ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಸಲು ಸೂಚನೆ

mng-13july-minister visit
Published on





ಮಂಗಳೂರು : ಮಂಗಳೂರು ಹೊರವಲಯದ ಮೂಡುಶೆಡ್ಡೆಯ ಶಿವನಗರದಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ (ಎಂಎಸ್‌ಪಿಸಿ)ಕ್ಕೆ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಿದ ಸಚಿವೆ ಕೇಂದ್ರದ ಉದ್ಯೋಗ ನಿರತ ಮಹಿಳೆಯರಿಂದಲೇ ಆಹಾರ ಸಾಮಗ್ರಿಗಳ ತಯಾರಿಕೆಯ ಬಗ್ಗೆ ಮಾಹಿತಿ ಪಡೆದರು. ಆಹಾರ ಪ್ಯಾಕ್ ಮಾಡುವ ತೂಕದ ಯಂತ್ರವನ್ನು ಕೂಡಾ ಪರಿಶೀಲಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳಲ್ಲಿ, ಅದರಲ್ಲೂ ಉತ್ಪಾದನೆಯಲ್ಲೂ ಗುಣಮಟ್ಟವನ್ನು
ಕಾಯ್ದುಕೊಳ್ಳಬೇಕು. ಆಹಾರ ಸಾಮಗ್ರಿಗಳು ಕಳಪೆ ಇದ್ದಲ್ಲಿ ಅಥವಾ ಯಾವುದೇ ಲೋಪದೋಷ ಇದ್ದಲ್ಲಿ ಕೂಡಲೇ
ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಇಲ್ಲವಾದರೆ ನೇರವಾಗಿ ಸಚಿವರಿಗೆ ಪತ್ರ ಬರೆಯಬೇಕು ಎಂದು ಸಚಿವೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್, ಜಿಲ್ಲಾ ನಿರೂಪಣಾ ಅಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ, ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ ನಿರ್ವಹಣಾ ಅಧಿಕಾರಿ ಶೈಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net