

ಅದು 1989ರ ಒಂದು ದಿನ. ಅಮೆರಿಕ ಮತ್ತು ಸೋವಿಯತ್ ರಷ್ಯಾಗಳ ನಡುವಿನ ಶೀತಲಸಮರ ತಾರಕಕ್ಕೇರಿತ್ತು. ಸಂಭಾವ್ಯ ಯುದ್ಧದ ಸನ್ನಿವೇಶದಲ್ಲಿ ತಮ್ಮ ದೇಶದ ನೆಲ, ಜಲ, ವಾಯುಗಡಿಗಳನ್ನು ಎರಡೂ ದೇಶಗಳ ಸೈನಿಕರು ಹೆಚ್ಚು ಮುತುವರ್ಜಿಯಿಂದ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಲು ಅಮೆರಿಕದ ಮಿಲಿಟರಿ ಪಡೆಗಳು ಇರಿಸಿದ್ದ ಹೈಡ್ರೋಫೋನ್ ಉಪಕರಣವೊಂದು ಪೆಸಿಫಿಕ್ ಸಾಗರದಾಳದಿಂದ ಸದ್ದನ್ನೊಂದನ್ನು ಪತ್ತೆಹಚ್ಚಿತು. 52 ಹರ್ಟ್ಜ್ನ ಆವರ್ತನದಲ್ಲಿ ಹೊರ ಹೊಮ್ಮಿದ್ದ ಆ ಸದ್ದನ್ನು ಗಂಭೀರವಾಗಿಯೇ ತೆಗೆದುಕೊಂಡ ಮಿಲಿಟರಿ ಪಡೆ ಆ ಪ್ರದೇಶವನ್ನೆಲ್ಲ ಹುಡುಕಾಡಿ ಕೊನೆಗೆ ಏನೂ ಸಿಗದೇ ಸುಮ್ಮನಾಯಿತು.
ಇದಾದ ಮೂರು ವರ್ಷಗಳ ಬಳಿಕ ಅಮೆರಿಕ ಮಿಲಿಟರಿ ಪಡೆ ಈ ನಿಗೂಢ ಸದ್ದಿನ ಮೂಲ ಪತ್ತೆ ಹಚ್ಚಲು ವಿಲಿಯಮ್ ವಾಟ್ಕಿನ್ಸ್ ಎಂಬ ಸಾಗರಶಾಸ್ತ್ರಜ್ಞರೊಬ್ಬರನ್ನು ನೇಮಿಸಿತು. ಈ ಪತ್ತೆದಾರಿಕೆಯಲ್ಲಿ ವಾಟ್ಕಿನ್ಸ್ ಅವರ ಜೊತೆಗೆ ಅಮೆರಿಕದ ಖ್ಯಾತ ವುಡ್ಸ್ ಹೋಲ್ ಒಶಿಯನೊಗ್ರಾಫಿಕ್ ಇನ್ಸಟಿಟ್ಯೂಟ್ನ ಹನ್ನೆರಡು ಪರಿಣತರ ತಂಡವೂ ಜೊತೆಗಿತ್ತು. ಈ ಒಂದು ಸದ್ದಿನ ತುಣುಕನ್ನಿಟ್ಟುಕೊಂಡು ತನಿಖೆಯನ್ನಾರಂಭಿಸಿದ ತಂಡಕ್ಕೆ ಮೊದಲು ಗೊಂದಲ ಮೂಡಿಸಿದ್ದೇ ಆ 52ರ ಆವರ್ತನ. ತಂಡದ ಕೆಲವು ಪರಿಣತರು ಆ ಸದ್ದು ತಿಮಿಂಗಲವೊಂದರ ಕೂಗೆಂದು ವಾದಿಸಿದರೂ ಅದಕ್ಕೆ ಸಮರ್ಥವಾದ ವಿವರಣೆ ಅವರಿಗೆ ನೀಡಲಾಗಲಿಲ್ಲ. ಕಾರಣ ತಮ್ಮ ಕಿವಿಯ ಬಳಿಯ ಕವಾಟಗಳಿಂದ ಗಾಳಿಯನ್ನು ಊದಿ ಧ್ವನಿಯನ್ನು ಹೊರಹೊಮ್ಮಿಸುವ ತಿಮಿಂಗಲಗಳ ಹಾಡೆಂದೇ ಹೆಸರು ಪಡೆದಿರುವ ತಿಮಿಂಗಲಗಳ ಆ ಕೂಗಿನ ಆವರ್ತನದ ವ್ಯಾಪ್ತಿ 10ರಿಂದ 30 ಹರ್ಟ್ಜ್ನ್ಗಳಷ್ಟೇ. ಹೀಗಾಗಿ ಅವರ ವಾದಕ್ಕೆ ಹೆಚ್ಚು ಪುಷ್ಟೀಕರಣ ಸಿಗಲಿಲ್ಲ. ಆದರೂ ತಮ್ಮ ಈ ಹಾಡುಗಳಿಂದಲೇ ತಾವು ತಿಮಿಂಗಲಗಳ ಯಾವ ಉಪಜಾತಿಗೆ ಸೇರಿದ್ದೇವೆ ಎಂಬುದರ ಕುರಿತ ಸುಳಿವನ್ನು ಕೊಡುವ ಈ ಜಲಚರಗಳ ಯಾವ ಜಾತಿಯೂ 30 ಹಟ್ ರ್jಗಳ ಲಕ್ಷ್ಮಣ ರೇಖೆಯನ್ನು ದಾಟದಿರುವುದನ್ನು ತಂಡವು ಮತ್ತೊಮ್ಮೆ ಖಾತ್ರಿ ಪಡಿಸಿಕೊಂಡಿತು.
‘52 ಹರ್ಟ್ಜ್ನ’ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತ 1992ರಿಂದ 2004ರವೆರೆಗೆ ಪೆಸಿಫಿಕ್ ಸಾಗರ ಮತ್ತು ಸುತ್ತಮುತ್ತಲೆಲ್ಲ ಪ್ರದೇಶಗಳನ್ನು ಜಾಲಾಡಿದ ತಂಡಕ್ಕೆ ಹಲವು ಬಾರಿ ಆ ಕೂಗು ಕೇಳಿಸಿತು. ಅದು ಹೊರಹೊಮ್ಮುವ ಸಮಯ ಮತ್ತು ಪತ್ತೆಯಾಗುತ್ತಿದ್ದ ಜಾಗಗಳೆಲ್ಲ ತಿಮಿಂಗಲಗಳ ಮಿಲನದ ಸಮಯ ಮತ್ತು ವಲಸೆಯ ಮಾರ್ಗಕ್ಕೆ ತಾಳೆ ಹೊಂದುತ್ತಿದ್ದರೂ ಕಗ್ಗಂಟಾಗಿ ಉಳಿದದ್ದು ಆ 52 ಹರ್ಟ್ಜ್ನ ಆವರ್ತನ ಮಾತ್ರ. ಹೀಗೆ ಈ ನಿಗೂಢ ಸದ್ದಿನ ಮೂಲ ಹುಡುಕುತ್ತ ತಮ್ಮ ಜೀವನದ ಒಂದು ಡಜನ್ ವರ್ಷಗಳನ್ನು ವ್ಯಯಿಸಿದ ತಂಡವು ಆ ಸುದೀರ್ಘ ಸಮಯದಲ್ಲಿ ತಮಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಸಂಶೋಧನೆಯ ವರದಿಯನ್ನು ಅಖೈರುಗೊಳಿಸುವುದರೊಳಗೆ ಸಂಶೋಧನಾ ತಂಡದ ನಾಯಕ ವಿಲಿಯಮ್ ವಾಟ್ಕಿನ್ಸ್ 78ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮರಣಾನಂತರ 2004ರಲ್ಲಿ ಅಂತೂ ಇಂತೂ ಪ್ರಕಟಗೊಂಡ ವರದಿಯ ಬಗ್ಗೆ ಆರಂಭದಲ್ಲಿ ಇದ್ದ ಆಸಕ್ತಿಯನ್ನು ಅಧಿಕಾರಿಗಳು ಕಳೆದುಕೊಂಡಿದ್ದರು. ಇದರ ಪರಿಣಾಮವಾಗಿ ಅ ವರದಿ ಮೂಲೆ ಸೇರಿತು.
