ಶೋ ಮಸ್ಟ್ ಗೋ ಆನ್ ... ಕೊನೆಯ ಚಿತ್ರದಲ್ಲೂ ಕಡಿಮೆ ಆಗಲಿಲ್ಲ ರಿಷಿ ಕಪೂರ್​ ವೃತ್ತಿಪರತೆ

Rishi Kapoor
Published on

ಗುರುವಾರವಷ್ಟೇ ನಿಧನರಾದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಅವರಿಗೆ ತಮ್ಮ ಕೆಲಸದ ಬಗ್ಗೆ ಕಮಿಟ್‌ಮೆಂಟ್ ಎಷ್ಟಿತ್ತು ಎಂದು ಹಲವರು ಈಗಾಗಲೇ ಹೇಳಿದ್ದಾರೆ. ಈಗ ರಿಷಿ ಕಪೂರ್ ಅವರ ಕೊನೆಯ ಚಿತ್ರ ‘ಶರ್ಮಾಜಿ ನಮ್ಕೀನ್’ ನಿರ್ಮಾಪಕ ಹನಿ ತ್ರೆಹಾನ್ ಸಹ ರಿಷಿ ಕಪೂರ್ ಅವರಿಗೆ ಕೆಲಸದ ಬಗ್ಗೆ ಇದ್ದ ಕಮಿಟ್‌ಮೆಂಟ್ ಮತ್ತು ನಿರ್ಮಾಪಕರ ಬಗ್ಗೆ ಕಾಳಜಿ ಎಷ್ಟಿತ್ತು ಎಂದು ಹೇಳಿಕೊಂಡಿದ್ದಾರೆ.

ರಿಷಿ ಕಪೂರ್ ಅವರು ‘ಶರ್ಮಾಜಿ ನಮ್ಕೀನ್’ ಚಿತ್ರದ ಚಿತ್ರೀಕರಣ ಮಾಡುವಾಗ, ಅವರ ಸಹೋದರಿ ರೀತೂ ನಂದಾ ನಿಧನರಾಗಿದ್ದಾರೆ. ಆ ಸಂದರ್ಭದಲ್ಲಿ ರಿಷಿ ಕಪೂರ್ ಮುಂಬೈನಿಂದ ದೆಹಲಿಗೆ ಪ್ರಯಾಣ ಬೆಳಸಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರಂತೆ. ರಿಷಿ ಕಪೂರ್ ನೋವಿನಲ್ಲಿರುವುದರಿಂದ ಚಿತ್ರೀಕರಣ ಸ್ವಲ್ಪ ಮುಂದಕ್ಕೆ ಹಾಕೋಣ ಎಂದು ಚಿತ್ರತಂಡದವರೆಲ್ಲಾ ಪ್ಲಾನ್ ಮಾಡುತ್ತಿರುವಾಗಲೇ ರಿಷಿ ಕಪೂರ್ ಅವರ ಫೋನ್ ಬಂತಂತೆ.

ಫೋನ್ ಎತ್ತಿಕೊಂಡ ನಿರ್ಮಾಪಕರಿಗೆ, ಮರುದಿನ ತಮ್ಮ ಕಾಲ್‌ಶೀಟ್ ಎಷ್ಟು ಹೊತ್ತಿಗಿದೆ ಎಂದು ರಿಷಿ ಕೇಳಿದರಂತೆ. ಅದಕ್ಕೆ ನಿರ್ಮಾಪಕರು, ಒಂದೆರೆಡು ದಿನಗಳ ಕಾಲ ರೆಸ್ಟ್ ತೆಗೆದುಕೊಳ್ಳಿ ಎಂದರಂತೆ. ಅದಕ್ಕೆ ಸಿಟ್ಟಾದ ರಿಷಿ, ‘ಈಗೇನಾಗಿದೆಯೋ ಅದು ನನ್ನ ವೈಯಕ್ತಿಕ ವಿಷಯ. ಅದನ್ನು ವೃತ್ತಿಯ ಜತೆಗೆ ಅಂಟಿಸಬೇಡಿ. ವೈಯಕ್ತಿಕ ಜೀವನ ಎಷ್ಟು ಮುಖ್ಯವೋ, ವೃತ್ತಿಜೀವನ ಸಹ ಅಷ್ಟೇ ಮುಖ್ಯ. ದಿ ಶೋ ಮಸ್ಟ್ ಗೋ ಆನ್ ...’ ಎಂದು ಹೇಳಿದರಂತೆ. ಈ ಘಟನೆ ರಿಷಿ ಕಪೂರ್​ ಅವರಲ್ಲಿದ್ದ ವೃತ್ತಿಪರತೆಗೆ ಸಾಕ್ಷಿ ಎಂದು ಹನಿ ಹೇಳಿಕೊಂಡಿದ್ದಾರೆ.

ಅದರಂತೆ, ಮರುದಿನವೇ ಶೂಟಿಂಗ್‌ಗೆ ಹಾಜರಾಗಿದ್ದಾರೆ ರಿಷಿ ಕಪೂರ್. ಈ ಚಿತ್ರದಲ್ಲಿ ಅವರು ಬಹಳ ವರ್ಷಗಳ ನಂತರ ಜೂಹಿ ಚಾವ್ಲಾ ಜತೆಗೆ ನಟಿಸಿದ್ದಾರೆ. ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net