ತುಳುನಾಡಿಗೆ ಬಂದ ದ್ವಾರಕೆಯ ಕೃಷ್ಣ

PARYAYA
Published on

ಎರಡು ವರ್ಷಕ್ಕೊಮ್ಮೆ ಉಡುಪಿ ಶ್ರೀಕೃಷ್ಣನ ಪ್ರಧಾನ ಪೂಜೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪರ್ಯಾಯ ಸಂಭ್ರಮ ಜನವರಿ 18ರಂದು ನಡೆಯ ಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಲೇಖನ.

ಕೋಟಿ ವರ್ಷಗಳಿಂದ ಭಾರತ ಪುರಾಣ ಟಗಳಲ್ಲಿ ಕರ್ಮಭೂಮಿ ಎಂದು ಗುರುತಿಸಲ್ಪಟ್ಟಿದೆ. ದಕ್ಷಿಣದಲ್ಲಿ ಪಶ್ಚಿಮ ಸಮುದ್ರದ ಬದಿಯಲ್ಲಿ ಸಮುದ್ರವನ್ನು ಬಾಣದಿಂದ ಸರಿಸಿ ಪರಶುರಾಮರು ನಿರ್ವಿುಸಿದ ಉಡುಪಿ ಕ್ಷೇತ್ರವಿದೆ. ಇದು ರೌಪ್ಯಪೀಠವೆಂದು ಪ್ರಸಿದ್ಧವಾದ ನಗರ.

ಪುಣ್ಯೇ ಭಾರತವರ್ಷೆಸ್ಮಿನ್ ಕರ್ವ್ಮುಭೂಮಾವಘಚ್ಛಿದಿ

ಕ್ಷೇತ್ರೇ ಪರಶುರಾಮಸ್ಯ ಪಶ್ಚಿಮಾಬ್ಧಿತಟೇ ಶುಭೇ

ನಾತಿದೂರೇ ರೌಪ್ಯಪೀಠಂ ಇತಿ ಖ್ಯಾತಂ ದ್ವಿಜೋತ್ತಮಾಃ

ಬಾಣಂ ಮುಮೋಚ ಜಲಧೌ ನಿಹತಾಸ್ತೇನ ಪತ್ರಿಣಾ

ಅಂಬುಧಿಸ್ಥಾ ಮಹಾದೈತ್ಯಾ ಅಬ್ಧಿಶ್ಚಾಭ್ಯದ್ರವತ್ತದಾ

ಈ ದಕ್ಷಿಣ ಭೂಮಿಗೆ ಪರಶುರಾಮರು ರಾಮಭೋಜನನ್ನು ರಾಜನನ್ನಾಗಿಸಿದರು. ಆತ ಯಜ್ಞಕ್ಕಾಗಿ ನೆಲಕರ್ಷಣ ಮಾಡಿದಾಗ ಹಾವೊಂದು ಸತ್ತಿತು. ಈ ಪ್ರಮಾದವನ್ನಾತ ಪರಶುರಾಮರಲ್ಲಿ ನಿವೇದಿಸಿಕೊಂಡ. ‘ಆ ಹಾವು ದುರುಳ ರಾಕ್ಷಸ, ಇದರಿಂದ ನಿನಗೇನೂ ತೊಂದರೆಯಾಗದು’ ಎಂದು ರಾಜನನ್ನು ಪರಶುರಾಮ ಸಂತೈಸಿದ. ಆದರೂ ರಾಜ ಬೆಳ್ಳಿಯ ದೊಡ್ಡಪೀಠವೊಂದರಲ್ಲಿ ಪರಶುರಾಮರನ್ನು ಕುಳ್ಳಿರಿಸಿ ಯಜ್ಞದೊಡನೆ ಮಹಾದಾನಾದಿಗಳನ್ನು ಅವರ ಸಮಕ್ಷಮದಲ್ಲಿ ನಡೆಸಿಕೊಟ್ಟ. ತಕ್ಕಡಿಯಲ್ಲಿ ತಾನು ಕುಳಿತು ತನ್ನ ಭಾರಕ್ಕೆ ಸಮನಾದ ಅನೇಕ ಬಗೆಯ ಸಂಪತ್ತುಗಳನ್ನು ಬೇರೆ ಬೇರೆ ಕಡೆಯಿಂದ ಬಂದ ಎಲ್ಲ ಜನರಿಗೆ ಹಂಚಿದ. ಅವರವರ ಮನೆಗಳಿಗೆ ಕಳುಹಿಸಿಕೊಟ್ಟ.

