

ಅಮರಾವತಿ: ರಕ್ತಸಿಕ್ತ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆ ಭರಾಟೆ ಜೋರಾಗಿದ್ದು, ಇದೀಗ ಶಾಸಕರ ಮನೆಗೆ ಭೇಟಿ ನೀಡಿದರು ಎಂಬ ಕಾರಣಕ್ಕೆ ಟಾಲಿವುಡ್ನ ಸ್ಟಾರ್ ನಟ ಅಲ್ಲು ಅರ್ಜುನ್ ವಿರುದ್ಧ ನಂದ್ಯಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಂದ್ಯಾಳ ವಿಧಾನಸಭಾ ಕ್ಷೇತ್ರದ ವೈಎಸ್ಆರ್ಸಿಪಿ ಅಭ್ಯರ್ಥಿ ಶಿಲ್ಪಾ ರವಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ನಟ ಅವರ ಮನೆಯಲ್ಲಿದ್ದಾರೆ ಎಂದು ವಿಷಯ ತಿಳದ ಜನ ಶಾಸಕರ ಮನೆ ಬಳಿ ಧಾವಿಸಿದರು. ಈ ವೇಳೆ ನಟ ಅಲ್ಲು ಅರ್ಜುನ್ ಅಭಿಮಾನಿಗಳತ್ತ ಕೈ ಬೀಸಿ ನಮಸ್ಕರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಚುನಾವಣಾಧಿಕಾರಿ, ನಟ ಅಲ್ಲು ಅರ್ಜುನ್ ಶಾಸಕರ ಮನೆಗೆ ಭೇಟಿ ನೀಡುವ ವಿಚಾರವಾಗಿ ಅಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ. ಬಹಿರಂಗ ಪ್ರಚಾರ ಮುಗಿದಿದ್ದರೂ ರೋಡ್ ಶೋ ನಡೆಸಿ ಜನರನ್ನು ಉದ್ಧೇಶಿಸಿ ಮಾತನಾಡಿದ್ದಾರೆ. ಇದು ಕಾನೂನುಬಾಹಿರವಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಂದ್ಯಾಳ ಕ್ಷೇತ್ರ ಚುನಾವಣಾಧಿಕಾರಿ ತಿಳಿಸಿದ್ದಾರೆ.
175 ವಿಧಾನಸಭೆ ಹಾಗೂ 25 ಲೋಕಸಭೆ ಕ್ಷೇತ್ರಗಳಿಗೆ ಮೇ 13ರಂದು ಮತದಾನ ನಡೆಯಲಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಮರು ಆಯ್ಕೆ ಬಯಸಿದ್ದು, ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ.