ಅಪೌಷ್ಟಿಕತೆಯಿಂದ ಸೋರಗಿದ ಅಂಗನವಾಡಿ!

klr angnavadi story
ಕೋಲಾರ ತಾಲೂಕಿನ ಪೂವಾಂಡಹಳ್ಳಿಯ ಅಂಗನವಾಡಿ ಕೇಂದ್ರ.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಮಕ್ಕಳಲ್ಲಿ ಅಪೌಷ್ಟಿಕತೆ ನಿಮೂರ್ಲನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುವ ಅಂಗನವಾಡಿ ಕೇಂದ್ರಗಳು ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ ಒಟ್ಟು 2,180 ಅಂಗನವಾಡಿ ಕೇಂದ್ರಗಳಿದ್ದು, ಆ ಪೈಕಿ ಬಾಡಿಗೆ ಕಟ್ಟಡದಲ್ಲಿ 436, ಸ್ವಂತ ಕಟ್ಟಡದಲ್ಲಿ 1,130 ಕೇಂದ್ರಗಳಿವೆ. ಈ ಪೈಕಿ ಒಟ್ಟು 63 ಕೇಂದ್ರಗಳು ಶಿಥಿಲಗೊಂಡು ಕುಸಿಯುವಂತಾಗಿವೆ.

ಸ್ವಂತ ಕಟ್ಟಡ ಇಲ್ಲದ ಕಾರಣ ಸಮುದಾಯದ ಭವನ, ಸರ್ಕಾರಿ ಶಾಲೆ ಹಾಗೂ ಖಾಸಗಿ ಕಟ್ಟಡಗಳಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಖಾಸಗಿ ಕಟ್ಟಡಗಳಿಗೆ ಬಾಡಿಗೆ ಪಾವತಿ ಮಾಡಲು ವಾರ್ಷಿಕ ಲಕ್ಷಗಳಗಟ್ಟಲೇ ಇಲಾಖೆಯಿಂದ ಹಣ ಪಾವತಿ ಮಾಡಲಾಗುತ್ತಿದೆ.

ಕೆಲವೆಡೆ ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಚಟುವಟಿಕೆ ನಡೆಸುವುದು ಕಾರ್ಯಕರ್ತರಿಗೆ ಕಷ್ಟವಾಗಿದೆ. ಬಂಗಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಕಟ್ಟಡದ ಮೇಲ್ಛಾವಣಿ ಕುಸಿದು ಮಕ್ಕಳು ಗಾಯಗೊಂಡಿದ್ದರು. ಆದರೂ ರಿಪೇರಿಗೆ ಬಂದಿರುವ ಕಟ್ಟಡಗಳನ್ನು ದುರಸ್ತಿಪಡಿಸುವ ಕೆಲಸ ಕೈಗೆತ್ತಿಕೊಳ್ಳದಿರುವ ಇಲಾಖೆಯ ನಡೆ ಮತ್ತಷ್ಟು ಅಪಾಯ ಆಹ್ವಾನಿಸುವಂತಾಗಿದೆ.

ಶಿಥಿಲ ಕಟ್ಟಡಗಳನ್ನು ಪಟ್ಟಿ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದುರಸ್ತಿಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ (ಆರ್​ಡಿಪಿಆರ್​) ಕಳುಹಿಸಿಕೊಡಲಾಗಿದೆ. ಆರ್​ಡಿಪಿಆರ್​ ಇಲಾಖೆಯವರು 63 ಕಟ್ಟಡಗಳ ರಿಪೇರಿಗೆ ತಗಲುವ ವೆಚ್ಚಕ್ಕೆ ಕ್ರಿಯಾಯೋಜನೆ ತಯಾರಿಸಿ 90 ಲಕ್ಷ ರೂ.ಗೆ ಅನುಮೋದನೆ ಸಹ ನೀಡಲಾಗಿದೆ.

ಪ್ರಸ್ತುತ ಮಳೆ ಬೀಳುತ್ತಿದ್ದು, ಕೆಲ ಕಟ್ಟಡಗಳು ಸೋರುವುದು, ಮೇಲ್ಛಾವಣಿ ಕುಸಿದಿರುವುದು ಬೆಳಕಿಗೆ ಬಂದಿದೆ. ಬಳಕೆಗೆ ಯೋಗ್ಯವಲ್ಲದ ಕೇಂದ್ರಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕಿದೆ.

