More

    ಪೆಗಾಸಸ್​ ಸಂಭಾವ್ಯ ದಾಳಿ ಪಟ್ಟಿಯಲ್ಲಿದೆ ಅನಿಲ್​ ಅಂಬಾನಿ, ಸಿಬಿಐ ಮಾಜಿ ಮುಖ್ಯಸ್ಥರ ಹೆಸರು!

    ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಇಸ್ರೇಲಿ ಬೇಹುಗಾರಿಕಾ ಸಾಫ್ಟ್​ವೇರ್​​ ಪೆಗಾಸಸ್ ತಲ್ಲಣ ಸೃಷ್ಟಿಸಿದೆ. ತಮ್ಮ ಮೊಬೈಲ್​ ಫೋನ್​ಗಳ ಮೇಲೆ ಪೆಗಾಸಸ್​​ನಿಂದ ದಾಳಿ ಮಾಡಿ ಮಾಹಿತಿ ಕಳ್ಳತನ ಮಾಡಲಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ. ಇದರ ನಡುವೆ ಸಂಭವನೀಯ ಪೆಗಾಸಿಸ್​ ದಾಳಿಯ ಪಟ್ಟಿಯೊಂದು ಬಿಡುಗಡೆ ಆಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

    ಪೆಗಾಸಸ್ ಮೂಲಕ ಕಣ್ಗಾವಲಿನ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಉದ್ಯಮಿ ಅನಿಲ್​ ಅಂಬಾನಿ ಮತ್ತು ಏರೋಸ್ಪೇಸ್ ಉದ್ಯಮದ ಇತರ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳು ಪಟ್ಟಿಯಲ್ಲಿದ್ದಾರೆ. 2019ರ ಲೋಕಸಭಾ ಚುನಾವಣೆಗು ಮುನ್ನ ರಫೇಲ್ ಒಪ್ಪಂದವು ರಾಷ್ಟ್ರಾದ್ಯಂತ ಭಾರೀ ಚರ್ಚೆಗೆ ಒಳಗಾಗಿತ್ತು. ರಫೇಲ್​ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ರಫೇಲ್ ತಯಾರಕ ಡಸಾಲ್ಟ್ ಏವಿಯೇಷನ್ ಹಾಗೂ ಅನಿಲ್​ ಅಂಬಾನಿಯು ನಡುವಿನ ಒಪ್ಪಂದಕ್ಕೆ ಪ್ರಧಾನಿ ಮೋದಿ ನೆರವು ನೀಡಿದ್ದಾರೆಂಬ ಆರೋಪವಿದೆ. ಇದೀಗ ಅನಿಲ್​ ಅಂಬಾನಿ ಮತ್ತು ರಿಲಯನ್ಸ್ ಗ್ರೂಪ್‌ನ ಇನ್ನೊಬ್ಬ ಅಧಿಕಾರಿಯ ಫೋನ್​ ನಂಬರ್​ ಅನ್ನು ಪಟ್ಟಿಯಲ್ಲಿ ಸೇರಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

    ಭಾರತದ ಡಸಾಲ್ಟ್ ಏವಿಯೇಷನ್‌ನ ಪ್ರತಿನಿಧಿ ವೆಂಕಟರಾವ್ ಪೊಸಿನಾ, ಮಾಜಿ ಸಾಬ್ ಇಂಡಿಯಾ ಮುಖ್ಯಸ್ಥ ಇಂದ್ರಜಿತ್ ಸಿಯಾಲ್ ಮತ್ತು ಬೋಯಿಂಗ್ ಇಂಡಿಯಾ ಮುಖ್ಯಸ್ಥ ಪ್ರತ್ಯುಷ್ ಕುಮಾರ್ ಅವರ ಫೋನ್ ಸಂಖ್ಯೆ ಕೂಡ ಪಟ್ಟಿಯಲ್ಲಿದೆ ಎಂದು ದಿ ವೈರ್ ವರದಿ ಮಾಡಿದೆ. ಆ ಸಮಯದಲ್ಲಿ ವೆಂಕಟರಾವ್ ಪೊಸಿನಾ ಅವರು ರಫೇಲ್​ ಒಪ್ಪಂದವನ್ನು ಸಮರ್ಥಿಸುತ್ತಿದ್ದರು ಮತ್ತು ವಿಮರ್ಶಕರೊಂದಿಗೆ ಟ್ವಿಟರ್‌ನಲ್ಲಿ ವಾಗ್ವಾದಕ್ಕೆ ಇಳಿಯುತ್ತಿದ್ದರು.

