

ನಿಮ್ಮ ಮಾವನಿಗೆ ಅವರ ತಂದೆಯಿಂದ ಬಂದ ಸ್ವತ್ತು ಅವರ ಪ್ರತ್ಯೇಕ ಸ್ವತ್ತಾಗಿರುತ್ತದೆ. ಇದು ಸ್ವಯಾರ್ಜಿತ ಸ್ವತ್ತಿನ ಎಲ್ಲ ಗುಣಗಳನ್ನೂ ಹೊಂದಿರುತ್ತದೆ. ಮಾವ ತೀರಿಕೊಂಡ ನಂತರ ಹಿಂದೂ ವಾರಸಾ ಕಾಯ್ದೆಯ ಕಲಂ 8ರಂತೆ ನಿಮ್ಮ ಮಾವನ ಹೆಂಡತಿ ಮತ್ತು ಮಕ್ಕಳಿಗೆ ಸಮಭಾಗ ಇರುತ್ತದೆ.
ಅತ್ತೆ ಕೂಡ ಇಲ್ಲದೇ ಇರುವುದರಿಂದ ಆಸ್ತಿ ಮೂರು ಭಾಗವಾಗಿ, ನಿಮ್ಮ ಪತ್ನಿಗೆ, ಆಕೆಯ ತಮ್ಮನಿಗೆ ಹಾಗೂ ನಿಮ್ಮ ಪತ್ನಿಯ ಮೃತ ಸಹೋದರನಿಗೆ ತಲಾ ಒಂದೊಂದು ಭಾಗ ಹೋಗುತ್ತದೆ. ನಿಮ್ಮ ಪತ್ನಿಯ ಮೃತ ಸಹೋದರನ ಮೂರನೇ ಒಂದು ಭಾಗ ಮತ್ತೆ ಆತನ ಹೆಂಡತಿ ಮತ್ತು ಇಬ್ಬರ ಮಕ್ಕಳಿಗೆ ಸಮವಾಗಿ ಹಂಚಿಕೆ ಆಗುತ್ತದೆ. ನಿಮ್ಮ ಪತ್ನಿ ದಾವೆ ಹಾಕಿ ತಮ್ಮ ಆಸ್ತಿಯನ್ನು ಪರಭಾರೆ ಮಾಡಬಾರದೆಂಬ ತಾತ್ಕಾಲಿಕ ನಿರ್ಬಂಧಕ ಆಜ್ಞೆ/ಇಂಜಂಕ್ಷನ್ ಆರ್ಡರನ್ನು ಪಡೆದುಕೊಳ್ಳಲಿ.
ಕೇಸಿನಲ್ಲಿ ನಿಮ್ಮ ಪತ್ನಿಯ ಮೃತ ಸಹೋದರನ ಹೆಂಡತಿ ಮತ್ತು ಮಕ್ಕಳನ್ನೂ ಪಾರ್ಟಿ ಮಾಡಲಿ. ಕೇಸಿನಲ್ಲಿ ಎಲ್ಲರಿಗೂ ನೋಟಿಸು ಜಾರಿ ಆದ ಮೇಲೆ ಮಧ್ಯಸ್ಥಿಕೆಗೆ ಪ್ರಕರಣವನ್ನು ಕಳಿಸಿಕೊಡಲು ಪತ್ನಿ ಕೇಳಿಕೊಳ್ಳಲಿ. ಮಧ್ಯಸ್ಥಿಕೆಯಲ್ಲಿ ಯಾವುದಾದರೂ ಒಂದು ಒಪ್ಪಂದಕ್ಕೆ ಎಲ್ಲರೂ ಬರಬಹುದು. ಇಲ್ಲದೇ ಹೋದರೆ ಕೇಸನ್ನು ಆ ನಂತರ ನಿಮ್ಮ ಪತ್ನಿ ಮುಂದುವರೆಸಲಿ. ಆಕೆಯ ಮೂರನೇ ಒಂದು ಭಾಗಕ್ಕೆ ತೊಂದರೆಯಿಲ್ಲ.
ನಮ್ಮ ಆಸ್ತಿಯನ್ನು ಬೇರೆ ಯಾರೋ ಮತ್ಯಾರಿಗೋ ಮಾರಾಟ ಮಾಡಿದರೆ ನಾವು ಯೋಚಿಸಬೇಕಿಲ್ಲ ಎನ್ನುವುದು ಸರಿ. ಆದರೆ, ಆ ಪತ್ರ ನೋಂದಾಯಿತವಾಗಿರುವಾಗ ಮುಂದೆ ನಿಮ್ಮ ಹಕ್ಕನ್ನು ಯಾರಾದರೂ ಪ್ರಶ್ನಿಸಿದರೆ ತೊಂದರೆ ಆಗಬಹುದು. ಆದ್ದರಿಂದ ನಿರ್ದಿಷ್ಟ ಪರಿಹಾರ ಕಾಯ್ದೆ 1963 /ಸ್ಪೆಸಿಫಿಕ್ ರಿಲೀಫ್ ಆಕ್ಟ್ 1963 ಕಾಯ್ದೆಯ ಕಲಂ 31ರಂತೆ ನೀವು , ನಿಮ್ಮ ತಮ್ಮ ಬೇರೆಯವರಿಗೆ ಮಾರಾಟ ಮಾಡಿಕೊಟ್ಟಿರುವ ನಿಮ್ಮ ಆಸ್ತಿಗೆ ಸಂಬಂಧಿಸಿರುವ ಕ್ರಯ ಪತ್ರವನ್ನು ಶೂನ್ಯ ಎಂದು ಹಕ್ಕು ಘೊಷಣೆ ಮಾಡುವಂತೆ ಮತ್ತು ಆ ಕ್ರಯ ಪತ್ರವನ್ನು ರದ್ದು ಮಾಡುವಂತೆ ದಾವೆ ಹಾಕುವುದು ಒಳ್ಳೆಯದು.
ನಿಮ್ಮ ದಾವೆಯಲ್ಲಿ ತಮ್ಮ ಮತ್ತು ಕೊಂಡುಕೊಂಡವರನ್ನೂ ಪ್ರತಿವಾದಿಯಾಗಿಸಬೇಕು. ಕ್ರಯವಾದ ಮೂರು ವರ್ಷಗಳ ಒಳಗೆ ದಾವೆ ಹಾಕಬೇಕಿರುತ್ತದೆ. ಪ್ರಕರಣದಲ್ಲಿ ಎದುರುದಾರರಿಗೆ ನೋಟಿಸ್ಜಾರಿಯಾದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಎಲ್ಲರೂ ಕೂತು ಮಾತಾಡಿದಾಗ ಪರಿಹಾರ ಸಿಕ್ಕಬಹುದು. ನಿಮ್ಮ ತಮ್ಮ ಮತ್ತು ಕ್ರಯಕ್ಕೆ ಪಡೆದವರು ಒಪ್ಪದೇ ಹೋದರೆ ದಾವೆ ಮುಂದುವರೆಸಿ. ನೀವು ಹೆದರಬೇಕಾಗಿಲ್ಲ.
(ಸೂಚನೆ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.)