ನಾಯಿಗಳ ಅಟ್ಯಾಕ್​, ಕಾಲ್ಕಿತ್ತ ಕುಂಟ! 
ಟ್ರೆಂಡಿಂಗ್

ನಾಯಿಗಳ ಅಟ್ಯಾಕ್, ಕಾಲ್ಕಿತ್ತ ನಕಲಿ ಕುಂಟ! ಭಿಕ್ಷುಕನ ಅಸಲಿ ಬಣ್ಣ ಬಯಲು ಮಾಡಿದ ಶ್ವಾನ ಪಡೆ; ವಿಡಿಯೋ ವೈರಲ್​! Fake Beggar Viral Video

ವೈರಲ್​: ಪ್ರತಿದಿನ ನಾವು ರಸ್ತೆಗಳಲ್ಲಿ, ಸಿಗ್ನಲ್‌ಗಳಲ್ಲಿ ಕೈಯಲ್ಲಿ ಕೋಲು ಹಿಡಿದು, ಕಾಲು ಕುಂಟುತ್ತಾ, ಮುಖದಲ್ಲಿ ಹತಾಶ ಭಾವನೆ ಇಟ್ಟುಕೊಂಡು ಭಿಕ್ಷೆ ಬೇಡುವ ಜನರನ್ನು ನೋಡಿರುತ್ತವೆ. ಅವರನ್ನು ನೋಡಿದಾಗ ಅಯ್ಯೋ ಪಾಪ ಎನಿಸಿ ಕೈಲಾದಷ್ಟು ಕಾಸು ಕೊಟ್ಟು ಮುಂದೆ ಸಾಗುತ್ತೇವೆ. ಆದರೆ, ಈ ಭಿಕ್ಷುಕರ ಲೋಕದಲ್ಲಿ ಅದೆಂತಾ ಪಂಟರ್​​ ನಟರಿದ್ದಾರೆ ಎಂಬುದು ಈ ವೈರಲ್ ವಿಡಿಯೋ ನೋಡಿದ ಬಳಿಕ ಜನರಿಗೆ ಅರ್ಥವಾಗುತ್ತಿದೆ.
ರಸ್ತೆ ಬದಿಯಲ್ಲಿ ಅಂಗವಿಕಲನಂತೆ ನಟಿಸುತ್ತಾ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನೊಬ್ಬನ ಅಸಲಿ ಬಣ್ಣವನ್ನು ಬೀದಿ ನಾಯಿಗಳು ಜಗತ್ತಿನ ಮುಂದೆ ಅನಾವರಣ ಮಾಡಿವೆ. ಯಾರಿಗೂ ಗೊತ್ತಾಗದಂತೆ ಸದ್ದಿಲ್ಲದೆ ನಡೆಯುತ್ತಿದ್ದ ಈ ಹೈಟೆಕ್ ನಕಲಿ ಭಿಕ್ಷಾಟನೆಯ ವಿಡಿಯೋ (Fake Beggar Viral Video) ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

ನಾಯಿಗಳ ಅಟ್ಯಾಕ್​, ಕಾಲ್ಕಿತ್ತ ಕುಂಟ!

