

ಹತ್ತು ರೂ. ನಾಣ್ಯ ಕಾನೂನುಬದ್ಧವಾಗಿದ್ದರೂ, ಬ್ಯಾಂಕು-ಸರ್ಕಾರಿ ಕಚೇರಿಗಳಲ್ಲಿ ಸ್ವೀಕರಿಸುತ್ತಿದ್ದರೂ ‘ಅನಧಿಕೃತ ನಿಷೇಧ’ಕ್ಕೆ ಒಳಪಟ್ಟಿದೆ. ಅದರ ಈ ಸ್ಥಿತಿಗೆ ಏನು ಕಾರಣ? ಜನರೇಕೆ ಅದರಿಂದ ದೂರ ಸರಿಯುತ್ತಿದ್ದಾರೆ? ಈ ವಿಷಯದಲ್ಲಿ ಸರ್ಕಾರ ಏನು ಮಾಡಬಹುದು? ಇಲ್ಲಿದೆ ಒಂದು ಅವಲೋಕನ.
‘‘ಚಿಲ್ಲರೆ ಇಲ್ಲದಿದ್ದರೆ ಪರವಾಯಿಲ್ಲ, ತರಕಾರಿ ತೆಗೆದುಕೊಂಡು ಹೋಗಿ... ನಾಳೆ ಬಂದಾಗ ಹಣ ಕೊಡಿ... ಅದರೆ, ಈ ಹತ್ತು ರೂ. ಕಾಯಿನ್ ಮಾತ್ರ ಬೇಡ’’ ಎಂದು ಬೀದಿ ಬದಿಯಲ್ಲಿ ತರಕಾರಿ ಮಾರುವ ಮಹಿಳೆಯೋ, ಪಾನಿಪೂರಿವಾಲನೋ ಹೇಳಿದಾಗ ಹತ್ತು ರೂ. ನಾಣ್ಯ ಸೃಷ್ಟಿಸಿದ ಗೊಂದಲ ಎಂಥದ್ದು ಎಂಬುದರ ಅರಿವಾಗುತ್ತದೆ.
ಸದ್ಯ ದೇಶದಲ್ಲಿ 50 ಪೈಸೆ, 1, 2, 5 ಮತ್ತು ಹತ್ತು ರೂ. ನಾಣ್ಯಗಳು ಚಲಾವಣೆಯಲ್ಲಿವೆ. ಇವೆಲ್ಲವೂ ರಿಸರ್ವ್ ಬ್ಯಾಂಕ್ನ ಲೀಗಲ್ ಮತ್ತು ವ್ಯಾಲಿಡ್ ಟೆಂಡರ್ಗಳಾಗಿದ್ದು ಅವುಗಳಿಗೆ ರಿಸರ್ವ್ ಬ್ಯಾಂಕ್ನ ಅಧಿಕೃತ ನಾಣ್ಯ ಎನ್ನುವ ಮುದ್ರೆ ಇದೆ. ಯಾರಾದರೂ ಇದನ್ನು ಸ್ವೀಕರಿಸಲು ನಿರಾಕರಿಸಿದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬಹುದು. ಆದರೆ, ದಿನನಿತ್ಯದ ಬದುಕಿನ ಜಂಜಾಟದಲ್ಲಿ ಯಾರಿಗೂ ಅಷ್ಟು ವ್ಯವಧಾನ ಇರುವುದಿಲ್ಲ. ಯಾರೂ ತಮ್ಮ ಸಮಯವನ್ನು ಈ ಜಂಜಾಟಕ್ಕೆ ವ್ಯಯಿಸುವುದಿಲ್ಲ.
