

ಬೆಳ್ಳುಳ್ಳಿ ಹಾಕಿದ ಡಬ್ಬಿಯನ್ನು ತೊಳೆದು ಬಳಿದು, ಅಟ್ಟದ ಮೇಲಿಟ್ಟು ವರ್ಷಗಳ ಬಳಿಕ ಡಬ್ಬಿಯ ಮುಚ್ಚಳ ತೆಗೆದರೂ ಬೆಳ್ಳುಳ್ಳಿಯ ವಾಸನೆ ಬಿಟ್ಟುಹೋಗಿರುವುದಿಲ್ಲ. ಸಂಬಂಧಗಳನ್ನು ಜನ್ಮಾಂತರದ ಅನುಬಂಧ ಎನ್ನುವುದೂ ಹೀಗೆಯೇ. ಮನಸ್ತಾಪಗಳು ಬರಬಹುದು. ಕಾರಣಾಂತರಗಳಿಂದ ಅಂತರ ಬೆಳೆಯಬಹುದು. ದೇಶಾಂತರ ವಾಸ ಮಾಡಬಹುದು. ಆದರೆ, ಬಾಂಧವ್ಯದ ಬಳ್ಳಿ ಕಡಿದುಹೋಗುವುದಿಲ್ಲ. ಗುಪ್ತಗಾಮಿನಿಯಂತೆ ಸುಪ್ತವಾಗಿದ್ದರೂ ಜೀವಂತವಾಗಿರುತ್ತದೆ.
ದೂರವಾಗಿಬಿಟ್ಟರೆ ಸಂಬಂಧ ಅಳಿಯುತ್ತದೆಯೇ? ರಕ್ತಸಂಬಂಧಗಳ ನಡುವೆ ವೈಮನಸ್ಯ ಬೆಳೆಯಬಹುದು. ಹೊಡೆದಾಡಿಕೊಳ್ಳಬಹುದು. ಪರಸ್ಪರರನ್ನು ಕೊಂದುಕೊಳ್ಳಬಹುದು. ಜೈಲಿಗೆ ಹೋಗಬಹುದು. ಆದರೆ, ಅಂಥ ಬದ್ಧವೈರದಲ್ಲೂ ಅವರು ಬಂಧುಗಳೇ ಆಗಿರುತ್ತಾರೆ. ಪಾಂಡವರು-ಕೌರವರು ಕುರುಕ್ಷೇತ್ರದಲ್ಲಿ ಮುಖಾಮುಖಿ ಹೊಡೆದಾಡಿದರೂ, ದಾಯಾದಿಗಳೆಂಬ ಸಂಬಂಧವನ್ನು ಅಳಿಸಿಹಾಕಲು ಸಾಧ್ಯವಾಗಲಿಲ್ಲ. ಅವರನ್ನು ಯುಗಯುಗಾಂತರದ ಬಳಿಕವೂ ಗುರುತಿಸುವುದು ದಾಯಾದಿಗಳೆಂದೇ.. ಇದು ಒಂದು ರೀತಿ.
