ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಸಾಧನೆಗೆ ವಿಶ್ಲೇಷಣಾ ಕೌಶಲ ಅಗತ್ಯ

blm (6)
Published on

ಕಾರ್ಕಳ: ಮನೆ ಬಜೆಟ್‌ನಿಂದ ಹಿಡಿದು ರಾಷ್ಟ್ರದ ಬಜೆಟ್ ತನಕ ಎಲ್ಲದರ ಹಿಂದೆ ಅರ್ಥಶಾಸ್ತ್ರದ ತತ್ವಗಳು ಕಾರ್ಯ ನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ಸಾಧನೆ ವಾಡಲು ವಿಶ್ಲೇಷಣಾ ಕೌಶಲ್ಯ, ಆರ್ಥಿಕ ತರ್ಕ ಮತ್ತು ನಿರ್ಣಾಯಕತೆ ಅಗತ್ಯ ಎಂದು ಉದ್ಯಮಿ ಸೂರಜ್ ಶೆಟ್ಟಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾರುತಿ ವಾತನಾಡಿ, ಅರ್ಥಶಾಸ್ತ್ರ ಮತ್ತು ಆರ್ಥಿಕತೆ ಎಂದರೆ ಕೇವಲ ಹಣದ ಚಲಾವಣೆ ಅಲ್ಲ, ಅದು ನಮ್ಮ ಆಯ್ಕೆಗಳು, ಆದ್ಯತೆಗಳು ಮತ್ತು ಜೀವನ ಪಾಠಗಳ ಚಿಹ್ನೆಯಾಗಿದೆ ಎಂದರು.

ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತನಾಡಿದರು. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ದಿನಕರ ಶೆಟ್ಟಿ ವಿಚಾರ ಮಂಡಿಸಿದರು. ಹಾಸನ ಸರ್ಕಾರಿ ಸ್ವತಂತ್ರ ಪಿ.ಯು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಧರ್ಮೇಂದ್ರ ಬಿ.ಜಿ. ವಿಚಾರ ಮಂಡಿಸಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಮಂಡಳಿ, ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರು, ಕ್ರಿಯೇಟಿವ್ ಕಾಲೇಜಿನ ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷೆ ಅನುರಾಧಾ ಎಚ್. ಸ್ವಾಗತಿಸಿದರು. ಉಪನ್ಯಾಸಕಿ ಜ್ಯೋತಿ ಕೊಲ್ಲೂರು ವಂದಿಸಿದರು. ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಸಾಧಕರಿಗೆ ಸನ್ಮಾನ

ಕಾರ್ಯಾಗಾರದಲ್ಲಿ 2025ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅರ್ಥಶಾಸ್ತ್ರ ವಿಷಯದಲ್ಲಿ ಶೇ.100 ಫಲಿತಾಂಶ ಸಾಧಿಸಿದ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಂಶುಪಾಲರಾಗಿ ಮುಂಬಡ್ತಿ ಹೊಂದಿದ ವಿನ್ಸೆಂಟ್ ವಿನೋದ್ ಡಿಸೋಜ ಅವರನ್ನು ಅಭಿನಂದಿಸಲಾಯಿತು. ವಯೋನಿವೃತ್ತಿ ಹೊಂದುತ್ತಿರುವ ಗೋಪಾಲ್ ಭಟ್, ನಾಗರಾಜ್ ವೈದ್ಯ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net