ವರ್ಷಾನುಗಟ್ಟಲೇ ವಿಲಿಯಮ್ ವಾಟ್ಕಿನ್ಸ್ ಮತ್ತವರ ತಂಡವು ಪೆಸಿಫಿಕ್ ಸಾಗರದ ಸುತ್ತಮುತ್ತ ಅಧ್ಯಯನ ನಡೆಸಿ, ವರದಿ ತಯಾರಿಸಿದ್ದಕ್ಕೆ ಕೊನೆಗೂ ಸಾರ್ಥಕತೆ ಸಿಕ್ಕಿದ್ದು ಒಬ್ಬ ಪತ್ರಕರ್ತನಿಂದ. ಅದೆಲ್ಲೋ ಧೂಳು ತಿನ್ನುತ್ತ ಬಿದ್ದಿದ್ದ ವಾಟ್ಕಿನ್ಸ್ ವರದಿಯನ್ನು ಆಧರಿಸಿ ವರದಿ ಪ್ರಕಟವಾದ ಸುಮಾರು ಒಂದು ವರ್ಷದ ನಂತರ ಅಮೆರಿಕದ ಪ್ರಮುಖ ಪತ್ರಿಕೆಯೊಂದು ಈ ಪೂರ್ತಿ ಪ್ರಹಸನದ ಕುರಿತು ರೋಚಕ ವರದಿಯನ್ನು ಮುಖಪುಟದಲ್ಲಿ ಪ್ರಕಟಿಸಿತು. ಆ 52ರ ಆವರ್ತನದ ಯಕ್ಷಪ್ರಶ್ನೆಗೆ ಕೊನೆಗೂ ಉತ್ತರವನ್ನು ಕಂಡುಹಿಡಿದಿದ್ದ ಸಂಶೋಧನಾ ತಂಡವು ಅದರ ಮೂಲವೊಂದು ಅಂಗವಿಕಲ ತಿಮಿಂಗಲವೆಂದು ವರದಿಯಲ್ಲಿ ಬಹಿರಂಗಪಡಿಸಿತ್ತು. ಇದುವರೆಗೆ ಒಮ್ಮೆಯೂ ಯಾರಿಗೂ ಕಾಣಿಸಿಕೊಳ್ಳದೆ ಕೇವಲ ದನಿಯಿಂದಲೇ ತನ್ನ ಇರುವಿಕೆಯನ್ನು ಗೊತ್ತುಪಡಿಸುತ್ತಿದ್ದ ಆ ತಿಮಿಂಗಲವು ತನ್ನ ದೈಹಿಕ ನ್ಯೂನತೆಯ ಪರಿಣಾಮದಿಂದ ಬೇರೆ ತಿಮಿಂಗಲಗಳಿಗಿಂತ ವಿಭಿನ್ನವಾಗಿ ತನ್ನದೇ ಸ್ವರದಲ್ಲಿ ದನಿಯನ್ನು ಹೊರಡಿಸುತ್ತಿದೆಯೆಂಬ ನಿರ್ಧಾರಕ್ಕೆ ಸಂಶೋಧನಾ ತಂಡವು ಬಂದಿತ್ತು. ಮಾತು ಬರುತ್ತಿದ್ದರೂ ತನ್ನ ನ್ಯೂನತೆಯ ಪರಿಣಾಮವಾಗಿ ಮೂಕನಂತಾಗಿದ್ದ ಆದರೂ ಇತರ ತಿಮಿಂಗಲಗಳ ಜೊತೆಗೆ ಸಂರ್ಪಸುವ ಪ್ರಯತ್ನ ನಡೆಸುತ್ತಿದ್ದ ಈ ಜಲಚರವು ಬೇರೆಲ್ಲ ತಿಮಿಂಗಲಗಳು ಹೊರಡಿಸುವ 10ರಿಂದ 30ರ ಆವರ್ತದಿಂದ ಭಿನ್ನವಾಗಿ ದನಿಯನ್ನು ಹೊರಡಿಸುವ ಜಗತ್ತಿನ ಏಕೈಕ ತಿಮಿಂಗಲವೆಂಬ ವಿಷಯವನ್ನೂ ತಂಡವು ಖಚಿತಪಡಿಸಿತು.
