ಇಂದು ಸಂವಿಧಾನ ದಿನ: ಭಾರತೀಯ ಮಹಿಳೆಯರ ಆತ್ಮಬಂಧು ದೇಶದ ಸಂವಿಧಾನ

ವಿಜಯವಾಣಿ (1)
Published on
ಭಾರತವು ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿರಿಸಿ ಗೌರವಿಸುತ್ತ ಬಂದಿರುವ ದೇಶ ಎಂದೇ ಜನಜನಿತ. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎನ್ನುತ್ತ ಸ್ತ್ರೀಯರನ್ನು ಸ್ತುತಿಸಿ ಸಮಸ್ತ ಪ್ರಕೃತಿಗೆ ಹೋಲಿಸಿದ್ದರೂ ಈ ದೇಶದಲ್ಲಿ ಅತಿ ಹೆಚ್ಚು ಶೋಷಣೆಗೆ, ನಿರ್ಲಕ್ಷ್ಯಕ್ಕೆ, ಅಪಮಾನಗಳಿಗೆ, ಅವಕಾಶ ವಂಚನೆಗೆ ಗುರಿಯಾದವರು ಸ್ತ್ರೀಯರೇ. ಈ ನೆಲದ ಎಲ್ಲ ಜಾತಿ, ಜನಾಂಗ, ಧರ್ಮ, ಲಿಂಗ, ವರ್ಣ, ವರ್ಗಗಳಲ್ಲಿ ಇದನ್ನು ಕಾಣಬಹುದು.

ಪುರುಷ ಪ್ರಾಧಾನ್ಯವಿರುವ ಭಾರತದ ಸಮಾಜದಲ್ಲಿ ಈ ಹಿಂದೆ ಜಾರಿಯಾಗಿದ್ದ ವಿವಿಧ ಕಾನೂನುಗಳು ಪುರುಷರ ಪರವಾಗಿಯೇ ನಿಲುವುಗಳನ್ನು ತಳೆಯುತ್ತಿದ್ದದ್ದು ಈಗ ಮುಚ್ಚಿಟ್ಟ ಸತ್ಯವಾಗಿ ಉಳಿದಿಲ್ಲ. ಇಂಥ ತಾರತಮ್ಯಗಳು ಮಹಿಳೆಯರ ಬದುಕಿನ ಘನತೆಯನ್ನು ನಿರಾಕರಿಸಿದ್ದು, ಹುಟ್ಟಿನ ಹಕ್ಕುಗಳನ್ನು ಕಸಿದುಕೊಂಡಿದ್ದು ಮತ್ತು ಹೀಗೆಯೆ ಬದುಕುವುದು ಮಹಿಳೆಯರಿಗೆ ಸೂಕ್ತ ಎಂದು ನಂಬಿಸಿಕೊಂಡು ಬಂದದ್ದು ಸುಳ್ಳಾಗಿಯೂ ಉಳಿದಿಲ್ಲ.

ಪ್ರಾಚೀನ ಭಾರತದಲ್ಲಿ ಮಹಿಳೆಯರು ಉನ್ನತ ಸ್ಥಾನಮಾನಗಳನ್ನು ಪಡೆದಿದ್ದರು, ಸಾಮ್ರಾಜ್ಯಗಳನ್ನು ಕಟ್ಟಿ ಆಳಿದ್ದರು, ಮಹತ್ತಿನ ಕೃತಿಗಳನ್ನು ರಚಿಸಿದ್ದರು ಎನ್ನುವುದೆಲ್ಲ ಬೆರಳೆಣಿಕೆಯ ಮಾಹಿತಿಗಳು. ಬೃಹತ್ ಸಂಖ್ಯೆಯಲ್ಲಿ ಭಾರತದ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ, ರಾಜಕಾರಣದಲ್ಲಿ, ಆಡಳಿತ ಕ್ಷೇತ್ರಗಳಲ್ಲಿ ಗಣನೀಯ ಕಾರ್ಯ ಕೈಗೊಂಡಿರುವುದನ್ನು ಇತಿಹಾಸವು ಮುಖ್ಯ ಪ್ರಮಾಣದಲ್ಲಿ ದಾಖಲಿಸಿಲ್ಲ. ಹಾಗೆ ದಾಖಲಿಸಲು ಅಗತ್ಯ ಪ್ರಮಾಣದ ದಾಖಲಾತಿಗಳು ದೊರಕುವುದಿಲ್ಲ.