ಕಾಲ ಬಹಳ ಕೆಟ್ಟದ್ದು. ಸ್ವಾರ್ಥ, ಲೋಭ, ವ್ಯಾಮೋಹ ಎನ್ನುವುದು ಮನುಷ್ಯನಿಂದ ಬಹಳ ಕೆಟ ್ಟೆಲಸಗಳನ್ನು ಮಾಡಿಸುತ್ತದೆ. ಎಷ್ಟೋ ರಕ್ತಸಂಬಂಧಗಳು ವಯಸ್ಸು, ಹಣ, ಆಸ್ತಿ ಇರುವವರೆಗೆ ಮಾತ್ರ ಅನ್ನಿಸಿಬಿಡುತ್ತದೆ. ಗಟ್ಟಿ ಇರುವಾಗ ಎಲ್ಲರೂ ಬಾಗುತ್ತಾರೆ. ಕೈಯಲ್ಲಿ ಹಣ ಓಡಾಡುತ್ತಿರುವಾಗ ನೆರವು ಪಡೆದುಕೊಳ್ಳುತ್ತಾರೆ. ಆಸ್ತಿ ಕೈಯಲ್ಲಿರುವವರೆಗೆ ಮರ್ಯಾದೆ ಕೊಡುತ್ತಾರೆ. ನಮ್ಮ ಮಕ್ಕಳಲ್ಲವೇ, ಎಲ್ಲಿ ಹೋಗುತ್ತಾರೆ? ನೋಡಿಕೊಳ್ಳುವುದು ಅವರ ಕರ್ತವ್ಯವಲ್ಲವೇ ಎಂಬ ನಂಬುಗೆಯಿಂದ ಆಸ್ತಿ ಬರೆದುಕೊಟ್ಟು ಕೈಖಾಲಿ ಮಾಡಿಕೊಂಡರೆ, ಆನಂತರ ಮಕ್ಕಳ ಜತೆ ಇರುವುದಕ್ಕಿಂತ ಖುದ್ದು ವೃದ್ಧಾಶ್ರಮ, ಅನಾಥಾಶ್ರಮ ಹುಡುಕಿಕೊಳ್ಳುವುದು ಮೇಲು. ಮನೆಯಲ್ಲಿ ನೋಡಿಕೊಳ್ಳುವುದು ಕಷ್ಟ ಎನ್ನುವುದು ನೆಪ. ಮನಸ್ಸಿಲ್ಲ ಎನ್ನುವುದೇ ವಾಸ್ತವ. ಇನ್ನೂ ಎಷ್ಟು ದಿನವೋ ಇವರ ಕಾಟ, ಯಾವಾಗ ಹೋಗುತ್ತಾರೋ ಎಂದು ಕಾಯುವವರ ಸಂಖ್ಯೆ ಕಡಿಮೆಯೇನಿಲ್ಲ. ಯಾವ ತಂದೆತಾಯಿಯೂ ಬಡತನ ಎಂದು ಮಕ್ಕಳನ್ನು ತೊರೆದುಹೋಗುವುದಿಲ್ಲ. ಆದರೆ, ವಯಸ್ಸಾದ ತಂದೆತಾಯಿಗೆ ಕೊನೆಗಾಲದಲ್ಲಿ ಆಸರೆ ಒದಗಿಸಲು ಮಕ್ಕಳು ಕಂಜೂಸುತನ ತೋರುತ್ತಾರೆ. ಇಂಥ ಸಂದರ್ಭದಲ್ಲಿ ಇಷ್ಟೇನಾ ಮಾನವ ಜನ್ಮ, ಇಷ್ಟೇನಾ ಸಂಬಂಧಗಳಿಗಿರುವ ಬೆಲೆ ಎಂಬ ಭಾವನೆ ಮೂಡುವುದು ಸಹಜ. ಆದರೂ, ನೋಯಿಸುವ ಮಕ್ಕಳನ್ನು ತಂದೆತಾಯಿ ಶಪಿಸುವುದಿಲ್ಲ. ಅದು ಸಂಬಂಧ.
