

| ಪ್ರಶಾಂತ ರಿಪ್ಪನ್ಪೇಟೆ
ಗ್ರಹಗತಿಗನುಗುಣವಾಗಿ ಶಾಸ್ತ್ರಬದ್ಧವಾಗಿ ಪೂಜೆ, ಹೋಮ-ಹವನ ಮಾಡುವ ಈ ಕ್ಷೇತ್ರ ಸ್ಥಾಪನೆಯಾಗಿದ್ದು 5 ವರ್ಷಗಳ ಹಿಂದೆ. ದೇವಿ ಉಪಾಸಕರಾದ ಶ್ರೀ ಅರವಿಂದ ಭಟ್ಟರು, ತಾಯಿಯ ಪ್ರೇರಣೆಯಂತೆ ಬೆಂಗಳೂರಿನ ಅಗರದಲ್ಲಿ ಮೂಕಾಂಬಿಕೆಯ ಸನ್ನಿಧಾನವನ್ನು ಸ್ಥಾಪಿಸಿದ್ದಾರೆ. ಅಂದಿನಿಂದ ನಿರಂತರವಾಗಿ ಸಿಂಹಾರೂಢ ಜಗಜ್ಜನನಿ ಮೂಕಾಂಬಿಕೆಗೆ ನಿತ್ಯ ಅಭಿಷೇಕ, ಅಲಂಕಾರದೊಂದಿಗೆ ಮಹಾಪೂಜೆಯನ್ನು ನೆರವೇರಿಸಲಾಗುತ್ತಿದೆ. ಅರವಿಂದ ಭಟ್ಟರ ಸಂಕಲ್ಪದಂತೆ ಮಾಡಿದ ಎಲ್ಲ ಪೂಜಾ ಕಾರ್ಯಗಳು ಹೊಸ ದಾಖಲೆ ಬರೆದಿವೆ. ದೇವಾಲಯ ಪ್ರತಿಷ್ಠಾಪನೆಯಾದ ಕೂಡಲೇ 100 ದಿನಗಳ ಕಾಲ ಪ್ರತಿನಿತ್ಯ ಸಹಸ್ರ ಮೋದಕದಂತೆ, ಲಕ್ಷ ಮೋದಕವನ್ನು ಅರ್ಪಿಸಿ ಮಾಡಲಾದ ಮಹಾಗಣಪತಿ ಹವನವು ಮೊಟ್ಟಮೊದಲ ದಾಖಲೆ. ನಂತರ 2021ರಲ್ಲಿ ಆರಂಭವಾಗಿರುವ 19 ತಿಂಗಳ ಕಾಲ ಪ್ರತಿ ಎರಡನೇ ಶನಿವಾರ ಶನಿಶಾಂತಿ ಹೋಮವು 2023ಕ್ಕೆ ಮಂಗಲವಾಗಲಿದ್ದು, ಅದು ಮತ್ತೊಂದು ದಾಖಲೆ. ಈಗ ಶ್ರೀಕ್ಷೇತ್ರದಲ್ಲಿ ಮತ್ತೊಂದು ಮಹಾ ಸಂಕಲ್ಪ ಮಾಡಲಾಗಿದೆ. ಕಳೆದ ಜನವರಿ 16ರಿಂದ 1008 ದಿನಗಳ ಕಾಲ ನಿರಂತರ 1 ಲಕ್ಷ ಗಣಪತಿ ಅಥರ್ವಶೀರ್ಷ ಪಾರಾಯಣ ಸಹಿತ 10 ಲಕ್ಷ ಸಮಿತ್ತುಗಳ ಆಹುತಿಯೊಂದಿಗೆ ಮಹಾಗಣಪತಿ ಹೋಮ ಆರಂಭಿಸಲಾಗಿದೆ. 2024ರ ಅ. 18ಕ್ಕೆ ಈ ಮಹಾ ಹೋಮ ಪೂರ್ಣವಾಗಲಿದೆ. ಮಕ್ಕಳಿಗೆ ವಿದ್ಯಾ, ಬುದ್ಧಿ, ಸಿದ್ಧಿ ಪ್ರಾಪ್ತಿ ಹಾಗೂ ಸಂಪೂರ್ಣ ದೇವರ ಅನುಗ್ರಹಕ್ಕಾಗಿ ಲೋಕ ಕಲ್ಯಾಣಾರ್ಥ ಸಂಕಲ್ಪದೊಂದಿಗೆ ಆರಂಭಿಸಿರುವ ಈ ಮಹಾಪೂಜೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು, ಪೂಜಾ ಸೇವಾರ್ಥಿಗಳ ಹೆಸರಿನಲ್ಲಿ 1008 ದಿನವೂ ನಿತ್ಯ ಸಂಕಲ್ಪ ನೆರವೇರುತ್ತದೆ.
