ಶಿರೂರು ಮಠಕ್ಕೆ ಅನಿರುದ್ಧ ಉತ್ತರಾಧಿಕಾರಿ

Shiroor New swamiji
Published on

ಉಡುಪಿ: ಶಿರೂರು ಮಠದ ಉತ್ತರಾಧಿಕಾರಿಯಾಗಿ ಅನಿರುದ್ಧ ಸರಳತ್ತಾಯ ಅವರನ್ನು ನೇಮಿಸಲಾಗಿದೆ ಎಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ (ದ್ವಂದ್ವ ಮಠ) ಬುಧವಾರ ಹಿರಿಯಡಕ ಶಿರೂರು ಮೂಲ ಮಠದಲ್ಲಿ ಘೋಷಿಸಿದರು.
ಶ್ರೀರಾಮ ನವಮಿಯ ಶುಭ ಮುಹೂರ್ತದಲ್ಲಿ ಶಿರೂರು ಮಠದ 31ನೇ ಯತಿಯಾಗಿ 16 ವರ್ಷದ ಅನಿರುದ್ಧ ಸರಳತ್ತಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, 10ನೇ ತರಗತಿವರೆಗೆ ಅನಿರುದ್ಧ ಲೌಕಿಕ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಿಂದಲೂ ವೈದಿಕ ಅಧ್ಯಯನ ಮತ್ತು ವೇದಶಾಸ್ತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ತಂದೆಯಿಂದ ವೈದಿಕ ಅಧ್ಯಯನ ಪಡೆದುಕೊಂಡಿದ್ದಾರೆ. ಶಿರೂರು ಮಠದ ಪರಂಪರೆಗೆ ಯೋಗ್ಯ ವಟುವಿನ ಆಯ್ಕೆಗೆ ಸುದೀರ್ಘ ಸಮಯ ಬೇಕಾಯಿತು ಎಂದರು.
ಅಷ್ಟ ಯತಿಗಳು ಸಮ್ಮತಿ: ಅಷ್ಟ ಮಠದ ಯತಿಗಳ ಸಮ್ಮತಿಯೊಂದಿಗೆ ವಟುವಿನ ಆಯ್ಕೆಯಾಗಿದೆ. ಯಾರೂ ಆಕ್ಷೇಪ ಮಾಡಿಲ್ಲ. ವಟುವಿನ ಜಾತಕ ಪರಾಮರ್ಶಿಸಲಾಗಿದೆ. ಜಾತಕದಲ್ಲಿ ವಟುವಿಗೆ ಅಧ್ಯಾತ್ಮ ಆಸಕ್ತಿ, ಸನ್ಯಾಸ, ಪೀಠಾಧಿಪತಿ ಯೋಗ ಕೂಡಿಬಂದಿವೆ. ವಟುವಿಗೆ ಮಾನಸಿಕ ಮತ್ತು ವಿವಿಧ ಪರೀಕ್ಷೆ ನಡೆಸಿ ಶಿರೂರು ಮಠಕ್ಕೆ ಪೀಠಾಧಿಪತಿಯಾಗಲು ಯೋಗ್ಯರು ಎಂದು ಪರಿಗಣಿಸಿ ಆಯ್ಕೆ ಮಾಡಲಾಯಿತು ಎಂದು ಶ್ರೀಗಳು ವಿವರಿಸಿದರು.
ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಸೋದೆ ಮಠದ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಧರ್ಮಸ್ಥಳ ನಿಡ್ಲೆ ಮೂಲದವರು: ಸರಳತ್ತಾಯ ಎಂಬುದು ಉಡುಪಿಯ ಶಿವಳ್ಳಿ ಬ್ರಾಹ್ಮಣ ಸಮಾಜದಲ್ಲಿರುವ ಉಪನಾಮ ಪಂಗಡಗಳಲ್ಲಿ ಒಂದಾಗಿದೆ ಎಂದು ಸ್ವಾಮೀಜಿ ತಿಳಿಸಿದರು. ಸರಳತ್ತಾಯ ಕುಟುಂಬದ ಡಾ.ಎಂ.ಉದಯಕುಮಾರ್ ಸರಳತ್ತಾಯ (ವಟುವಿನ ತಂದೆ) ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದವರು. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಪೀಠದಲ್ಲಿ ಬಿಎಡ್, ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇವರ ಪೂರ್ವಜರು ಮೂಲತಃ ಉಡುಪಿಯವರು. ಸುಬ್ರಹ್ಮಣ್ಯ ಸಮೀಪದ ಗ್ರಾಮದ ಕಡ್ಯ ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರಾಗಿದ್ದವರು. ಪ್ರಸ್ತುತ ಈ ಕುಟುಂಬದ ಸದಸ್ಯರು ದೇವಿಗೆ ಪೂಜಾದಿ ಕೈಂಕರ್ಯ ನೆರವೇರಿಸುತ್ತಿದ್ದಾರೆ. ಡಾ.ಉದಯ-ಶ್ರೀವಿದ್ಯಾ ದಂಪತಿ ಉಡುಪಿಯಲ್ಲಿ ನೆಲೆಸಿದ್ದು, ಇವರಿಗೆ ಅನಿರುದ್ಧ ಸರಳತ್ತಾಯ ಹಾಗೂ ಪುತ್ರಿ ಇದ್ದಾರೆ ಎಂದರು.

ಸೋಂದಾ ಕ್ಷೇತ್ರದಲ್ಲಿ ಉನ್ನತ ಅಧ್ಯಯನ: ಅನಿರುದ್ಧ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಎಂದ ಶ್ರೀಗಳು, ವೇದ ಗ್ರಂಥಗಳ ಅಧ್ಯಯನ ಜತೆಗೆ ಲೌಕಿಕ ಶಿಕ್ಷಣ ಮುಂದುವರಿಸುವ ಆಶಯ ಹೊಂದಿದ್ದಾರೆ. ಆದರೆ ಪ್ರಾಶಸ್ತ್ಯ ವೇದಶಾಸ್ತ್ರಕ್ಕೆ ಎಂದು ತಿಳಿಸಿದ್ದಾರೆ. ಈಗಾಗಲೇ ಸಂಸ್ಕೃತ ಗ್ರಂಥ, ವೇದಗಳ ಅಧ್ಯಯನ, ಉಪನಿಷತ್ತಿನ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲೆ ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿ ಉನ್ನತ ಗ್ರಂಥಗಳ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ. 4 ರಿಂದ 5 ವರ್ಷ ವಿದ್ವಾಂಸರಿಂದ ಅಧ್ಯಯನ ಮಾಡುವರು. ಬಳಿಕ ಹಿರಿಯಡಕ ಮೂಲ ಮಠದಲ್ಲಿದ್ದು ಧಾರ್ಮಿಕ ಕಾರ್ಯ ನಡೆಸುತ್ತ, ಉಡುಪಿ ಶಿರೂರು ಮಠದೊಂದಿಗೂ ಸಂಪರ್ಕದಲ್ಲಿರುತ್ತಾರೆ ಎಂದರು.

ಮೇ 13ರಂದು ಸನ್ಯಾಸ ಸ್ವೀಕಾರ: ಉತ್ತರಕನ್ನಡ ಜಿಲ್ಲೆ ಸೋಂದಾ ಕ್ಷೇತ್ರದಲ್ಲಿ ಮೇ11 ರಿಂದ ಶಿರೂರು ಮಠದ 31ನೇ ಯತಿಯಾಗಿ ಅನಿರುದ್ಧರ ಸನ್ಯಾಸ ಸ್ವೀಕಾರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೋದೆ ಶ್ರೀಗಳು ತಿಳಿಸಿದರು. ಮೇ 13ರಂದು ಬೆಳಗ್ಗೆ 7.30ರಿಂದ 8ಗಂಟೆಗೆ ಸನ್ಯಾಸ ಸ್ವೀಕಾರ ಮತ್ತು 14ರಂದು ಮಧ್ಯಾಹ್ನ 12.35ರಿಂದ 12.50ವರೆಗೆ ಅಭಿಜಿನ್ ಮುಹೂರ್ತದಲ್ಲಿ ಪಟ್ಟಾಭಿಷೇಕ ಎಂದು ತಿಳಿಸಿದರು.