ಭಾರತವು ಯುರೋಪಿನ ಸಾಮ್ರಾಜ್ಯಶಾಹಿಯ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ದೊರೆತ ಇತರ ದೇಶಗಳ ಆಧುನಿಕತೆ, ಶಿಕ್ಷಣ, ಸಂಪರ್ಕ, ರಾಜನೀತಿ, ಆಡಳಿತ, ವೈಜ್ಞಾನಿಕ ನೈಪುಣ್ಯಗಳು ಭಾರತವನ್ನು ಇತರ ದೇಶಗಳ ಪ್ರಗತಿಯೊಡನೆ ತುಲನಾತ್ಮಕವಾಗಿ ನೋಡಿ ಚಿಂತಿಸಲು ಉದ್ದೀಪನಗೊಳಿಸಿದವು. ಈ ಸಂದರ್ಭದಲ್ಲಿ ಭಾರತವು ತನ್ನ ಮೇಲರಿಮೆಯನ್ನು ಪಕ್ಕಕ್ಕಿಟ್ಟು ಶೋಷಿತರ, ದಮನಿತರ, ಅಸಹಾಯಕ ದನಿಹೀನರ ಪರವಾಗಿ ಚಿಂತಿಸುವಂತೆ ಮಾಡಿತು. ಅದುವರೆಗೂ ಯಾವುದನ್ನು ಸರಿ ಎಂದು ಭಾವಿಸಲಾಗಿತ್ತೋ ಅದು ಶೋಷಣೆಯಲ್ಲದೆ ಮತ್ತೇನೂ ಅಲ್ಲ ಎಂಬುದು ಅರಿವಾಯಿತು. ಇಂತಹ ಅರಿವನ್ನು ಪಡೆದ ಸುಶಿಕ್ಷಿತ ಮಾನವೀಯ ಚಿಂತಕರು ಈ ದೇಶವನ್ನು ಮತ್ತೊಂದು ಬಗೆಯಲ್ಲಿ ನಿರ್ವಿುಸಲು ತೊಡಗಿದರು. ಭಾರತವನ್ನು ಹೊಸ ದಿಕ್ಕಿನಲ್ಲಿ ನಡೆಯುವಂತೆ ಮಾಡಲು ಶಿಕ್ಷಣದ ಅವಶ್ಯಕತೆ, ಕಾನೂನಿನ ಅರಿವು, ಸಾಮಾಜಿಕ ಹಾಗೂ ಆಡಳಿತಾತ್ಮಕ ಸುಧಾರಣೆಗಳು ಎಷ್ಟು ಮುಖ್ಯ ಎಂಬುದನ್ನು ಮನಗಂಡ ಸಮಾಜ ಸುಧಾರಕರು ಭಾರತದ ಆಮೂಲಾಗ್ರ ಬದಲಾವಣೆಗೆ ಶ್ರಮಿಸಿದರು. ಸ್ವತಃ ಆಧುನಿಕ ವಿದ್ಯಾಭ್ಯಾಸದಿಂದ ತಿಳಿವು ಪಡೆದವರು ಕಾನೂನಿನ ಬದಲಾವಣೆಗೆ ಮುಂದಡಿ ಇಟ್ಟರು.

ಹೀಗೆ ನವಭಾರತದ ನಿರ್ವಣಕ್ಕೆ ಅಡಿಗಲ್ಲು ಹಾಕಿದವರಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಭಾರತದ ಜಡ್ಡುಗಟ್ಟಿದ ಸಮಾಜವನ್ನು ಪುನರ್​ನಿರ್ವಣ ಮಾಡುವಲ್ಲಿ ಅರ್ಥಶಾಸ್ತ್ರಜ್ಞರಾಗಿ, ನ್ಯಾಯಶಾಸ್ತ್ರಜ್ಞರಾಗಿ, ಮುತ್ಸದ್ದಿ ರಾಜಕಾರಣಿಯಾಗಿ, ಸಮಾಜ ಸುಧಾರಕರಾಗಿ ಡಾ. ಅಂಬೇಡ್ಕರ್ ತೊಡಗಿಸಿಕೊಂಡ ಪರಿ ಅತ್ಯಂತ ಶ್ಲಾಘನೀಯ. ಅವರು ಭಾರತದ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ, ಸಂವಿಧಾನ ಶಿಲ್ಪಿಯಾಗಿ ದೇಶದ ಅಸ್ಪೃ್ಯತೆಯ ನಿಮೂಲನೆಯಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮ, ಲಿಂಗ, ವರ್ಣ, ವರ್ಗಗಳಲ್ಲಿರುವ ತಾರತಮ್ಯಗಳನ್ನು ಕಾನೂನುಬಾಹಿರಗೊಳಿಸಲು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ರಚಿಸಿ ಅದರ ಭಾಗವಾಗಿ ಅಮರರಾದರು.