ಈ ಒಂಟಿ ತಿಮಿಂಗಲದ ಕಥೆ ಪತ್ರಿಕೆಯ ಮೂಲಕ ಜನರಿಗೆ ತಲುಪುತ್ತಿದ್ದಂತೆ ಎಲ್ಲೆಡೆ ಹರಡಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾದವು. ವಿಜ್ಞಾನಿಗಳು, ಸಾಗರ ವಿಜ್ಞಾನಿಗಳು ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆಗೆ ಪೆಸಿಫಿಕ್ ಸಾಗರದ ಕಡೆಗೆ ಹೊರಟರೆ ಕವಿಗಳು, ಲೇಖಕರು, ಸಂಗೀತಕಾರರು ಮತ್ತು ಸಿನಿಮಾ ಮಂದಿ ಈ ಜಲಚರದಲ್ಲಿ ಭಗ್ನಪ್ರೇಮಿಯನ್ನು ಕಂಡು 52 ಎಂಬುದನ್ನು ಒಂಟಿತನದ ಚಿಹ್ನೆ ಎಂಬಂತೆ ಬಿಂಬಿಸತೊಡಗಿದರು. ದಕ್ಷಿಣ ಕೊರಿಯಾದ ಪ್ರಸಿದ್ಧ ಬ್ಯಾಂಡ್ ಬಿಟಿಎಸ್ 2015ರಲ್ಲಿ ಹೊರತಂದ ಜನಪ್ರಿಯ ಆಲ್ಬಂ ‘ದಿ ಮೋಸ್ಟ್ ಬ್ಯೂಟಿಫುಲ್ ಮೊಮೆಂಟ್ ಇನ್ ಲೈಫ್’ನಲ್ಲಿ ‘ವ್ಹೇಲಿನ್ 52’ ಎಂಬ ಹಾಡು ಈ ತಿಮಿಂಗಲದ ಒಂಟಿತನವನ್ನೇ ಬಿಂಬಿಸಿ ರಚಿಸಲಾಗಿತ್ತು. ಆಂಗ್ಲ ಜನಪ್ರಿಯ ಹಾಡುಗಾರರ ಜೋಡಿ ಕಥರಿನ್ ರಾಬರ್ಟ್ಸ್ ಮತ್ತು ಸೀನ್ ಲೇಕ್ಮನ್ 2015ರಲ್ಲಿ ಹೊರತಂದ ಆಲ್ಬಂ ‘ಟುಮಾರೋ ವಿಲ್ ಫಾಲೋ ಟುಡೇ’ ಎಂಬ ಆಲ್ಬಂನಲ್ಲಿ ‘52’ ಎಂಬ ಶೀರ್ಷಿಕೆಯ ಹಾಡನ್ನು ಸಂಪೂರ್ಣವಾಗಿ ಈ ತಿಮಿಂಗಲದ ಕುರಿತಾಗಿಯೇ ಮೀಸಲಿಡಲಾಗಿತ್ತು. 2016ರಲ್ಲಿ ಅಜರ್ಬೆಜಾನಿ ತಂಡವೊಂದರ ಆಲ್ಬಂ ‘ನೋ ಲ್ಯಾಂಡ್’, 2017ರಲ್ಲಿ ಜೌ ಶೆನ್ ಎಂಬ ಗಾಯಕನ ‘ಅಲೋನ್ಲಿ ಬ್ಲೂ ವ್ಹೇಲ್ ಲಿವಿಂಗ್ ಲೈಕ್ ಆನ್ ಐಲ್ಯಾಂಡ್’, 2020ರಲ್ಲಿ ಮತ್ತೋರ್ವ ಖ್ಯಾತ ಪಾಪ್ ಗಾಯಕಿ ಕ್ರೖೆಸ್ಟಾ ಬೆಲ್ ಹಾಡು
