ಯೋಗನಮನ: 5 ವರ್ಷದ ಬಾಲೆ ಮಾಡುತ್ತಾಳೆ 70ರಿಂದ 80 ಆಸನ

Putani Lead
Published on
ದೈಹಿಕಮಾನಸಿಕ ಸದೃಢತೆಗೆ, ಅನೇಕ ರೋಗಬಾಧೆ ನಿವಾರಣೆಗೆ ಯೋಗ ಪೂರಕ. ಆದ್ದರಿಂದ ಇಂದು ಎಲ್ಲರಲ್ಲೂ ಯೋಗದ ಬಗ್ಗೆ ಜಾಗೃತಿ ಹೆಚ್ಚಿದೆ. ಈ ಕಾರಣದಿಂದಲೇ ಯೋಗ ಕೇಂದ್ರ, ತರಬೇತಿ ಶಿಬಿರಗಳೂ ಹೆಚ್ಚಾಗುತ್ತಿವೆ. ಯೋಗ ಕಲಿಕೆಗೆ ಮಕ್ಕಳನ್ನು ಹುರಿದುಂಬಿಸಲು ಪಾಲಕರೂ ಉತ್ಸುಕರಾಗಿದ್ದಾರೆ. ಆದ್ದರಿಂದಲೇ 5 ವರ್ಷದ ನಮನಾ ಎಂಬ ಪುಟಾಣಿ ಕರ್ನಾಟಕದಲ್ಲೇ ಪಶ್ಚಿಮೋತ್ತಾಸನ ಮಾಡುವ ವಿರಳರಲ್ಲಿ ಸೇರಿದ್ದಾಳೆ. ಇವಳ ಯೋಗ ಯಾನ ಹೇಗೆ ಆರಂಭವಾಯಿತು, ಸಾಧನೆಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

| ಗಣಪತಿ ಶಿರಳಗಿ ಸಾಗರ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಏಕಾಗ್ರತೆಯೊಂದಿಗೆ ಅವರವರ ಕಾರ್ಯಕ್ಷೇತ್ರದಲ್ಲಿ ಸಾಧನೆಯ ಶಿಖರವೇರಲು ಯೋಗಾಭ್ಯಾಸ ಸಹಕಾರಿ ಎಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತಿನಂತೆ, ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಶಾಲಾ ಪಠ್ಯಕ್ರಮದಲ್ಲೂ ಯೋಗವನ್ನು ಸೇರಿಸುವ ಚರ್ಚೆ ಕೂಡ ನಡೆದಿದೆ. ಇದರ ನಡುವೆ ಮಕ್ಕಳಲ್ಲಿ ಯೋಗಾಸಕ್ತಿ ಬೆಳೆಯುತ್ತಿರುವುದು ಆಶಾದಾಯಕವಾಗಿದೆ. ಬಾಲಪ್ರತಿಭೆಯಾಗಿ ಯೋಗದಲ್ಲಿ ಸಾಧನೆ ಮಾಡಿರುವ ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ಬಳಸಗೋಡಿನ ಬಾಲೆ ನಮನಾ ಅಂದಾಜು 70-80 ಯೋಗ ಭಂಗಿಗಳನ್ನು ಮಾಡುತ್ತಾಳೆ. ಅರೆ..! ಅದರಲ್ಲೇನಿದೆ ಬಿಡಿ ಅನ್ನಬೇಡಿ. ಆಕೆಗಿನ್ನೂ 5 ವರ್ಷ 9 ತಿಂಗಳು. ಬಳಸಗೋಡಿನ ಕೃಷಿಕ ಡಿ.ಸಂತೋಷ್ ಮತ್ತು ಸುಮಾ ದಂಪತಿ ಪುತ್ರಿಯಾದ ನಮನಾ ಎಸ್. ಆರು ವರ್ಷ ತುಂಬುವ ಮೊದಲೇ 6 ಪ್ರತಿಷ್ಠಿತ ಪ್ರಶಸ್ತಿಗಳನ್ನೂ ದಕ್ಕಿಸಿಕೊಂಡಿದ್ದಾಳೆ. ನಮನಾಗೆ ಮಂಚಾಲೆ ಕಾನುಗೋಡಿನ ವಕೀಲರೂ ಆಗಿರುವ ಶ್ರೀಧರಮೂರ್ತಿ ಹಾಗೂ ಅವರ ಮಗಳು ಸಂಧ್ಯಾ ತರಬೇತಿ ನೀಡುತ್ತಿದ್ದಾರೆ. ಒಂದು ನಿಮಿಷಕ್ಕೆ 7 ಸೂರ್ಯ ನಮಸ್ಕಾರ ಮಾಡುವ ನಮನಾಳ ಸಾಧನೆ ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ದಾಖಲಾಗಿದೆ.

