

ಮುಂಬೈ: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವರ್ಷದ ಅತಿದೊಡ್ಡ ವಿವಾಹದಲ್ಲಿ ಜಾಗತಿಕ ಐಕಾನ್ಗಳು, ಸಿನಿ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಭಾಗವಹಿಸಿದ್ದರು.
ರಜನಿಕಾಂತ್, ಶಾರೂಖ್ ಖಾನ್, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಐಶ್ವರ್ಯಾ ರೈ, ರೇಖಾ, ಸಲ್ಮಾನ್ ಖಾನ್, ನಿಕ್, ಪ್ರಿಯಾಂಕಾ ಚೋಪ್ರಾ, ಸುಹಾನಾ ಖಾನ್, ಜಾನ್ವಿ ಕಪೂರ್, ಅನನ್ಯ ಪಾಂಡೆ, ಅರ್ಜುನ್ ಕಪೂರ್, ರಣವೀರ್ ಸಿಂಗ್, ಮಾಧುರಿ ದೀಕ್ಷಿತ್, ಕರಣ್ ಜೋಹರ್ ಹೀಗೆ ಭಾರತೀಯ ಸಿನಿಮಾರಂಗದ ದಿಗ್ಗಜರೆಲ್ಲರು ಪಾಲ್ಗೊಂಡಿದ್ದರು. ಸೆಲೆಬ್ರಿಟಿಗಳು ಸಖತ್ ಡ್ಯಾನ್ಸ್ ಮತ್ತು ಅವರ ಉಡುಗೆಗಳು, ಎಲ್ಲಾ ಅತಿಥಿಗಳು ಮತ್ತು ಪಾರ್ಟಿ ಹೀಗೆ ವಿವಾಹ ಸಮಾರಂಭದ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅನಂತ್ ಅಂಬಾನಿ ಅವರ ಮದುವೆಗೆ ವಿಶ್ವದೆಲ್ಲೆಡೆಯಿಂದ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಕಿಮ್ ಕಾರ್ಡಶಿಯಾನ್, ಆಕೆಯ ಸಹೋದರಿ ಖ್ಲೋ ಕಾರ್ಡಶಿಯಾನ್, ಜಾನ್ ಸೆನಾ, ಗಾಯಕ ರೆಮಾ, ಮಾಜಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಮತ್ತು ಅವರ ಪತ್ನಿ ಚೆರ್ರಿ ಮುಂತಾದವರು ಅದ್ಧೂರಿ ವಿವಾಹದಲ್ಲಿ ಪಾಲ್ಗೊಂಡಿದ್ದರು. ಕಿಮ್ ಕಾರ್ಡಶಿಯಾನ್ ಭಾರತಕ್ಕೆ ಬಂದಿರುವುದು ಇದೇ ಮೊದಲು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಅನಂತ್ ಅಂಬಾನಿ ಅವರ ಪ್ರೀತಿಯ ಹ್ಯಾಪಿ( ಅವರು ಸಾಕಿರುವ ನಾಯಿ) ನೋಡುಗರ ಗಮನ ಸೆಳೆದಿದೆ. ಗೋಲ್ಡನ್ ರಿಟ್ರೈವರ್ ತಳಿಯ ಈ ನಾಯಿ ಕೆಂಪು ಬಣ್ಣದ ಶೇರ್ವಾನಿಯಂತಿರುವ ಡ್ರೆಸ್ ಧರಿಸಿದೆ. ತುಂಬಾ ಸುಂದರವಾಗಿ ಕಾಣುತ್ತಿದೆ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ ಹ್ಯಾಪಿ ಕುಳಿತಿರುವುದನ್ನು ಕಾಣಬಹುದು. ಹ್ಯಾಪಿಯ ಹಿಂದೆ ನೀತಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬದ ಇತರ ಸದಸ್ಯರು ಸಹ ಕಾಣಬಹುದಾಗಿದೆ. ನಾಯಿಯ ಈ ವೀಡಿಯೋಗೆ ಫೇಮಸ್ ಗೆಸ್ಟ್, ಇಡೀ ಮದುವೆಯ ಶೋಸ್ಟಾಪರ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)