    ಫ್ರೆಂಚ್​ನ ಎನರ್ಜಿ ಇಡಿಎಫ್ ಸಂಸ್ಥೆಯ ಮುಖ್ಯಸ್ಥ ಹರ್ಮನ್‌ಜಿತ್ ನಾಗಿ ಅವರ ಸಂಖ್ಯೆಯೂ ಸೋರಿಕೆಯಾಗಿದೆ. ಈ ಅವಧಿಯಲ್ಲಿ ಫ್ರೆಂಚ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರ ಅಧಿಕೃತ ನಿಯೋಗದ ಸದಸ್ಯರಾಗಿದ್ದರು.

    ಸರ್ಕಾರದೊಂದಿಗಿನ ಘರ್ಷಣೆಯ ನಂತರ 2018ರಲ್ಲಿ ಕೆಲಸದಿಂದ ವಜಾಗೊಂಡ ಸಿಬಿಐ ಮಾಜಿ ಮುಖ್ಯಸ್ಥ ಅಲೋಕ್ ವರ್ಮಾ ಕೂಡ ಸೋರಿಕೆಯಾದ ಪಟ್ಟಿಯಲ್ಲಿದ್ದಾರೆ ಎಂದು ಗುರುವಾರ ಸುದ್ದಿ ಪೋರ್ಟಲ್ ಒಂದು ವರದಿ ಮಾಡಿದೆ. ವಜಾಗೊಳಿಸಿದ ಕೆಲವೇ ಗಂಟೆಗಳ ನಂತರ ಅವರನ್ನು ಪೆಗಾಸಸ್​ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗಿದೆ.

    ಪೆಗಾಸಸ್ ಹಗರಣವನ್ನು ಪ್ರತಿಪಕ್ಷಗಳು “ವಾಟರ್ ಗೇಟ್​ಗಿಂತ ದೊಡ್ಡದು” ಎಂದು ಕರೆದಿದ್ದಾರೆ. ಸಂಭವನೀಯ ಗುರಿಗಳ ಪಟ್ಟಿಯಲ್ಲಿ ಕಾಂಗ್ರೆಸ್​ನ ರಾಹುಲ್ ಗಾಂಧಿ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಇಬ್ಬರು ಕೇಂದ್ರ ಸಚಿವರು ಮತ್ತು ಡಜನ್​ಗಟ್ಟಲೆ ಪತ್ರಕರ್ತರ ಹೆಸರುಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ.

    ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದೆ. ಯಾವುದೇ “ಅನಧಿಕೃತ” ಕಣ್ಗಾವಲು ನಡೆಸಲಾಗಿಲ್ಲ ಎಂಬ ಹಿಂದಿನ ನಿಲುವಿಗೆ ಸರ್ಕಾರ ಅಂಟಿಕೊಂಡಿದೆ. ಆದರೆ, ಪೆಗಾಸಸ್​ ಖರೀದಿ ಕುರಿತು ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗೆ ಸರ್ಕಾರ ಇನ್ನು ಸ್ಪಷ್ಟ ಉತ್ತರ ನೀಡಿಲ್ಲ. ಹೀಗಾಗಿ ಪ್ರಸ್ತುತ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್​ ಕೋಲಾಹಲ ಜೋರಾಗಿದೆ. (ಏಜೆನ್ಸೀಸ್​)

    ಪೆಗಾಸಸ್ ಸ್ಪೈವೇರ್​ ಎಂದರೇನು? ಹೇಗೆ ಕೆಲಸ ಮಾಡುತ್ತದೆ? ವಾಟ್ಸ್​ಆ್ಯಪ್​ ಮೇಲಿನ ದಾಳಿ ಹೀಗಿರುತ್ತಾ!?

    ಪೆಗಾಸಸ್​ ರೀತಿಯ ಮತ್ತೊಂದು ಸ್ಪೈವೇರ್​ನಿಂದ ವಾಟ್ಸ್​ಆ್ಯಪ್​ ಮೇಲೆ ದಾಳಿ: ಇದು ಹೇಗೆ ವಕ್ಕರಿಸುತ್ತೆ ಗೊತ್ತಾ?

    ಸದನದ ಬಾವಿಗೆ ನುಗ್ಗಿ ಗದ್ದಲ; ಸಚಿವರ ಕೈಯಿಂದ ಹೇಳಿಕೆ ಪತ್ರ ಕಸಿದ ಟಿಎಂಸಿ ಸಂಸದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts