

ಇತ್ತೀಚೆಗಷ್ಟೇ ಒಂದು ಪ್ರಮುಖ ರಾಜ್ಯದಲ್ಲಿ ಹೂಡಿಕೆ ಸಮಾವೇಶ ನಡೆಯಿತು. ಅಲ್ಲಿ ಸೇರಿದ್ದ ಸಾವಿರ ಜನರ ನಡುವೆ ಮಧ್ಯಾಹ್ನದ ಊಟಕ್ಕೆ ಪರದಾಟ ಮಾಡಿಕೊಂಡು ಕೊನೆಗೆ ಕೆಲವರು ಬಡಿದಾಡಿಕೊಂಡರು. ಗೊತ್ತುಗುರಿ ಇಲ್ಲದ ಜನರು ಏನು ಮಾಡಿಯಾರು ಎಂಬುದಕ್ಕೆ ಅದೊಂದು ಕೆಟ್ಟ ಉದಾಹರಣೆ. ಗೊತ್ತುಗುರಿ ಇರುವ ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಕುಂಭಮೇಳ ಉತ್ತಮ ನಿದರ್ಶನ. ಅದರ ನಡುವೆ ನಡೆದ ಕಾಲ್ತುಳಿತ ಘಟನೆಯ ಪೂರ್ವಾಪರ ಇನ್ನಷ್ಟೇ ಗೊತ್ತಾಗಬೇಕು. ಈಗಷ್ಟೇ ಯಶಸ್ವಿಯಾಗಿ ಮುಕ್ತಾಯಗೊಂಡ ಕುಂಭಮೇಳವನ್ನು ಮುಖ್ಯವಾಗಿ ಮೂರು ದರ್ಶನ ಹಾಗೂ ಎರಡು ಆಯಾಮಗಳಲ್ಲಿ ನೋಡೋಣ.
ಏಕೆಂದರೆ, ಮೊದಲ ಮೂರು ದರ್ಶನಗಳನ್ನು ಅರ್ಥಮಾಡಿಕೊಂಡಾಗ, ಹೇಗೆ ಈ ಕುಂಭಮೇಳ ಎಂಬುದು ಇಡೀ ಭಾರತವನ್ನು, ಭಾರತೀಯರನ್ನು, ಇಲ್ಲಿನ ಶ್ರದ್ಧೆ-ನಂಬಿಕೆಯ ಸಂಸ್ಕೃತಿಯನ್ನು ಏಕಸೂತ್ರದಲ್ಲಿ ಬಂಧಿಸಿಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
‘ಭಾರತದ ಉತ್ತರ-ದಕ್ಷಿಣವನ್ನು ಶ್ರೀರಾಮನು, ಪೂರ್ವ ಪಶ್ಚಿಮವನ್ನು ಶ್ರೀಕೃಷ್ಣನೂ, ಅಖಂಡ ಭಾರತವನ್ನು ಶಿವನು ಕೂಡಿಸಿಟ್ಟಿದ್ದಾನೆ’ ಎಂಬ ಲೋಹಿಯಾ ಅವರ ಮಾತೊಂದಿದೆ. ಈ ಸಾಲಿಗೆ ಕುಂಭವನ್ನೂ ಸೇರಿಸಬಹುದು. ಕಡೆಯ ಎರಡು ಆಯಾಮಗಳು ಮೇಳದ ಟೀಕೆ-ಟಿಪ್ಪಣಿಯನ್ನು ಗ್ರಹಿಸುವ ಬಗೆ ಕುರಿತಾಗಿದ್ದು:
ಮೊದಲನೆಯದ್ದು ಧಾರ್ವಿುಕ ಆಧ್ಯಾತ್ಮಿಕ ದರ್ಶನ: ಪೂರ್ಣ ಕುಂಭಮೇಳ ನಡೆಯುವುದು 12 ವರ್ಷಗಳಿಗೊಮ್ಮೆಯಾದರೂ, ಈ ಬಾರಿಯ ಮೇಳಕ್ಕೆ 144 ವರ್ಷಗಳ ಮೈಲಿಗಲ್ಲು. ಕುಂಭ ಪರಂಪರೆಯಲ್ಲಿ ಈ ಅಂತರವೇ ಪರಮ ಪವಿತ್ರ. 2025ರ ಜನವರಿ 13ರ ಪೌಷ ಪೂರ್ಣಿಮೆಯಂದು ಕುಂಭಸ್ನಾನ ಆರಂಭ. ಇದು ಕಲ್ಪವಾಸದ ಆಧ್ಯಾತ್ಮಿಕ ಅವಧಿಯನ್ನು ಸೂಚಿಸುತ್ತದೆ. ಕಲ್ಪವಾಸ ಎಂದರೆ ಇಷ್ಟೇ, ಧಾರ್ವಿುಕ ನಂಬಿಕೆಗಳ ಪ್ರಕಾರ, ಮಕರ ರಾಶಿಗೆ ಸೂರ್ಯನ ಪ್ರವೇಶವು ಪ್ರಯಾಗರಾಜ್ನಲ್ಲಿ ಪವಿತ್ರ ಒಂದು ತಿಂಗಳ ಅವಧಿ. ಇದು ಭಕ್ತರಿಗೆ ಸಂಪೂರ್ಣ ಕಲ್ಪಕ್ಕೆ (ಬ್ರಹ್ಮನ ಒಂದು ದಿನ) ಸಮಾನವಾದ ಆಧ್ಯಾತ್ಮಿಕ ಪ್ರತಿಫಲಗಳನ್ನು ನೀಡುತ್ತದೆ.
ಮಹಾಭಾರತ ಮತ್ತು ರಾಮಚರಿತಮಾನಸಗಳಂಥ ಪ್ರಾಚೀನ ಗ್ರಂಥಗಳು ಸಹ ಈ ಆಚರಣೆಯನ್ನು ಉಲ್ಲೇಖಿಸಿ ಇದರ ಆಧ್ಯಾತ್ಮಿಕ ಮಹತ್ವವನ್ನು ಹೇಳಿವೆ. ಕಲ್ಪವಾಸದ ಸಮಯದಲ್ಲಿ, ಕಲ್ಪವಾಸಿಗಳು ಎಂದು ಕರೆಯಲಾಗುವ ಯಾತ್ರಿಕರು ನದಿ ದಂಡೆಯಲ್ಲಿ ವಾಸಿಸುತ್ತಾರೆ, ನೆಲದ ಮೇಲೆ ಮಲಗುತ್ತಾರೆ, ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಸೇವಿಸುತ್ತಾರೆ ಅಥವಾ ಸಂಪೂರ್ಣವಾಗಿ ಉಪವಾಸ ಮಾಡುತ್ತಾರೆ ಮತ್ತು ದಿನಕ್ಕೆ ಮೂರು ಬಾರಿ ಗಂಗಾ ನದಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ.
ಮಹಾಭಾರತದ ಪ್ರಕಾರ, ಆಹಾರ ಸೇವಿಸದೆ ಒಂದು ಶತಮಾನದ ತಪಸ್ಸಿನ ಮೂಲಕ ಪಡೆದ ಆಧ್ಯಾತ್ಮಿಕ ಅರ್ಹತೆಯು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಮಂಗಳಕರವಾದ ಮಾಘ ಮಾಸದಲ್ಲಿ ಕಲ್ಪವಾಸವನ್ನು ಆಚರಿಸುವ ಅರ್ಹತೆಗೆ ಸಮನಾಗಿರುತ್ತದೆ.
