

ಅವಸ್ಥಾನುಕೃತಿರ್ನಾಟ್ಯಂ ರೂಪಂ ದೃಶ್ಯತಯೋಚ್ಯತೇ |
ರೂಪಕಂ ತತ್ಸಮಾರೋಪಾತ್ ದಶಧೈವ ರಸಾಶ್ರಯಂ ||
ಅನ್ಯದ್ಭಾವಾಶ್ರಯಂ ನೃತ್ಯಂ ನೃತ್ತಂ ತಾಲಲಯಾಶ್ರಯಮ್ ||
ಇಲ್ಲಿ ಧನಂಜಯ ನೃತ್ಯಕ್ಕೂ, ನೃತ್ತಕ್ಕೂ, ನಾಟ್ಯಕ್ಕೂ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ, ಸ್ಪಷ್ಟವಾಗಿ ಹೇಳಿದ್ದಾನೆ. ಕಥಾನಾಯಕ ಮೊದಲಾದವರ ಅವಸ್ಥೆಗಳನ್ನು ಅಭಿನಯರೂಪದಲ್ಲಿ ಅನುಕರಣ ಮಾಡುವುದೇ ‘ನಾಟ್ಯ’ವೆನಿಸಿಕೊಳ್ಳುತ್ತದೆ. ಈ ನಾಟ್ಯವು ಕಣ್ಣಮುಂದೆ ಪ್ರದರ್ಶಿಸಲ್ಪಡುವುದರಿಂದ ಇದನ್ನು ‘ರೂಪಕ’ವೆಂದು ಕರೆಯುತ್ತಾರೆ. ರೂಪಕವು ಹತ್ತು ಪ್ರಭೇದವನ್ನೊಳಗೊಂಡಿದೆ. ಭಾವಾಶ್ರಯವಾದ ನೃತ್ಯವು ರಸಾಶ್ರಯವಾದ ನಾಟ್ಯಕ್ಕಿಂತ ಬೇರೆಯಾದುದು. ನೃತ್ತವು ತಾಳಲಯಗಳನ್ನೊಳಗೊಂಡಿದೆ.
ಇಂದಿನ ದಿನಗಳಲ್ಲಿ ನಾವು ‘ನಾಟ್ಯ’ ಎಂಬ ಶಬ್ದವನ್ನು (ಭರತನಾಟ್ಯ) ಸಾಮಾನ್ಯವಾಗಿ ಇಂಗ್ಲಿಷಿನ ಈಚ್ಞ್ಚ ಎಂಬ ಅರ್ಥದಲ್ಲಿ ಬಳಸುತ್ತೇವೆ. ಒಂದು ಹಾಡನ್ನೋ, ಪದ್ಯವನ್ನೋ ಒಬ್ಬರು ಹಿನ್ನೆಲೆಯಲ್ಲಿ ಹಾಡುತ್ತಿರುವಾಗ ಅದರ ಒಂದೊಂದು ಪದದ ಅರ್ಥವನ್ನೂ ನಟ ಅಥವಾ ನಟಿ ಅಭಿನಯಿಸಿ ತೋರಿಸುತ್ತಾ ನರ್ತನ ಮಾಡುವುದಕ್ಕೆ ಈಗ ‘ಭರತನಾಟ್ಯ’ ಎಂಬ ಹೆಸರು ರೂಢಿಯಾಗಿದೆ. ವಸ್ತುತಃ ಶಾಸ್ತ್ರಕಾರರ ಪರಿಭಾಷೆಯಲ್ಲಿ ಇದು ‘ನೃತ್ಯ’ವೆನಿಸಿಕೊಳ್ಳುತ್ತದೆ. ಆದರೆ ಹಾಗೆ ‘ಭರತನೃತ್ಯ’ ಅಂತ ಹೇಳುವುದು ರೂಢಿಯಲ್ಲಿಲ್ಲ.
ನಾಟ್ಯಶಾಸ್ತ್ರದ ಪರಿಭಾಷೆಯಲ್ಲಿ ‘ನಾಟ್ಯ’ವು ಒಂದು ಕಥಾವಸ್ತುವನ್ನು ಅವಲಂಬಿಸಿದೆ. ಕಥಾಪುರುಷರ ಬಹುವಿಧದ ಅವಸ್ಥಾವಿಶೇಷಗಳನ್ನು ಅಭಿನಯದ ಮೂಲಕ ತೋರಿಸುವ ಈ ವಿಧವನ್ನು ನೆನೆದರೆ ಇಂಗ್ಲಿಷಿನ ಈಚಞಚ ಪದಕ್ಕೆ ಸಮನಾಗುತ್ತದೆ. ನಾಟ್ಯವು ಶೃಂಗಾರ, ವೀರ, ಕರುಣ, ಅದ್ಭುತ, ಭಯಾನಕ, ಹಾಸ್ಯ ಮೊದಲಾದ ರಸಗಳನ್ನು ಆಶ್ರಯಿಸಿದೆ. ನಾಟ್ಯದಲ್ಲಿ ವಾಕ್ಯಾರ್ಥದ ಅಭಿನಯವಿದ್ದರೆ ನೃತ್ಯದಲ್ಲಿ ಪದಾರ್ಥದ ಅಭಿನಯವಿರುತ್ತದೆ. ಇವೆರಡಕ್ಕಿಂತ ಭಿನ್ನವಾದದ್ದೇ ‘ನೃತ್ತ.’ ಇದರಲ್ಲಿ ತಾಳಕ್ಕೆ ಅನುಸಾರವಾದ ಲಯಬದ್ಧವಾದ ಕುಣಿತವಿರುತ್ತದೆಯೇ ಹೊರತು ಯಾವುದೇ ಚಿತ್ತವೃತ್ತಿಗಳ ಕುರಿತಾದ ಅಭಿನಯವಿರುವುದಿಲ್ಲ.
ಭರತನಾಟ್ಯವು ನೃತ್ಯ, ನೃತ್ತ ಮತ್ತು ನಾಟ್ಯ ಈ ಮೂರನ್ನೂ ಒಳಗೊಂಡಿದೆ. ಭರತನಾಟ್ಯದ ಕಲಾವಿದರು ಭಾವಾಶ್ರಯವಾದ ನೃತ್ಯವನ್ನೂ, ರಸಾಶ್ರಯವಾದ ನಾಟ್ಯವನ್ನೂ, ತಾಳಲಯಾಶ್ರಯವಾದ ನೃತ್ತವನ್ನೂ (ಕುಣಿತ)ವನ್ನೂ ಪ್ರದಶಿಸುತ್ತಲೇ ಇರುತ್ತಾರೆ. ಕಣ್ಣಿನ ಮೂಲಕ ಮನಸ್ಸನ್ನು ಸೇರುವ ಪ್ರತಿಮೆ, ಬಿಂಬರೇಖೆ, ಚಿತ್ರಪಟ, ವರ್ಣಪಟ, ಅಭಿನಯ, ನರ್ತನ ಮೊದಲಾದ ರೂಪಚಿತ್ರಗಳು, ಕಿವಿಯ ಮೂಲಕ ಮನಸ್ಸನ್ನು ಸೇರುವ ಸಂಗೀತ, ವಾಕ್ಪ್ರಬಂಧದ ಮೂಲಕ ಮನಸ್ಸನ್ನು ಸೇರುವ ಕಾವ್ಯ ಯಾವುದೂ ಆಗಬಹುದು. ಇವು ಕಲಾನುಭವದಲ್ಲಿ ಮನಃಪ್ರಸಾದ, ಭಾವಾವೇಶ ಮತ್ತು ತಾತ್ಪರ್ಯಚಿಂತನೆ ಎಂಬ ಮೂರು ಅಂತಸ್ತುಗಳನ್ನು ಅಥವಾ ಮೂರು ಘಟ್ಟಗಳನ್ನು ಹೊಂದಿವೆ.