ವಿಚಿತ್ರವೆಂದರೆ, 10 ರೂ. ನಾಣ್ಯಗಳನ್ನು ಬಿಟ್ಟು ಬೇರೆ ಎಲ್ಲಾ ನಾಣ್ಯಗಳು ಮಾರುಕಟ್ಟೆಯಲ್ಲಿ ಸರಾಗವಾಗಿ ಚಲಾವಣೆಯಾಗುತ್ತಿ್ತೆ. ಯಾರೂ ತುಟಿಪಿಟಕ್ ಎನ್ನದೆ, ಮುಖ ಸಿಂಡರಿಸದೆ, ಗೊಣಗದೆ, ಪ್ರಶ್ನಿಸದೆ ಸ್ವೀಕರಿಸುತ್ತಾರೆ. ಆದರೆ, 10 ರೂ. ನಾಣ್ಯಗಳನ್ನು ಕಂಡರೆ ಹಾವು ಮೆಟ್ಟಿದವರಂತೆ ನಡೆದುಕೊಳ್ಳುತ್ತಾರೆ. ಯಾರೂ ಸ್ವೀಕರಿಸುವುದಿಲ್ಲ. ಯಾಕೆ ಸ್ವೀಕರಿಸುವುದಿಲ್ಲ ಎಂದು ಪ್ರಶ್ನಿಸಿದರೆ ‘ಅವುಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ’ ಎಂಬ ಉತ್ತರ ಬರುತ್ತದೆ. ಅದನ್ನು ಬಿಟ್ಟು ಬೇರೆ ಯಾವುದೇ ಕಾರಣ ಸಿಗುವುದಿಲ್ಲ. ‘ಹತ್ತು ರೂ. ನಾಣ್ಯಗಳನ್ನು ರದ್ದು ಪಡಿಸಿಲ್ಲ, ನಿಷೇಧಿಸಿಲ್ಲ’ ಎನ್ನುವ ಸ್ಪಷ್ಟೀಕರಣ ರಿಸರ್ವ್ ಬ್ಯಾಂಕ್ನಿಂದ, ಎಲ್ಲಾ ಬ್ಯಾಂಕುಗಳಿಂದ, ಸರ್ಕಾರದಿಂದ, ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಂದ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಆಗಾಗ ಬರುತ್ತಿದ್ದರೂ ಯಾವುದೇ ಪರಿಣಾಮ ಆಗುತ್ತಿಲ್ಲ. ಸರ್ಕಾರಿ ಕಚೇರಿಗಳು, ಬಿಲ್ ಕಲೆಕ್ಷನ್ ಕೇಂದ್ರಗಳು ಒಲ್ಲದ ಮನಸ್ಸಿನಿಂದ ಸ್ವೀಕರಿಸುತ್ತವೆ. ಈ ಅನಧಿಕೃತ ನಿಷೇಧ ಕಾಣುವುದು ನಗದು ಹೆಚ್ಚು ಚಲಾವಣೆ ಯಾಗುವ, ವ್ಯಾಪಾರ- ವ್ಯವಹಾರ ನಡೆಯುವ ಮಾರುಕಟ್ಟೆಯಲ್ಲಿ ಮಾತ್ರ. ಬ್ಯಾಂಕುಗಳು ತಮ್ಮಲ್ಲಿರುವ ಇಂಥ ನಾಣ್ಯಗಳನ್ನು ಡಿಸ್ಪೋಸ್ ಮಾಡಲಾರದೇ ಹೈರಾಣಾಗುತ್ತಿವೆಯಂತೆ. ಕೆಲವು ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಗ್ರಾಹಕರಿಗೆ ಪೇಮೆಂಟ್ನ ಸ್ವಲ್ಪ ಭಾಗವನ್ನಾದರೂ ನಾಣ್ಯಗಳಲ್ಲಿ ನೀಡುತ್ತವೆಯಂತೆ. ಒಂದು ಮಾಧ್ಯಮ ವರದಿ ಪ್ರಕಾರ ಉತ್ತರ ಕರ್ನಾಟಕದ ಒಂದು ಬ್ಯಾಂಕಿನಲ್ಲಿ ಇಂಥ ನಾಣ್ಯಗಳ 17 ಕ್ವಿಂಟಾಲ್ ಸಂಗ್ರಹ ಇದ್ದು, ಅದನ್ನು ಡಿಸ್ಪೋಸ್ ಮಾಡಲಾಗದೇ ಹೆಣಗಾಡುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಬ್ಯಾಂಕುಗಳ ನಗದು ನಿರ್ವಹಣೆಯ ಅಂತರಿಕ ನಿಯಮಾವಳಿ ಪ್ರಕಾರ, ಇವುಗಳನ್ನು ಬ್ಯಾಂಕಿನ ಸೇಫ್ ರೂಂ ಬಿಟ್ಟು ಬೇರೆ ಎಲ್ಲಿಯೂ ಇಡಲು ಸಾದ್ಯವಿಲ್ಲ. ಮೇಲಿಂದ ಮೇಲೆ ನಿಯಂತ್ರಕರಿಂದ ಇವುಗಳ ತಪಾಸಣೆ ನಡೆಯುತ್ತಿದ್ದು ನಗದು ನಿರ್ವಹಣೆ ಮಾಡುವ ಬ್ಯಾಂಕ್ ಸಿಬ್ಬಂದಿ ಸುಸ್ತಾಗುತ್ತಾರೆ.
ಹತ್ತು ರೂ. ನಾಣ್ಯಗಳೂ ಉಳಿದ ನಾಣ್ಯಗಳಂತೆ. ಜನರು ನಕಲಿ ನೋಟುಗಳ ಬಗೆಗೆ ಕೇಳಿರಬಹುದು, ನೋಡಿರಬಹುದು ಮತ್ತು ಅವುಗಳಿಂದ ಸಂಕಷ್ಟಕ್ಕೆ ಈಡಾಗಿರಬಹುದು. ಆದರೆ, ನಕಲಿ ನಾಣ್ಯಗಳ ಬಗೆಗೆ, ಈವರೆಗೆ ಕೇಳಿದ ಮಾಹಿತಿ ಇಲ್ಲ. ಆದರೂ, ಈ ನಾಣ್ಯದ ಬಗೆಗೆ ಜನರು ಎಚ್ಚರ ವಹಿಸುವುದು ಯಾಕೆ, ಜಾಗೃತವಾಗಿರುವುದು ಏಕೆ? ರಿಸರ್ವ್ ಬ್ಯಾಂಕ್ ಮತ್ತು ಇತರ ಬ್ಯಾಂಕುಗಳು ಈ ಬಗೆಗೆ ಗಂಭೀರವಾಗಿ ಚಿಂತಿಸುತ್ತಿವೆ.
ಸುಮಾರು 8 ಗ್ರಾಮ್ ತೂಕ ಮತ್ತು 27 ಮಿಲಿಮೀಟರ್ ಸುತ್ತಳತೆ ಇರುವ ಈ ನಾಣ್ಯವನ್ನು 2005ರಲ್ಲಿ ಮೊದಲ ಬಾರಿ ಬಿಡುಗಡೆ ಮಾಡಲಾಗಿತ್ತು. ಕೆಲವು ವಿಶೇಷ ದಿನಗಳು ಮತ್ತು ಸಂದರ್ಭಗಳ ನೆನಪಿಗಾಗಿ ಸುಮಾರು 14 ಸೀರಿಸ್ನಲ್ಲಿ ಮತ್ತು ವಿನ್ಯಾಸದಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಇದರ ಕೊನೆಯ ಸೀರಿಸ್ ಬಿಡುಗಡೆಯಾಗಿದ್ದು 2017ರಲ್ಲಿ. ಇದನ್ನು ದೇಶದ ಅತಿ ದೊಡ್ಡ ಮೌಲ್ಯದ ಕರೆನ್ಸಿ ನಾಣ್ಯವೆಂದೂ ಕರೆಯಲಾಗುತ್ತದೆ.
2005ರಿಂದ 13-14 ವರ್ಷಗಳ ಕಾಲ ಈ ನಾಣ್ಯ ಯಾವುದೇ ಅತಂಕ, ಭಯ ಮತ್ತು ಸಂದೇಹವಿಲ್ಲದೆ ಚಲಾವಣೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ದಿಢೀರ್ ಎಂದು ಈ ಸಮಸ್ಯೆ ಅರಂಭವಾಗಿದೆ. ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಬ್ಯಾಂಕುಗಳು ಈ ನಾಣ್ಯಗಳನ್ನು ನಿರಾಕರಿಸದೆ, ಸ್ವೀಕರಿಸುವ ಅನಿವಾರ್ಯತೆ ಇರುವುದರಿಂದ ಗ್ರಾಹಕರು ಈ ನಾಣ್ಯಗಳನ್ನು ಬ್ಯಾಂಕಿಗೆ ಜಮಾ ನೀಡುತ್ತಿದ್ದಾರೆ. ಬ್ಯಾಂಕುಗಳಲ್ಲಿ ಇವುಗಳ ಸಂಗ್ರಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಬ್ಯಾಂಕಿನವರು ಅಲವತ್ತುಕೊಳ್ಳುತ್ತಿದ್ದಾರೆ. ಬ್ಯಾಂಕುಗಳು ದಿನನಿತ್ಯದ ವ್ಯವಹಾರದಲ್ಲಿ ಗ್ರಾಹಕರಿಂದ ಸ್ವೀಕರಿಸಿದ ನಗದನ್ನು ಗ್ರಾಹಕರಿಗೆ ನೀಡುತ್ತವೆ. ಕ್ಯಾಷ್ ಕಡಿಮೆ ಇದ್ದರೆ ಬೇರೆ ಬ್ಯಾಂಕುಗಳಿಂದ ಅಥವಾ ರಿಸರ್ವ್ ಬ್ಯಾಂಕ್ನಿಂದ ಪಡೆಯುತ್ತವೆ. ಆಗ ಕಡ್ಡಾಯವಾಗಿ ಸ್ವಲ್ಪ ಭಾಗವನ್ನಾದರೂ ರಿಸರ್ವ್ ಬ್ಯಾಂಕ್ ನಾಣ್ಯ ರೂಪದಲ್ಲಿ ನೀಡುತ್ತದೆ. ಇದು ಬ್ಯಾಂಕುಗಳಲ್ಲಿ ನಾಣ್ಯ ಸಂಗ್ರಹವನ್ನು ಹೆಚ್ಚಿಸುತ್ತಿದೆ.
ಕರೆನ್ಸಿ ನೋಟಿನ ಬಾಳಿಕೆಯ ಅವಧಿ ಸುಮಾರು 9-10 ತಿಂಗಳು ಮಾತ್ರ. ನಿರಂತರ ಬಳಕೆಯಿಂದ ಮತ್ತು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಅವು ಹೊಲಸಾಗುತ್ತಿವೆ, ಹರಿಯುತ್ತಿವೆ. ಇವುಗಳ ಚಲಾವಣೆ ಮತ್ತು ಬದಲಾವಣೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ನಾಣ್ಯಗಳನ್ನು ನಿರ್ವಹಿಸುವುದು ಕಷ್ಟಕರ. ಪರ್ಸ್ನಲ್ಲಿ 8-10 ನಾಣ್ಯಗಳಿದ್ದರೂ ಕಿರಿಕಿರಿಯಾಗುತ್ತದೆ. ಕಿಸೆಯಲ್ಲಿ ಹಾಕಿಕೊಂಡು ಅಡ್ಡಾಡುವುದು ತೊಡಕಾಗುತ್ತದೆ ಎನ್ನುವ ವಾದವನ್ನು ಹಲವರು ಮಂಡಿಸುತ್ತಾರೆ. ಇದರಲ್ಲಿ ಅರ್ಥವಿಲ್ಲದಿಲ್ಲ. ಆದರೆ, ಈ ಅನಧಿಕೃತ ನಿಷೇಧ ಕೇವಲ 10 ರೂ. ನಾಣ್ಯಗಳಿಗೆ ಮಾತ್ರ ಸೀಮಿತವಾಗಿರುವುದು ಚಿದಂಬರ ರಹಸ್ಯ ಎನಿಸುತ್ತದೆ. ಹತ್ತು ರೂ. ನಾಣ್ಯಗಳನ್ನು ಏಕೆ ಸ್ವೀಕರಿಸುವದಿಲ್ಲ ಎಂದು ಗ್ರಾಹಕರು ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗದುಕೊಳ್ಳುವುದು ಇತ್ತೀಚೆಗೆ ಬ್ಯಾಂಕುಗಳಲ್ಲಿ ತೀರಾ ಮಾಮೂಲಿ ದೃಶ್ಯವಾಗಿದೆ. ಹಾಗೆಯೇ ಪರಿಸ್ಥಿತಿಯನ್ನು ಗ್ರಾಹಕರಿಗೆ ಮನದಟ್ಟು ಮಾಡಿಕೊಡಲಾರದೆ ಬ್ಯಾಂಕ್ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಗ್ರಾಹಕರು ಹತ್ತು ರೂ. ನಾಣ್ಯಗಳು ರದ್ದಾಗಿವೆಯೇ ಎಂದು ಪ್ರಶ್ನಿಸುತ್ತಾರೆ. ಇಲ್ಲ ಎಂದು ಉತ್ತರಿಸಿದರೆ, ರದ್ದಾಗಬಹುದೇ ಎಂದು ಪುನಃ ಪ್ರಶ್ನಿಸುತ್ತಾರೆ. ‘ಮುಂದಿನ ದಿನಗಳಲ್ಲಿ ಆಗಬಹುದು, ಹಾಗಾಗಿ ಮಾರುಕಟ್ಟೆಯಲ್ಲಿ ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ’ ಎಂದು ಅವರದೇ ಆದ ವಾದವನ್ನು ಮುಂದಿಡುತ್ತಾರೆ.