ಹಾಗೆಯೇ ಮಾಘ ಮಾಸದಲ್ಲಿ ಎಲ್ಲ ಪವಿತ್ರ ಯಾತ್ರಾಸ್ಥಳಗಳು ತಮ್ಮ ಆಧ್ಯಾತ್ಮಿಕ ರಾಜನಿಗೆ ಗೌರವ ಸಲ್ಲಿಸಲು ಪ್ರಯಾಗರಾಜ್ನಲ್ಲಿ ಸೇರುತ್ತವೆ ಎಂದು ನಂಬಲಾಗಿದೆ. ನಂತರ ಮಕರ ಸಂಕ್ರಾಂತಿಗೆ ಸಂಗಮದಲ್ಲಿ ಮೊದಲ ರಾಜಸ್ನಾನ (ಶಾಹಿಸ್ನಾನ), ನಂತರದ ಮಾಲಿಕೆಯಲ್ಲಿ ಬರುವ ಮೌನಿ ಅಮಾವಾಸ್ಯೆ, ಬಸಂತ್ ಪಂಚಮಿ, ಅಚಲ ಸಪ್ತಮಿ, ಮಾಘಿ ಪೂರ್ಣಿಮೆ, ಮಹಾ ಶಿವರಾತ್ರಿ ಸ್ನಾನ- ಹೀಗೆ ಇಲ್ಲಿನ ಎಲ್ಲ ಪವಿತ್ರ ಸ್ನಾನಗಳು ಪಾಪಗಳನ್ನು ನಾಶ ಮಾಡುತ್ತವೆ ಎಂದೇ ನಂಬಲಾಗಿದೆ. ಈಗ ಇದು ಕೇವಲ ಭಾರತೀಯರ ನಂಬಿಕೆಯಾಗಿರದೆ ವೈಶ್ವಿಕ ನಂಬಿಕೆಯಾಗಿದೆ.
ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪಾವೆಲ್ ಜಾಬ್ಸ್ ಕೂಡ ಕುಂಭಮೇಳದಲ್ಲಿ ಭಾಗವಹಿಸಿ ಕಲ್ಪವಾಸ ವ್ರತ ಆಚರಿಸಿದ್ದು ಒಂದು ಉದಾಹರಣೆ ಮಾತ್ರ.ಈ ಎಲ್ಲ ದೇಶ-ವಿದೇಶದ 65 ಕೋಟಿಗೂ ಹೆಚ್ಚು ಭಕ್ತರ ನಿಭಾವಣೆಗೆ ಇದ್ದದ್ದು ಅಂದಾಜು 75 ಸಾವಿರ ಪೊಲೀಸರು. ಈ ಸಂಖ್ಯೆ ಯಾವುದಕ್ಕೂ ಸಾಕಾಗಲ್ಲ. ಆದರೆ, ಇಷ್ಟು ಜನರನ್ನು ನಿರ್ವಹಣೆ ಮಾಡಿದ್ದು ಪೊಲೀಸರಲ್ಲ, ಜನರೊಳಗಿನ ಭಕ್ತಿಭಾವದ, ಶ್ರದ್ಧಾರೂಪದ ಆಧ್ಯಾತ್ಮಿಕ ಜಾಗೃತಿ, ಪ್ರಜ್ಞೆ ಮಾತ್ರ. ಎಲ್ಲಿ ನಿಜವಾದ ಧರ್ಮ, ಭಕ್ತಿ, ಅಧ್ಯಾತ್ಮದ ಜಾಗೃತಿ ಇರುತ್ತೆಯೋ ಅಲ್ಲಿ ಪೊಲೀಸರಿಗೆ ಕೆಲಸ ಕಮ್ಮಿ. ಇದನ್ನು ಬಿಜೆಪಿ ಸರ್ಕಾರಗಳು ಮಾತ್ರವಲ್ಲ, ಕಾಂಗ್ರೆಸ್, ಕಮ್ಯುನಿಸ್ಟ್ ಸರ್ಕಾರಗಳೂ ಅರ್ಥ ಮಾಡಿಕೊಳ್ಳಬೇಕು.
ಎರಡನೆಯದ್ದು ಸಾಮಾಜಿಕ ದರ್ಶನ: ಈ ಮಹಾಕುಂಭ ಮೇಳದಲ್ಲಿ ಯಾರು ಯಾರಿಗೂ ಜಾತ್ಯತೀತತೆಯ ಬೋಧನೆ ಮಾಡಲಿಲ್ಲ. ಮತಧರ್ಮದ ಸಹಬಾಳ್ವೆಯ ಬೋಧನೆ ಮಾಡಲಿಲ್ಲ. ಯಾರು ಯಾವ ಲಿಂಗ, ಜಾತಿ, ಮತ, ಧರ್ಮ ಎಂದು ಪ್ರಶ್ನೆ ಮಾಡಲಿಲ್ಲ, ಬದಲಾಗಿ ತಾವು ತಮ್ಮ ವಾಸಸ್ಥಾನಗಳಲ್ಲಿದ್ದಾಗ ಕಾಡುವ ಈ ಮೇಲೆ ಹೇಳಿದ ಸಂಗತಿಗಳನ್ನು ಮರೆತೇ ಬಿಟ್ಟಿದ್ದರು. ಇಂಥ ಸುಂದರ ಭಾರತ ನಿರ್ಮಾಣ ಆಗುವುದಾದರೆ ಅದು ಭಾರತೀಯ ಧರ್ಮ, ಅಧ್ಯಾತ್ಮದಿಂದ ಮಾತ್ರ ಸಾಧ್ಯ ಎಂಬುದು ನಿರೂಪಿತವಾಯಿತು.
ಮೂರನೆಯದ್ದು ವ್ಯವಹಾರಿಕ ದರ್ಶನ: ಕುಂಭಮೇಳದ ಆಯೋಜನೆಗೆ ಕೇಂದ್ರ ಮತ್ತು ಉತ್ತರಪ್ರದೇಶ ರಾಜ್ಯ ಸರ್ಕಾರ ಸೇರಿ 12,670 ಕೋಟಿ ರೂ. ವೆಚ್ಚ ಮಾಡಿವೆ. 3 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ. ವಿವಿಧ ವಲಯಗಳಲ್ಲಿ 8 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 6 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ಪ್ರಾಪ್ತಿ ಆಗಿದೆ. 150 ಕಿ.ಮೀ. ವ್ಯಾಪ್ತಿಯಲ್ಲಿ ಆರ್ಥಿಕತೆಗೆ ಬಲ ಬಂದಿದೆ. ಇದರ ಒಟ್ಟು ಪರಿಣಾಮ ಜನವರಿ-ಮಾರ್ಚ್ ನಡುವಿನ ಆರ್ಥಿಕ ತ್ರೖೆಮಾಸಿಕದಲ್ಲಿ 1% ಜಿಡಿಪಿ ಬೆಳವಣಿಗೆ ಆಗಿದೆ. ಇದು ದೇಶದ ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರ್ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮಾಹಿತಿ. ಈಗ ಇನ್ನೆರಡು ಆಯಾಮಗಳನ್ನು ರ್ಚಚಿಸೋಣ.
ರಾಜಕೀಯ ಆಯಾಮ: ಭಾರತದ ರಾಜಕಾರಣವನ್ನು ಎರಡು ತೆರನಾಗಿ ನೋಡಲೇಬೇಕು. ಒಂದು ಆಸ್ತಿಕ ರಾಜಕಾರಣ, ಮತ್ತೊಂದು ನಾಸ್ತಿಕ ಅಥವಾ ಭಂಡತನದ ರಾಜಕಾರಣ. ಬಿಜೆಪಿ ರಾಜಕಾರಣಕ್ಕೆ ಧರ್ಮ, ಸಂಸ್ಕೃತಿಯ ತಳಹದಿ ಅಥವಾ ಲೇಪ ಅಧಿಕೃತವಾಗಿ ಇದೆ. ಇದನ್ನು ಆ ಪಕ್ಷದ ಸಂಸ್ಥಾಪಕರು Cultural politics/ಸಾಂಸ್ಕೃತಿಕ ರಾಜಕಾರಣ ಎಂದು ಕರೆದಿದ್ದಾರೆ. ಕಾಶ್ಮೀರ, ಅಯೋಧ್ಯೆ, ಕಾಶಿ, ಮಥುರಾ, ಗೋವು ಮತ್ತು ಕುಂಭಮೇಳ ಮತ್ತು ಜನಸೇವೆ ಇವೆಲ್ಲ ಅದೇ ಹಿನ್ನೆಲೆಯಿಂದ ಜೋಡಿಸಿಕೊಂಡಿರುವವು. ಬಿಜೆಪಿಯ ರಾಜಕೀಯ ನೆಲೆ ಇದರ ಮೇಲೇ ನಿಂತುಕೊಂಡಿದೆ. ಈ ಸಂಗತಿಯನ್ನು ಬಿಜೆಪಿಯ ಉನ್ನತ ಹಂತದಿಂದ ಕಟ್ಟಕಡೆಯ ವ್ಯಕ್ತಿಯೂ ಅರ್ಥಮಾಡಿಕೊಳ್ಳಬೇಕು.
ಇದಕ್ಕೆ ಮೋದಿ ಮತ್ತು ಯೋಗಿ ಆಡಳಿತದ ಧೋರಣೆಯೇ ಸಾಕ್ಷಿ. ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಬೆಳವಣಿಗೆಗೆ ಇದೇ ಆಧಾರ. ‘ಕುಂಭಮೇಳದ ಯಶಸ್ಸು ಮೋದಿ ನಾಯಕತ್ವಕ್ಕೆ ಸಲ್ಲಬೇಕು’ ಎಂದು ಯೋಗಿ ಹೇಳಿದರೆ, ‘ಇದು ಯೋಗಿ ನೇತೃತ್ವದ ಯಶಸ್ಸು’ ಎಂದು ಮೋದಿ ಹೇಳಿದ್ದಾರೆ. ಅದು ಹೇಗೇ ಇರಲಿ, ಕೊನೆಯಲ್ಲಿ ಯೋಗಿಯವರು ಮೇಳದ ಸಫಾಯಿ ಕರ್ಮಚಾರಿಗಳ ಜೊತೆಗೂಡಿ ತ್ರಿವೇಣಿ ತಟವನ್ನು ಸ್ವಚ್ಛಗೊಳಿಸಿದ್ದು, ಕರ್ಮಚಾರಿಗಳನ್ನು ಸನ್ಮಾನಿಸಿ ಸಹಪಂಕ್ತಿ ಭೋಜನ ಮಾಡಿದ್ದು, 75 ಸಾವಿರ ಪೊಲೀಸರಿಗೆ 10 ಸಾವಿರ ರೂ. ಬೋನಸ್ ನೀಡಿ, 7 ದಿವಸ ವಿಶೇಷ ರಜಾ ನೀಡಿದ್ದು ಓರ್ವ ಉತ್ತಮ ಆಡಳಿತಗಾರ ಮಾಡಲೇಬೇಕಾದ ಕೆಲಸ. ಒಟ್ಟಾರೆ ಈ ಜೋಡಿಗೊಂದು ಭೇಷ್ ಇರಲಿ.
ಅಪಾಯಕಾರಿ ಆಯಾಮ: ‘ಕುಂಭಮೇಳದಲ್ಲಿ ಮಿಂದರೆ ಬಡತನ ನಿಮೂಲನೆ ಆಗುತ್ತದೆಯೇ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಶ್ನಿಸಿದ್ದು, ಹತಾಶೆ ಮತ್ತು ಅಪಾಯಕಾರಿ ಬೆಳವಣಿಗೆಯ ಮುನ್ಸೂಚನೆ. ಭಾರತವನ್ನು ಮಣಿಸಬೇಕಾದರೆ ಇಲ್ಲಿನ ಸಾಂಸ್ಕೃತಿಕ ಅಸ್ಮಿತೆಯನ್ನು ಕೊಂದುಹಾಕಬೇಕೆಂಬ ಮೆಕಾಲೆ ಪ್ರಣೀತ ವೈಚಾರಿಕ ಕೊಂಡಿಯ ಸಂಬಂಧವೂ ಇದೆ. ಈ ಬಗ್ಗೆ ಜಾಗೃತ ಭಾರತೀಯರು ಸದಾ ಒಂದು ಎಚ್ಚರದ ಕಣ್ಣು ಇಟ್ಟಿರಲೇಬೇಕು. ಇನ್ನು ‘ಹಿಂದುವಾಗಿ ಹುಟ್ಟಿ, ಹಿಂದುವಾಗಿ ಸಾಯುತ್ತೇನೆ’ ಎಂದು ಡಿಕೆಶಿ ಹೇಳಿದ್ದನ್ನು ಕರ್ನಾಟಕ ಕಾಂಗ್ರೆಸ್ ವಲಯದ ಪಾಲಿಗೆ ಮರುಭೂಮಿಯಲ್ಲೊಂದು ಓಯಸಿಸ್ ಎಂದು ಭಾವಿಸೋಣ.
(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)