ತತೋ ರಾಮಾಯ ಹರಯೇ ಬ್ರಹ್ಮಣೇನಂತಶಕ್ತಯೇ

ದತ್ವಾಸನಾರ್ಥಂ ರೌಪ್ಯಸ್ಯ ಪೀಠಂ ಕೃತ್ವಾ ಮನೋಹರಮ್

ಪರಿತೋ ದಿಕ್ಪತೀನ್ನ್ಯಸ್ಯ ನಾಗಾಷ್ಟಕವಿಭೂಷಿತಮ್

ತುಲಾಪುರುಷದಾನಾನಿ ತುಲಾಭಾರಾಂಶ್ಚ ಸರ್ವಶಃ

ನಾನಾದೇಶಾದಾಗತೇಭ್ಯೋ ಬ್ರಾಹ್ಮಣೇಭ್ಯಃ ಸಹಸ್ರಶಃ

ದತ್ವಾ ಪ್ರತಿ ಗೃಹಂ ತೇಷಾಂ ಪ್ರೇಷಯಾಮಾಸ ಭಕ್ತಿತಃ

ತನ್ನ ಭಾರಕ್ಕೆ ತುಲನೆಯಾಗಿ ಸೊತ್ತುಗಳನ್ನು ಸಮರ್ಪಿಸಿದ ರಾಜನನ್ನು ಜನರು ಮುಂದಕ್ಕೆ ತುಲಾರಾಜನೆಂದೇ ಕರೆದರು.

ಆತನ ಆಧಿಪತ್ಯಕ್ಕೊಳಗಾದ ಈ ನೆಲವನ್ನು ಮುಂದೆ ತುಲಾದೇಶವೆಂದೇ ಕರೆಯುತ್ತಿದ್ದರು. ಹೀಗೆ ಇಲ್ಲಿನ ಜನರು ತೌಲವರಾದರು.

ತುಲಾರಾಜಂ ತಮಪರೇ ತುಲಾದೇಶಾಧಿಪಂ ತಥಾ

ತದ್ದೇಶೇ ಚ ಸ್ಥಿತಾಸ್ಸರ್ವೆ ತೌಲವಾ ಇತಿ ಚಾಭವನ್

ರಾಜನು ಪರಶುರಾಮರಲ್ಲಿ ಯಜ್ಞಾನಂತರದಲ್ಲಿಯೂ ಇಲ್ಲೇ ನೆಲೆಸುವಂತೆ ಪ್ರಾರ್ಥಿಸಿಕೊಂಡ. ನಾನು ಮುಂದೆ ವಾಯು ದೇವನಿಗೆ ಸಂತಸವೀಯಲು ಕೃಷ್ಣಪ್ರತಿಮೆಯಲ್ಲಿ ಸನ್ನಿಧಾನ ಪಡೆಯುವೆನೆಂದು ಆಶ್ವಾಸನೆ ನೀಡಿ ಪರಶುರಾಮರು ತುಲನಾಡಿನಿಂದ ತೆರಳಿದರು.

ಕಿಂಚ ಕ್ಷೇತ್ರವರಸ್ಯಾಸ್ಯ ರಕ್ಷಣಾಯ ನೃಪೋತ್ತಮಃ

ದುರ್ಗ್ಗಾಸಾನ್ನಿಧ್ಯಸಂಯುಕ್ತಂ ವಿವಿಧೈರ್ವಿಭವೈರ್ಯುತಮ್

ರೌಪ್ಯಪೀಠಸ್ಯ ಕೋಣೇಷು ದೇವಾಲಯಚತುಷ್ಟಯಮ್

ಕಾರಯಾಮಾಸ ವಿಧಿವತ್ ರಾಮಭೋಜೋ ಮಹಾಮತಿಃ

ಈ ತುಲಭೂಮಿಯಲ್ಲಿ ಚಂದ್ರನು ತನ್ನ ಕಲಾವೃದ್ಧಿಗಾಗಿ ಶಿವನ ತಪಸ್ಸನ್ನು ಮಾಡಿದ್ದಾನೆ. ಈ ಜಾಗವು ಅಬ್ಜಾರಣ್ಯ (ಈ ತಾಣವನ್ನು ಈಗ ಅಜ್ಜರಕಾಡು ಎಂದು ಕರೆಯುತ್ತಾರೆ). ಅನಂತಾಸನ ದೇವಳದ ಎದುರಿದ್ದ ಸರೋವರದಲ್ಲಿ ದೇವರ ಅಪ್ಪಣೆಯಂತೆ ಗಂಗೆ ಸನ್ನಿಧಾನ ಪಡೆದಿದ್ದಾಳೆ. ಈ ಸರೋವರ ಮಧ್ಯದಲ್ಲಿ ಚಂದ್ರನ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ಚಂದ್ರನಿಗೆ ಅನುಗ್ರಹಿಸಿದ. ಮುಂದೆ ಈ ತಾಣದಲ್ಲಿ ನೆಲೆಗೊಂಡ ದೇವಾಲಯ ಚಂದ್ರನ ತಪಸ್ಸಿನ ನೆನಪಲ್ಲಿ ಶಿವನ ದರುಶನದ ಕಾರಣಿಕದಲ್ಲಿ ಚಂದ್ರಮೌಳೀಶ್ವರವೆಂದು ಪ್ರಸಿದ್ಧಗೊಂಡಿತು.