ಪ್ರೀತಿ - ಋಣಾನುಬಂಧ: ಯಾವ ಜನ್ಮದ ನಂಟೋ? ಮನಸ್ಸು ಕೊಟ್ಟುಬಿಡುತ್ತೇವೆ. ಮೊದಲ ನೋಟದಲ್ಲೇ ಇದು ಜನ್ಮಾಂತರದ ಬಂಧ ಎಂಬ ಭಾವನೆ ಬಲಿತುಬಿಡುತ್ತದೆ. ಪ್ರೀತಿ ಅಂಕುರಿಸುತ್ತದೆ. ಒಡನಾಟದಲ್ಲಿ ಅನುಬಂಧ ಬೆಳೆಯುತ್ತದೆ. ಪರಸ್ಪರರಿಗಾಗಿ ಬದುಕುವ ವಿಶ್ವಾಸ ಬೆಳೆಯುತ್ತದೆ. ನೋಟದಿಂದ ಸ್ನೇಹ, ಸ್ನೇಹದಿಂದ ನಂಬುಗೆ, ನಂಬುಗೆಯಿಂದ ಪ್ರೀತಿ, ಪ್ರೀತಿಯಿಂದ ತ್ಯಾಗ, ಈ ತ್ಯಾಗವೆನ್ನುವುದು ಎರಡು ಮುಖದ ನಾಣ್ಯ. ಪ್ರೀತಿಗಾಗಿ ಯಾವ ತ್ಯಾಗಕ್ಕೂ ಸಿದ್ಧವಾದಾಗ ಕೆಲವರಿಗೆ ವಿವಾಹಯೋಗ ದಕ್ಕುತ್ತದೆ. ಕೆಲವರಿಗೆ ಪ್ರೀತಿಯನ್ನೇ ತ್ಯಾಗ ಮಾಡಿಬಿಡಬೇಕಾದ ಅನಿವಾರ್ಯ ಒದಗುತ್ತದೆ. ವಿಯೋಗವೋ? ಸುಯೋಗವೋ? ಒಮ್ಮೆ ಕೊಟ್ಟ ಮನಸ್ಸು ಜನ್ಮದಲ್ಲಿ ಮರಳುವುದಿಲ್ಲ. ಪ್ರೀತಿ ತನ್ನಿಚ್ಛೆ, ಮದುವೆ ಅಪ್ಪ-ಅಮ್ಮನ ಇಚ್ಛೆ ಎಂಬಂಥ ಸಂದರ್ಭದಲ್ಲಿ ನಿಜವಾದ ಪ್ರೀತಿ, ಅನುಬಂಧ ಸೊರಗುತ್ತದೆ. ಎಲ್ಲೇ ಇದ್ದರೂ, ಎಲ್ಲೇ ಹೋದರೂ, ಹೇಗೇ ಬದುಕಿದರೂ, ಕಳೆದುಹೋದ ಆ ಒಲವಿಗಾಗಿ, ಅವಳಿಗಾಗಿ/ಅವನಿಗಾಗಿ ಚಡಪಡಿಸುತ್ತದೆ. ವರ್ತಮಾನದ ಬದುಕು ಏನೂ ನಡೆದೇ ಇಲ್ಲ ಎಂಬಂತೆ ಬದುಕುವುದನ್ನು ಕಲಿಸಿದರೂ, ಎಷ್ಟೋ ವರ್ಷಗಳ ನಂತರ ಎಂದೋ ಒಮ್ಮೆ ಒಂಟಿಯಾಗಿ ಕುಳಿತಾಗ ಅವನ/ಅವಳ ನೆನಪನ್ನು ತಂದುಬಿಡುತ್ತದೆ. ಅದು ಎಂದೂ ಅಳಿಯದ ಅನುಬಂಧ. ಒಪ್ಪಿಕೊಳ್ಳುವುದು ಬಿಡುವುದು ಅವರವರ ಮನದಿಚ್ಛೆ.
ದಾಂಪತ್ಯ ಸತ್ಯ: ‘ಋಣಾನುಬಂಧ ರೂಪೇನ ಪಶು ಪತ್ನಿ ಸುತಾಲಯ’ ಎಂಬ ಮಾತಿದೆ.. ಪಶು, ಪತ್ನಿ, ಮಕ್ಕಳು, ಮನೆ ಇವೆಲ್ಲವೂ ಒದಗುವುದು ಜನ್ಮಾಂತರಗಳ ಪುಣ್ಯಶೇಷವನ್ನು ಆಧರಿಸಿಯಂತೆ.. ಮದುವೆಯಾಗುವ ಹುಡುಗಿಯ ಕಣ್ಣುಗಳು ಆ ನಟಿಯಂತಿರಬೇಕು, ರೂಪ ಇವಳಂತಿರಬೇಕು, ಸರ್ವಗುಣ ಸಂಪನ್ನೆಯಾಗಿರಬೇಕು ಎಂದು ಕನಸು ಕಾಣುವುದೇನೋ ಸರಿ. ಆಸೆ ಪಡುವುದಕ್ಕೆ ಯಾರಪ್ಪಣೆಯೂ ಬೇಡ. ಆದರೆ, ಮದುವೆಗಳು ಸ್ವರ್ಗದಲ್ಲೇ ನಿರ್ಣಯವಾಗಿರುತ್ತದೆ ಎಂಬ ಮಾತಿನಂತೆ, ಯಾವ ವರನಿಗೆ ಎಂಥ ವಧು ಸಿಗಬೇಕು, ಯಾವ ಹುಡುಗಿಗೆ ಎಂಥ ಗಂಡು ಸಿಗಬೇಕೆನ್ನುವುದು ಜನ್ಮಾಂತರದಲ್ಲೇ ನಿರ್ಧಾರವಾಗಿರುತ್ತದೆ.. ಹಾಗಾಗಿ ಹೆಂಡತಿ ಸಿಡುಕುಬುದ್ಧಿ, ಕಪ್ಪು, ಚೆನ್ನಾಗಿಲ್ಲ ಎಂದು ಕೊರಗುವಂತೆಯೇ ಇಲ್ಲ. ಅವರವರು ಪಡೆದುಕೊಂಡು ಬಂದಿದ್ದು ಅವರವರಿಗೆ.. ಕೆಲವು ಸಂಬಂಧಗಳು ದೀರ್ಘ ಕಾಲ ಬಾಳುವುದಿಲ್ಲ. ವಿಚ್ಛೇದನವೋ, ವಿಯೋಗವೋ ಕಾಡಿತೆಂದರೆ, ಅವರಿಬ್ಬರ ಋಣ ಅಷ್ಟೇ ಎಂದರ್ಥ. ನಿಲ್ದಾಣ ಬಂದಾಗ ಎಲ್ಲರೂ ಇಳಿಯುವವರೇ. ಕೆಲವರ ನಿಲುಗಡೆ ಬೇಗ, ಕೆಲವರಿಗೆ ಸುದೀರ್ಘ. ಜೀವ, ಜೀವನ, ಸಂಬಂಧ ಎಲ್ಲಕ್ಕೂ ಇದು ಅನ್ವಯ.. ಅಷ್ಟರ ನಡುವೆಯೂ ಭಾರತೀಯ ಪರಿಕಲ್ಪನೆಯ ದಾಂಪತ್ಯ ಪರಸ್ಪರರಿಗಾಗಿ ಬದುಕುವ, ಇಂಗಿತದಲ್ಲೇ ಅರಿತುಕೊಳ್ಳುವ, ತ್ಯಾಗದಲ್ಲೇ ತೃಪ್ತಿ ಕಾಣುವ, ನಗುವೆಲ್ಲ ನಿನಗಿರಲಿ, ಕಷ್ಟಗಳು ನನಗೊಬ್ಬನಿಗೇ ಬರಲಿ ಎಂಬ ಆತ್ಮಸಮರ್ಪಣೆಯ ಸವಿಗಾನ. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಪ್ರೀತಿಯೊಂದಿದ್ದರೆ ಬದುಕು ಸಖೀಗೀತದ ಹಾಗೆ...
