

ಲೀವ್: ಹಾಲಿವುಡ್ನ ಖ್ಯಾತ ನಟಿ ಏಂಜಲೀನಾ ಜೋಲಿ ಯುದ್ಧ ಪೀಡಿತ ಯೂಕ್ರೇನ್ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಯುದ್ಧದ ಸಮಯದಲ್ಲೇ ಈ ನಟಿ ಭೇಟಿ ನೀಡಿರುವುದಕ್ಕೂ ಒಂದು ಕಾರಣವಿದೆ. ಮಕ್ಕಳೆಂದರೆ ಅತಿ ಹೆಚ್ಚು ಪ್ರೀತಿಸುವ ಈ ನಟಿ ಯುದ್ಧದಿಂದಾಗಿ ಹೆದರಿರುವ ಇಲ್ಲಿನ ಮಕ್ಕಳಿಗೆ ಸಾಂತ್ವನ ಹೇಳಲು ಯೂಕ್ರೇನ್ ಭೇಟಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ವಿಶ್ವಸಂಸ್ಥೆ ನಿರಾಶ್ರಿತರ ರಾಯಭಾರಿಯಾಗಿರುವ ಅವರು, ಲೀವ್ ನಗರ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಕೆಲಕಾಲ ಕಳೆದಿದ್ದಾರೆ. 2ರಿಂದ 10 ವರ್ಷದೊಳಗಿನ ಕೆಲ ಮಕ್ಕಳು ಏಂಜಲಿನಾ ಅವರನ್ನು ಭೇಟಿ ಮಾಡಿದರು.
ಯುದ್ಧದಿಂದ ಮಕ್ಕಳು ಆಘಾತಗೊಂಡಿದ್ದಾರೆ. ಅವರ ಧ್ವನಿಯಲ್ಲೇ ಅದರ ಭೀಕರತೆ ಕಾಣಬಹುದಾಗಿದೆ ಎಂದು ಏಂಜಲೀನಾ ಜೋಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ 12.7ಮಿಲಿಯನ್ಗೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದು, ಕೆಲವರು ವಲಸೆ ತೆರಳಿದರೆ ಇನ್ನೂ ಕೆಲವರು ಯೂಕ್ರೇನ್ನಲ್ಲಿಯೇ ಆಶ್ರಯ ಪಡೆದಿದ್ದಾರೆ. ಸದ್ಯ ಲೀವ್ ನಗರ ಅಷ್ಟಾಗಿ ಯುದ್ಧದಿಂದ ನಾಶವಾಗಿಲ್ಲ. ಇಲ್ಲಿ ಕೆಲ ಯೂಕ್ರೇನಿಗರು ಆಶ್ರಯ ಪಡೆದಿದ್ದಾರೆ.