ಬಾಲ್ಯದಲ್ಲಿ ತಾಯಿಯನ್ನು ಮುದಗೊಳಿಸಿದ ಕೃಷ್ಣ: ಕೃಷ್ಣನ ಬಾಲಲೀಲೆಯನ್ನು ಕಾಣದ ತಾಯಿ ದೇವಕಿ ಕೃಷ್ಣನಲ್ಲಿ ಕೇಳಿಕೊಂಡಾಗ ಆತ ಶಿಶುರೂಪವನ್ನು ತಳೆದು ತಾಯಿಯನ್ನು ಮುದಗೊಳಿಸುತ್ತಾನೆ. ಆಕೆಯ ಕೈಯಲ್ಲಿನ ಕಡೆಗೋಲನ್ನು ಮತ್ತು ಹಗ್ಗವನ್ನು ಎಳೆಯುತ್ತಾನೆ. ಈ ಹುಡುಗಾಟವನ್ನು ಕಾಣುತ್ತಿದ್ದ ಮಡದಿ ರುಕ್ಮಿಣಿ ಖುಷಿಗೊಂಡು ಅಂಥದ್ದೇ ರೂಪ ತನಗೊಂದು ಸಿಗಲೆಂದು ಕೇಳಿಕೊಳ್ಳುತ್ತಾಳೆ. ಕೃಷ್ಣನು ದೇವಶಿಲ್ಪಿಯಿಂದ ಆ ಬಗೆಯ ಪ್ರತಿಮೆಯನ್ನು ನಿರ್ವಿುಸಿ ನೀಡುತ್ತಾನೆ. ರುಕ್ಮಿಣಿ ಅದನ್ನು ದ್ವಾರಕೆಯಲ್ಲಿ ಪ್ರತಿನಿತ್ಯ ಪೂಜಿಸುತ್ತಿದ್ದಳು.

ನವನೀತವಿಲಿಪ್ತಾಂಗಃ ಪ್ರನೃತ್ಯನ್ ಮಾತುರಂತಿಕೇ

ಮೋಹಯನ್ಮಾಯಯಾ ತಾಂ ತು ಮಂಥಾನಂ ದಾಮ ಚಾಹರತ್

ತದ್ರೂಪಂ ಚ ತದಾ ಭೈಷ್ಮೀ ಸಮೀಕ್ಷ್ಯೋತ್ಪುಲ್ಲಮಾನಸಾ

ಶಿಲ್ಪೀಂದ್ರ ಬಾಲಗೋಪಾಲಪ್ರತಿಮಾ ಕ್ರಿಯತಾಮಿತಿ

ವಾಮಹಸ್ತೇ ದಾಮಧರಂ ದಕ್ಷೇ ಮಂಥಾನಮಂಡಿತಮ್

ಶಿಖಾಬಂಧತ್ರಯೋಪೇತಂ ಲಂಬಾಲಕವಿಭೂಷಿತಮ್

ಕೃಷ್ಣನ ನಿರ್ಯಾಣದೊಂದಿಗೆ ದ್ವಾರಕೆ ಮುಳುಗಿತು. ಕೃಷ್ಣಪ್ರತಿಮೆಯು ಸಮುದ್ರಪಾಲಾಯಿತು. ವಾಯುದೇವನ ಅವತಾರವೆನಿಸಿದ ಮಧ್ವಾಚಾರ್ಯರು ಕಾಲಗರ್ಭದಲ್ಲಿ ಅಡಗಿದ್ದ ಆ ಪ್ರತಿಮೆಯನ್ನೇ ಮತ್ತೆ ವರುಣನಿಂದ ಪಡೆದು ಇಲ್ಲಿ ತುಲನಾಡಿನಲ್ಲಿ ಅನಂತಾಸನನ ಸನಿಹ ಸ್ಥಾಪಿಸುವ ಮಾಹಿತಿಯೂ ಪುರಾಣದಲ್ಲಿ ದಾಖಲಾಗಿದೆ.

ವರುಣಸ್ತಾ್ವನಯಾಮಾಸ ರೂಪಂ ನಾರದಚೋದಿತಃ

ಮುದ್ದಾದ ಬಾಲಗೋಪಾಲ ಪ್ರತಿಮೆಯು ಎಡಕೈಯಲ್ಲಿ ಹಗ್ಗ ಹಿಡಿದಿದೆ, ಬಲಕೈಯಲ್ಲಿ ಮಂಥ್ ಹಿಡಿದಿದೆ. ಮೂರು ಜುಟ್ಟು, ಹಿಂದೆ ಇಳಿದಿದ್ದ ತಲೆಕೂದಲು, ಸೊಂಟದಲ್ಲಿ ಹಳದಿಪಟ್ಟೆ, ಮುಖದಲ್ಲಿ ಮಂದಹಾಸ ಇವೆಲ್ಲಾ ಈ ಕೃಷ್ಣನ ಸೊಬಗು.

ಪೀತವಸ್ತ್ರೋಪಶೋಭಿತಮ್

ನಾಗಾಸನಸ್ಯ ನಿಕಟೇ ವಿಧಿನಾ ಸ್ಥಾಪಯಿಷ್ಯತಿ

ಸ ಯೋಗೀ ಮಾತರಿಶ್ವಾಂಶೋ ಮಧ್ವೋ ಧ್ವಸ್ತದುರಾಗಮಃ

ದೇವರ ಕೃಷ್ಣಾವತಾರ ಬಲಕಾರ್ಯಕ್ಕೂ ಜ್ಞಾನಕಾರ್ಯಕ್ಕೂ ಹೆಚ್ಚು ಒತ್ತು ಕೊಟ್ಟಿದೆ. ಕಂಸ, ಪೂತನಿ, ಕಾಲಯವನ, ನರಕ ಮುಂತಾದ ಖಳರ ಸಂಹಾರದಿಂದ ಸಮಾಜವನ್ನು ಪವಿತ್ರಗೊಳಿಸಿದಂತೆ ಶ್ರೀಕೃಷ್ಣನು ಗೀತೆಯ ಉಪದೇಶದಿಂದ ಜನರೆಲ್ಲರನ್ನು ಧರ್ಮದ ಚೌಕಟ್ಟಿನಲ್ಲಿ ನೆಲೆಗೊಳಿಸಿದ. ಹೀಗೆ ಮಹಾಭಾರತದ ಮಹಾನಾಯಕನಾಗಿ ಶ್ರೀಕೃಷ್ಣನು ಆ ಕಾಲದಲ್ಲಿ ಮೆರೆದಿದ್ದಾನೆ.

ದ್ವಾಪರಯುಗದ ಕೊನೆಯೊಂದಿಗೆ ಕಲಿಯುಗದ ಆರಂಭವನ್ನು ನಡೆಸಿಕೊಟ್ಟ ಶ್ರೀಕೃಷ್ಣ ಯುಗಾವತಾರಿ. ‘ಕೃಷ್ಣರ್ವ್ಣಣಂ ಕಲೌ ಕೃಷ್ಣಂ ಸಾಂಗೋಪಾಂಗಂ ಸಪಾರ್ಷದಮ್ ಎನ್ನುವುದಾಗಿ ಭಾಗವತ ಪುರಾಣವು ಕಲಿಯುಗದಲ್ಲಿ ಕೃಷ್ಣನನ್ನೇ ಉಪಾಸನೆಗೈಯುವಂತೆ ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮಧ್ವಾಚಾರ್ಯರು 5100 ವರ್ಷದ ಹಿಂದಿನ ಆ ದ್ವಾರಕೆಯ ಕೃಷ್ಣ ಪ್ರತಿಮೆಯನ್ನೇ ಉಡುಪಿಯಲ್ಲಿ ಕಲಿಯುಗದ ಜನರ ಉದ್ಧಾರಕ್ಕಾಗಿ ಪ್ರತಿಷ್ಠೆಗೈದರು.

ಅದಮಾರು ಪರ್ಯಾಯ

ಮಧ್ವಾಚಾರ್ಯರ ಶಿಷ್ಯ ನರಹರಿತೀರ್ಥರ ಪರಂಪರೆಯಲ್ಲಿ 32ನೇ ಯತಿ ವಿಶ್ವಪ್ರಿಯತೀರ್ಥರು ಹಾಗೂ ಇವರ ಶಿಷ್ಯ ಶ್ರೀ ಈಶಪ್ರಿಯ ತೀರ್ಥರು. ಗುರುಗಳ ಆದೇಶದಂತೆ ಈ ಬಾರಿ ಶಿಷ್ಯ ಈಶಪ್ರಿಯ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಪಲಿಮಾರು ಮತ್ತು ಭಂಡಾರಕೇರಿ ಮಠದ ವಿದ್ಯಾಮಾನ್ಯತೀರ್ಥರಿಂದ ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡಿದವರು ವಿಶ್ವಪ್ರಿಯತೀರ್ಥರು.

