ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಆಪ್ತ ಮತ್ತು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಪ್ರಧಾನಿ ಹಾಗೆ ಮಾಡಲ್ಲ ಎಂದು ಹೇಳಿದ್ದಾರೆ.
ಎನ್ಡಿಟಿವಿ ಜೊತಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಧಾನಿ ಇಂತಹ ಕೆಲಸ ಮಾಡುತ್ತಾರೆ ಎಂದು ತಮಗೆ ಅನ್ನಿಸುವುದಿಲ್ಲ. ಅವರು ಸ್ಕ್ರೂಡ್ರೈವರ್ ಹಿಡಿದುಕೊಂಡು ಕಂಪ್ಯೂಟರ್ ಬಳಿ ಕುಳಿತುಕೊಳ್ಳುವುದಿಲ್ಲ. ಆದಾಗ್ಯೂ, ತಮ್ಮ ಫೋನ್ ಕೂಡ ಕದ್ದಾಲಿಕೆಗೆ ಒಳಗಾಗಿದೆ ಎಂದು ನಂಬಲು ತಮ್ಮ ಬಳಿ ಬಲವಾದ ಕಾರಣಗಳಿವೆ ಎಂದಿದ್ದಾರೆ.
ನನ್ನ ಫೋನ್ ಕದ್ದಾಲಿಕೆಯಾಗಿದೆ, ನನ್ನ ಲ್ಯಾಪ್ಟಾಪ್ ಮೇಲೆ ದಾಳಿಯಾಗಿದೆ, ನನ್ನ ಬ್ಯಾಂಕ್ ಖಾತೆಗಳ ಮೇಲೆ ನಿಗಾ ಇಡಲಾಗಿದೆ. ನಾನು ತಜ್ಞರನ್ನು ಸಂಪರ್ಕಿಸಿದ್ದೆ; ಅವರು ನನ್ನ ಸಾಧನಗಳನ್ನು ಪರಿಶೀಲಿಸಿದ ನಂತರ, ಕದ್ದಾಲಿಕೆಯ ಬಗ್ಗೆ ನನಗೆ ಎಚ್ಚರಿಕೆ ನೀಡಿದ್ದಾರೆ. ಯಾರೋ ಇದನ್ನು ಮಾಡುತ್ತಿದ್ದಾರೆ. ಯಾರು ಎಂದು ನನಗೆ ಗೊತ್ತಿಲ್ಲ, ಮತ್ತು ಅದು ನನಗೆ ಮುಖ್ಯವೂ ಅಲ್ಲ. ನಾನು ಇದರೊಂದಿಗೇ ಬದುಕುತ್ತಿದ್ದೇನೆ. ನನಗೇನೂ ತೊಂದರೆಯಿಲ್ಲ. ನಮ್ಮ ಸುತ್ತಮುತ್ತ ಕೆಟ್ಟ ಮನಸ್ಥಿತಿಯ ಜನರಿದ್ದಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಲು ಸಾಧ್ಯ? ಎಂದು ತಿಳಿಸಿದ್ದಾರೆ.
ಶುಕ್ರವಾರ ತಮ್ಮ ಇನ್ಸ್ಟಾಗ್ರಾಂನಲ್ಲಿ ಆಸ್ಕ್ ಮಿ ಎನಿಥಿಂಗ್ ವೇದಿಕೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ತನ್ನ ಮೇಲೆ ನಿಗಾ ಇರಿಸಿದೆ. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಅನ್ನು ಕದ್ದಾಲಿಕೆ (ಟ್ಯಾಪಿಂಗ್) ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು. ಹಾಗೇ ಮತ್ತೊಮ್ಮೆ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು.
ಪ್ರಧಾನಿಯವರಿಗೆ ಈ ವಿಷಯ ತಿಳಿದಿದೆ, ಏಕೆಂದರೆ ಅವರೇ ನನ್ನ ಫೋನ್ ಅನ್ನು ಕದ್ದಾಲಿಕೆ ಮಾಡುತ್ತಿದ್ದಾರೆ. ಅವರು ಮುಖಾಮುಖಿ ಚರ್ಚೆಗೆ ಒಪ್ಪಿಕೊಂಡ ದಿನ, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವುದು ಯಾರು, ದೇಶವಿರೋಧಿ ಯಾರು ಮತ್ತು ಅವರು ಎಷ್ಟು ಕಾಲದಿಂದ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದಿದ್ದರು (ಏಜೆನ್ಸೀಸ್).