈತಿಕತೆಯ ನಿಯಂತ್ರಣಗಳಲ್ಲಿ ಘಾಸಿಯಾಗುವ ಹೆಣ್ಣಿನ ಸೃಜನಶೀಲತೆಯ ಕುರಿತು ಸಾಮಾಜಿಕ ಮನಸ್ಸಿನಲ್ಲಿ ಮಂಥನದ ಅಲೆಗಳನ್ನು ಮೂಡಿಸುತ್ತಾರೆ. ತಪ್ಪು-ಸರಿಗಳ ತಂತಿ ಮೇಲಿನ ನಡಿಗೆಯಲ್ಲಿ ತಪ್ಪುಗಳಿಗೆ ಒಡ್ಡಿಕೊಳ್ಳುತ್ತ ಸರಿಯ ಶೋಧಕ್ಕೆ ತೊಡಗುತ್ತಾರೆ. ಸ್ವಮರುಕದ ಘಟ್ಟವನ್ನು ಮೀರಬೇಕಾದ ಅಗತ್ಯವನ್ನು ಸ್ತ್ರೀಲೋಕ ನಿಧಾನವಾಗಿ ಮನದಟ್ಟು ಮಾಡಿಕೊಳ್ಳುತ್ತಿದ್ದ ಸಂದರ್ಭದ ಏರಿಳಿತವನ್ನು ಅವುಗಳ ಎಲ್ಲ ಸೂಕ್ಷ್ಮದೊಂದಿಗೆ ಹಿಡಿಯುವ ಹಂಬಲ ಅವರ ಬರವಣಿಗೆಯಲ್ಲಿದೆ.
ಚಿತ್ರಕಲೆ, ಕೊಳಲು, ಸಿತಾರ್: ಬಾಲ್ಯದಲ್ಲಿ ತುಳಸಿಕಟ್ಟೆಯೆದುರು ದೊಡ್ಡ ದೊಡ್ಡ ರಂಗೋಲಿ ತೆಗೆದರೆ ಅದನ್ನು ನೊಡಲೆಂದೇ ಅಕ್ಕಪಕ್ಕದವರು ಬರುವಷ್ಟು ಮೋಹಕ ಸೌಂದರ್ಯ. ಇದೇ ನೈಪುಣ್ಯ ಮುಂದೆ ಚಿತ್ರಕಲೆಯ ರೂಪದಲ್ಲಿ ಅಭಿವ್ಯಕ್ತಿ ಪಡೆದು ವಾಟರ್ ಕಲರ್, ಆಯಿಲ್ ಪೇಂಟುಗಳ ಹಲವಾರು ಸುಂದರ ಚಿತ್ರಗಳಾದವು.
ಸಮವಯಸ್ಸಿನ ಹುಡುಗಿಯರ್ಯಾರೂ ಮಾಡಲಾರದ್ದನ್ನು ತಾನು ಸಾಧಿಸಬೇಕೆಂಬ ಅವರ ಅನನ್ಯತೆಯ ಕುರಿತಾದ ಆಕರ್ಷಣೆಯಿಂದ ಕಾಖಂಡಕಿ ರಂಗಾಚಾರ್ಯರಿಂದ ಕೊಳಲು ಕಲಿತು ಬಾಗಲಕೋಟೆಯಲ್ಲಿ ಅನೇಕ ಪ್ರದರ್ಶನ ನೀಡಿ, ಮುಂದೆ ಧಾರವಾಡದಲ್ಲಿ ಉಸ್ತಾದ ಮೆಹಬೂಬಖಾನರಲ್ಲಿ ಸಿತಾರ ಕಲಿತು ಕಾಲೇಜಿನ, ವಿಶ್ವವಿದ್ಯಾಲಯದ ಕಾರ್ಯಕ್ರಮಗಳಲ್ಲಿ ನುಡಿಸುವ ಮಟ್ಟದ ಸಂಗೀತ ಸಿದ್ಧಿಯನ್ನು ಸಂಪಾದಿಸಿದ್ದಾರೆ. ಆದರೆ ಬಣ್ಣ ಮತ್ತು ವಾದ್ಯಗಳ ಜತೆಗಿನ ನಂಟನ್ನು ಬಹುಕಾಲ ಉಳಿಸಿಕೊಳ್ಳಲು ಮಾಡಬೇಕಾದ ಸಾಧನೆಗೆ ಅಡ್ಡಿಯಾದದ್ದು ಅವರು ಸಮರ್ಥವಾಗಿ ನಿಭಾಯಿಸಿದ ಬಹುದೊಡ್ಡ ಜವಾಬ್ದಾರಿಯಾದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಪಟ್ಟ.
39 ವರ್ಷ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದು, ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಹುದ್ದೆ ದೊರೆತಾಗ ದುಸ್ಥಿತಿಯಲ್ಲಿದ್ದ ಸಂಸ್ಥೆಯನ್ನು ಶಿಸ್ತು, ಸಮಯಪಾಲನೆಗಳಿಂದ ಸುಧಾರಿಸಿ ಹೊಸ ಕೋರ್ಸಗಳನ್ನು ಆರಂಭಿಸಿ, ಹೊಸ ಕಟ್ಟಡ, ರ್ಪಾಂಗ್, ಉದ್ಯಾನಗಳಿಂದ ನಳನಳಿಸುವಂತೆ ಮಾಡಲು ಅವರಿಗೆ ಸಾಧ್ಯವಾಗಿದ್ದು ಅವರ ವ್ಯಕ್ತಿತ್ವದಲ್ಲಿ ಹಾಸು ಹೊಕ್ಕಾಗಿರುವ ಆತ್ಮಸ್ಥೈರ್ಯ, ಕಷ್ಟಸಹಿಷ್ಣುತೆ, ಛಲ ಬಿಡದೆ ಹೋರಾಡುವ ಮನೋಧರ್ಮದಿಂದ. ಯುದ್ಧೋಪಾದಿಯ ಈ ಪ್ರಕ್ರಿಯೆಯಲ್ಲಿ ಅವರ ನಿಷ್ಠುರತೆಯಿಂದ ತೊಂದರೆಯಾದವರ ದ್ವೇಷ-ಅಸೂಯೆಗಳ ಕಿರುಕುಳವನ್ನು ಸಹಿಸಿಕೊಳ್ಳುವ ಅನಿವಾರ್ಯತೆಯಿತ್ತು. ಆಗಿನ ನೋವು, ಅಪಮಾನಗಳನ್ನು ಸಹಿಸುವ ಅಪಾರ ತಾಳ್ಮೆ, ಎಂಥ ಪ್ರಸಂಗದಲ್ಲೂ ಕಂಗೆಡದಂತೆ ಜತೆಗಿರುವ ಆಶಾವಾದ ಇವು ಅವರ ಮುಖ್ಯ ಸ್ವಭಾವವೇ ಆಗಿದೆ.
ಇಳಿವಯದಲ್ಲೂ ಸಾಹಿತ್ಯಕೃಷಿಯ ತುಡಿತ
ತಮ್ಮವೃತ್ತಿ ಜೀವನದ ಅನುಭವಗಳ ಹಿನ್ನೆಲೆಯಲ್ಲಿ, ನ್ಯಾಯನಿಷ್ಠುರವಾದಿ ಮಹಿಳೆಯ ಸಾಧನೆಯ ಹಾದಿಯ ಆತಂಕಗಳನ್ನು ಬರವಣಿಗೆಯ ರೂಪದಲ್ಲಿ ದಾಖಲಿಸುವ ಇರಾದೆಯನ್ನು ವೀಣಾ ಹೊಂದಿದ್ದಾರೆ. ಅದಲ್ಲದೇ ಸಮಾಜದಲ್ಲಿ ಪ್ರಜ್ಞಾವಂತ ಮಹಿಳೆಯ ಬದುಕಿನಲ್ಲಿ ಕಳೆದ ಮೂರು ತಲೆಮಾರುಗಳಿಂದ ಆಗುತ್ತಿರುವ ಸ್ಥಿತ್ಯಂತರ, ಆಕೆ ಹಾಯಲೇಬೇಕಾದ ವಿಷಚಕ್ರಗಳು ವಸ್ತುವಾಗಿರುವ ಕಾದಂಬರಿಯ ತಯಾರಿಯಲ್ಲಿದ್ದಾರೆ.
ಆತ್ಮಕತೆಯ ರಚನೆಗಾಗಿ ಬೇಕಾದ ಒಂದು ಪಕ್ವ ಮನಸ್ಥಿತಿಯ ನಿರೀಕ್ಷೆಯಲ್ಲಿದ್ದಾರೆ. ತಮ್ಮಕತೆಗಳಲ್ಲಿನ ಸ್ತ್ರೀ ಅಸ್ಮಿತೆಯ ತಾತ್ವಿಕ ಶೋಧದಿಂದ ಆನಂತರದ ಎರಡು ದಶಕಗಳ ಕಾಲದ ಮಹಿಳಾ ಬರವಣಿಗೆಯನ್ನು ಪ್ರಭಾವಿಸಿದ ವೀಣಾ ಅವರು ಮುಂದೆ ಬರೆಯಲಿರುವ ಈ ಕೃತಿಗಳನ್ನು ಕನ್ನಡದ ಓದುಗ ಪ್ರಪಂಚ ಕುತೂಹಲದಿಂದ ಕಾಯುವುದರಲ್ಲಿ ಅಚ್ಚರಿಯಿಲ್ಲ.
ಹಲವು ಪ್ರಶಸ್ತಿ- ಪುರಸ್ಕಾರ
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಮಲ್ಲಿಕಾ, ಅನುಪಮಾ, ಸದೋದಿತಾ, ದಾನ ಚಿಂತಾಮಣಿ, ಕಾತ್ಯಾಯನಿ ಸಮ್ಮಾನ್ಗಳಲ್ಲದೇ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿಗಳೂ ವೀಣಾ ಅವರಿಗೆ ಲಭಿಸಿವೆ. ಬಹುಭಾಷೆಗಳ ಪಾಂಡಿತ್ಯದಿಂದಾಗಿ ಭಾರತೀಯ ಸಾಹಿತ್ಯದ ಮಹತ್ವದ ಕೃತಿಗಳನ್ನು ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿಷಯ ತಜ್ಞತೆ, ಭಾಷಾಪ್ರಭುತ್ವ ಮತ್ತು ಸೃಜನಶೀಲ ಪ್ರತಿಭೆಯಲ್ಲಿ ಅನುವಾದವೂ ಸ್ವತಂತ್ರ ಕೃತಿಯಷ್ಟೇ ಸಮರ್ಥ ರಚನೆಯಾಗಬಲ್ಲವೆಂದು ಪ್ರತಿಪಾದಿಸಿದ್ದಾರೆ. ಕುವೆಂಪು ಭಾಷಾಭಾರತಿಯು ಅವರಿಗೆ ಜೀವಮಾನದ ಸಾಧನೆಗಾಗಿ ಗೌರವ ಪ್ರಶಸ್ತಿಯನ್ನು ಕೊಟ್ಟಿದೆ.
ಬರಹಗಾರ್ತಿಯರ ಹಿರಿಯಕ್ಕ
ವೀಣಾ ಅವರು ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಸಾಫ್ಟ್್ಟೇರ್ ದಿಗ್ಗಜ ನಂದನ್ ನಿಲೇಕಣಿಯವರನ್ನು ಸಂರ್ಪಸಿ ವಿನಂತಿಸಿಕೊಂಡ ಕಾರಣಕ್ಕಾಗಿ ಧಾರವಾಡಕ್ಕೆ ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರ ಎಂಬ ಅಭೂತಪೂರ್ವ ಆಡಿಟೊರಿಯಂ ದೊರೆಯಿತು. ಅಲ್ಲಿ ಈಗಲೂ ಅತ್ಯುತ್ತಮ ಸಂಗೀತ, ನೃತ್ಯ, ನಾಟಕಗಳು ನಡೆಯುತ್ತವೆ. ವೀಣಾ ಅವರೇ ರಂಗಮಂದಿರ ಟ್ರಸ್ಟಿನ ಅಧ್ಯಕ್ಷರಾಗಿ ಹೊಣೆ ಹೊತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಲೇಖಕಿಯರ ಸಂಘದೊಂದಿಗೆ ಅವರದು 30 ವರ್ಷಗಳ ಒಡನಾಟ. ಅನೇಕ ರಾಜ್ಯಮಟ್ಟದ ಸಮ್ಮೇಳನಗಳನ್ನು ಆಯೋಜಿಸುವಲ್ಲಿ ಪರಿಶ್ರಮವಹಿಸಿದ್ದಾರೆ. ಈ ಸಂಘದ ಸ್ಥಾಪನೆಯಿಂದ ಹಿಡಿದು ಈಗಿನತನಕ ಎಲ್ಲ ಏಳುಬೀಳುಗಳಲ್ಲಿ ಹಿರಿಯಕ್ಕನಂತೆ ಜತೆಗೆ ನಿಂತಿದ್ದಾರೆ. ವ್ಯಕ್ತಿಗಳನ್ನಿರಲಿ, ಸಂಘ-ಸಂಸ್ಥೆಗಳನ್ನಿರಲಿ ಕಣ್ರೆಪ್ಪೆಯಡಿಯಲ್ಲಿ ಜೋಪಾನ ಮಾಡುವುದು ಅವರ ಸ್ವಭಾವವೇ ಆಗಿಬಿಟ್ಟಿದೆ.
ಎಪ್ಪತ್ತೈದರ ಹೊಸ್ತಿಲು ದಾಟಿ ನಿಂತ ಈ ಕ್ಷಣದಲ್ಲಿಯೂ ಅವರ ಕಣ್ಣೊಳಗೆ ಇಣುಕಿದರೆ ಅದೇ ಕತ್ತಿ ಹಿಡಿದು ಕುದುರೆ ಏರಿದ ಧೀರ ರಾಜಕುಮಾರಿ ಕಾಣುತ್ತಾಳೆ. ಅನ್ಯಾಯ, ಅಸಮಾನತೆಗಳ ವಿರುದ್ಧದ ಅವಳ ಆಕ್ರೋಶವೀಗ ಮಾಗಿದ ಬೆಂಕಿಯಂತೆ ಕಣ್ಣ ಕುಡಿಗಳಲ್ಲಿ ಪ್ರಜ್ವಲಿಸುತ್ತಿದೆ.
| ಪ್ರಜ್ಞಾ ಮತ್ತೀಹಳ್ಳಿ (ಲೇಖಕರು ಕನ್ನಡದ ಪ್ರಮುಖ ಕವಯತ್ರಿ ಮತ್ತು ಕಥೆಗಾರ್ತಿ)