ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾದ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌!

cm
Published on

ಬೆಂಗಳೂರು: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖಂಡ ಪವನ್ ಕಲ್ಯಾಣ್ ಅವರು ಗುರುವಾರ (ಆ.8 ರಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಆಂಧ್ರಪ್ರದೇಶದ ಪರಿಸರ ಮತ್ತು ಅರಣ್ಯ ಖಾತೆ ಸಚಿವರೂ ಆಗಿರುವ ನಟ ಪವನ್ ಕಲ್ಯಾಣ್ ಅವರು ಅರಣ್ಯ ಇಲಾಖೆ ಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಸಚಿವರಾದ ಜಮೀರ್ ಅಹಮದ್‌ರನ್ನು ಕೂಡ ನಟ ಭೇಟಿಯಾಗಿದ್ದಾರೆ.

ರಾಜ್ಯದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಆನೆ ದಾಳಿ ತಡೆಗಟ್ಟುವ ಸಂಬಂಧ ನಡೆದ ಸಭೆಯಲ್ಲಿ ಭಾಗಿಯಾದರು.

ವಿಧಾನಸಭೆಗೆ ಪವನ್ ಕಲ್ಯಾಣ್ ಬರುತ್ತಿದ್ದಂತೆ ಅವರೊಂದಿಗೆ ಪೋಟೋ ಕ್ಲಿಕ್ಕಿಸಲು ಸಿಬ್ಬಂದಿಗಳು, ಸರ್ಕಾರಿ ನೌಕರರು ಮುಗಿಬಿದ್ದ ದೃಶ್ಯ ಕಂಡು ಬಂತು. ಸುದ್ದಿವಾಹಿನಿ ಕ್ಯಾಮರಾಮನ್‌ಗಳ ತಳ್ಳಾಟಕ್ಕೆ ವಿಧಾನಸೌಧ ಸಿಎಂ‌ ಕಚೇರಿ ಮುಂಭಾಗದ ಗಾಜಿನ ದ್ವಾರಕ್ಕೆ ಹಾನಿಯಾಗಿದ್ದು, ಮಾಧ್ಯಮದವರ ಕ್ಯಾಮೆರಾಗಳು ನೆಲಕ್ಕುರುಳಿದವು.

ಅರಣ್ಯ ಸಚಿವರ ಜತೆಗಿನ ಚರ್ಚೆ ಬಳಿಕ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪವನ್‌ ಕಲ್ಯಾಣ್‌ ಬಿಡುಗಡೆ ಮಾಡಿದ್ದಾರೆ. ಆಗಸ್ಟ್‌ 12 ರ ಸಮ್ಮೇಳನದಲ್ಲಿಯೂ ಅವರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net