ಬೆಂಗಳೂರು ತಲುಪಿದ ಅಮೃತ್​ ಭಾರತ್​ ರೈಲು; ಸಾರ್ವಜನಿಕರಿಂದ ಸಿಕ್ಕಿತು ಅದ್ಧೂರಿ ಸ್ವಾಗತ!

Train
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಡಿ.30ರಂದು ಚಾಲನೆ ನೀಡಿದ್ದ ಪಶ್ಚಿಮ ಬಂಗಾಳದ ಮಾಲ್ಡಾ-ಬೆಂಗಳೂರು ನಡುವಿನ ಅಮೃತ್​ ಭಾರತ್​ ರೈಲು ಸೋಮವಾರ ಸಂಜೆ 7.30ರ ಹೊತ್ತಿಗೆ ಸರ್​.ಎಂ.ವಿಶ್ವೇಶ್ವರಯ್ಯ ಟಮಿರ್ನಲ್​ಗೆ ಆಗಮಿಸಿದೆ.

ಸಂಸದ ಪಿ.ಸಿ.ಮೋಹನ್​, ವಿಧಾನ ಪರಿಷತ್​ ಸದಸ್ಯ ಎ.ದೇವೇಗೌಡ, ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಯೊಗೀಶ್​ ಮೋಹನ್​, ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್​ ಸೇರಿದಂತೆ ನೈಋತ್ಯ ರೈಲ್ವೆ ಅಧಿಕಾರಿಗಳು, ಸಾರ್ವಜನಿಕರು ಬೆಂಗಳೂರಿಗೆ ಆಗಮಿಸಿದ ನೂತನ ರೈಲನ್ನು ಸ್ವಾಗತಿಸಿದರು.

ಅಮೃತ್ ಭಾರತ್‌ ಗರಿಷ್ಠ ಗಂಟೆಗೆ 130 ಕಿಮೀ ವೇಗದ ಸಾಮರ್ಥ್ಯವಿದೆ. ಈ ರೈಲು ಮೆಮು ರೈಲಿನ ರೀತಿಯಲ್ಲೆ ಮುಂಭಾಗ - ಹಿಂಭಾಗ ಎಂಜಿನ್ ಹೊಂದಿದ್ದು, ಡೆಡ್‌ ಎಂಡ್‌ನಲ್ಲಿ ನಿಂತಾಗ ಎಂಜಿನ್‌ನ್ನು ಬದಲಿಸುವ ಅಗತ್ಯ ಇರುವುದಿಲ್ಲ. ಜೊತೆಗೆ ಪುಷ್‌ಪುಲ್‌ ಟೆಕ್ನಾಲಜಿ, ಎಲ್‌ಎಚ್‌ಬಿ ಮಾದರಿಯ ಬೋಗಿ ಹೊಂದಿರಲಿದೆ. ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್‌ ಹಾಗೂ ಕಾಯ್ದಿರಿಸದ ಸೇರಿ 22 (12+8) ಕೋಚ್‌ಗಳನ್ನು ಒಳಗೊಂಡಿದ್ದು, ಇದರಲ್ಲಿ ಹವಾ ನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ. ಉಳಿದಂತೆ ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಎಲ್‌ಇಡಿ ಲೈಟ್ ಸೇರಿ ಇತರೆ ಸೌಲಭ್ಯಗಳು ಇರಲಿವೆ.

ಕೇಸರಿ, ಬೂದು ಬಣ್ಣದಲ್ಲಿ ಈ ರೈಲುಗಳು ಇರಲಿದ್ದು, ಅಮೃತ್ ಭಾರತ್‌ ರೈಲೊಂದರ ನಿರ್ಮಾಣಕ್ಕೆ ರೈಲ್ವೆ ಇಲಾಖೆಯು ಸುಮಾರು 65 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಕಡಿಮೆ ಖರ್ಚಿನ ಅಮೃತ್ ಭಾರತ್‌ ರೈಲುಗಳನ್ನು ಹಗಲು - ರಾತ್ರಿ ಸಂಚಾರಕ್ಕೆ ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಈ ರೈಲು 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲದು. ಈ ರೈಲು ಅ. 29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್‌, ಹಾಗೂ ನವೆಂಬರ್‌ನಲ್ಲಿ ಅಹಮದಾಬಾದ್ - ಮುಂಬೈ ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net