ಸರ್ವಸಂಕಷ್ಟಕ್ಕೂ ಪರಿಹಾರ: ಲೌಕಿಕ ಜೀವನದಲ್ಲಿ ಹತ್ತು-ಹಲವು ಸಂಕಷ್ಟಗಳನ್ನು ಎದುರಿಸುವವರಿಗಾಗಿ ಮೂಕಾಂಬಿಕಾ ಸನ್ನಿಧಾನದಲ್ಲಿ ಶಾಸ್ತ್ರಬದ್ಧವಾಗಿ ಹೋಮ-ಹವನ ಮಾಡಲಾಗುತ್ತದೆ. ಸಾಲಬಾಧೆ ನಿವೃತ್ತಿಗಾಗಿ ಋಣಹರ ಗಣಪತಿ ಹೋಮ, ಆರೋಗ್ಯ ಭಾಗ್ಯ ಪ್ರಾಪ್ತಿಗಾಗಿ ನವಗ್ರಹ ಹೋಮ ಸಹಿತ ಶನಿಶಾಂತಿ ಹೋಮ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗಣಪತಿ ಅಥರ್ವ ಶೀರ್ಷ ಪಾರಾಯಣ ಸಹಿತ ಮಹಾಗಣಪತಿ ಹೋಮ, ದುರ್ಗಾ ಹೋಮ, ಧನ್ವಂತರಿ ಹೋಮ, ಚಂಡಿಕಾ ಹೋಮ ಹೀಗೆ ಜಾತಕ ನಿಷ್ಕರ್ಷೆ ಮಾಡಿ ಪ್ರತಿಯೊಂದು ಗ್ರಹಗತಿ ದೋಷಕ್ಕೂ ಇಲ್ಲಿ ವಿವಿಧ ಹೋಮಗಳನ್ನು ಮಾಡಲಾಗುತ್ತದೆ. ಮೂಲತಃ ಸುಬ್ರಹ್ಮಣ್ಯದವರಾದ ಅರವಿಂದ ಭಟ್ಟರು ಬಾಲ್ಯದಲ್ಲಿಯೇ ಪರಿಪೂರ್ಣ ವೇದಾಧ್ಯಯನ ಮಾಡಿದ್ದು, ದಶಕಗಳ ಕಾಲ ದೇವಿ ಪಾರಾಯಣ ಮಾಡಿ ಶಕ್ತಿ ಸಂಪಾದಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ, ಜಗನ್ಮಾತೆ ಮೂಕಾಂಬಿಕೆಯ ಸಾನಿಧ್ಯದಲ್ಲಿ ಅಸಂಖ್ಯಾತ ಜನರು ಹೋಮ-ಹವನ ಮಾಡಿ ಫಲ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗೆ 9448067570 ಸಂರ್ಪಸಬಹುದು. (ಕ್ಷೇತ್ರದ ಕುರಿತು ನಾಳೆ (ಶುಕ್ರವಾರ) ಬೆಳಗ್ಗೆ 6.15ಕ್ಕೆ ದಿಗ್ವಿಜಯ ನ್ಯೂಸ್ನಲ್ಲಿ ಸಂಸ್ಕೃತಿ ಕಾರ್ಯಕ್ರಮ ಪ್ರಸಾರವಾಗಲಿದೆ).
ಜಗನ್ಮಾತೆ ಮೂಕಾಂಬಿಕೆಯ ಜಾಗೃತ ಸ್ಥಳ
ಸರ್ವಾ ಬಾಧಾಸು ಘೊರಾಸು ವೇದನಾಭ್ಯರ್ಥಿ ತೋಪಿವಾ|
ಸ್ಮರನ್ಮ ಮೈತಚ್ಚರಿತಂ ನರೋ ಮುಚ್ಯೇತ ಸಂಕಟಾತ್||
ಜಗತ್ತಿಗೆ ಯಾವುದೇ ಸಾವು-ನೋವು, ಕ್ಷಾಮ-ಡಾಮರ ಘೊರ ಸಂಕಷ್ಟಗಳು ಎದುರಾಗಿ ದಿಕ್ಕು ತೋಚದೆ ಇದ್ದಾಗ ಏನು ಮಾಡಬೇಕು ಎಂಬ ಪ್ರಶ್ನೆಗೆ ಸಾಕ್ಷಾತ್ ಜಗಜ್ಜನನಿ ದುರ್ಗಾಸಪ್ತಶತಿಯಲ್ಲಿ ಹೀಗೆ ಅಭಯವನ್ನು ನೀಡಿದ್ದಾಳೆ. ತನ್ನ ಸ್ಮರಣೆ ಮಾತ್ರದಿಂದ ಬಂದಿರುವ ಎಲ್ಲ ಸಂಕಷ್ಟಗಳನ್ನು ಪರಿಹರಿಸುತ್ತೇನೆ ಎಂಬ ದೇವಿ ಮಾತಿನಂತೆ, ಯಾವ ಸ್ಥಳದಲ್ಲಿ ನಿತ್ಯ ಕ್ರಮಬದ್ಧವಾಗಿ ಸಪ್ತಶತಿ ಚಂಡಿಕಾ ಪಾರಾಯಣ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್ ದುರ್ಗಾಮಾತೆಯ ಸಾನಿಧ್ಯ ಇರುತ್ತದೆ ಎಂಬ ಮಾತಿದೆ. ಅದರಂತೆ ಅಗರ ಬೈರಸಂದ್ರದ ಮೂಕಾಂಬಿಕಾ ದೇವಿಯ ಕ್ಷೇತ್ರದಲ್ಲಿ ಅರವಿಂದ ಭಟ್ ಮತ್ತು ಅವರ ಶಿಷ್ಯ ಋತ್ವಿಜರು ನಿರಂತರ ಚಂಡಿಕಾ ಪಾರಾಯಣ ಮಾಡುತ್ತಿದ್ದಾರೆ.