

ಬೆಂಗಳೂರು: ‘ಹೊಂಗನಸು’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಆಗಮಿಸಿ, ಅದಾದ ಬಳಿಕ ಪುನೀತ್ ರಾಜಕುಮಾರ್ ಜತೆಗೆ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿದ್ದ ಅಂಜಲಿ ಇದೀಗ ಮತ್ತೆ ಚಂದನವನಕ್ಕೆ ಆಗಮಿಸಿದ್ದಾರೆ. ಈ ಸಲ ಅವರು ‘ಸೆಂಚುರಿ ಸ್ಟಾರ್’ ಶಿವರಾಜಕುಮಾರ್ಗೆ ಜೋಡಿಯಾಗಲಿದ್ದಾರೆ.
ಶಿವರಾಜಕುಮಾರ್, ಡಾಲಿ ಧನಂಜಯ್ ಮತ್ತು ಪೃಥ್ವಿ ಅಂಬರ್ ನಟಿಸಲಿರುವ ‘ಶಿವಪ್ಪ’ ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಮುಹೂರ್ತ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿದೆ. ಇದೀಗ ಈ ಚಿತ್ರಕ್ಕೆ ಬಹುಭಾಷಾ ನಟಿ ಅಂಜಲಿ ಆಗಮಿಸಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್ನಲ್ಲಿಯೂ ಭಾಗವಹಿಸಿದ್ದಾರೆ.
ಶಿವಪ್ಪ ಚಿತ್ರದಲ್ಲಿ ಒಟ್ಟು ಮೂರು ವಿಭಿನ್ನ ಬಗೆಯ ಶೇಡ್ಗಳಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ವಿಜಯ್ ಮಿಲ್ಟನ್ ನಿದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿರುವ ಅವರು, ಇದೀಗ ಮೊದಲ ಬಾರಿ ಶಿವಣ್ಣನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಕನ್ನಡಕ್ಕೆ ಆಗಮಿಸಿದ್ದಾರೆ.