ಈ ಗೊಂದಲ ನಿವಾರಿಸಲು ಮಾಧ್ಯಮಗಳು ಹಲವು ಬಾರಿ ತಮ್ಮ ವರದಿಗಳ ಮೂಲಕ ಪ್ರಯತ್ನಿಸಿದರೂ ಜನರು ನಕಾರಾತ್ಮಕ ಅಂಶಗಳಿಗೇ ಹೆಚ್ಚು ಬೆಲೆ ನೀಡುತ್ತಾರೆ. 2016ರ ನೋಟು ರದ್ದತಿ ಹಿನ್ನೆಲೆಯಲ್ಲಿ ಸಂದೇಹಿಸುತ್ತಾರೆ. 2000 ರೂ. ನೋಟುಗಳು ರದ್ದಾಗಬಹುದು ಎನ್ನುವ ಶೀರ್ಷಿಕೆಯಲ್ಲಿ ಕೆಲವು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದು ಜನರು ಎಚ್ಚರಿಕೆಯ ನಡೆ ಇಡುತ್ತಿದ್ದಾರೆ. ಜನರು 10 ರೂ. ನಾಣ್ಯ ಸ್ವೀಕರಿಸದಿರುವುದರ ಹಿಂದೆ ಯಾವುದೇ ಕಾರಣಗಳಿಲ್ಲ.
ಬೇರೆ ರಾಜ್ಯಗಳಲ್ಲಿ ಸಮಸ್ಯೆ ಇಲ್ಲ
ಹತ್ತು ರೂಪಾಯಿ ನಾಣ್ಯ ಸ್ವೀಕರಿಸದಿರುವ ಸಮಸ್ಯೆ ಬೇರೆ ರಾಜ್ಯಗಳಲ್ಲಿ ಅಷ್ಟಾಗಿ ಇಲ್ಲ. ತಮಿಳುನಾಡಿನಲ್ಲಿ ಇದ್ದರೂ ಇಲ್ಲಿರುವಷ್ಟು ಗಂಭೀರವಾಗಿಲ್ಲ. ಇದು ಕೆಲವು ಪ್ರದೇಶಗಳಲ್ಲಿ ಹರಿದಾಡುವ ವದಂತಿಗಳಿಂದ ಉಂಟಾದ ಸಮಸ್ಯೆ. ಸರ್ಕಾರ ಆಧಾರರಹಿತ ಕಾರಣಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಹಾಗಾಗಿ 10 ರೂ. ನಾಣ್ಯವನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಸಂಭವವಿಲ್ಲ. ಅದಕ್ಕೂ ಮೇಲಾಗಿ ಇದು ದೇಶವ್ಯಾಪಿ ಮತ್ತು ದೇಶದ ಅರ್ಥಿಕ ಸಮಸ್ಯೆಯ ಮೇಲೆ ಪರಿಣಾಮ ಬೀರುವಂಥ ಸಮಸ್ಯೆಯಲ್ಲ. ಚಿಲ್ಲರೆ ಮಾರುಟ್ಟೆಯಲ್ಲಿ ಕಂಡುಬರುವ ಮತ್ತು ಸ್ವಲ್ಪ ಚಾಕಚಾಕ್ಯತೆಯಿಂದ, ಜನತೆಗೆ ತಿಳಿ ಹೇಳುವುದರಿಂದ ಪರಿಹಾರ ಕಾಣಬಹುದಾದ ಸಮಸ್ಯೆ. ಒಮ್ಮೆಬಿಡುಗಡೆಯಾದ ಕರೆನ್ಸಿಯನ್ನು ಕಾನೂನು ಪ್ರಕ್ರಿಯೆ ಇಲ್ಲದೆ, ದೃಢವಾದ ಕಾರಣ ಇಲ್ಲದೆ ರದ್ದು ಮಾಡಲು ಸಾಧ್ಯವಿಲ್ಲ. ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಕೂಡ ದೀರ್ಘ ಮತ್ತು ವೆಚ್ಚದಾಯಕ.
ರಮಾನಂದ ಶರ್ಮಾ