ಸಾವಿರಾರು ವಿದ್ಯಾರ್ಥಿಗಳಿಗೆ ಶಾಸ್ತ್ರಗ್ರಂಥಗಳ ಪಾಠ ನಡೆಸಿದವರು. ನೂರಾರು ಕಡೆ ಪ್ರವಚನದ ಮೂಲಕ ಜನರನ್ನು ಧಾರ್ವಿುಕವಾಗಿ ಜಾಗೃತಿಗೊಳಿಸುತ್ತ ಬಂದವರು. ಇವರ ಗುರು ವಿಬುಧೇಶತೀರ್ಥರು ಸ್ಥಾಪಿಸಿದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಉನ್ನತ ವ್ಯಾಸಂಗದ ಅನೇಕ ಪಾಠಶಾಲೆಗಳನ್ನು ಭಾರತದಾದ್ಯಂತ ಮುನ್ನಡೆಸುತ್ತಿದ್ದಾರೆ. 14 ವರ್ಷದ ಹಿಂದಿನ ತಮ್ಮ ಪರ್ಯಾಯದ ಕಾಲದಲ್ಲಿ 18 ಪುರಾಣಗಳ ಚಿಂತನೆಯನ್ನು ಅನೇಕ ವಿದ್ವಾಂಸರಿಂದ ಸಮರ್ಥವಾಗಿ ನಡೆಸಿಕೊಟ್ಟು, ಉಡುಪಿಯ ಜನರಲ್ಲಿ ಶಾಸ್ತ್ರಚಿಂತನೆಯ ಎಚ್ಚರವನ್ನು ಹೆಚ್ಚು ಮಾಡಿದ ಕೀರ್ತಿ ಇವರಿಗೆ ಸಂದಿದೆ.

ಅಷ್ಟಗುಣ-ಅಷ್ಟಮಠ

ಮಧ್ವಾಚಾರ್ಯರು ಅಷ್ಟ ಸಂನ್ಯಾಸಿಗಳನ್ನೇ ಏಕೆ ಕೃಷ್ಣನ ಪೂಜೆಗೆ ನಿಯುಕ್ತಿಗೊಳಿಸಿದರು ಎಂಬುದಕ್ಕೆ ಅನೇಕ ಅರ್ಥಗಳಿವೆ. ಅವುಗಳಲ್ಲೊಂದು ಭಗವಂತ ಅಷ್ಟಗುಣ ಸಂಪನ್ನ. ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷ ಇವುಗಳನ್ನು ಸಮರ್ಥವಾಗಿ ನೀಡುವವನು ದೇವರು.

ಜನ್ಮಾದ್ಯಸ್ಯಯತಃ ಎಂಬುದಾಗಿ ಬ್ರಹ್ಮಸೂತ್ರ ಇದನ್ನು ತಿಳಿಸಿದೆ. ಕೃಷ್ಣನ ಈ ಪರಿಪೂರ್ಣ ಗುಣಗಳನ್ನು ಸಂಕೇತಿಸುವುದಕ್ಕೋಸ್ಕರ 8 ಬಾಲ ಸಂನ್ಯಾಸಿಗಳನ್ನು ಮಧ್ವಾಚಾರ್ಯರು ನೇಮಿಸಿದರು. 8 ಶತಮಾನದಿಂದ ಇಂದಿನವರೆಗೂ ಮಧ್ವಾಚಾರ್ಯರ ನಿಯಮಾನುಸಾರ ಕೃಷ್ಣನ ಪೂಜೆ ಮತ್ತು ತತ್ವಪ್ರಸಾರ ಕಾರ್ಯ, ಎಲ್ಲರಿಗೂ ಅನ್ನದಾನ ನಿರಂತರವಾಗಿ ಎಂಟು ಸಂನ್ಯಾಸಿ ಶಿಷ್ಯರಿಂದ ನಡೆಯುತ್ತಾ ಬಂದಿದೆ.

