ಕಡಲಿನಾಳದಲ್ಲಿ ಚಿತ್ರ ಬಿಡಿಸುವ ಈ ಅಪರೂಪದ ಮೀನನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನಿಮ್ಮ ಹುಬ್ಬೇರಿಸುವ ಸಂಗತಿ | Pufferfish 
ವಿಜಯವಾಣಿ ಸುದ್ದಿಜಾಲ

ಕಡಲಿನಾಳದಲ್ಲಿ ಚಿತ್ರ ಬಿಡಿಸುವ ಈ ಅಪರೂಪದ ಮೀನನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನಿಮ್ಮ ಹುಬ್ಬೇರಿಸುವ ಸಂಗತಿ | Pufferfish

ವೃತ್ತ, ಗಣಿತದಲ್ಲಿ ಬರುವ ಕೆಲವು ಆಕಾರಗಳು ಸೇರಿದಂತೆ ಬಗೆಬಗೆಯ ರೂಪಗಳನ್ನು ರಚಿಸುವ ಸಣ್ಣ ಮೀನೊಂದು, ಈ ಕಲೆಯನ್ನು ಕೇವಲ ತನ್ನ ರೆಕ್ಕೆಯಿಂದಲೇ ಅರಳಿಸುತ್ತದೆ ಎಂಬುದು ವಿಶೇಷ.

Pufferfish: ಭೂಮಿಯ ಮೇಲೆ ರಂಗು ರಂಗಾದ, ವರ್ಣರಂಜಿತ ಬಣ್ಣಗಳ ಮೂಲಕ ಚಿತ್ರಗಳನ್ನು ರಚಿಸುವ ಮನುಷ್ಯನ ಕೈಚಳಕ, ಪ್ರತಿಭೆಗಳು ನೋಡುವವರ ಕಣ್ಮನ ಸೆಳೆಯುತ್ತವೆ. ಚಿತ್ರ ಬಿಡಿಸುವ, ಅದಕ್ಕೊಂದು ರೂಪ ಕೊಡುವ ಸಾಮರ್ಥ್ಯ ಮಾನವನಿಗೆ ಬಿಟ್ಟರೆ ಇನ್ಯಾರಿಗೂ ಅದು ಸಾಧ್ಯವಿಲ್ಲ. ಕಾರಣ, ಮನುಷ್ಯರಿಗೆ ಮಾತ್ರ ಮಾತು, ಬುದ್ಧಿ ಇರುವುದು ಮತ್ತು ತನಗೆ ಬೇಕಾದ್ದನ್ನು ತಕ್ಷಣಕ್ಕೆ ಪಡೆಯುವ ಅವಕಾಶವಿರುವುದು. ಆದರೆ, ಇಲ್ಲೊಂದು ಜೀವಿ ಸಮುದ್ರದಾಳದಲ್ಲಿ ಒಬ್ಬ ಕಲಾವಿದನಾಗಿ ನೋಡುಗರ ಹುಬ್ಬೇರಿಸುತ್ತೆ ಎಂದರೆ ನಂಬುತ್ತೀರಾ? ಇಲ್ಲ ಎಂದರೂ ನಂಬಲೇಬೇಕು.

ವೃತ್ತ, ಗಣಿತದಲ್ಲಿ ಬರುವ ಕೆಲವು ಆಕಾರಗಳು ಸೇರಿದಂತೆ ಬಗೆಬಗೆಯ ರೂಪಗಳನ್ನು ರಚಿಸುವ ಸಣ್ಣ ಮೀನೊಂದು, ಈ ಕಲೆಯನ್ನು ಕೇವಲ ತನ್ನ ರೆಕ್ಕೆಯಿಂದಲೇ ಅರಳಿಸುತ್ತದೆ ಎಂಬುದು ವಿಶೇಷ. ಬಿಳಿ ಚುಕ್ಕೆಯ ಪಫರ್ ಫಿಶ್​ ಎಂದೇ ಗುರುತಿಸಿಕೊಂಡಿರುವ ಈ ಮೀನು, ಸಮುದ್ರದ ತಳದಲ್ಲಿರುವ ಮರಳಿನಲ್ಲಿ ಅದ್ಭುತ ಆಕಾರಗಳನ್ನು ಸೃಷ್ಟಿಸುವ ಅಪರೂಪದ ಸಾಮರ್ಥ್ಯವನ್ನು ಹೊಂದಿದೆ.

ಸಂತಾನೋತ್ಪತ್ತಿ ಕಾಲದಲ್ಲಿ

ಜಪಾನ್​ನ ದಕ್ಷಿಣ ಕರಾವಳಿಯಲ್ಲಿ ಕಂಡುಬರುವ ಈ ಮೀನು ಅಸಾಮಾನ್ಯ ಗೂಡು ಕಟ್ಟುವ ವಿಧಾನದಿಂದ ವೈಜ್ಞಾನಿಕ ಜಗತ್ತಿನ ಗಮನ ಸೆಳೆದಿದೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಮೀನುಗಳು ಸಮುದ್ರದ ತಳದಲ್ಲಿ ದೊಡ್ಡ ವೃತ್ತಾಕಾರದ ಆಕಾರಗಳನ್ನು ನಿರ್ಮಿಸುತ್ತವೆ. ಹೊರಗಿನಿಂದ, ಇದು ಮನುಷ್ಯನೇ ರಚಿಸಿರುವ ಕಲಾಕೃತಿ ಎಂದು ಅನಿಸಿದರೂ, ಈ ಮೀನುಗಳಿಂದಲೇ ಅದು ರೂಪುಗೊಂಡಿರುವುದು ವಾಸ್ತವಾಂಶ.