ಭಾರತ ಸಂವಿಧಾನ ರಚನಾ ಸಭೆಯಲ್ಲಿ 389 ಸದಸ್ಯರಿದ್ದು ಅದರಲ್ಲಿ 15 ಮಹಿಳಾ ಸದಸ್ಯರಿದ್ದದ್ದು ಅಸಮಾನ ಪ್ರಾತಿನಿಧಿತ್ವ ಎನಿಸಿದರೂ, ದೇಶದ ಸಂವಿಧಾನವನ್ನು ರೂಪಿಸಲು ಅವರ ಕೊಡುಗೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಆ 15 ಮಹಿಳಾ ಸದಸ್ಯರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಸಮಾಜ ಸುಧಾರಕರು, ವಕೀಲರೇ ಮೊದಲಾದವರಿದ್ದು ಸಮಗ್ರವಾದ ಸಂವಿಧಾನವನ್ನು ರಚಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸಂವಿಧಾನ ರಚನಾ ಸಮಿತಿಯ ಚರ್ಚೆಗಳಲ್ಲಿ ಭಾಗವಹಿಸಿ ಮಹಿಳೆಯರಿಗೆ ಈ ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳ ಕಡೆಗೆ ಕಣ್ತೆರೆಯುವಂತೆ ಮಾಡಿ ಸಾಮಾಜಿಕ ತಾರತಮ್ಯದ ಕಟುವಾಸ್ತವಗಳನ್ನು ಮನವರಿಕೆ ಮಾಡಿಕೊಟ್ಟರು. ಕೆಲವು ಶೋಷಿತ ಸಮುದಾಯಗಳು ಜಾತಿ ಹಾಗೂ ವರ್ಗಗಳ ಕಾರಣಕ್ಕೆ ಅಸ್ಪೃಶ್ಯತೆಯನ್ನು ಅನುಭವಿಸಿದರೆ ಮಹಿಳೆಯರು ಹುಟ್ಟಿನ ಕಾರಣಕ್ಕಾಗಿ 2ನೇ ದರ್ಜೆಯ ಪ್ರಜೆಗಳಾಗಿಅಸ್ಪೃಶ್ಯತೆಯ ಜೊತೆಗೆ ಶೋಷಣೆಗೆ ಒಳಗಾಗುವುದನ್ನು ಪರಿಗಣಿಸಿ ಇಂತಹ ತಾರತಮ್ಯಗಳನ್ನು ನಿವಾರಿಸುವ ಸಲುವಾಗಿ ರಚನಾ ದೃಷ್ಟಿಯಿಂದ ಅತ್ಯಂತ ಸಮರ್ಥ ವಾದ ಹಾಗೂ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಸುಭದ್ರವಾದ ಸಮಗ್ರ ಸಂವಿಧಾನವನ್ನು ರಚಿಸಲು ಕಾರಣೀಭೂತರಾದರು.