ಕೃಷ್ಣ ಪ್ರತಿಷ್ಠೆ ಉದ್ದೇಶ

ಆಚಾರ್ಯ ಮಧ್ವರು ಅನಂತಾಸನ ದೇವಳದ ಸನಿಹವೇ ಶ್ರೀಕೃಷ್ಣನನ್ನು ಪ್ರತಿಷ್ಠೆಗೈದು ಆತನ ತತ್ವ ಸಂದೇಶಗಳ ಬಿತ್ತರಕ್ಕಾಗಿ ಸರ್ವಸಂಗತ್ಯಾಗಿಗಳಾದ 8 ಮಂದಿ ಸಂನ್ಯಾಸಿಗಳನ್ನು ನಿಯಮಿಸಿದರು. ಶ್ರೀಕೃಷ್ಣನ ಅನ್ನಪ್ರಸಾದದಿಂದ ಸದ್ವಿಚಾರ ಜನಮಾನಸದಲ್ಲಿ ಎಲ್ಲರಲ್ಲಿ ಮೂಡಿಬರಲೆಂದು ಪ್ರತಿನಿತ್ಯ ಸಾರ್ವಜನಿಕವಾದ ಅನ್ನ ವಿತರಣೆಯನ್ನು ಮಧ್ವಾಚಾರ್ಯರು ಅಂದಿನ ಕಾಲದಲ್ಲೇ ನಡೆಸಿಕೊಟ್ಟರು. ‘ಆಶ್ವಭ್ಯ ಆಶ್ವಪಾಕೇಭ್ಯೋ ದದ್ಯಾದನ್ನಂ’ ಎನ್ನುವುದು ಇದಕ್ಕೆ ದಾಖಲೆ. ಹೀಗೆ ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮನನ್ನಾಗಿ ಮೆರೆಯಿಸಿದರು. ಕೊನೆಗೆ ತಾವು ಅನಂತಾಸನನ ಸನ್ನಿಧಾನದಲ್ಲಿಯೇ ಅದೃಶ್ಯರಾಗಿ ದಿವ್ಯಸನ್ನಿಧಾನವನ್ನು ಪಡೆದು ನೆಲೆನಿಂತರು.

ಇಂಜಿನಿಯರಿಂಗ್ ಪದವೀಧರ

ಅಷ್ಟಮಠಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಜಿನಿಯರಿಂಗ್ ಪದವೀಧರ ಪೀಠಾಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈಶಪ್ರಿಯ ತೀರ್ಥರು 2014ರಲ್ಲಿ ಅದಮಾರು ಮಠದ ಆಡಳಿತದಲ್ಲಿರುವ ಕುಂಜಾರುಗಿರಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಗುರುಗಳಾದ ಶ್ರೀ ವಿಶ್ವಪ್ರಿಯ ತೀರ್ಥರಿಂದ ಸಂನ್ಯಾಸಾಶ್ರಮ ಸ್ವೀಕರಿಸಿದ್ದರು. ಈಶಪ್ರಿಯ ತೀರ್ಥರು ಕಳೆದ 6 ವರ್ಷಗಳಿಂದ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಲ್ಲಿ ವೇದಾಂತ ಅಧ್ಯಯನ ನಡೆಸುತ್ತಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀಗಳು ಮೂಲತಃ ಶಿರೂರಿನವರು.

ರಥಬೀದಿಯಲ್ಲಿ ಮೆರವಣಿಗೆ

ಮಧ್ವಾಚಾರ್ಯರ ಸನ್ನಿಧಾನದಲ್ಲಿ ಮರದ ಅಕ್ಷಯಪಾತ್ರೆ-ಬೆಳ್ಳಿಯ ಸಟ್ಟುಗದೊಂದಿಗೆ ಗರ್ಭಗುಡಿಯ ಕೀಲಿಕೈಯನ್ನು ಏಳುವ ಪರ್ಯಾಯ ಯತಿಗಳು ಕೂಡುವ ಪರ್ಯಾಯ ಶ್ರೀಪಾದರಿಗೆ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸುತ್ತಾರೆ. ಜೋಡು ಕಟ್ಟೆಯಿಂದ ಪರ್ಯಾಯ ಶ್ರೀಪಾದರು ಪಟ್ಟದೇವರನ್ನು ಮುಂದಿಟ್ಟುಕೊಂಡು ಮೆರವಣಿಗೆಯಲ್ಲಿ ದಕ್ಷಿಣ ದ್ವಾರದಿಂದ ರಥಬೀದಿಯನ್ನು ಪ್ರವೇಶಿಸುತ್ತಾರೆ.

ರಾಜಗೋಪುರದಲ್ಲಿ (ಇಂದಿನ ಕನಕಗೋಪುರ) ಕೃಷ್ಣದರ್ಶನ ಮಾಡಿ ಚಂದ್ರಮೌಳೀಶ್ವರ ಮತ್ತು ಅನಂತಾಸನನನ್ನು ಪ್ರಾರ್ಥಿಸಿ ಮಧ್ವಸರೋವರದಲ್ಲಿ ತೀರ್ಥ ಪೊ್ರೕಕ್ಷಿಸಿಕೊಂಡು, ಆಚಮನೆಗೈದು ಕೃಷ್ಣಮಠವನ್ನು ಪೂರ್ವದ್ವಾರದಿಂದ ಪ್ರವೇಶಿಸುತ್ತಾರೆ. ಶ್ರೀಪಾದರಿಗೆ ಪರ್ಯಾಯ ದಿಂದ ನಿರ್ಗಮಿಸುವ ಯತಿಗಳು ಕೃಷ್ಣನ ದರ್ಶನ ಮಾಡಿಸುತ್ತಾರೆ. ಪರ್ಯಾಯ ಶ್ರೀಪಾದರನ್ನು ಕೃಷ್ಣನೆದುರು ಚಾವಡಿಯಲ್ಲಿ ಮಾಲಿಕೆ-ಮಂಗಳಾರತಿಯೊಂದಿಗೆ ಅಭಿನಂದಿಸುತ್ತಾರೆ.