ಕೇವಲ 10ರಿಂದ 12 ಸೆಂಟಿಮೀಟರ್ ಉದ್ದದ ಈ ಮೀನು ನಿರ್ಮಿಸುವ ಮರಳಿನ ಉಂಗುರವು ಸುಮಾರು ಎರಡು ಮೀಟರ್ ಉದ್ದವನ್ನು ಹೊಂದಿರುತ್ತದೆ. ಅಂದರೆ, ಈ ಪುಟ್ಟ ಮೀನು ತನ್ನದೇ ದೇಹಕ್ಕಿಂತ ಹಲವು ಪಟ್ಟು ದೊಡ್ಡದಾದ ರಚನೆಯನ್ನು ನಿರ್ಮಿಸುತ್ತದೆ. ಉಂಗುರದ ಹೊರ ಭಾಗವು ಚಡಿಗಳು ಮತ್ತು ಎತ್ತರದ ಮರಳಿನ ದಿಬ್ಬಗಳಿಂದ ಕೂಡಿದೆ. ಈ ನಿರ್ಮಾಣ ಪ್ರಕ್ರಿಯೆಯು ಪೂರ್ಣಗೊಳಿಸಲು ಸಾಮಾನ್ಯವಾಗಿ ಏಳರಿಂದ ಒಂಬತ್ತು ದಿನಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

ಅಪರೂಪದ ಟ್ಯಾಲೆಂಟ್​

ಮೀನು ತನ್ನ ರೆಕ್ಕೆಗಳನ್ನು ಚಲಿಸುವ ಮೂಲಕ ಮತ್ತು ಮರಳನ್ನು ಅತ್ತ-ಇತ್ತ ಚಲಿಸಲು ಅದರ ದೇಹವನ್ನು ಬಳಸಿಕೊಂಡು, ಪ್ರತಿ ಡಿಸೈನ್​ ಅನ್ನು ರೂಪಿಸುತ್ತದೆ. ಮೀನಿನ ಪ್ರತಿಯೊಂದು ಚಲನೆಯು ಸರಳವಾಗಿದ್ದರೂ, ಈ ಚಲನೆಗಳ ಪುನರಾವರ್ತನೆಯು ಹೆಚ್ಚು ಗಣಿತದಲ್ಲಿ ಬರುವ ಆಕಾರವನ್ನು ಹೋಲುತ್ತದೆ. ಇದರ ನಿರ್ಮಾಣವನ್ನು ಅಧ್ಯಯನ ಮಾಡಿದ ಸಂಶೋಧಕರು, ಕಂಪ್ಯೂಟರ್​ಗಳ ಮೂಲಕ ಈ ವಿದ್ಯಮಾನವನ್ನು ವಿವರಿಸಿದ್ದಾರೆ.

ಸಂಗಾತಿಯನ್ನು ಆಕರ್ಷಿಸಲು ಗಂಡು ಈ ಮರಳಿನ ಗೂಡನ್ನು ನಿರ್ಮಿಸುತ್ತದೆ. ಗೂಡಿನ ಗಾತ್ರ ಮತ್ತು ಅಲಂಕಾರವು ಸಂಗಾತಿಯ ಆಯ್ಕೆಯ ಮೇಲೆ ಪ್ರಭಾವ ಬೀರಬಹುದು ಎಂದೂ ವಿವರಿಸಲಾಗಿದೆ. ಗೂಡಿನ ವಿನ್ಯಾಸವು ನೀರಿನ ಹರಿವಿನ ಮೇಲೆ ಪ್ರಭಾವ ಬೀರುತ್ತದೆ ಮತ್ತು ಮಧ್ಯದಲ್ಲಿ ಉತ್ತಮವಾದ ಮರಳಿನ ಗೋಡೆಗಳು ಸಹಾಯ ಮಾಡುತ್ತದೆ. ಮೊಟ್ಟೆಗಳು ಹೊರಬರುವವರೆಗೂ ಗಂಡು, ಮೊಟ್ಟೆಗಳನ್ನು ರಕ್ಷಿಸುತ್ತದೆ. ಅದರ ನಂತರ, ಹಳೆಯ ಗೂಡನ್ನು ಬಿಟ್ಟು ಹೊಸದನ್ನು ನಿರ್ಮಿಸುತ್ತದೆ.

ಈ ಗೂಡುಗಳನ್ನು ಕಟ್ಟಲು ತುಂಬಾ ಶ್ರಮ ವಹಿಸಿದರೂ ಒಮ್ಮೆ ಬಳಕೆಯಾದ ನಂತರ ಮರುಬಳಕೆ ಮಾಡುವುದಿಲ್ಲ. ಬಿಳಿ ಮಚ್ಚೆಯುಳ್ಳ ಪಫರ್ ಫಿಶ್‌ನ ಈ ನಡವಳಿಕೆಯು ಪ್ರಕೃತಿಯ ಅಚ್ಚರಿ ಹಾಗೂ ವಿಸ್ಮಯಗಳಲ್ಲಿ ಒಂದು ಎಂದೇ ಹೇಳಬಹುದು,(ಏಜೆನ್ಸೀಸ್).