ವೈರಲ್ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ, ರಸ್ತೆಯೊಂದರಲ್ಲಿ ಒಬ್ಬ ವ್ಯಕ್ತಿ ಹರಿದ ಬಟ್ಟೆ ಧರಿಸಿ, ಕೈಯಲ್ಲಿ ಕೋಲೊಂದನ್ನು ಹಿಡಿದು ತುಂಬಾ ಕಷ್ಟಪಟ್ಟು ಕಾಲು ಕುಂಟುತ್ತಾ ಸಾಗುತ್ತಿರುತ್ತಾನೆ. ಅವನ ನಡಿಗೆಯನ್ನು ನೋಡಿದರೆ ಯಾರಿಗಾದರೂ ಅಯ್ಯೋ ನಿಜವಾಗಿಯೂ ಇವನಿಗೆ ಕಾಲಿಲ್ಲ, ಎಷ್ಟು ಅಸಹಾಯಕನಾಗಿದ್ದಾನೆ ಎನಿಸುವುದು ಗ್ಯಾರಂಟಿ. ಆದರೆ, ಅದೇ ಹೊತ್ತಿಗೆ ಆತನ ಹಿಂದಿನಿಂದ ಮೂರ್ನಾಲ್ಕು ಬೀದಿ ನಾಯಿಗಳು ರೊಚ್ಚಿಗೆದ್ದು ಆತನ ಕಡೆಗೆ ಧಾವಿಸಿ ಬರುತ್ತವೆ.
ನಾಯಿಗಳು ಬೊಗಳುತ್ತಾ ತನ್ನ ಕಡೆಗೆ ಬರುತ್ತಿರುವುದನ್ನು ಕಂಡ ಭಿಕ್ಷುಕನಿಗೆ ಅದೆಲ್ಲಿಂದ ಶಕ್ತಿ ಬಂತೋ ಗೊತ್ತಿಲ್ಲ, ಪ್ರಾಣಭಯದಲ್ಲಿ ಕೈಲಿದ್ದ ಕೋಲನ್ನು ಅಲ್ಲೇ ರಸ್ತೆಗೆ ಎಸೆದಿದ್ದಾನೆ. ಇಲ್ಲಿಯವರೆಗೆ ಕೆಲಸವೇ ಮಾಡುತ್ತಿಲ್ಲ ಎಂದು ಜಗತ್ತಿಗೆ ನಂಬಿಸಿದ್ದ ಆ ಎರಡು ಕಾಲುಗಳು ಇದ್ದಕ್ಕಿದ್ದಂತೆ ಒಲಿಂಪಿಕ್ ಓಟಗಾರನಂತೆ ಓಡಲು ಶುರು ಮಾಡಿವೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಆತ ಗಾಳಿಯ ವೇಗದಲ್ಲಿ ಓಡಿ ಹೋದ ದೃಶ್ಯ ಯಾವುದೇ ಬಾಲಿವುಡ್​ ಸಿನಿಮಾಗೆ ಕಮ್ಮಿ ಇರಲಿಲ್ಲ ಎಂದತೆ ಅತಿಶಯೋಕ್ತಿಯಲ್ಲ.

ಹೊಟ್ಟೆ ಹುಣ್ಣಾಗುವಂತೆ ನಕ್ಕ ಜನ!

ಈ ವಿಡಿಯೋ ಇಂಟರ್ನೆಟ್‌ಗೆ ಅಪ್‌ಲೋಡ್ ಆಗಿದ್ದೇ ತಡ, ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ಆ ನಕಲಿ ಕುಂಟನ ಕಾಲೆಳೆಯಲು ಶುರುಮಾಡಿದ್ದಾರೆ. ಒಬ್ಬ ಬಳಕೆದಾರರು, ಅಯ್ಯೋ ಪಾಪ, ನಾಯಿಗಳು ಇವತ್ತು ಕುಂಟನ ಹೊಟ್ಟೆಮೇಲೆ ಹೊಡೆದುಬಿಟ್ಟವು. ಬಡವ ಸೂಪರ್ ಆಗಿ ಆಕ್ಟಿಂಗ್ ಮಾಡ್ಕೊಂಡು ಲೈಫ್ ಲೀಡ್ ಮಾಡ್ತಿದ್ದ, ನಾಯಿಗಳು ಬಂದು ಎಲ್ಲಾ ಹಾಳು ಮಾಡಿದ್ವು! ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬರು, ಈತನಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು! ಆದರೆ ನಾಯಿಗಳು ಇವನ ರಹಸ್ಯ ಬಯಲು ಮಾಡಿವೆ, ಇನ್ಮೇಲೆ ಈತ ಭಿಕ್ಷೆ ಬೇಡೋ ಏರಿಯಾವನ್ನೇ ಚೇಂಜ್ ಮಾಡಬೇಕಾಗುತ್ತೆ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು, ನಾಯಿಗಳು ಭಿಕ್ಷುಕನಿಗೆ ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ನಿಂದ ಆತನ ಕಾಲುಗಳು ತಕ್ಷಣವೇ ವಾಸಿಯಾಗಿಬಿಟ್ಟವು, ಇದೊಂದು ಪವಾಡ! ಎಂದು ಬರೆದುಕೊಂಡಿದ್ದಾರೆ, (ಏಜನ್ಸೀಸ್​).