ರೂಪಚಿತ್ರದಲ್ಲಾದರೆ ದೇವಾಲಯಗಳ ಹೊರಗೋಡೆಯ ಮೇಲೆ ಬರೆದ ಆನೆ, ಕುದುರೆ, ಪದ್ಮ, ಹಂಸ, ಚಕ್ರ, ಸ್ವಸ್ತಿಕ, ದೇವರ ವಿಗ್ರಹ, ನಾಟ್ಯಶಿಲ್ಪಗಳು ಯಾವುದೂ ಆಗಬಹುದು. ಸಂಗೀತದಲ್ಲಾದರೆ ಗುರುವಂದನೆಯ ಪದ್ಯ, ಸುಂದರ ಭಜನಾವಳಿ, ನಾಮಸಂಕೀರ್ತನೆ, ಯಾವುದೂ ಆದೀತು! ಕಾವ್ಯ, ನರ್ತನ, ಅಭಿನಯ ಮೊದಲಾದ ಕಲಾಕೃತಿಗಳಲ್ಲಾದರೆ ದೇಶವರ್ಣನೆ, ನಾಂದೀಪದ್ಯ, ಗಿರಿ-ವನ-ನದಿಗಳ ವರ್ಣನೆ, ಯಾವುದೂ ಆಗಬಹುದು! ಇವೆಲ್ಲವೂ ಮನಸ್ಸಿನ ಬೇಸರ ಮರೆತು, ದುಗುಡ ಕಳೆದು ಸ್ವಲ್ಪ ಹೊಸತನ ಬರುವುದಕ್ಕೆ ಕಾರಣವಾಗುತ್ತವೆ. ಸಂಗೀತದ ನಾದಧಾರೆಯಂತೂ ವ್ಯಂಜನಾಂಶಗಳ ಸ್ಪೋಟದಿಂದ ಅಲ್ಲಲ್ಲಿ ದ್ವೀಪಗಳಂತೆ ಬಂಡೆಗಳಂತೆ, ಜಲಪಾತಗಳಂತೆ ಅನುಭವವನ್ನುಂಟುಮಾಡುತ್ತಾ ನಮ್ಮನ್ನು ಹೊಸದೊಂದು ಲೋಕಕ್ಕೇ ಕರೆದೊಯ್ದು ರುಚಿವೈವಿಧ್ಯಗಳನ್ನು ಕೊಡುತ್ತವೆ.
ಇನ್ನು ರಾಮಾಯಣ, ಮಹಾಭಾರತ, ಭಾಗವತ, ಗೀತೆ ಮೊದಲಾದ ಕಾವ್ಯಗಳನ್ನು ಎತ್ತಿಕೊಂಡು ಯಾವುದಾದರೂ ರೂಪಕವನ್ನು ಪ್ರೇಕ್ಷಕರ ಮುಂದಿಡುವ ನೃತ್ಯಕಲಾವಿದರು ರಾಮ, ಭರತ, ಲಕ್ಷ್ಮಣ, ಸೀತೆ, ಆಂಜನೇಯ ಮೊದಲಾದವರ ತ್ಯಾಗ, ಧರ್ಮನಿಷ್ಠುರತೆ, ಸತ್ಯವಾಕ್ಯಪರಿಪಾಲನೆ ಮೊದಲಾದ ಗುಣಗಳನ್ನು ಪ್ರಸ್ತುತಪಡಿಸುತ್ತಾರೆ. ಆಗ ರಾಮಚಂದ್ರನ ಧರ್ವಿುಷ್ಠತೆ ದೊಡ್ಡದೋ, ಸೀತೆಯ ಕರುಣೆ ದೊಡ್ಡದೋ, ಭರತನ ವಿರಕ್ತಿ ದೊಡ್ಡದೋ, ಲಕ್ಷ್ಮಣನ ಕೈಂಕರ್ಯ ದೊಡ್ಡದೋ, ಕೃಷ್ಣನ ನಿಃಸ್ವಾರ್ಥತೆ ದೊಡ್ಡದೋ, ಭೀಮನ ಅಟ್ಟಹಾಸ ವಿವೇಕ ದೊಡ್ಡದೋ ಎಂಬ ಭಾವ ನಮ್ಮಲ್ಲಿ ಉದಿಸಿ, ಅವು ನಮ್ಮ ಅಂತರಂಗದಲ್ಲಿ ತುಂಬಿಕೊಂಡು ಸದಸದ್ವಿವೇಕಕ್ಕೆ ತೊಡಗುವಂತಾಗುತ್ತವೆ. ಇವೇ ನಮಗೆ ಕಾವ್ಯನಾಟಕನೃತ್ಯಗಳಿಂದ ಆಗುವ ಅತಿ ಹೆಚ್ಚಿನ ಲಾಭ. ಇಂಥಾದ್ದನ್ನು ಮನಗಂಡೇ ಕವಿಯೊಬ್ಬ ಉದ್ಗರಿಸಿದ-
