ಮದುಮಗ ಶುಭಂ ಚೌಹಾಣ್, ಕರೆಂಟ್ ಕಟ್ ಮಾಡುತ್ತಿರುವ ಲೈನ್‌ಮ್ಯಾನ್
- ಮದುವೆ ದಿಬ್ಬನದ ವೇಳೆ ಮನೆಯ ಕರೆಂಟ್ ಕಟ್
- ಮದುವೆ ಸಂಭ್ರಮದಲ್ಲಿದ್ದ ವರನ ಮುಖದಲ್ಲಿ ನಿರಸ ಮೌನ
- ಹಣದ ಗಲಾಟೆ ಪರಿಣಾಮ ನಡೆದ ಘಟನೆ
- ಉತ್ತರಪ್ರದೇಶದಲ್ಲಿ ನಡೆದ ಘಟನೆ ಈಗ ಫುಲ್ ವೈರಲ್
ಬಿಜ್ನೋರ್: ಮದುವೆ ಮನೆಯೆಂದರೆ ಅಲ್ಲಿ ಸಂಭ್ರಮ, ಸಡಗರ, ಲೈಟುಗಳ ಅಲಂಕಾರ ಇದ್ದೇ ಇರುತ್ತದೆ. ಆದರೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ವರನೊಬ್ಬನ ಮದುವೆ ದಿಬ್ಬಣ ಹೊರಡುವ ಕೊನೆಯ ಕ್ಷಣದಲ್ಲಿ ವಿದ್ಯುತ್ ಇಲಾಖೆಯ ಸಿಬ್ಬಂದಿ ಯಾವುದೇ ಮುನ್ಸೂಚನೆ ನೀಡದೆ ಮದುವೆ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಘಟನೆ ಎಲ್ಲೆಡೆ ವೈರಲ್ (Video Viral) ಆಗುತ್ತಿದೆ.
ಸಂಭ್ರಮದ ನಡುವೆ ಕತ್ತಲೆಯ ಕಾರ್ಮೋಡ
ಬಿಜ್ನೋರ್‌ನ ಡೈಮಂಡ್ ಸಿಟಿ ಕಾಲೋನಿಯಲ್ಲಿ ಗುರುವಾರ (ಫೆ.19) ಈ ಘಟನೆ ನಡೆದಿದೆ. ವರ ಶುಭಂ ಚೌಹಾಣ್ ಮದುವೆ ಉಡುಪು ಧರಿಸಿ, ದಿಬ್ಬಣದೊಂದಿಗೆ ಹೊರಡಲು ಸಿದ್ದನಾಗಿದ್ದನು. ಇಡೀ ಕುಟುಂಬ ಮೆರವಣಿಗೆಯ ಖುಷಿಯಲ್ಲಿತ್ತು. ಆದರೆ ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್ ಮತ್ತು ಇಬ್ಬರು ವ್ಯಕ್ತಿಗಳು, ನೇರವಾಗಿ ಮನೆಯ ಮುಂದಿನ ಕಂಬ ಏರಿ ಕರೆಂಟ್ ಕಟ್ ಮಾಡಿದ್ದಾರೆ.
ನಾವು ಮದುವೆ ಮೆರವಣಿಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಅಷ್ಟರಲ್ಲೇ ಅವರು ಬಂದು ಪತ್ರವೊಂದನ್ನು ಕೈಗಿಟ್ಟು ಕರೆಂಟ್ ಕಡಿತಗೊಳಿಸಿದರು. ನಾವು ಎಲ್ಲಾ ಬಿಲ್‌ಗಳನ್ನು ಸರಿಯಾಗಿ ಪಾವತಿಸಿದ್ದೇವೆ, ಒಂದೆರಡು ದಿನ ಸಮಯ ಕೊಡಿ ಎಂದು ಕಾಡಿಬೇಡಿದರೂ ಅವರು ಕೇಳಲಿಲ್ಲ ಎಂದು ವರ ಶುಭಂ ಅಳಲು ತೋಡಿಕೊಂಡಿದ್ದಾರೆ.
ದ್ವೇಷಕ್ಕಾಗಿ ನಡೆದದಾ ಈ ಕೃತ್ಯ?
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಲೈನ್‌ಮ್ಯಾನ್ ಏಣಿಯ ಸಹಾಯವಿಲ್ಲದೆ ಕಂಬ ಏರಿ ಕನೆಕ್ಷನ್ ಕತ್ತರಿಸುತ್ತಿರುವುದನ್ನ ನೋಡಬಹುದಾಗಿದೆ. ಮನೆಮಂದಿಯೆಲ್ಲಾ ಕೆಳಗೆ ನಿಂತು ಅಸಹಾಯಕರಾಗಿ ನೋಡುತ್ತಿದ್ದರೆ, ಅಧಿಕಾರಿಗಳು ಮಾತ್ರ ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಈ ಅಮಾನವೀಯ ವರ್ತನೆಗೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವೈಯಕ್ತಿಕ ದ್ವೇಷ ಅಥವಾ ಅಸೂಯೆಯಿಂದ ನಡೆದಿರುವ ಘಟನೆಯಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಸತ್ಯ ಬಯಲು ಮಾಡಿದ ತನಿಖೆ
ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸೂಪರಿಂಟೆಂಡೆಂಟ್ ಎಂಜಿನಿಯರ್ ಧರಮ್ ರಾಜ್ ಸಿಂಗ್ ಅವರ ಪ್ರಕಾರ, ಇದು ವಿದ್ಯುತ್ ಬಿಲ್ ಸಮಸ್ಯೆಯಲ್ಲ, ಬದಲಾಗಿ ವರ ಶುಭಂ ಮತ್ತು ಆ ಕಾಲೋನಿಯ ಮಾಲೀಕನ ನಡುವಿನ ಹಣಕಾಸಿನ ವಿವಾದ ಈ ಕರೆಂಟ್ ಲೈನ್ ವಿವಾದಕ್ಕೆ ಮೂಲವಾಗಿದೆ.
ಕಾಲೋನಿಯ ಮಾಲೀಕ ತನ್ನ ಪ್ರಭಾವ ಬಳಸಿ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಲೈನ್‌ಮ್ಯಾನ್ ಮೇಲೆ ಒತ್ತಡ ಹಾಕಿ ಈ ಕೃತ್ಯ ಎಸಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಲೈನ್‌ಮ್ಯಾನ್‌ನ ಈ ಹಠಾತ್ ಕ್ರಮದಿಂದಾಗಿ ಮದುವೆಯ ವಾತಾವರಣವೇ ಕೆಟ್ಟುಹೋಗಿದಂತು ಸತ್ಯ.
ಕೊನೆಗೂ ಬಂತು ಕರೆಂಟ್
ಅಧಿಕಾರಿಗಳ ಹಸ್ತಕ್ಷೇಪದ ನಂತರ ಶುಕ್ರವಾರ (ಫೆ.20) ಬೆಳಿಗ್ಗೆ ಶುಭಂ ಅವರ ಮನೆಗೆ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ. ತಪ್ಪಿತಸ್ಥ ಲೈನ್‌ಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಭರವಸೆ ನೀಡಿದೆ.
ಶುಭಂ ಮದುವೆಯಾಗಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ, ಯಾರೋ ಮಾಡಿದ ಹಣದ ಜಗಳಕ್ಕೆ ಮದುವೆ ಮನೆಯನ್ನು ಕತ್ತಲೆಯಲ್ಲಿ ಮುಳುಗಿಸಿದ ಈ ಘಟನೆ ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ,(ಏಜನ್ಸೀಸ್).