ಆಂಧ್ರ ಮಾಜಿ ಸಿಎಂ ಜಗನ್​ ಮೋಹನ್​ ರೆಡ್ಡಿ ವಿರುದ್ಧ ಹತ್ಯೆ ಪ್ರಕರಣ ದಾಖಲು

Untitled-design-2024-07-12T155612.534
Published on

ಅಮರಾವತಿ: ಆಂಧ್ರಪ್ರದೇಶದ ಮಾಜಿ ಸಿಎಂ ವೈಎಸ್ ಜಗನ್​​ ಮೋಹನ್​​ ರೆಡ್ಡಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಜಗನ್ ಜತೆಗೆ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಆಡಳಿತ ಪಕ್ಷದ ಉಂಡಿ ಶಾಸಕ ಕೆ.ರಘುರಾಮ ಕೃಷ್ಣರಾಜು ಅವರು ನೀಡಿರುವ ದೂರಿನ ಮೇರೆಗೆ ಜಗನ್ ಮೋಹನ್ ರೆಡ್ಡಿ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ.ವಿ.ಸುನೀಲ್ ಕುಮಾರ್ ಮತ್ತು ಪಿಎಸ್ಆರ್ ಸೀತಾರಾಮಾಂಜನೇಯುಲು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಯ ಮಾಜಿ ಅಧೀಕ್ಷಕಿ ಜಿ.ಪ್ರಭಾವತಿ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಶಾಸಕ ಕೆ.ರಘುರಾಮ ಕೃಷ್ಣರಾಜು ಅವರು ತಮ್ಮ ದೂರಿನಲ್ಲಿ, ಹೈದರಾಬಾದ್‌ನಲ್ಲಿ 2021ರಲ್ಲಿ ಸಿಐಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು ಹೇಳಿದ್ದಾರೆ. ಬಂಧನದ ನಂತರ ಹೈದರಾಬಾದ್‌ನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿಲ್ಲ ಮತ್ತು ಟ್ರಾನ್ಸಿಟ್ ಅರೆಸ್ಟ್ ವಾರಂಟ್ ಪಡೆಯಲಿಲ್ಲ. ಸಿಐಡಿ ಕಚೇರಿಗೆ ವರ್ಗಾಹಿಸಿದರು. ಪಿವಿ ಸುನೀಲ್ ಕುಮಾರ್​​, ಪಿಎಸ್ಆರ್ ಆಂಜನೇಯುಲು ಜತೆಗೆ ಹಲವು ಪೊಲೀಸ್ ಅಧಿಕಾರಿಗಳು ಸಿಐಡಿ ಕಚೇರಿಗೆ ಬಂದು ರಬ್ಬರ್ ಬೆಲ್ಟ್ ಮತ್ತು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ನನ್ನ ಫೋನ್ ಕಸಿದುಕೊಂಡು ಪಾಸ್‌ವರ್ಡ್ ಹೇಳುವವರೆಗೂ ಥಳಿಸಿದ್ದಾರೆ ಎಂದಿದ್ದಾರೆ.

ಅಲ್ಲದೆ, ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ತಿಳಿದಿದ್ದರು, ಆಗಿನ ರಾಜ್ಯದ ಸಿಎಂ ಜಗನ್ ಮೋಹನ್ ರೆಡ್ಡಿ (ವೈಎಸ್ ಜಗನ್ ಮೋಹನ್ ರೆಡ್ಡಿ) ಅವರ ಒತ್ತಡದಿಂದಾಗಿ ಅವರ ಹೃದ್ರೋಗಕ್ಕೆ ಸಂಬಂಧಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ. ಮತ್ತು ನನ್ನ ಎದೆಯ ಮೇಲೆ ಕುಳಿತುಕೊಂಡು ಭಾರ ಹಾಕುವ ಮೂಲಕ ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು, ಡಾ.ಪ್ರಭಾವತಿ ಪೊಲೀಸ್ ಅಧಿಕಾರಿಗಳ ಒತ್ತಾಯಕ್ಕೆ ಮಣಿದು ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗುಂಟೂರು ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 166, 167, 197, 307, 326, 465 ಮತ್ತು 506 ಜತೆಗೆ ಸೆಕ್ಷನ್ 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಅಂದಿನ ಐಪಿಎಸ್ ಅಧಿಕಾರಿ ಸುನೀಲ್ ಕುಮಾರ್ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂಕೋರ್ಟ್​​​ನಲ್ಲಿ ಆ ಪ್ರಕರಣ ಮೂರು ವರ್ಷಗಳಿಂದ ನಡೆಯುತ್ತಿದ್ದು, ವಾಸ್ತವವಾಗಿ ಸುಪ್ರೀಂಕೋರ್ಟ್ ತಿರಸ್ಕರಿಸಿದ ಪ್ರಕರಣದಲ್ಲಿ ಹೊಸ ಎಫ್​​ಐಆರ್ ದಾಖಲಿಸುವುದನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ ಎಂದಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net