ಹಸಿರು ಪರ್ಯಾಯ

ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಶ್ರೀಕೃಷ್ಣ ಸೇವಾ ಬಳಗ ಈ ಬಾರಿಯ ಪರ್ಯಾಯದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಕೃಷ್ಣ ಮಠಕ್ಕೆ ಪರ್ಯಾಯ ಪೂರ್ವಭಾವಿಯಾಗಿ ಸಮರ್ಪಣೆಯಾಗುತ್ತಿದ್ದ ಹೊರೆ ಕಾಣಿಕೆಯನ್ನು ವಿಂಗಡಿಸಿ 15 ದಿನಕ್ಕೊಮ್ಮೆ ನಿರಂತರ 2 ವರ್ಷ ಮಠಕ್ಕೆ ಸಮರ್ಪಿಸುವ ಯೋಜನೆ ರೂಪಿಸಿದೆ. ಕೃಷ್ಣನ ಸಮರ್ಪಣೆಗೆ ರೈತರಿಂದಲೇ ನೇರ ಬಾಳೆ ಎಲೆ, ಬಾಳೆಕಾಯಿ, ಸಾವಯವ ಅಕ್ಕಿ ಖರೀದಿ, ಬಟ್ಟೆ ಬ್ಯಾನರ್​ಗಳಿಗೆ ಆದ್ಯತೆ, ಪ್ಲಾಸ್ಟಿಕ್ ತೋರಣ/ಫ್ಲೆಕ್ಸ್​ಗಳಿಗೆ ಸಂಪೂರ್ಣ ನಿಷೇಧ ಮುಂತಾದ ಅನೇಕ ಪರಿಸರಸಹ್ಯ ಯೋಜನೆಗಳಿಗೆ ನಾಂದಿ ಹಾಡಲಾಗಿದೆ.

ಪರ್ಯಾಯಕ್ಕೆ 500 ವರ್ಷ

ಮಧ್ವಾಚಾರ್ಯರು ತಮ್ಮ ಬಳಿಕ ಕೃಷ್ಣಪೂಜೆಗಾಗಿ ಎಂಟು ಸಂನ್ಯಾಸಿ ಶಿಷ್ಯರನ್ನು ನಿಯಮಿಸಿದ್ದು, ಒಬ್ಬರ ಬಳಿಕ ಮತ್ತೊಬ್ಬರ ಪೂಜೆಯ ಮುಖ್ಯ ಅಧಿಕಾರಾವಧಿಯ ಬದಲಾವಣೆಯನ್ನು ಪರ್ಯಾಯವೆಂದು ಕರೆಯುತ್ತಾರೆ. ಉಳಿದ ಏಳು ಮಠದ ಯತಿಗಳೂ ಇತರ ಪೂಜೆ ನಡೆಸಿಕೊಡಬಹುದು. ಆದರೆ ಮಹಾಪೂಜೆಯ ಅಧಿಕಾರ ಪರ್ಯಾಯ ಶ್ರೀಗಳಿಗೆ ಮಾತ್ರ ಇರುತ್ತದೆ. ವಾದಿರಾಜರು 5 ಶತಮಾನಗಳ ಹಿಂದೆ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯನ್ನು ಪ್ರಾರಂಭಿಸಿದ್ದರು. ಈ ಬಾರಿ ಅದಮಾರು ಮಠದ್ದು 250ನೇ ಪರ್ಯಾಯ. 2020ರ ಜ.18ರಂದು ಪರ್ಯಾಯಕ್ಕೆ 500 ವರ್ಷ.

ಸರ್ವಜ್ಞ ಪೀಠಾರೋಹಣ

ಮಧ್ವಾಚಾರ್ಯರು ಕುಳಿತಿದ್ದ ಸಿಂಹಾಸನದಲ್ಲಿ ಪ್ರಸಕ್ತ ಪರ್ಯಾಯ ಶ್ರೀಪಾದರನ್ನು ಭಾವುಕರಾಗಿ ಕೈಹಿಡಿದು ಕುಳ್ಳಿರಿಸುತ್ತಾರೆ. ಹೀಗೆ ಗುರುವರೇಣ್ಯರ ಸನ್ನಿಧಾನ ಈಗಿನ ಶ್ರೀಪಾದರಲ್ಲಿ ಪ್ರತಿಷ್ಠೆಗೊಳ್ಳುವ ಪರಿಯೇ ಮುಖ್ಯವಾಗಿ ಪರ್ಯಾಯವೆನಿಸಿದೆ. ಮುಂದೆ ಅಧಿಕಾರವನ್ನು ಪಡೆದ ಶ್ರೀಪಾದರು ಮೊದಲ ಬಾರಿಗೆ ತನಗೆ ಪರ್ಯಾಯವನ್ನು ನೀಡಿದ ಮತ್ತು ಜತೆಯಾದ ಎಲ್ಲ ಶ್ರೀಪಾದರಿಗೆ ಬಡಗುಮಾಳಿಗೆಯ ಅರಳುಗದ್ದಿಗೆಯಲ್ಲಿ ಸಂಭ್ರಮದ ಗಂಧಮಾಲಾದಿ ಉಪಚಾರಗಳನ್ನು ಅದ್ದೂರಿಯಾಗಿ ನಡೆಸಿಕೊಡುತ್ತಾರೆ.

ಮಧ್ಯಾಹ್ನ ಪರ್ಯಾಯ ದರ್ಬಾರ್

ರಾಜಾಂಗಣದಲ್ಲಿ ಪರ್ಯಾಯ ಶ್ರೀಪಾದರು ಪ್ರಪ್ರಥಮ ಪರ್ಯಾಯ ಸಂದೇಶವನ್ನು, ಮಧ್ವಾಚಾರ್ಯರ ಜ್ಞಾನಪ್ರಸಾರದ ಪ್ರತಿಜ್ಞೆಯನ್ನು, ಧರ್ಮರಕ್ಷಣೆಯ ದೀಕ್ಷೆಯನ್ನು ಗಣ್ಯರು, ಸಾಧಕ ಮಹನೀಯರ, ಪಂಡಿತ ಮಂಡಳಿಯ, ಕೃಷ್ಣಭಕ್ತರೆಲ್ಲರ ಸಮಕ್ಷಮದಲ್ಲಿ ಅನುಗ್ರಹಿಸುತ್ತಾರೆ. ಪರ್ಯಾಯವನ್ನು ಸಮರ್ಥವಾಗಿ ಪೂರೈಸಿರುವ ಶ್ರೀಪಾದರನ್ನು ವಿಶೇಷವಾಗಿ ಅಭಿನಂದಿಸುತ್ತಾರೆ. ಸುತ್ತಮುತ್ತಲ ಪ್ರಸಿದ್ಧ ದೇವಾಲಯಗಳ ಪ್ರಸಾದ ಭಕ್ತರ ಗೌರವ ಕಾಣಿಕೆ ಪರ್ಯಾಯ ಶ್ರೀಪಾದರಿಗೆ ಸಮರ್ಪಣೆಯಾಗಿ ಮಠದ ಆಡಳಿತ ವರ್ಗದವರ ಘೊಷಣೆಯೊಂದಿಗೆ ಮುಖ್ಯ ಅತಿಥಿಗಳ ವಿಶೇಷ ಆಹ್ವಾನಿತರ ಸಮ್ಮಾನದೊಂದಿಗೆ ಸಭಾಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.

ಪರ್ಯಾಯ ಶ್ರೀಪಾದರಿಂದ ಕೃಷ್ಣನಿಗೆ ಪ್ರಥಮವಾಗಿ ಪ್ರಧಾನ ಮಹಾಪೂಜೆ ನಡೆಯುತ್ತದೆ. ಎಲ್ಲ ಭಕ್ತರಿಗೂ ಕೃಷ್ಣನ ನೈವೇದ್ಯದ ವಿತರಣೆ ನಡೆಯುತ್ತದೆ. ಇಷ್ಟು ವರ್ಷ ಬೆಳಗ್ಗೆ ಬಡಗುಮಾಳಿಗೆಯಲ್ಲಿ ಮಾಲಿಕೆ ಮಂಗಳಾರತಿ ನಡೆದ ಬಳಿಕ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ನಡೆಯುತ್ತಿತ್ತು. ಆದರೆ ಈ ಬಾರಿ ಈಶಪ್ರಿಯ ತೀರ್ಥರ ಸೂಚನೆಯಂತೆ ಮಧ್ಯಾಹ್ನ 2.30ಕ್ಕೆ ರಾಜಾಂಗಣದಲ್ಲಿ ದರ್ಬಾರ್ ನಡೆಯಲಿದೆ.

| ಶತಾವಧಾನಿ ಡಾ. ಉಡುಪಿ ರಾಮನಾಥ ಆಚಾರ್ಯ (ಲೇಖಕರು: ಹಿರಿಯ ವಿದ್ವಾಂಸರು) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net