ಸ್ಥಳಿಯ ಜನಪ್ರತಿನಿಧಿಗಳು ಅಂಗನವಾಡಿ ಕೇಂದ್ರಗಳತ್ತ ಗಮನ ಹರಿಸಿ ಅಗತ್ಯವಿರುವ ಕಡೆ ಹೊಸ ಕಟ್ಟಡ ನಿರ್ಮಾಣ, ದುರಸ್ತಿಗೆ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

* ಸರ್ಕಾರದ ಬೊಕ್ಕಸಕ್ಕೆ ಹೊರೆ

ಬಾಡಿಗೆ ಕಟ್ಟಡಗಳಲ್ಲಿ ಕುಡಿಯುವ ನೀರು, ಶೌಚಗೃಹ, ಆಟದ ಮೈದಾನ, ದಾಸ್ತಾನು ಕೊಠಡಿ, ಕಾಂಪೌಂಡ್​ ಮತ್ತಿತರ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ. ಮಕ್ಕಳ ಕಲಿಕೆಗೆ ಬುನಾದಿಯಾಗಬೇಕಾದ ಅಂಗನವಾಡಿ ಕೇಂದ್ರಗಳು ಅಭದ್ರವಾಗಿವೆ. 3&6 ವರ್ಷದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಉತ್ತಮ ಕಲಿಕೆಯ ವಾತಾವರಣ ಅಗತ್ಯ, ಆದರೆ ಚಟುವಟಿಕಗಳು ಇಲ್ಲ, ಸುಸಜ್ಜಿತ ಅಡುಗೆ ಕೋಣೆಯು ಇಲ್ಲದೆ ಪ್ರಗತಿಗೆ ಅಡ್ಡಿಯಾಗಿದೆ. ಕೆಲ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಾಗಿದ್ದರೂ ಅನುದಾನದ ಕೊರತೆಯಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ.

* ಕಾಮಗಾರಿ ವಿಳಂಬಕ್ಕೆ ಅಸಮಾಧಾನ

ಒಟ್ಟು 63 ಕೇಂದ್ರಗಳ ದುರಸ್ತಿಗೆ 90 ಲಕ್ಷ ರೂ. ಹಾಗೂ 16 ನೂತನ ಕಟ್ಟಡಗಳ ನಿರ್ಮಾಣವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಒಂದು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಇಲಾಖೆಯಿಂದ 5 ಲಕ್ಷ ರೂ. ಹಾಗೂ ನರೇಗಾ ಯೋಜನೆಯಿಂದ 8 ಲಕ್ಷ ರೂ. ಸೇರಿ 13 ಲಕ್ಷ ರೂ. ಮೀಸಲಿರಿಸಲಾಗಿದೆ. ಕಾಮಗಾರಿ ನಿರ್ವಹಣೆಗೆ ಟೆಂಡರ್​ ಕರೆದು ಗುತ್ತಿಗೆದಾರರಿಗೆ ನೀಡಲಾಗಿದೆ. ಗುತ್ತಿಗೆದಾರರು ಪಾಯ, ಗೋಡೆ ನಿರ್ಮಾಣ ಹಂತಕ್ಕೆ ಬಿಟ್ಟಿದ್ದು ಕೆಲಸ ಮಂದ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ಟೆಂಡರ್​ ನೀಡಿರುವ ಇಲಾಖಾಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ತಂದು ದುರಸ್ತಿ ಹಾಗೂ ಹೊಸ ಕಟ್ಟಡ ಕಾಮಗಾರಿ ಕಾಲ ಮಿತಿಯೊಳಗೆ ಮುಗಿಸಿ ಉಪಯೋಗಕ್ಕೆ ನೀಡಬೇಕಾಗಿದೆ.

ಕೋಟ್​...

ರಿಪೇರಿ ಆಗಬೇಕಾಗಿರುವ ಕೇಂದ್ರಗಳನ್ನು ಗುರುತಿಸಿ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ಇಲಾಖೆಯಿಂದ ವಿಳಂಬವಾಗುತ್ತಿದ್ದು, ಇಲಾಖಾಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಲೋಪಗಳು ಕಂಡು ಬಂದರೆ ರಿಪೇರಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ.

- ನಾರಾಯಣಸ್ವಾಮಿ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಕೋಟ್​...

ಮಕ್ಕಳ ಭವಿಷ್ಯ ರೂಪಿಸುವ ಅಡಿಪಾಯ ಅಂಗನವಾಡಿ. ದಶಕಗಳು ಕಳೆದರೂ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರು ನಿರ್ಮಾಣಕ್ಕೆ ನಿವೇಶನ ಕಲ್ಪಿಸದೆ ಇರುವುದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ.

- ರಮೇಶ್​, ನಾಗನಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net