ವ್ಯಾವಹಾರಿಕ ಸಂಬಂಧ: ಅನೇಕ ಬಾರಿ ಸ್ನೇಹದಂತೆ ತೋರುವ ಎಲ್ಲ ಒಡನಾಟಗಳೂ ಸ್ನೇಹಸಂಬಂಧವೇ ಆಗಿರುವುದಿಲ್ಲ. ನಿರ್ದಿಷ್ಟ ಉದ್ದೇಶವಿಟ್ಟುಕೊಂಡು ಬೆಳೆಸುವ ಸ್ನೇಹ-ಸಂಬಂಧಗಳು ಶಾಶ್ವತವಾಗಿ ಉಳಿಯುವುದೂ ಇಲ್ಲ. ಆಯಾ ಉದ್ದೇಶ ಈಡೇರಿದ ಮೇಲೆ ಅಥವಾ ಈಡೇರುವುದು ಸಾಧ್ಯವಿಲ್ಲ ಎಂಬುದು ಖಚಿತಗೊಂಡ ಬಳಿಕ ಒಂದು ಕ್ಷಣವೂ ಅಂಥ ಸಂಬಂಧಗಳು ಬದುಕುಳಿಯುವುದಿಲ್ಲ. ಇವುಗಳು ತೋರಿಕೆಯ ಸಂಬಂಧ ಅಥವಾ ವ್ಯವಹಾರ. ಇಂಥ ಸೋಗಿನಲ್ಲಿ ಬೆಳೆಯುವ ನಿಕಟ ಓಡಾಟ- ಒಡನಾಟಗಳು, ಹೊಗಳು ಮಾತುಗಳು, ಆತ್ಮೀಯತೆಗಳು, ಕೊಡುಗೆ ವಿನಿಮಯಗಳು ಎಲ್ಲವೂ ಸ್ವಾರ್ಥಸಾಧನೆಯ ಮುಖವಾಡಗಳಷ್ಟೇ. ಇಂಥ ವ್ಯವಹಾರಗಳಿಂದ ಏರ್ಪಡುವ ಸಂಪರ್ಕಗಳು, ಜೊತೆಯಾಗುವ ಸ್ನೇಹಗಳು, ಸಾಮಾಜಿಕ ನಡವಳಿಕೆಗಳು ದೀರ್ಘ ಕಾಲ ಜೊತೆಗಿರುವುದಿಲ್ಲ. ಉಪಯೋಗವಿದ್ದರೆ ನೆಂಟ, ಮುಗಿದ ಬಳಿಕ ಟಾಟಾ ಎಂಬ ಕಟುಸತ್ಯ ಅರ್ಥ ಮಾಡಿ ಕೊಂಡಿದ್ದರೆ ಮಾತ್ರ, ದೊಡ್ಡ ಮಟ್ಟದ ಆಘಾತ, ನಷ್ಟ, ಮಾನಸಿಕ ವೇದನೆಯಿಂದ ಪಾರಾಗಬಹುದು.
ಮುಖವಾಡದ ಬದುಕು: ಹಾಗೆ ನೋಡಿದರೆ ಜಗವೇ ಒಂದು ನಾಟಕರಂಗ. ಎಲ್ಲೆಡೆಯೂ, ಹೆಚ್ಚಿನವರಲ್ಲಿ ಕಾಣುವುದು ಮುಖವಾಡವೇ. ಸಮಾಜ ಯಾವತ್ತೂ ಕನ್ನಡಿಯೊಳಗೆ ನೋಡಿಕೊಂಡಾಗ ಕಾಣುವ ಪ್ರತಿಬಿಂಬವಲ್ಲ. ಹೊರಗಣ್ಣಿಗೆ ಕಾಣುವುದು ಮೇಕಪ್ನಿಂದ ಅಂದಗೊಂಡ ಮುಖವಷ್ಟೇ. ಮೇಕಪ್ ಹಿಂದಿನ ವಾಸ್ತವ ಮುಖ ದೊಡ್ಡಮಟ್ಟಿಗೆ ತಿಳಿಯುವುದೇ ಇಲ್ಲ. ಯಾವ ಜೀವದ ಒಳಗೆ ಯಾವ ಭಾವ ಅಡಗಿದೆಯೋ? ಕಣ್ಣಿಗೆ ಕಾಣುವ ನಗುವೆಲ್ಲವೂ ಹೃತ್ಪೂರ್ವಕವಲ್ಲ. ಆಡುವ ಮಾತುಗಳೆಲ್ಲವೂ ಆಂತರ್ಯದಿಂದ ಬಂದಿರುವುದಿಲ್ಲ. ಮಾತಿನೊಳಗಿನ ಮಾತು, ಸಾಲುಗಳ ನಡುವಿನ ಅರ್ಥ ಅರಿತುಕೊಂಡಾಗ ನೋವೇ ಹೆಚ್ಚು.
ಪಲಾಯನ ಬೇಡ: ಹಾಗೆಂದು ಜಗತ್ತೇ ಮಿಥ್ಯವೆಂದೇನಲ್ಲ. ವಿಶ್ವಾಸ ಕಳೆದುಕೊಂಡು ಕೊರಗುವ ಅಗತ್ಯವೂ ಇಲ್ಲ. ಆದರೆ, ಸತ್ಯಾಸತ್ಯ, ಭಾವಾಭಾವ, ಸ್ವಾರ್ಥ-ಆಪ್ತತೆಗಳ ವ್ಯತ್ಯಾಸ ಅರಿತುಕೊಂಡರೆ ಬದುಕುವುದು ಸುಲಭ. ಜಗತ್ತೇ ಹಾಗಿರುವಾಗ ನಾನು ಎಲ್ಲವನ್ನೂ ಬದಲಾಯಿಸಿಬಿಡುತ್ತೇನೆ ಎನ್ನುವುದು ಹುಂಬತನ. ಜಗತ್ತು ಸರಿಯಿಲ್ಲ ಎಂದು ವಿಮುಖನಾಗು ವುದು ಪಲಾಯನ. ಬದುಕೆನ್ನುವುದು ಯಾವಾಗಲೂ ಪ್ರವಾಹದ ವಿರುದ್ಧದ ಈಜು. ಕೆಲವೊಮ್ಮೆ ಸತ್ಯ ಗೊತ್ತಿದ್ದರೂ ಸಹನೆ ಬೇಕಾಗುತ್ತದೆ. ಕಡು(ಟು) ವಿರೋಧಿಗಳೊಂದಿಗೆ ನೇರಾನೇರ ಹೊಡೆದಾಡುವುದು ಸುಲಭ. ಆದರೆ, ಮುಖ ವಾಡ ಹಾಕಿಕೊಂಡವರೊಂದಿಗೆ ಏಗುವುದು ಕಷ್ಟದ ಕೆಲಸ. ಆದರೆ, ಅದೇ ಜೀವನ.
ಒನ್ ವೇ ಪಯಣ: ‘ನಿನ್ನ ಕರ್ತವ್ಯಗಳನ್ನು ನಿಭಾಯಿಸು. ಫಲಾಫಲಗಳ ಯೋಚನೆ ಬಿಡು’ ಎಂಬ ಉಪದೇಶ ವರ್ತಮಾನದ ಪ್ರಾಕ್ಟಿಕಲ್ ಜಗತ್ತಿನಲ್ಲಿ ಅಷ್ಟು ಸುಲಭವಲ್ಲ. ಆದರೆ, ಅದು ಅನೇಕ ಸಂದರ್ಭಗಳಲ್ಲಿ ಅನಿವಾರ್ಯ. ಅಂತ್ಯಕಾಲವೆನ್ನುವುದು ಸಮೀಪಿಸಿದಾಗ ಮಂಚ ಬಾರದು, ಮಡದಿ ಬಾರಳು, ನೆಂಟರಿಷ್ಟರು ಬಾರರು. ಸಾವೆನ್ನುವುದು ಒಂಟಿ ಜೀವದ ಒನ್ ವೇ ಪಯಣ. ದಾಸರು, ಶರಣರು ಹೇಳಿದ್ದೂ ಇದನ್ನೇ. ಇರುವಾಗ ಎಲ್ಲರೂ ನೆಂಟರು. ಸಿಹಿ ಇರುವಲ್ಲಿ ಇರುವೆಯ ದಂಡು. ಸಂಪತ್ತು, ತಾಕತ್ತು ಇದ್ದರಷ್ಟೇ ಸುತ್ತಮುತ್ತ ಆಪ್ತರು, ಬಂಧುಗಳು, ಮಿತ್ರರು.
ಸಂಬಂಧಗಳಲ್ಲಿ ಹೀಗೂ ಉಂಟು... ಒಡಹುಟ್ಟಿದವರಷ್ಟೇ ಸೋದರರಲ್ಲ. ಒಡನಾಟ ದಿಂದಲೂ ಸೋದರರಾಗಬಹುದು. ಮನಸ್ಥಿತಿಗಳು ಹೊಂದಿಕೆಯಾಗು ವಲ್ಲಿ ಭ್ರಾತೃತ್ವ ಬೆಳೆಯಬಹುದು. ಆದರೆ, ಇದು ಪರಸ್ಪರವಿರಬೇಕು. ಏಕಮುಖವಾಗಿದ್ದಾಗ ನೋವು-ನಿರಾಸೆ ಜಾಸ್ತಿ. ಪ್ರೀತಿ ಇದ್ದಲ್ಲಿ ತ್ಯಾಗ, ಸ್ವಾರ್ಥವಿದ್ದಲ್ಲಿ ಕಪಟ. ಕಬ್ಬಿನ ಜಲ್ಲೆಯಲ್ಲಿ ಸಿಹಿಯಿದ್ದಾಗ ಬೆಲೆ. ರಾಟೆಗೆ ಹಾಕಿ ರಸ ಹಿಂಡಿದ ಮೇಲೆ ಅದು ಕಸ. ಇದನ್ನು ತಪ್ಪೆನ್ನಲು ಸಾಧ್ಯವಿಲ್ಲ. ಸಮಾಜ ಇರುವುದೇ ಹಾಗೆ? ಮಾತು, ಕೃತಿ, ಒಲವು ಯಾವುದೂ ಸಾರ್ವಕಾಲಿಕವಾಗಿರಬೇಕು ಎಂದೇನೂ ಇಲ್ಲ. ಯಾವ ಕೆಲಸಕ್ಕೆ, ಯಾವ ಸಂದರ್ಭಕ್ಕೆ, ಯಾವ ಕಾಲಕ್ಕೆ ಯಾರ ಬಳಕೆ ಸೂಕ್ತ ಎನ್ನುವುದು ವ್ಯವಹಾರ ನೈಪುಣ್ಯ. ಎಲ್ಲರೂ ಸರ್ವಗುಣ ಸಂಪನ್ನರಾಗಿರಲು ಸಾಧ್ಯವಿಲ್ಲ. ಸಕಲಕಲಾವಲ್ಲಭರೆನಿಸಲು ಸಾಧ್ಯವಿಲ್ಲ. ಯಾರ ಜಾಣ್ಮೆ, ದುಡಿಮೆ, ಹಿರಿಮೆ ಎಲ್ಲಿಗೆ ಸೂಕ್ತ ಎಂದು ನಿರ್ಷRಸಿ ಬಳಸಿಕೊಳ್ಳುವವನು ಜಾಣ. ಇಂಥ ಜಾಣರ ಆತ್ಮೀಯತೆಯ ಒಳಮರ್ಮ ಅರಿಯದಿದ್ದರೆ ನೋವು ಕಟ್ಟಿಟ್ಟಬುತ್ತಿ.
ರಕ್ತಸಂಬಂಧಗಳಲ್ಲೇ ದ್ರೋಹಚಿಂತನೆ ಹಾಸುಹೊಕ್ಕಾಗಿರುವ ಈ ಕಾಲದಲ್ಲಿ ಬಾಹ್ಯ ಸಂಬಂಧಗಳು ಜನ್ಮಾಂತರದ್ದಾಗುಳಿಯಬೇಕು ಎಂದು ಬಯಸುವುದೂ ಸ್ವಾರ್ಥ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎನ್ನುವುದು ಸ್ನೇಹ-ಸಂಬಂಧಗಳಲ್ಲೂ ನಿಜ. ಅಪೇಕ್ಷೆಗಳನ್ನಿಟ್ಟುಕೊಂಡು ಬೆಳೆಸುವ ಸಂಬಂಧಗಳಲ್ಲಿ ನಿರಾಸೆ ಜಾಸ್ತಿ.
ಆತ್ಮಸಂಬಂಧ: ಸಂಬಂಧಗಳನ್ನು ಒಂದು ಸೂತ್ರದಿಂದ ಬಂಧಿಸುವುದು ಸಾಧ್ಯವೇ? ಒಂದು ಚೌಕಟ್ಟಿನಲ್ಲಿ ಹಿಡಿದಿಡುವುದು ಸಾಧ್ಯವೇ? ಸಂಬಂಧಗಳಿಗೆ ಸಾವಿರ ರೂಪ. ಸಂಬಂಧ ಅಂದರೆ ‘ನಾನು’ ಎಂಬ ಒಂಟಿತನ ಹೋಗಲಾಡಿಸಿ ‘ನಾವು’ಎಂಬ ಭರವಸೆಯ ಭಾವ ಮೂಡಿಸುವುದು. ನಮ್ಮ ಮನೆ, ಸಮಾಜ, ನಮ್ಮ ಪ್ರಪಂಚ ಸುಂದರವೆನಿಸುವುದು ನಾವು ರೂಪಿಸಿಕೊಳ್ಳುವ ನಿಜದ ಸಂಬಂಧಗಳಿಂದ.
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮಬಂಧು ಜೀವನ ಪಥದೊಳು
ಒಂದಾಗಿ ಮುಂದುವರಿಯುವಾ
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು... (ಕುವೆಂಪು)
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)