ಸಾಹಿತ್ಯಸಂಗೀತ ಕಲಾವಿಹೀನಃ | ಸಾಕ್ಷಾತ್ಪಶುಃ ಪುಚ್ಛವಿಷಾಣಹೀನಃ |
ತೃಣಂ ನ ಖಾದನ್ನಪಿ ಜೀವಮಾನಃ | ತದ್ಭಾಗಧೇಯಂ ಪರಮಂ ಪಶೂನಾಮ್ ||
‘ಸಾಹಿತ್ಯಸಂಗೀತ ಮುಂತಾದ ಕಲೆಗಳ ಜ್ಞಾನವಿಲ್ಲದವನು ಕೊಂಬುಬಾಲಗಳಿಲ್ಲದ ಪ್ರತ್ಯಕ್ಷ ಪಶುವೇ ಹೌದು. ಇವನು ಹುಲ್ಲು ತಿನ್ನದಿರುವುದು ಪಶುಗಳ ಭಾಗ್ಯವೇ ಆಗಿದೆ.’ ಅಂದರೆ ಇವನು ಹುಲ್ಲು ತಿನ್ನದ ಪಶುವೇ ಹೌದು ಅಂತ ಅರ್ಥ.
ಯಕ್ಷಗಾನ, ನಾಟಕ, ನೃತ್ಯ, ಶಿಲ್ಪ, ಯಾವುದೇ ಕಲೆಯಾಗಬಹುದು ಅವಕ್ಕೂ ನೀತಿಗೂ ಪರಸ್ಪರ ಸಂಬಂಧವಿದೆ. ಕಲೆ ಮತ್ತು ನೀತಿ ಅರ್ಧನಾರೀಶ್ವರ ತತ್ತ್ವದಂತೆ ಒಟ್ಟಿಗೇ ಇರುತ್ತವೆ. ತನ್ನ ದಣಿಯನ್ನೇ ಕೊಂದ ಮ್ಯಾಕ್ಬೆತ್ಗೆ ಒಂದು ಕ್ಷಣವಾದರೂ ಬದುಕು ಅರ್ಥಶೂನ್ಯವಾಗಿ ಕಾಣುವುದು, ತನ್ನ ಮಕ್ಕಳಿಂದ ಹೊರದೂಡಲ್ಪಟ್ಟ ಕಿಂಗ್ ಲಿಯರ್ಗೆ ತಾನು ಮಾಡಿದ ತಪ್ಪು ಅರಿವಿಗೆ ಬರುವುದು-ನಿಲ್ಲಲು ಆಶ್ರಯವಿಲ್ಲದೆ ಮಳೆಗಾಳಿಗೆ ಸಿಕ್ಕು ನಡುಗುತ್ತಿದ್ದಾಗ ತನ್ನ ವೈಭವಕಾಲದಲ್ಲಿ ಬಡತನವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ- ಎಂದು ಪರಿತಪಿಸುವುದು, ಗಾಂಧಾರಿ ಮಗನ ಹೆಣದ ಮುಂದೆ ಕೂತು ‘ಯತೋ ಧರ್ಮಸ್ತತೋ ಜಯಃ’, ‘ಧರ್ಮವಿದ್ದಲ್ಲಿ ಜಯ’ ಎಂದು ಉದ್ಗರಿಸುವುದು ಇವೇ ಮೊದಲಾದವು ನಮ್ಮನ್ನು ಆತ್ಮಾವಲೋಕನಕ್ಕೆ ಪ್ರೇರಿಸುತ್ತವೆ. ಕಲೆಗಳಿಂದಾಗುವ ಮಹಾಪ್ರಯೋಜನ ಇವು.
ನೃತ್ಯ, ನಾಟಕ, ಸಂಗೀತ, ಕಾವ್ಯ ಇತ್ಯಾದಿ ಯಾವುದೇ ಕಲೆಗಳಲ್ಲಿ ಪ್ರತಿಪಾದಿಸಲು ಇಂಥಾದ್ದೇ ವಿಷಯ ಅಂತ ಇಲ್ಲ. ಯಾವುದನ್ನೂ ಪ್ರದರ್ಶಿಸಬಹುದು. ಅದನ್ನೂ ಧನಂಜಯ ಸೊಗಸಾಗಿ ಪ್ರತಿಪಾದಿಸಿದ್ದಾನೆ.