‘52 ಹರ್ಟ್ಜ್ನ’, ಈ ವರ್ಷ ಆಂಬರ್ ರನ್ ತಂಡ ಬಿಡುಗಡೆ ಮಾಡಿದ ‘52 ಬ್ಲೂ’ ಹೀಗೆ ಪಟ್ಟಿ ಬೆಳೆಯುತ್ತದೆ. ಇನ್ನು ತಾವೇನೂ ಕಮ್ಮಿಯಿಲ್ಲ ಎಂಬಂತೆ ಸಿನಿಮಾದವರು ಕೂಡ ಈ ಕಾಣದ ತಿಮಿಂಗಲದಿಂದ ಸ್ಪೂರ್ತಿ ಪಡೆದರು. 2014ರಲ್ಲಿ ಈ 52ನ್ನು ಹುಡುಕುವ ಇಬ್ಬರು ಸಹೋದರಿಯರ ಕಥೆಯನ್ನಾಧರಿಸಿದ ಕಿರುಚಿತ್ರ ‘ದಿ ಲೋನಲಿಯೆಸ್ಟ್’ ಬಿಡುಗಡೆಯಾಗಿ ಜನಪ್ರಿಯತೆಯನ್ನು ಗಳಿಸಿತು ಅಷ್ಟೇ ಈ ಸಿನಿಮಾ ಮಂದಿ ಸಿದ್ಧಸೂತ್ರದ ಬೆನ್ನುಬಿದ್ದರು. ಇದರ ಪರಿಣಾಮವಾಗಿ 2017ರಲ್ಲಿ ತೈವಾನಿ ಚಿತ್ರ ‘52 ಹರ್ಟ್ಜ್ನ ಐ ಲವ್ ಯೂ’, 2018ರಲ್ಲಿ ‘ಮೈ ನೇಮ್ ಇಸ್ ಬಾಟ್ಲಿರ್ ನಾಟ್ ಬಟ್ಲರ್’, ಆನಿಮೇಟೆಡ್ ಚಿತ್ರ ‘ಫ್ಯಾಂಟಮ್ 52’ ತಯಾರಾದವು. ಅವುಗಳಲ್ಲಿ ‘ಫ್ಯಾಂಟಮ್ 52’ ಅಂತೂ ಭರ್ಜರಿ ಯಶಸ್ಸು ಕಂಡು ಸುಮಾರು 60 ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಬಾಚಿತು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ‘ಟೈಟಾನಿಕ್’ ಖ್ಯಾತಿಯ ಲಿಯೋನಡೋ ಡಿ ಕಾಪ್ರಿಯೋ ಸಹ ಈ ತಿಮಿಂಗಲದ ಒಂಟಿತನದ ಮೇಲೆ ಆಧರಿಸಿ ನಿರ್ವಿುಸಿದ ಚಿತ್ರ ‘ದಿ ಲೋನಲಿಯೆಸ್ಟ್ ವ್ಹೇಲ್ ದಿ ಸರ್ಚ್ ಫಾರ್ 52’ ಸಾಕಷ್ಟು ಸದ್ದು ಮಾಡಿತು.
‘52 ಹರ್ಟ್ಜ್ನ’ ವಿಷಯ ಎಲ್ಲೆಡೆ ಸದ್ದು ಮಾಡುತ್ತಿರುವ ಕಾರಣ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿವ ಮೊದಲಿಗರಾಗುವ ಹಂಬಲದಿಂದ ಪೆಸಿಫಿಕ್ ಸಾಗರ ತೀರಕ್ಕೆ ದೌಡಾಯಿಸಿದವರ ಸಂಖ್ಯೆಗೇನೂ ಕಮ್ಮಿಯಿರಲಿಲ್ಲ. ಹಾಗೆ ಹೋದವರು ಸಾಗರದ ಅಲೆಗಳ ಮೇಲೆ ಸೋನೊಬಾಯ್ಸ್ ಎಂಬ ಉಪಕರಣವನ್ನು ತೇಲಿಬಿಟ್ಟು ಆ ಮಾಯಾಮೃಗಕ್ಕಾಗಿ ಕಾಯುತ್ತ ಕುಳಿತರು. ಆದರೆ ಅಂತಹ ಪ್ರಯತ್ನಗಳ್ಯಾವವೂ ಫಲ ನೀಡಲಿಲ್ಲ. ‘52 ಹರ್ಟ್ಜ್’ ಎಂಬ ಬಿಸಿಲುಕುದುರೆ ಆಗಾಗ ತನ್ನ ಟಿಪೀಕಲ್ ಕೂಗಿನಿಂದ ತಾನಿರುವುದರ ಕುರಿತು ಸುಳಿವು ನೀಡುತ್ತ ಹೋಯಿತೆ ಹೊರತು ನೇರವಾಗಿ ಯಾರ ಕಣ್ಣಿಗೂ ಕಾಣಸಿಗದ ಬೆಳದಿಂಗಳ ಬಾಲೆಯಾಗಿಯೇ ಉಳಿದುಕೊಂಡಿತು. 1989ರಲ್ಲಿ ಮೊದಲ ಬಾರಿಗೆ ತನ್ನ ಇರುವಿಕೆಯ ಕುರಿತು ಸುಳಿವು ನೀಡಿದ್ದ ಈ ತಿಮಿಂಗಲದ ಅನ್ವೇಷಣೆಗೆ ಇದೀಗ ಭರ್ತಿ ಮೂವತ್ತಾರು ವರ್ಷಗಳು ತುಂಬಿವೆ. ವಿಜ್ಞಾನಿಗಳು ಅಂದಾಜಿಸಿರುವಂತೆ ‘ಬ್ಲೂ ವ್ಹೇಲ್’ ಅಂದರೆ ನೀಲಿ ತಿಮಿಂಗಲದ ಜಾತಿಗೆ ಸೇರಿರುವ ಆ ತಿಮಿಂಗಲವು ಸಾಮಾನ್ಯವಾಗಿ ಎಪ್ಪತ್ತರಿಂದ ತೊಂಬತ್ತು ವರ್ಷಗಳ ಕಾಲ ಬದುಕುತ್ತವೆ. ಅಂದರೆ ಈ ಒಂಟಿಜೀವಿಯು ಈಗಾಗಲೇ ಮಧ್ಯಮವಯಸ್ಸನ್ನು ದಾಟಿದ್ದು ತನ್ನ ಜೀವನದ ಸಂಧ್ಯಾಕಾಲವನ್ನು ತಲುಪಿರುವ ಸಾಧ್ಯತೆ ಹೆಚ್ಚು. ಹೀಗಾಗಿ ಬಹುಶಃ ಇನ್ನೊಂದು ದಶಕದೊಳಗೆ ನಾವು 52 ಹರ್ಟ್ಜ್ನ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯದಿದ್ದಲ್ಲಿ ಆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುವ ಸಾಧ್ಯತೆಯಿದೆ.
52 ಹರ್ಟ್ಜ್ ಎಂಬ ಕುತೂಹಲಕ್ಕೆ ಉತ್ತರ ಕಂಡುಹಿಡಿಯುವ ತವಕ ಒಂದೆಡೆಯಾದರೆ ಮತ್ತೊಂದೆಡೆ ಕೆಲ ಪ್ರಶ್ನೆಗಳನ್ನು ಈ ತಿಮಿಂಗಲವು ಹುಟ್ಟುಹಾಕಿದೆ. ಒಂಟಿತನ, ಖಿನ್ನತೆ, ಒತ್ತಡದಂತಹ ಮಾನಸಿಕ ಪರಿಸ್ಥಿತಿಗಳು ಕೇವಲ ಮಾನವನಿಗಷ್ಟೇ ಸೀಮಿತವೆಂಬ ನಮ್ಮೆಲ್ಲರ ನಂಬಿಕೆ ನಿಜಕ್ಕೂ ಸತ್ಯವೇ? ಆಗಸದಲ್ಲಿ ಹಾರುತ್ತಿರುವ ಹಕ್ಕಿ, ನೆಲದ ಮೇಲೆ ಕುಪ್ಪಳಿಸುತ್ತಿರುವ ಕಪ್ಪೆ, ಸಮುದ್ರದ ತಳದಲ್ಲಿ ಈಜುತ್ತಿರುವ ಮೀನು ಇವುಗಳೆಲ್ಲವೂ ಈ ಖಿನ್ನತೆ, ಒಂಟಿತನವನ್ನು ಅನುಭವಿಸುತ್ತಿರಬಹುದೇ? ಹಾಗಿದ್ದ ಪಕ್ಷದಲ್ಲಿ ಯಾವ ಆಪ್ತಸಮಾಲೋಚಕರ ನೆರವಿಲ್ಲದೆಯೇ ಅಂತಹ ಪರಿಸ್ಥಿತಿಯನ್ನು ಅವುಗಳು ಹೇಗೆ ಸಂಭಾಳಿಸಿಕೊಳ್ಳುತ್ತವೆ? ಮಾನವನ್ನಲ್ಲಿ ಇರುವಂತೆಯೇ ಎಲ್ಲ ಜೀವಿಗಳಲ್ಲಿಯೂ ತಮ್ಮದೇ ಆದ ಭಾವನೆಗಳಿರುತ್ತವೆ, ಅವುಗಳೂ ಮಾನಸಿಕ ಕಾಯಿಲೆಗಳಿಂದ ಬಳಲುತ್ತವೆ ಎಂಬುದರ ಕುರಿತು ಚರ್ಚೆಗಳು ಪರಿಣತರಲ್ಲಿ ಹಲವು ವರ್ಷಗಳಿಂದ ನಡೆಯುತ್ತಿವೆ. ಮನಶಾಸ್ತ್ರಜ್ಞರ ಯಾವುದೋ ಸೆಮಿನಾರಿನಲ್ಲಿಯೋ ಅಥವಾ ಚರ್ಚಾಕೂಟದಲ್ಲೋ ನಡೆಯುವ ಜಿಜ್ಞಾಸೆಯ ಪಟ್ಟಿಯಲ್ಲಷ್ಟೇ ಕಂಡುಬರುತ್ತಿದ್ದ ಈ ವಿಷಯವನ್ನು ಜಾಗತಿಕವಾಗಿ ಚರ್ಚೆಗೆ ಕಾರಣವಾಗಿಸಿದ ಶ್ರೇಯ 52 ಹರ್ಟ್ಜ್ನಗೆ ಸಲ್ಲುತ್ತದೆ.
ಮೀನುಗಾರಿಕೆ, ಆಳಸಮುದ್ರ ಗಣಿಗಾರಿಕೆ, ವ್ಯಾಪಾರ ಮತ್ತು ಭದ್ರತಾ ಹಡಗುಗಳು ಹೀಗೆ ಹತ್ತು ಹಲವು ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಮಾನವನ ಚಟುವಟಿಕೆಗಳ ಕಾರಣ ಸಮುದ್ರದಲ್ಲಿ ಕೃತಕ ಶಬ್ದಮಾಲಿನ್ಯ ಹೆಚ್ಚಾಗಿದೆ. ಇದರಿಂದ ತಿಮಿಂಗಲವೂ ಸೇರಿದಂತೆ ಬಹಳಷ್ಟು ಜಲಚರಗಳ ಸಂವಹನಕ್ಕೆ ಅಡೆತಡೆಯುಂಟಾಗಿ ಅವುಗಳು ಮಾನಸಿಕ ಒತ್ತಡವನ್ನು ಅನುಭವಿಸುತ್ತಿವೆ ಎಂಬುದು ವಿಜ್ಞಾನಿಗಳ ಗಮನಕ್ಕೂ ಬಂದಿದೆ. 52 ಹರ್ಟ್ಜ್ನ ಖಿನ್ನತೆಯನ್ನು ಮತ್ತಷ್ಟು ಬಿಗಡಾಯಿಸುವತ್ತ ನಮ್ಮ ದೇಣಿಗೆಯದು.