ಪುತ್ರನಿಗೆ ಕೃಷ್ಣ ಸೇವೆಯ ಭಾಗ್ಯ: ಅನಿರುದ್ಧ ಸರಳತ್ತಾಯ ಕಿರಿಯ ವಯಸ್ಸಿನಿಂದಲೂ ಧಾರ್ಮಿಕ, ವೇದಶಾಸ್ತ್ರಗಳ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು ಎಂದು ಪಾಲಕರಾದ ಡಾ.ಎಂ.ಉದಯ ಕುಮಾರ್ ಸರಳತ್ತಾಯ-ಶ್ರೀವಿದ್ಯಾ ದಂಪತಿ ಹೇಳಿದರು. ಪುತ್ರ ಶಿರೂರು ಮಠಕ್ಕೆ ಪೀಠಾಧಿಪತಿ ಆಗುವ ಆಶಯ ಮುಂದಿಟ್ಟಾಗ ಹಲವು ಕಡೆ ಜಾತಕ ವಿಮರ್ಶಿಸಲಾಯಿತು. ಕೇರಳ, ಕಾಶಿ ಸಹಿತ ಹಲವೆಡೆಯ ವಿದ್ವಾಂಸರಲ್ಲಿ ಪ್ರಶ್ನಾ ಚಿಂತನೆ ಮಾಡಿದಾಗ ಪೀಠಾಧಿಪತಿ ಆಗುವ ಯೋಗ ತಿಳಿಯಿತು. ವೇದಾಧ್ಯಯನ, ಉಪನಯನ ಬಳಿಕ 4 ಸಂಸ್ಕಾರ ಅಧ್ಯಯನ ಪೂರ್ಣಗೊಳಿಸಿದ್ದಾರೆ. ವೇದ ಪಠ್ಯ ಕಲಿತುಕೊಂಡಿದ್ದಾರೆ. ನಮ್ಮ ಕುಟುಂಬ ಮಾನಸಿಕವಾಗಿ ಸಿದ್ಧರಾಗಿ ಸಂತೋಷದಿಂದಲೇ ಶ್ರೀಕೃಷ್ಣನ ಸೇವೆಗಾಗಿ ಪೀಠಾಧಿಪತಿ ಸ್ಥಾನಕ್ಕೆ ಪುತ್ರನನ್ನು ಅರ್ಪಿಸುತ್ತಿದ್ದೇವೆ ಎಂದರು.

ಕೃಷ್ಣ ಪೂಜೆಯ ಭಾಗ್ಯ ಪಡೆಯಬೇಕೆಂಬ ಮನದಾಸೆ ಚಿಕ್ಕಂದಿನಿಂದಲೂ ಇತ್ತು. ತಂದೆ ಅವರೊಂದಿಗೆ ವೇದ ಶಾಸ್ತ್ರಗಳ ಅಧ್ಯಯನ, ಆಧ್ಯಾತ್ಮಿಕ ಒಲವು, ಕೃಷ್ಣಮಠದ ನಿರಂತರ ಸಂಪರ್ಕ ಸನ್ಯಾಸಿ ಆಗಬೇಕೆಂಬ ಆಶಯಕ್ಕೆ ಪ್ರೇರಣೆಯಾಗಿದ್ದವು. ಈ ಸಮಯದಲ್ಲಿ ಶಿರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಹುಡುಕಾಟ ನಡೆಯುತ್ತಿರುವ ವಿಚಾರ ಗಮನಕ್ಕೆ ಬಂತು. ತಂದೆಯವರಲ್ಲಿ ಆಶಯ ವ್ಯಕ್ತಪಡಿಸಿದೆ. ತಂದೆ, ತಾಯಿ ನನ್ನಿಚ್ಛೆಯನ್ನು ಒಪ್ಪಿಕೊಂಡರು. ಈಗ ಶಿರೂರು ಮಠದ ಯತಿಯಾಗುವ ಯೋಗ ಬಂದಿದೆ. | ಅನಿರುದ್ಧ ಸರಳತ್ತಾಯ, ಶಿರೂರು ಮಠದ ಉತ್ತರಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net