ಅಮೂಲ್ ಚಿಲ್ಲರೆ ವಹಿವಾಟು ಸ್ಥಗಿತಗೊಳಿಸಿ: ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಆಗ್ರಹ

Manmul)
Published on

ಮಂಡ್ಯ: ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಅಮೂಲ್ ಉತ್ಪನ್ನಗಳ ಚಿಲ್ಲರೆ ವಹಿವಾಟನ್ನು ರಾಜ್ಯದಲ್ಲಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ, ಕೆಎಂಎಫ್ ಮಾಜಿ ನಿರ್ದೇಶಕ ಜವರೇಗೌಡ ಎಚ್ಚರಿಕೆ ನೀಡಿದರು.

ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಉತ್ಪನ್ನಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಕೆಎಂಎಫ್‌ಗೆ ಸಲ್ಲುತ್ತದೆ. ಗುಣಮಟ್ಟ, ದರದಲ್ಲಿ ನಂದಿನಿ ಬ್ರಾೃಂಡ್ ಅನ್ನು ಮೀರಿಸುವವರಿಲ್ಲ. ಮಾತ್ರವಲ್ಲದೆ ಲಕ್ಷಾಂತರ ಕುಟುಂಬದವರ ಬದುಕಿಗೆ ಆಧಾರವಾಗಿದೆ. ಆದರೆ ಕೇಂದ್ರ ಸಚಿವ ಅಮಿತ್ ಷಾ ಮಂಡ್ಯಕ್ಕ ಬಂದಾಗಲೇ ನಂದಿನಿ ಬ್ರಾೃಂಡ್ ಮೇಲೆ ಕಣ್ಣು ಹಾಕಿರಬಹುದು. ಆ ಕಾರಣಕ್ಕೆಯೇ ಅಮೂಲ್ ಮತ್ತು ನಂದಿನಿ ಬ್ರಾೃಂಡ್‌ಗಳ ವಿಲೀನದ ಬಗ್ಗೆ ಹೇಳಿಕೆ ಕೊಟ್ಟಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಈಗಾಗಲೇ ಹಲವು ಬ್ಯಾಂಕ್‌ಗಳು ಗುಜರಾತ್ ಪಾಲಾಗಿದೆ. ಇದೀಗ ಕೆಎಂಎಫ್ ಮೇಲೆಯೂ ವಕ್ರದೃಷ್ಟಿ ಬಿದ್ದಿದೆ. ಈ ಕಾರಣದಿಂದಲೇ ಗಧಾಪ್ರಹಾರ ನಡೆಸಲು ಆರಂಭಿಸಿದ್ದಾರೆ. ಸಹಕಾರಿ ತತ್ವಗಳ ಬಗ್ಗೆ ಬಿಜೆಪಿಗರಿಗೆ ಒಂದಿಷ್ಟು ಕಾಳಜಿ ಇಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹಾಗೂ ತಮ್ಮ ಪ್ರಭಾವ ಬಳಸಿ ಇಷ್ಟಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಒಂದು ವೇಳೆ ಅನ್ಯಾಯವಾದರೆ ರಾಜ್ಯದ ರೈತರು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಸಹಕಾರಿ ತತ್ವದಂತೆ ಎಲ್ಲರೂ ಕೆಲಸ ನಿರ್ವಹಿಸಬೇಕು. ಪ್ರಮುಖವಾಗಿ ರಾಜ್ಯದಲ್ಲಿ ಅಮೂಲ್ ಉತ್ಪನ್ನಗಳನ್ನು ಚಿಲ್ಲರೆ ವ್ಯಾಪಾರ ವಹಿವಾಟು ಮಾಡುವುದನ್ನು ನಿಲ್ಲಿಸಬೇಕು. ಜತೆಗೆ ಅಮೂಲ್ ಉತ್ಪನ್ನ ಖರೀದಿಸದಂತೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಮನ್‌ಮುಲ್ ಮಾಜಿ ಅಧ್ಯಕ್ಷ ವೈರಮುಡಿಗೌಡ ಮಾತನಾಡಿ, ಮನ್‌ಮುಲ್ ಇತ್ತೀಚಿನ ವರ್ಷದಲ್ಲಿ ಭ್ರಷ್ಟಾಚಾರದ ಕೂಪವಾಗಿದೆ. ನೌಕರರ ಸಂಖ್ಯೆ ಹಾಗೂ ವೇತನದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಮೆಗಾಡೇರಿ ಪ್ರಾರಂಭಿಸಲಾಯಿತು. ಆದರೆ ಕೋಟ್ಯಂತರ ರೂ ಲಂಚ ಪಡೆದು 150ಕ್ಕೂ ಹೆಚ್ಚು ಹುದ್ದೆಗಳನ್ನು ಇತ್ತೀಚೆಗೆ ಭರ್ತಿ ಮಾಡಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮನ್‌ಮುಲ್ ಮಾಜಿ ಅಧ್ಯಕ್ಷರಾದ ಎಚ್.ಟಿ.ಚಂದ್ರು, ಸಿ.ತಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net