ಸಂಧ್ಯಾ ಯೋಗ ಪ್ರೇರಣೆ: ಯೋಗಪಟು ಸಂಧ್ಯಾ ಅವರು ಯೂಟ್ಯೂಬ್​ನಲ್ಲಿ ಹಾಕಿದ ಯೋಗಾಸನವನ್ನು ನೋಡಿ ಪ್ರೇರಿತಳಾದ ನಮನಾ ಇದೇ ರೀತಿ ತಾನೂ ಸಾಧಿಸಬೇಕು ಎಂದುಕೊಂಡು ಗುರು ಶ್ರೀಧರಮೂರ್ತಿ ಅವರ ಬಳಿ ಪ್ರತಿದಿನ ಸಂಜೆ ಎರಡು ಗಂಟೆ ಕಾಲ ತರಬೇತಿ ಪಡೆಯುತ್ತಾಳೆ. ಯೋಗ ಮತ್ತು ಪ್ರಾಣಾಯಾಮವನ್ನು ಮಂತ್ರೋಕ್ತವಾಗಿ ಕಲಿಯಲು ಆರಂಭಿಸಿದಳು. ನಮನಾಳ ಹಿರಿಯ ಸಹೋದರಿ ಸನಿಹಾ ಕೂಡ ಯೋಗಪಟು ಮತ್ತು ನೃತ್ಯಗಾತಿ. ಇದಕ್ಕೆ ಪಾಲಕರ ನಿರಂತರ ಪೋ›ತ್ಸಾಹ ಮತ್ತು ಬೆಂಬಲ ಕಾರಣ ಎನ್ನುವುದು ನಮನಾಳ ಮನದಾಳದ ಮಾತು.

ಶಾಸ್ತ್ರೀಯವಾಗಿ ಕಲಿತಿದ್ದಾಳೆ: ‘ನಮನಾ ಶಾಸ್ತ್ರೀಯವಾಗಿ ಆಸನಗಳನ್ನು ಕಲಿತು ಸುಲಭವಾಗಿ ಮಾಡುತ್ತಾಳೆ. ಕರ್ನಾಟಕದಲ್ಲಿ ತಲೆಗೆ ಪಾದವನ್ನು ತಾಗಿಸಿ ಮಾಡುವ ಪಶ್ಚಿಮೋತ್ತಾಸನವನ್ನು ಈ ವಯೋಮಿತಿ ಯಲ್ಲಿ ಮಾಡುವ ಬೆರಳೆಣಿಕೆಯಲ್ಲಿ ಇವಳೂ ಒಬ್ಬಳು’ ಎಂದು ಯೋಗಗುರು ಶ್ರೀಧರಮೂರ್ತಿ ಹೇಳುತ್ತಾರೆ.

ಪ್ರಶಸ್ತಿಗಳು: ನಮನಾ ಮೊದಲ ಬಾರಿಗೆ ಯೋಗ ಪ್ರದರ್ಶನ ನೀಡಿದ್ದು, ಹಾವೇರಿ ಜಿಲ್ಲೆಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ. ಅಲ್ಲಿ ನಮನಾಳ ಯೋಗಪ್ರದರ್ಶನ ಕಂಡು ಹುಕ್ಕೇರಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಶುಭಾಶೀರ್ವಾದ ಮಾಡಿದ್ದರು. ಅಂದಿನಿಂದ ಆರಂಭವಾದ ನಮನಾಳ ಯೋಗ ಪ್ರದರ್ಶನ ಜಿಲ್ಲೆ, ರಾಜ್ಯ, ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆಯುತ್ತಿದೆ.

  • 10 ವರ್ಷದೊಳಗಿನ ವಿಭಾಗದ 8 ಆನ್​ಲೈನ್ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ, 6ರಲ್ಲಿ ಸ್ಥಾನ.
  • ಫೈ ಸ್ಟಾರ್ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ ಕಪ್ ಹರಿಯಾಣ ನಡೆಸಿದ 10ನೇ ವರ್ಷದೊಳಗಿನ ವಿಭಾಗದ ರಾಷ್ಟ್ರೀಯ ಆನ್​ಲೈನ್ ಯೋಗ ಸ್ಪರ್ಧೆಯಲ್ಲಿ ‘ಅತ್ಯುತ್ತಮ ನಿರ್ವಹಣೆ ಯೋಗಾಸನ ಅವಾರ್ಡ್’ ಜತೆ ಚಿನ್ನದ ಪದಕ.
  • ಆರ್ಟ್ಸ್ ಆಫ್ ಲರ್ನಿಂಗ್ ಇನ್​ಸ್ಟಿಟ್ಯೂಟ್ ಮಹಾರಾಷ್ಟ್ರ ನಡೆಸಿದ 10 ವರ್ಷದೊಳಗಿನ ಆರ್ಟಿಸ್ಟಿಕ್ ಆನ್​ಲೈನ್ ಸ್ಪರ್ಧೆಯಲ್ಲಿ ಚಿನ್ನದ ಪದಕ.
  • ತಿಂಗಳ ಹಿಂದೆ ಸಮನ್ವಯ ಇಂಡಿಯಾ ಟ್ರಸ್ಟ್ ನಡೆಸಿದ ಆನ್​ಲೈನ್ ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ನಗದು ಬಹುಮಾನ.
  • ನ್ಯಾಷನಲ್ ಸ್ಪೋರ್ಟ್ಸ್ ಆಂಡ್ ಫಿಜಿಕಲ್ ಬೋರ್ಡ್ ಅರುಣಾಚಲ ಪ್ರದೇಶ ನಡೆಸಿದ ಆನ್​ಲೈನ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
  • ಯೋಗಸ್ತ್ರೋಮ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಯೋಗ ಒಲಿಂಪಿಕ್ ಸಮಿತಿ ಜಂಟಿಯಾಗಿ ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಚಾಂಪಿಯನ್​ಶಿಪ್ ಪುರಸ್ಕಾರ.
  • ಇಂದೋರ್ ರಾಜಾಮಾತಾ ಅಹಿಲ್ಯ ಬಾಯಿ ನಡೆಸಿದ ಯೋಗ ಸ್ಪರ್ಧೆ ಹಾಗೂ ದೆಹಲಿಯ ಮಾಸ್ ಟ್ಯಾಲೆಂಟ್ ಆನ್​ಲೈನ್ ಶೋನಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾಳೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net