ಐಸ್ಬ್ಲಾಕ್ ಇಟ್ಟು ಸ್ಕೂಟರ್ ಚಲಾಯಿಸಿದ ಹುಡುಗ
- ದೆಹಲಿಯಲ್ಲಿ ಏರಿಕೆಯಾಗುತ್ತಿರುವ ತಾಪಮಾನ
- ಐಸ್ಬ್ಲಾಕ್ ಇಟ್ಟು ಸ್ಕೂಟರ್ ಚಲಾಯಿಸಿದ ಹುಡುಗ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ನವದೆಹಲಿ: ಭಾರತದಲ್ಲಿ ದಿನ ಕಳೆದಂತೆ ಬೀಸಿಲಿನ ತಾಪ ಏರುತ್ತಲೇ ಹೋಗುತ್ತಿದೆ. ಎನ್-ನಿನೋ ಪರಿಣಾಮದಿಂದಾಗಿ ಏಷ್ಯಾ ಖಂಡದಲ್ಲಿ ಉಷ್ಣಾಂಶ ಏರಿಕೆ ಕಾಣುತ್ತಿದೆ ಎನ್ನುವುದು ವಿಜ್ಞಾನಿಗಳ ವಾದವಾಗಿದೆ. ಕೆಲ ದಿನಗಳ ಹಿಂದೆ ವಿಶ್ವದ ಅತ್ಯಂತ ಉಷ್ಣಾಂಶ ಹೊಂದಿರುವ ನೂರು ನಗರಗಳ ಪಟ್ಟಿಯಲ್ಲಿ ಭಾರತದ ಸುಮಾರು 95 ನಗರಗಳಿರುವುದು ಆತಂಕದ ಸಂಗತಿಯಾಗಿದೆ.
ಈ ಬಿಸಿಲನ್ನು ಹೇಗೆ ಎದುರಿಸುವುದು? ಈ ಬಿಸಿನಲ್ಲಿ ಹೇಗಪ್ಪಾ ಕೆಲಸಕ್ಕೆ ಹೋಗುವುದು ಎಂದು ಜನ ಯೋಚಿಸುತ್ತಿದ್ದರೆ, ಇಲ್ಲೊಬ್ಬ ಹುಡುಗ ಐಸ್ಬ್ಲಾಕ್ಗಳನ್ನು ತನ್ನ ಸ್ಕೂಟಿ ಮೇಲೆ ಇಟ್ಟುಕೊಂಡು ಚಲಾಯಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ವಿಡಿಯೋನಲ್ಲೇನಿದೆ?
ದೆಹಲಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿರುವ ಈ ವೈರಲ್ ವಿಡಿಯೋನಲ್ಲಿ ಸುಮಾರು 18-20 ವರ್ಷದ ಹುಡುಗನೊಬ್ಬ ತಮ್ಮ ಕಪ್ಪು ಬಣ್ಣದ ಸ್ಕೂಟಿಯಲ್ಲಿ ಸುಮಾರು 4-5 ದೊಡ್ಡ ಐಸ್ಬ್ಲಾಕ್ಗಳನ್ನು ಇಟ್ಟುಕೊಂಡು ವಾಹನವನ್ನು ಚಲಾಯಿಸಿದ್ದಾನೆ.
ಆದರೆ ಐಸ್ಬ್ಲಾಕ್ಗಳ ಗಾತ್ರ ದೊಡ್ಡದಿದ್ದ ಕಾರಣ ಹುಡುಗನಿಗೆ ಕುಳಿತುಕೊಳ್ಳಲು ಸೀಟ್ ಇಲ್ಲದೆ ಅರ್ಧ ಸೀಟ್ನಲ್ಲಿ ಕುಳಿತು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್ನ್ನು ತುಂಬಿಸುವ ಕೆಲಸಕ್ಕೆ ಇಳಿದಿದ್ದಾರೆ. ಈ ವಿಡಿಯೋ ನೋಡಲು ಮಜವಾಗಿದೆ ಎನ್ನಿಸಿದರೂ ತುಂಬಾ ಅಪಾಯಕಾರಿ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ನನಗ್ಯಾಕೋ ಈ ಹುಡುಗ 18 ವರ್ಷ ಮೇಲ್ಪಟ್ಟಿದ್ದಾನೆ ಅನ್ನಿಸುತ್ತಿಲ್ಲ, ಪೊಲೀಸ್ ವಿಚಾರಣೆ ನಡೆಸುವುದು ಉತ್ತಮ ಎಂದು ಇನ್ನೊಬ್ಬರು ಅನುಮಾನ ವ್ಯಕ್ತ ಪಡಿಸಿದ್ದಾರೆ. ದೆಹಲಿಯ ಸೆಖೆಯನ್ನು ಮೀರಿಸಲು ಹುಡುಗ ಮಾಡಿರುವುದರಲ್ಲಿ ತಪ್ಪೇನಿಲ್ಲ ಬಿಡಿ ಎಂದು ಮತ್ತೊಬ್ಬರು ಹುಡುಗನ ಕೆಲಸಕ್ಕೆ ಸಮರ್ಥನೆ ನೀಡಿದ್ದಾರೆ,(ಏಜನ್ಸೀಸ್).