ರಮ್ಯಂ ಜುಗುಪ್ಸಿತಮುದಾರಮಥಾಪಿ ನೀಚಂ |
ಉಗ್ರಂ ಪ್ರಸಾದಿ ಗಹನಂ ವಿಕೃತಂ ಚ ವಸ್ತು |
ಯದ್ವಾಪ್ಯವಸ್ತು ಕವಿಭಾವಕಭಾವ್ಯಂ ಮಾನಂ |
ತನ್ನಾಸ್ತಿ ಯನ್ನ ರಸಭಾವಮುಪೈತಿ ಲೋಕೇ ||
‘ಕಥಾವಸ್ತು ಇಂಥಾದ್ದೇ ಆಗಿರಬೇಕೆಂಬ ಯಾವ ನಿಯಮವೂ ಇಲ್ಲ. ಲೋಕದಲ್ಲಿ ಅದು ರಮ್ಯವಾಗಿರಬಹುದು, ಅಸಹ್ಯವಾಗಿರಬಹುದು, ಉದಾತ್ತವಾಗಿರಬಹುದು, ನೀಚವಾಗಿರಬಹುದು, ಭೀಷಣವಾಗಿರಬಹುದು, ಪ್ರಸನ್ನವಾಗಿರಬಹುದು, ಕ್ಲಿಷ್ಟವಾಗಿರಬಹುದು, ವಿಕೃತವಾಗಿರಬಹುದು, ಇಂದ್ರಿಯಗಳ ಗ್ರಹಣಕ್ಕೆ ಅತೀತವಾದ ಅವಸ್ತುವೇ ಆಗಿರಬಹುದು, ರಸತ್ವವನ್ನು ಹೊಂದಲಾರದ, ಕಲಾತ್ಮಕವಾದ ಪ್ರತಿಪಾದನೆಗೆ ಅಳವಡದ ಯಾವೊಂದು ವಸ್ತುವೂ ಲೋಕದಲ್ಲಿ ಇಲ್ಲವೇ ಇಲ್ಲ. ಆದರೆ ಕವಿ ಅಥವಾ ಕಲಾವಿದ ಅದನ್ನು ಹಸಿಹಸಿಯಾಗಿ ಪ್ರತಿಪಾದಿಸಬಾರದು. ಸಹೃದಯನೂ ಅದನ್ನು ಭಾವಿಸಿ ಆಸ್ವಾದಿಸಬೇಕು. ಒಂದು ವಸ್ತು ಲೋಕದಲ್ಲಿ ಯಾವ ಸ್ವರೂಪದ್ದೇ ಆಗಿರಲಿ. ಲೌಕಿಕವಾದ ಪರಿಸರಕ್ಕೆ ಅನುಗುಣವಾಗಿ ಪ್ರೀತಿ, ದ್ವೇಷ, ಜುಗುಪ್ಸೆ, ಉತ್ಸಾಹ, ಶೋಕ, ವಿಸ್ಮಯ ಮೊದಲಾದ ಚಿತ್ತವೃತ್ತಿಗಳಲ್ಲಿ ಯಾವುದನ್ನೇ ಉಕ್ಕಿಸತಕ್ಕದ್ದಾಗಿರಲಿ- ಅದು ಕವಿಪ್ರತಿಭೆಯಲ್ಲಿ ಮಿಂದುಬಂದರೆ, ಸಹೃದಯಪ್ರತಿಭೆಯಲ್ಲಿ ಮತ್ತೆ ಹೊಮ್ಮಿ ಬಂದರೆ ಅದಕ್ಕೆ ರಸಮಯತೆ ಬರುತ್ತದೆ. ಅದು ನಿರ್ಮಲವಾದ ಲೋಕೋತ್ತರವಾದ ಆನಂದವನ್ನು ಸೂಸುತ್ತದೆ’ ಎಂದು ಧನಂಜಯ ಸಾರಿದ.
(ಲೇಖಕರು ನಿವೃತ್ತ ಅಧ್ಯಾಪಕರು, ಬರಹಗಾರರು)