ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ  
ವೆಬ್‌ಡೆಸ್ಕ್

ಬಂಗಾಳದಲ್ಲಿ SIR ವಿವಾದ; ಸಂಸತ್ತಿನಲ್ಲಿ ಇದನ್ನು ಪ್ರಸ್ತಾಪಿಸುತ್ತೇವೆ: ಚುನಾವಣಾ ಆಯೋಗಕ್ಕೆ ಟಿಎಂಸಿ ತಿರುಗೇಟು

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಭಾರತೀಯ ಚುನಾವಣಾ ಆಯೋಗ (ECI) ವಿರುದ್ಧ ತೃಣಮೂಲ ಕಾಂಗ್ರೆಸ್ (TMC) ಶನಿವಾರ ತೀವ್ರ ವಾಗ್ದಾಳಿ ನಡೆಸಿದೆ. ಅಲ್ಲದೆ, ನಮ್ಮ ಜನರನ್ನು ಗುರಿಯಾಗಿಸಿಕೊಳ್ಳುವ ಗುರಿಯನ್ನು SIR ಹೊಂದಿದೆ ಎಂದು ಹೇಳಿದೆ.
ಈ ಬಗ್ಗೆ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿ ಸಂಸದೆ ಸಜ್ದಾ ಅಹ್ಮದ್, ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷವು ಈ ವಿಷಯವನ್ನು ಎತ್ತಲಿದೆ ಎಂದಿದ್ದಾರೆ. ಅಲ್ಲದೆ, ನಿನ್ನೆ ನಾವು ಚುನಾವಣಾ ಆಯೋಗದೊಂದಿಗೆ ಸಭೆ ನಡೆಸಿದ್ದೇವೆ. ಸಭೆ ಬಹಳ ಸಮಯ ನಡೆಯಿತು. ಆದರೆ ನಾವು ಎತ್ತಿದ ಐದು ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ನೀಡಲಿಲ್ಲ. ಇದು SIR ಮೂಲಕ ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಇಲ್ಲಿನ ಜನರು ತುಂಬಾ ಭಯಭೀತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ರಾಜ್ಯದಲ್ಲಿ SIR ಪ್ರಕ್ರಿಯೆಯಲ್ಇ ಬಿಎಲ್‌ಒಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಬಿಎಲ್‌ಒಗಳಿಗೆ ಸಾಕಷ್ಟು ಸಮಯ ಮತ್ತು ಬೆಂಬಲ ನೀಡಿದರೆ ಮಾತ್ರ ಅವರು ತಮ್ಮ ಕೆಲಸವನ್ನು ಸರಿಯಾಗಿ ಮತ್ತು ಆರಾಮವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಸಜ್ದಾ ಅಹ್ಮದ್ ತಿಳಿಸಿದ್ದಾರೆ.

ಟಿಎಂಸಿಗೆ ಚುನಾವಣಾ ಆಯೋಗ ತಿರುಗೇಟು

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗ ಶುಕ್ರವಾರ ಕಿಡಿಕಾರಿದ್ದು. ಪಕ್ಷದ ಆರೋಪಗಳನ್ನು ಆಧಾರರಹಿತ ಎಂದು ತಿರಸ್ಕರಿಸಿ, ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮತ್ತು ಬೆದರಿಕೆಯೊಡ್ಡುವ ಕಾರ್ಯಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದೆ.
ಬೂತ್​ ಮಟ್ಟದ ಅಧಿಕಾರಿಗಳು ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡಲು ಅವಕಾಶ ನೀಡಬೇಕು, ವಿಶೇಷವಾಗಿ ಮೃತರಾಗಿರುವವರ, ವಿಳಾಸ ಬದಲಿಸಿರುವವರ ಮತ್ತ ನಕಲಿ ಮತದಾರರಿಗೆ ಸಂಬಂಧಿಸಿದಂತೆ ಜಾಗೃತಿ ವಹಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ. ಟಿಎಂಸಿ ಎತ್ತಿದ ಆರೋಪಗಳಿಗೆ ಪಕ್ಷದ 10 ಸದಸ್ಯರ ನಿಯೋಗಕ್ಕೆ ಚುನಾವಣಾ ಆಯೋಗವು ಒಂದೊಂದೇ ಅಂಶಗಳ ಮೂಲಕ ಸ್ಪಷ್ಟನೆ ನೀಡಿತು ಮತ್ತು ರಾಜ್ಯಕ್ಕೆ ರೋಲ್ ಅಬ್ಸರ್ವರ್ ನೇಮಕಕ್ಕೆ ಆದೇಶ ನೀಡಿತು ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 9 ರ ಬಳಿಕವ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಆಯೋಗವು ತಿಳಿಸಿದ್ದು, ಆವಾಗ ಕರಡು ಮತದಾರರ ಪಟ್ಟಿಯನ್ನು ಅವರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅಲ್ಲಿಯವರೆಗೆ, ಚುನಾವಣಾ ಸಂಬಂಧಿತ ಕೆಲಸಕ್ಕಾಗಿ ನಿಯೋಜನೆಗೊಂಡಿರುವ ರಾಜ್ಯ ಸರ್ಕಾರಿ ನೌಕರರಾದ ಬಿಎಲ್‌ಒಗಳು, ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ಪಕ್ಷಗಳಿಗೆ ನಿರ್ದೇಶನ ನೀಡಿದೆ,(ಏಜೆನ್ಸೀಸ್).