ಹೀಗೆ ಹಲವಾರು ಧೀಮಂತರ ಒಕ್ಕೊರಳಿನ ಹಕ್ಕೊತ್ತಾಯಗಳಿಂದ ಭಾರತದ ಸಂವಿಧಾನವು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ, ಜಾತ್ಯತೀತ, ವರ್ಗ, ವರ್ಣ, ಲಿಂಗ ತಾರತಮ್ಯಗಳನ್ನು ತೊಡೆದುಹಾಕಲು ಕಾನೂನುಗಳನ್ನು ರೂಪಿಸಿದ ಸಂವಿಧಾನವಾಗಿ ಪ್ರಪಂಚಕ್ಕೆ ಮಾದರಿಯಾಗಿ ನಿಂತಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಸಮಗ್ರ ಸಂವಿಧಾನವನ್ನು ಭಾರತದ ಸಮಸ್ತ ನಾಗರಿಕರಿಗೆ ರೂಪಿಸಿ ಅಧಿನಿಯಮಿಸಿ ಅರ್ಪಿಸಿಕೊಳ್ಳಲಾಗಿದೆ. ಇಲ್ಲಿ ಹೆಣ್ಣು-ಗಂಡು, ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಇತ್ಯಾದಿ ಭೇದಭಾವಗಳಿಗೆ ಅವಕಾಶವಿಲ್ಲ. ಎಲ್ಲರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮ ಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆಗಳನ್ನು ದೊರೆಯುವಂತೆ ಮಾಡುವ ಮೂಲಕ ವ್ಯಕ್ತಿಗೌರವವನ್ನು ಕಾಪಾಡುವ ಸಲುವಾಗಿ ಸಂವಿಧಾನವು ಅಖಂಡವಾಗಿ ನಿಲ್ಲುತ್ತದೆ.

ಅವಕಾಶ ವಂಚಿತರಾದ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ ದೌರ್ಜನ್ಯಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ಹಾಗೂ ಬಾಲ್ಯವಿವಾಹ, ವೈಧವ್ಯದ ಕಠೋರತೆಗಳನ್ನು ಪ್ರತಿಭಟಿಸಲು ಮತ್ತು ಶಿಕ್ಷಣ, ದುಡಿಮೆ, ಸಮಾನ ವೇತನ, ಸಮಾನ ಅವಕಾಶಗಳಿಗಾಗಿ ಹಕ್ಕೊತ್ತಾಯ ಮಾಡಲು, ಮತ ಚಲಾವಣೆಯ ಅಧಿಕಾರ ಪಡೆಯಲು, ಆಸ್ತಿಹಕ್ಕುಗಳ ಕುರಿತು ದನಿಯೆತ್ತಲು ಸಂವಿಧಾನವು ದಾರಿದೀಪವಾಗಿದೆ. ಮಹಿಳೆಯರಿಗೆ ಮೂಲಭೂತ ಹಕ್ಕುಗಳನ್ನು ಅಧಿಕಾರಯುತವಾಗಿ ಪಡೆಯಲು ಭಾರತದ ಸಂವಿಧಾನವು ಸಮರ್ಥನೀಯವಾಗಿದೆ. ಮಹಿಳಾ ಸಬಲೀಕರಣವನ್ನು ಎತ್ತಿಹಿಡಿಯುವ ಸಂವಿಧಾನವು ಮಹಿಳೆಯರಿಗಾಗಿ ಹಲವಾರು ಅಧಿನಿಯಮಗಳನ್ನು, ಆಯೋಗಗಳನ್ನು, ಕಾನೂನುಗಳನ್ನು ರೂಪಿಸಿದೆ. ಭಾರತ ಸಂವಿಧಾನದ ಹಲವಾರು ವಿಧಿಗಳು ಮಹಿಳೆಯರು ಪುರುಷರ ಸರಿಸಮಾನರು, ಹಕ್ಕುಳ್ಳವರು ಎನ್ನುವುದನ್ನು ಪ್ರತಿಪಾದಿಸುತ್ತವೆ. ಇದರೊಡನೆ ಅನಾದಿಕಾಲದಿಂದಲೂ ಸಂಪ್ರದಾಯ ರೂಢಿ, ನಿಯಮಗಳ ಹೆಸರಿನಲ್ಲಿ ಇನ್ನಿಲ್ಲದಂತೆ ಶೋಷಣೆಗೆ ಒಳಗಾದ ಹಾಗೂ ಶೋಷಿತರಾಗುತ್ತಿದ್ದೇವೆ ಎಂಬುದರ ಅರಿವೇ ಇಲ್ಲದಂತೆ ಬದುಕುತ್ತಾ ಬಂದ ಮಹಿಳೆಯರ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಂವಿಧಾನವು ಕಠಿಣ ಕಾನೂನುಗಳನ್ನು ರೂಪಿಸುವ ಮೂಲಕ ಕ್ರಾಂತಿಕಾರಿ ಎನಿಸಿತು. ಆದ್ದರಿಂದಲೇ ಭಾರತದ ಸಂವಿಧಾನವನ್ನು ಭಾರತೀಯ ಮಹಿಳೆಯರ ಆತ್ಮಬಂಧು ಎಂದು ಕರೆದುದು.

2024ರ ನವೆಂಬರ್ 26ರ ಈ ದಿನ ಭಾರತ ಸಂವಿಧಾನ ರಚನೆ ಹಾಗೂ ಜಾರಿಯ ಕುರಿತು ಅವಲೋಕಿಸಿದಾಗ, 1949ರ ನವೆಂಬರ್ 26ರಂದು ನಡೆದ ಭಾರತದ ಸಂವಿಧಾನ ಸಭೆಯಲ್ಲಿ ಸಂವಿಧಾನವನ್ನು ಅಂಗೀಕರಿಸಿದ್ದನ್ನು ಸ್ಮರಿಸಿದಾಗ 75 ವರ್ಷಗಳ ಹಿಂದೆ ಎಂಥಾ ಮಹೋನ್ನತ ಘಟನೆಗೆ ಆ ಸಭೆಯು ಕಾರಣೀಭೂತವಾಯಿತೆಂದು ಅರ್ಥವಾಗುತ್ತದೆ. ಎಷ್ಟೆಲ್ಲಾ ಬಗೆಯ ದಮನಿತರ, ಶೋಷಿತರ, ದನಿಹೀನರ, ಅವಕಾಶ ವಂಚಿತರ ಬದುಕಿಗಾಗಿ ಸಂವಿಧಾನವು ದೃಢವಾಗಿ ನಿಂತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇಂದಿನ ಶೈಕ್ಷಣಿಕ ಕ್ರಾಂತಿ, ಔದ್ಯೋಗಿಕ ಪ್ರಗತಿ, ಅವಕಾಶಗಳ ಸುರಿಮಳೆ, ದಬ್ಬಾಳಿಕೆ ಹಾಗೂ ಶೋಷಣೆಗಳಲ್ಲಿನ ಗಣನೀಯ ಇಳಿಕೆಗೆ ಸಂವಿಧಾನದ ನೀತಿ ನಿರೂಪಣೆಗಳೇ ಮೂಲ ಕಾರಣ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಸಂವಿಧಾನವು ಕೇವಲ ಮಹಿಳೆಯರಿಗಲ್ಲದೇ ದೇಶದ ಸಮಸ್ತ ನಾಗರಿಕರಿಗೆ ಘನತೆಯ ಬದುಕನ್ನು ನೀಡಿದೆ. ಸಂವಿಧಾನ ಎನ್ನುವುದು ಅರಿವು. ಸಂವಿಧಾನ ಎನ್ನುವುದು ಹಕ್ಕು. ಸಂವಿಧಾನ ಎನ್ನುವುದು ಜಾಗೃತಿ. ಸಂವಿಧಾನವೇ ಭಾರತದ ನಾಗರಿಕರ ಮೂಲಭೂತ ಅಸ್ತಿತ್ವ ಎನ್ನುವುದನ್ನು ಇಂದಿನ ಸಂವಿಧಾನ ದಿನಾಚರಣೆಯಂದು ಪುನರ್​ವುನನ ಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬ ಭಾರತೀಯರ ಆದ್ಯ ಧ್ಯೇಯವಾಗಿರುತ್ತದೆ. ಸಂವಿಧಾನವನ್ನು ಗೌರವಿಸುವ ಮೂಲಕ ಈ ದೇಶದ ಕಾನೂನಿಗೆ ಬದ್ಧರಾಗಿ ನಡೆದುಕೊಂಡು ಭಾರತದ ಸಮಗ್ರತೆ ಹಾಗೂ ವ್ಯಕ್ತಿಗೌರವಗಳನ್ನು ಕಾಪಾಡುವುದಕ್ಕೆ ಶ್ರಮಿಸೋಣ. ಮೂಲಭೂತ ಹಕ್ಕುಗಳೊಂದಿಗೆ ಸಂವಿಧಾನವು ನಮಗೆ ನಿರೂಪಿಸಿರುವ ಕರ್ತವ್ಯಗಳನ್ನು ಮರೆಯದೆ ನಿರ್ವಹಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net