ಅನಿಲ್ ಕುಂಬ್ಳೆಗೆ ಅರ್ಧಶತಕದ ಸಂಭ್ರಮ, ಸ್ಪಿನ್​ ದಿಗ್ಗಜನ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ

anil kumble 50 web
Published on

ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ಯಶಸ್ವಿ ಬೌಲರ್ ಎನಿಸಿರುವ ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಗೆ ಶನಿವಾರ 50ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಮಾಜಿ ಸಹ-ಆಟಗಾರರು, ಹಾಲಿ ಕ್ರಿಕೆಟಿಗರು, ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದಿಂದ ಶುಭಾಶಯಗಳ ಸುರಿಮಳೆಯಾಗಿದೆ.

1970ರ ಅಕ್ಟೋಬರ್ 17ರಂದು ಜನಿಸಿದ ಅನಿಲ್ ಕುಂಬ್ಳೆ ಭಾರತ ತಂಡದ ಪರ 132 ಟೆಸ್ಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 619 ಮತ್ತು 337 ವಿಕೆಟ್ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 900 ಕ್ಕೂ ಅಧಿಕ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎಂಬ ಹೆಗ್ಗಳಿಕೆ ಅವರದಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಒಂದರ ಎಲ್ಲ 10 ವಿಕೆಟ್ ವಿಕೆಟ್ ಕಬಳಿಸಿದ ವಿಶ್ವದ ಕೇವಲ 2ನೇ ಬೌಲರ್ ಎಂಬ ಅಪರೂಪದ ಸಾಧನೆಯೂ ಅವರದಾಗಿದೆ.

‘ಹ್ಯಾಪಿ ಬರ್ತ್‌ಡೇ ಅನಿಲ್. ನಿಮ್ಮ ಭವಿಷ್ಯದ ಎಲ್ಲ ಯೋಜನೆಗಳಿಗೆ ಶುಭ ಹಾರೈಕೆಗಳು. ಶೀಘ್ರದಲ್ಲಿಯೇ ಮತ್ತೆ ಭೇಟಿಯಾಗೋಣ’ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ. ‘ಇನಿಂಗ್ಸ್ ಒಂದರ ಎಲ್ಲ 10 ವಿಕೆಟ್ ಕಬಳಿಸಿದ್ದರಿಂದ ತಲೆಗೆ ಬ್ಯಾಂಡೇಜ್ ಸುತ್ತಿಕೊಂಡು ಆಡಿದ್ದರವರೆಗೆ. ಭಾರತ ಕಂಡ ಅತ್ಯುತ್ತಮ ಮ್ಯಾಚ್ ವಿನ್ನರ್‌ಗೆ ಜನ್ಮದಿನದ ಶುಭಾಶಯಗಳು’ ಎಂದು ಗೌತಮ್ ಗಂಭೀರ್ ಟ್ವೀಟಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೂ ಅನಿಲ್ ಕುಂಬ್ಳೆ ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ. ‘ನನಗೆ ಅತ್ಯಂತ ಅಗತ್ಯವೆನಿಸುವ ಸಮಯದಲ್ಲಿ ಪ್ರೇರಣೆ ತುಂಬುವವರು ನೀವು. ಹ್ಯಾಪಿ ಬರ್ತ್ ಡೇ ಜಂಬೋ. ಭಾರತೀಯ ಕ್ರಿಕೆಟ್‌ಗೆ ನೀವು ನೀಡಿರುವ ಕೊಡುಗೆ ಮತ್ತು ಯುವ ಆಟಗಾರರನ್ನು ಬೆಳೆಸುವಲ್ಲಿ ನೀವು ನೀಡುತ್ತಿರುವ ಕೊಡುಗೆಗೆ ಬೆಲೆಕಟ್ಟಲಾಗದು. ನಿಮ್ಮ ಈ ಅರ್ಧಶತಕಕ್ಕೆ ನನ್ನ ಪ್ರೀತಿಪೂರ್ವಕ ಶುಭಾಶಯಗಳು’ ಎಂದು ಯುವರಾಜ್ ಸಿಂಗ್ ಟ್ವೀಟಿಸಿದ್ದಾರೆ.

‘ಏನೇ ಆದರೂ ಹಿಂದೆ ಸರಿಯದಂತೆ ತೋರಿಸಿಕೊಟ್ಟ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಮುಂದಿನ ವರ್ಷ ನಿಮಗೆ ಅಮೋಘವಾಗಿರಲಿ’ ಎಂದು ವಿವಿಎಸ್ ಲಕ್ಷ್ಮಣ್ ಹಾರೈಸಿದ್ದಾರೆ. ‘ಭಾರತದ ದಿಗ್ಗಜ ಕ್ರಿಕೆಟಿಗ ಮತ್ತು ಅಮೋಘ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಮ್ಯಾಜಿಕ್ ಬೆರಳಿನ ಮೂಲಕ ಕ್ರಿಕೆಟ್ ಜಗತ್ತಿಗೆ ಮನರಂಜನೆ ನೀಡಿದ್ದಕ್ಕೆ ಧನ್ಯವಾದಗಳು. ಕ್ರೀಡೆಯ ನಿಜವಾದ ಜಂಟಲ್‌ಮ್ಯಾನ್ ಆಗಿ ನೀವು ಶ್ರೇಷ್ಠ ರಾಯಭಾರಿಯಾಗಿದ್ದೀರಿ’ ಎಂದು ಮಾಜಿ ಸ್ಪಿನ್ನರ್ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಜೋಶಿ ಟ್ವೀಟಿಸಿದ್ದಾರೆ. ‘ನಾವು ರಣಜಿ ಟ್ರೋಫಿ ಗೆಲ್ಲಬಹುದೆಂಬ ನಂಬಿಕೆ ಮೂಡಿಸಿದವರು ನೀವು. ನಿಮ್ಮ ನಾಯಕತ್ವದಲ್ಲೇ ಕೊನೆಗೆ ಅದನ್ನು ಜಯಿಸಿದೆವು. ಆಡುವ ದಿನಗಳಲ್ಲಿ ಯುವ ಆಟಗಾರರನ್ನು ಬೆಳೆಸುವಲ್ಲಿ ನಿಮ್ಮ ಪಾತ್ರ ಪ್ರಮುಖವಾದುದು. ನನ್ನ ಮೆಂಟರ್, ಹಿರಿಯ ಸಹೋದರ ಮತ್ತು ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಅನಿಲ್ ಕುಂಬ್ಳೆಗೆ ಜನ್ಮದಿನದ ಶುಭಾಶಯಗಳು’ ಎಂದು ರಾಜ್ಯದ ಮಾಜಿ ವೇಗಿ ದೊಡ್ಡ ಗಣೇಶ್ ಟ್ವೀಟಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net